Japan Open: ಜಪಾನ್ ಓಪನ್ ಸೆಮಿಫೈನಲ್ ಪ್ರವೇಶಿಸಿದ ಲಕ್ಷ್ಯ ಸೇನ್; ಯಶಸ್ವಿ ಜೋಡಿ ಸಾತ್ವಿಕ್-ಚಿರಾಗ್ ಶೆಟ್ಟಿಗೆ ಅಚ್ಚರಿಯ ಸೋಲು
Jan 09, 2024 07:41 PM IST
ಲಕ್ಷ್ಯ ಸೇನ್
- Japan Open Super 750: ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜಪಾನ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ನಿರ್ಗಮಿಸಿದ್ದಾರೆ.
ಜಪಾನ್ ಓಪನ್ ಸೂಪರ್ 750 (Japan Open Super 750) ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಯುವ ಷಟ್ಲರ್ ಲಕ್ಷ್ಯ ಸೇನ್ (Lakshya Sen) ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಭಾರತದ ಇನ್‌ಫಾರ್ಮ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwiksairaj Rankireddy and Chirag Shetty) ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಅಚ್ಚರಿಯ ರೀತಿಯಲ್ಲಿ ಹೊರಬಿದ್ದಿದ್ದಾರೆ.
ಚಾಣಾಕ್ಷತನದಿಂದ ಆಡಿದ ಲಕ್ಷ್ಯ ಸೇನ್, ಆತಿಥೇಯ ಜಪಾನ್ ದೇಶದ ಭರವಸೆಯ ಷಟ್ಲರ್ ಕೋಕಿ ವಟನಾಬೆ ವಿರುದ್ಧ ನೇರ ಗೇಮ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದರು. 2021ರ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ, ವಿಶ್ವದ 13ನೇ ಶ್ರೇಯಾಂಕದ ಸೇನ್, ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಬ್ಬರಿಸಿದ ಬಳಿಕ ಸತತ ಮೂರನೇ ಸೆಮಿಫೈನಲ್‌ಗೆ ಅರ್ಹತೆ ಪಡೆದರು. 33ನೇ ಶ್ರೇಯಾಂಕದ ಆಟಗಾರನಾದ ಜಪಾನ್‌ನ ವಟನಾಬೆ ವಿರುದ್ಧ 21-15 ಹಾಗೂ 21-19 ಅಂತರದಿಂದ ಗೆದ್ದು ಮತ್ತೊಂದು ಟೂರ್ನಿಗೆಲ್ಲುವ ಭರವಸೆ ಮೂಡಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಕೆನಡಾ ಓಪನ್ ಸೂಪರ್ 500 ಅನ್ನು ಗೆದ್ದಿದ್ದ ಸೇನ್, ಜಪಾನ್ ಎದುರಾಳಿಗೆ ಸೋಲುಣಿಸಲು ಹೆಚ್ಚು ಕಷ್ಟಪಡಲಿಲ್ಲ.
ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಮುಂದೆ ಐದನೇ ಶ್ರೇಯಾಂಕದ ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ಅಥವಾ ಮೂರನೇ ಶ್ರೇಯಾಂಕದ ಥೈಲ್ಯಾಂಡ್‌ನ ಆಟಗಾರ ಕುನ್ಲವುಟ್ ವಿಟಿಡ್ಸರ್ನ್ ಅವರನ್ನು ಎದುರಿಸಲಿದ್ದಾರೆ. ಹೀಗಾಗಿ ಸೇನ್ ಪಾಲಿಗೆ ಮುಂದೆ ಕಠಿಣ ಸವಾಲು ಇದೆ.
ಯಶಸ್ವಿ ಜೋಡಿಗೆ ಅಚ್ಚರಿಯ ಸೋಲು
ಮೇಲಿಂದ ಮೇಲೆ ಎರಡು ಟ್ರೋಫಿ ಗೆದ್ದಿರುವ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ತಮ್ಮ ಪ್ರಬಲ ಪ್ರದರ್ಶನವನ್ನು ಜಪಾನ್‌ನಲ್ಲಿಯೂ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಒಲಿಂಪಿಕ್ ಚಾಂಪಿಯನ್‌ಗಳಾದ ಚೈನೀಸ್ ತೈಪೆಯ ಲೀ ಯಾಂಗ್ ಮತ್ತು ವಾಂಗ್ ಚಿ ಲಾನ್ ವಿರುದ್ಧ ಪ್ರಬಲ ಪ್ರದರ್ಶನ ನೀಡಿದ ಅವರು, ಅಂತಿಮವಾಗಿ 15-21, 25-23, 16-21 ಅಂತರದಿಂದ ಸೋಲೊಪ್ಪಿದರು. ಉನ್ನತ ಶ್ರೇಯಾಂಕದ ಜೋಡಿ ವಿರುದ್ಧ ಎರಡನೇ ಗೇಮ್ ಗೆದ್ದ ಜೋಡಿಯು, ಮತ್ತೆ ಗೆಲುವು ಸಾಧಿಸಲು ವಿಫಲವಾಯ್ತು.
BWF ವರ್ಲ್ಡ್ ಟೂರ್ ಅನ್ನು ಒಟ್ಟು ಆರು ಹಂತಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ವರ್ಲ್ಡ್ ಟೂರ್ ಫೈನಲ್ಸ್, ನಾಲ್ಕು ಸೂಪರ್ 1000, ಆರು ಸೂಪರ್ 750, ಏಳು ಸೂಪರ್ 500, ಮತ್ತು 11 ಸೂಪರ್ 300.
ಮೊದಲನೇ ಸುತ್ತಿನಲ್ಲೇ ಸೋತು ಹೊರಬಿದ್ದ ಪಿವಿ ಸಿಂಧು
ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಗೆದ್ದಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು (PV Sindhu), ಬುಧವಾರ ನಡೆದ ಜಪಾನ್ ಓಪನ್‌ನಲ್ಲಿ ಚೀನಾದ ಜಾಂಗ್ ಯಿ ಮಾನ್ ವಿರುದ್ಧ ನೇರ ಗೇಮ್‌ಗಳಲ್ಲಿ ಸೋತು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಕೇವಲ 32 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು 12-21 13-21ರಿಂದ ಸುಲಭವಾಗಿ ಪರಾಭವಗೊಂಡಿದ್ದಾರೆ. ಈ ವರ್ಷ ನಡೆದ ಒಟ್ಟು 13 ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ (BWF World Tour) ಈವೆಂಟ್‌ಗಳಲ್ಲಿ ಇದು ಏಳನೇ ಬಾರಿಗೆ ಮೊದಲ ಸುತ್ತಿನಲ್ಲೇ ಸೋತು ಸಿಂಧು ನಿರ್ಗಮಿಸಿದ್ದಾರೆ. ಹಲವು ಪಂದ್ಯಗಳಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ ಬಳಿಕ ವಿಶ್ವ ಶ್ರೇಯಾಂಕದಲ್ಲಿ 17ನೇ ಸ್ಥಾನಕ್ಕೆ ಕುಸಿದಿದ್ದಾರೆ. ತಮ್ಮ ಆಟದಲ್ಲಿ ಹಳೆಯ ಖದರ್ ತೋರಿಸಲು ವಿಫಲರಾಗುತ್ತಿರುವ ಸಿಂಧು, ತಮಗಿಂತ ಕಡಿಮೆ ಶ್ರೇಯಾಂಕದ ಆಟಗಾರರ ವಿರುದ್ಧವೂ ಅಂಕಗಳನ್ನು ಗಳಿಸಲು ಹೆಣಗಾಡುತ್ತಿದ್ದಾರೆ.
ಬ್ಯಾಡ್ಮಿಂಟನ್ ಕುರಿತ ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ