logo
ಕನ್ನಡ ಸುದ್ದಿ  /  ಕ್ರೀಡೆ  /  Korea Open 2023: ಚೀನಿಯರ ಸದ್ದಡಗಿಸಿ ಕೊರಿಯಾ ಓಪನ್ ಫೈನಲ್​ ಪ್ರವೇಶಿಸಿದ ಸಾತ್ವಿಕ್-ಚಿರಾಗ್; ಮತ್ತೊಂದು ಪ್ರಶಸ್ತಿಯ ಕನಸಿನಲ್ಲಿ ಭಾರತದ ಜೋಡಿ

Korea Open 2023: ಚೀನಿಯರ ಸದ್ದಡಗಿಸಿ ಕೊರಿಯಾ ಓಪನ್ ಫೈನಲ್​ ಪ್ರವೇಶಿಸಿದ ಸಾತ್ವಿಕ್-ಚಿರಾಗ್; ಮತ್ತೊಂದು ಪ್ರಶಸ್ತಿಯ ಕನಸಿನಲ್ಲಿ ಭಾರತದ ಜೋಡಿ

HT Kannada Desk HT Kannada

Jul 22, 2023 05:47 PM IST

google News

ಭಾರತದ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ

    • Satwiksairaj Rankireddy and Chirag Shetty: ಕೊರಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ (Korea Open 2023) ಸೆಮಿಫೈನಲ್‌ನಲ್ಲಿ ಚೀನಾದ ಜೋಡಿಯ ವಿರುದ್ಧ ಭಾರತದ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ.
ಭಾರತದ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ
ಭಾರತದ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ

ಭಾರತದ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwiksairaj Rankireddy and Chirag Shetty) ಪ್ರತಿಷ್ಠಿತ ಕೊರಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ (Korea Open 2023) ಫೈನಲ್‌ ಪ್ರವೇಶಿಸುವ ಮೂಲಕ ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಈ ಜೋಡಿ ಶನಿವಾರ ಯೆಯೊಸುನಲ್ಲಿ ನಡೆದ ವಿಶ್ವದ ಎರಡನೇ ಶ್ರೇಯಾಂಕದ ಚೀನಾ ಜೋಡಿ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ (Liang Wei Keng and Wang Chang) ವಿರುದ್ಧ ರೋಚಕ ನೇರ ಗೇಮ್‌ಗಳ ಜಯ ಸಾಧಿಸಿತು.

ಚೀನಾ ಜೋಡಿ ವಿರುದ್ಧ ಮೊದಲ ಗೆಲುವು

ಜಿನ್ನಮ್ ಕ್ರೀಡಾಂಗಣದಲ್ಲಿ ನಡೆದ 40 ನಿಮಿಷಗಳ ತೀವ್ರ ಹೋರಾಟದ ಹಣಾಹಣಿಯಲ್ಲಿ ವಿಶ್ವದ 3ನೇ ಶ್ರೇಯಾಂಕದ ಭಾರತದ ಜೋಡಿಯು ಎರಡನೇ ಶ್ರೇಯಾಂಕದ ಚೀನಾ ವಿರುದ್ಧ 21-15 24-22 ಅಂತರದಲ್ಲಿ ಜಯ ಸಾಧಿಸಿತು. ಇದು ಹಿಂದಿನ ಎರಡು ಸೋಲಿನ ನಂತರ ಚೀನಾ ಜೋಡಿಯ ವಿರುದ್ಧ ಸಾಧಿಸಿದ ಸಾತ್ವಿಕ್ ಮತ್ತು ಚಿರಾಗ್ ಮೊದಲ ಜಯವಾಗಿದೆ. ಇದೀಗ ಈ ವರ್ಷದಲ್ಲಿ 3ನೇ ಪ್ರತಿಷ್ಠಿತ ಪ್ರಶಸ್ತಿ ಗೆಲ್ಲುವ ತವಕದಲ್ಲಿ ಭಾರತದ ಆಟಗಾರರು ಇದ್ದಾರೆ.

ಮೊದಲ ಗೇಮ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ 6 ಗೇಮ್​ಗಳ ಮುಂದಿದ್ದರು. ಬಳಿಕ ಲಿಯಾಂಗ್ ಸರ್ವ್‌ ಮಾಡಲು ವಿಫಲವಾದರು. ಪರಿಣಾಮ 21-15 ಗೇಮ್‌ಗಳಲ್ಲಿ ಮೊದಲ ಸೆಟ್​​ ಅನ್ನು ಗೆದ್ದುಕೊಂಡರು. ಆದರೆ 2ನೇ ಗೇಮ್​ ನೆಕ್​ ಟು ನೆಕ್ ಫೈಟ್ ಏರ್ಪಟ್ಟಿತ್ತು. ಉಭಯ ಜೋಡಿಗಳು ರೋಚಕ ಫೈಟ್​ ನೀಡಿದರು. ಪಂದ್ಯವು ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿತ್ತು. 22-22 ಅಂಕ ಬಂದು ನಿಂತಿತ್ತು. ಆದರೆ ಭಾರತವು ತನ್ನ 4ನೇ ಮ್ಯಾಚ್ ಪಾಯಿಂಟ್ ಅನ್ನು ಪಡೆದುಕೊಂಡಿತು. ಅಂತಿಮವಾಗಿ ಭಾರತದ ಜೋಡಿ ಗೆಲುವಿನ ನಗೆ ಬೀರಿತು.

ಸತತ 2ನೇ ಫೈನಲ್​ಗೆ ಲಗ್ಗೆ

ಕೊರಿಯಾ ಓಪನ್ ಪ್ರಶಸ್ತಿ ಸುತ್ತಿನ ರೋಮಾಂಚನಕಾರಿ ಹಣಾಹಣಿಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ವರ್ಷ ಥಾಯ್ಲೆಂಡ್ ಮತ್ತು ಇಂಡಿಯಾ ಓಪನ್​​ನಲ್ಲಿ ಭಾರತದ ಎದುರು ಗೆದ್ದಿದ್ದ ಚೀನಿಯರು, 2-0 ಮುಖಾಮುಖಿ ದಾಖಲೆಯೊಂದಿಗೆ ಕಣಕ್ಕಿಳಿದರು. ಆದರೆ, ಜೂನ್‌ನಲ್ಲಿ ನಡೆದ ತಮ್ಮ ಕೊನೆಯ ಟೂರ್ನಿಯಲ್ಲಿ ಇಂಡೋನೇಷ್ಯಾ ಓಪನ್ ಜಯಿಸಿದ ನಂತರ ಭಾರತೀಯರು ತಮ್ಮ ಸತತ 2ನೇ ಫೈನಲ್‌ಗೆ ಪ್ರವೇಶಿಸಲು ವಿಭಿನ್ನ ಆಟದ ಮೂಲಕ ಭರ್ಜರಿ ಪ್ರದರ್ಶನ ನೀಡಿದರು.

2ನೇ ಸೆಮಿಫೈನಲ್​​ನಲ್ಲಿ ಮುಖಾಮುಖಿಯಾಗಿರುವ ಇಂಡೋನೇಷ್ಯಾದ ಅಗ್ರ ಶ್ರೇಯಾಂಕದ ಫಜರ್ ಅಲ್ಫಿಯಾನ್-ಮುಹಮ್ಮದ್ ರಿಯಾನ್ ಅರ್ಡಿಯಾಂಟೊ ಜೋಡಿ ಮತ್ತು ಕೊರಿಯಾದ ಕಾಂಗ್ ಮಿನ್ ಹ್ಯುಕ್ ಮತ್ತು ಸಿಯೊ ಸೆಯುಂಗ್ ಜೇ ಜೋಡಿ ನಡುವೆ ಗೆದ್ದವರ ಜೊತೆ ಭಾರತದ ಜೋಡಿ ಫೈನಲ್​ನಲ್ಲಿ ಸೆಣಸಾಟ ನಡೆಸಲಿದೆ.

ಈ ವರ್ಷ ಭರ್ಜರಿ ಬೇಟೆ

2023ರ ಆರಂಭದಲ್ಲಿ ಭಾರತದ ಸ್ವಿಸ್ ಓಪನ್‌ನಲ್ಲಿ ತಮ್ಮ ಮೊದಲ ಪ್ರಶಸ್ತಿ ಗೆದ್ದ ಚಿರಾಗ್ ಮತ್ತು ಸಾತ್ವಿಕ್ ಜೋಡಿ, ಫೈನಲ್‌ನಲ್ಲಿ ಚೀನಾದ ರೆನ್ ಕ್ಸಿಯಾಂಗ್ಯು-ಟಾನ್ ಕಿಯಾಂಗ್ ಅವರನ್ನು ಸೋಲಿಸಿದ್ದರು. ದುಬೈನಲ್ಲಿ ನಡೆದ 2023ರ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್ ಬಳಿಕ ಏಷ್ಯನ್ ಚಾಂಪಿಯನ್ ಪ್ರಶಸ್ತಿ ಗೆದ್ದರು. ಕಳೆದ ತಿಂಗಳು 2023ರ ಇಂಡೋನೇಷ್ಯಾ ಓಪನ್‌ನ ಫೈನಲ್‌ನಲ್ಲಿ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ಅವರನ್ನು ಸೋಲಿಸುವ ಮೂಲಕ ಅವರು ತಮ್ಮ ಮೊದಲ ಬ್ಯಾಡ್ಮಿಂಟನ್ ವರ್ಲ್ಡ್ ಸೂಪರ್ 1000 ಪ್ರಶಸ್ತಿ ಗೆದ್ದರು. ಈ ಈವೆಂಟ್ ಗೆದ್ದ ಭಾರತದ ಮೊದಲ ಪುರುಷರ ಡಬಲ್ಸ್ ಜೋಡಿ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ