D Gukesh: 1991ರ ನಂತರ ಮೊದಲ ಬಾರಿಗೆ ಶ್ರೇಯಾಂಕದಲ್ಲಿ ಕುಸಿತ ಕಂಡ ದಿಗ್ಗಜ ವಿಶ್ವನಾಥನ್ ಆನಂದ್; 17ರ ಪೋರ ಈಗ ಭಾರತಕ್ಕೆ ನಂಬರ್ 1 ಚೆಸ್ ಆಟಗಾರ
Aug 05, 2023 01:43 PM IST
ವಿಶ್ವನಾಥನ್ ಆನಂದ್, ಡಿ ಗುಕೇಶ್
- D Gukesh: ಅಂತಾರಾಷ್ಟ್ರೀಯ ಚೆಸ್ ರ‍್ಯಾಂಕಿಂಗ್ ನೂತನ ಪಟ್ಟಿಯಲ್ಲಿ ವಿಶ್ವನಾಥನ್ ಆನಂದ್ ಅವರನ್ನೇ ಹಿಂದಿಕ್ಕೆ ತಳ್ಳಿ ಭಾರತಕ್ಕೆ ಡಿ.ಗುಕೇಶ್ ನಂಬರ್ 1 ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಚೆಸ್ ಮಾಸ್ಟರ್ ಎಂದೇ ಪ್ರಸಿದ್ಧಿಯಾಗಿರುವ ಭಾರತದ ದಿಗ್ಗಜ ವಿಶ್ವನಾಥನ್ ಆನಂದ್ (Viswanathan Anand) ಅವರನ್ನೇ 17 ವರ್ಷದ ಪೋರನೊಬ್ಬ ಶ್ರೇಯಾಂಕದಲ್ಲಿ ಹಿಂದಿಕ್ಕಿದ್ದಾರೆ. ಹೌದು, 17 ವರ್ಷದ ಡಿ.ಗುಕೇಶ್ (D Gukesh) ಅಂತಾರಾಷ್ಟ್ರೀಯ ಚೆಸ್ ರ‍್ಯಾಂಕಿಂಗ್ ನೂತನ ಪಟ್ಟಿಯಲ್ಲಿ ವಿಶ್ವನಾಥನ್ ಆನಂದ್ ಅವರನ್ನೇ ಹಿಂದಿಕ್ಕೆ ತಳ್ಳಿ ಭಾರತಕ್ಕೆ ನಂಬರ್ 1 ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಜರ್‌ಬೈಜಾನ್‌ನ ಬಾಕುನಲ್ಲಿ ಜರುಗುತ್ತಿರುವ ವಿಶ್ವಕಪ್ 2ನೇ ಸುತ್ತಿನ ಪಂದ್ಯದಲ್ಲಿ ಭಾರತದ ಗುಕೇಶ್, ಇಸ್ಕ್ಯಾನ್ಡರೊವ್ ವಿರುದ್ದ ಭರ್ಜರಿ ಜಯ ಸಾಧಿಸಿ 2.5 ರೇಟಿಂಗ್ ಸಂಪಾದಿಸಿದ್ದಾರೆ. ಆ ಮೂಲಕ ಗುಕೇಶ್ ಅವರ ಲೈವ್ ರೇಟಿಂಗ್ 2755.9 ಅಂಕಕ್ಕೆ ಏರಿಕೆ ಕಂಡಿದೆ. ವಿಶ್ವದ ಶ್ರೇಯಾಂಕದಲ್ಲಿ 9ನೇ ಸ್ಥಾನಕ್ಕೆ ಜಂಪ್ ಆಗಿದ್ದಾರೆ. ಆದರೆ 2754.0 ಅಂಕ ಹೊಂದಿರುವ ವಿಶ್ವನಾಥನ್ ಆನಂದ್, ಒಂದು ಸ್ಥಾನ ಇಳಿದು 10ನೇ ಸ್ಥಾನ ಪಡೆದಿದ್ದಾರೆ.
1991ರ ಬಳಿಕ ಕುಸಿದ ಆನಂದ್
ವಿಶ್ವನಾಥನ್ ಆನಂದ್ 1991ರ ಜುಲೈನಲ್ಲಿ ಮೊದಲ ಬಾರಿಗೆ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದರು. ಆದರೆ ಭಾರತಕ್ಕೆ 1987ರ ಜನವರಿಯಿಂದಲೂ ರ‍್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಆಗಿ ಗುರುತಿಸಿಕೊಂಡಿದ್ದರು. ಆದರೆ ಇದೇ ಮೊದಲ ಬಾರಿಗೆ ಡಿ ಗುಕೇಶ್ ದಿಗ್ಗಜ ಆಟಗಾರನನ್ನೇ ಹಿಂದಿಕ್ಕಿದ್ದಾರೆ. ಇನ್ನು ಅಗ್ರಸ್ಥಾನದಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸೆನ್ ಅಗ್ರಸ್ಥಾನದಲ್ಲಿದ್ದಾರೆ.
ಅಲ್ಲದೆ, ಮುಂದಿನ ರ‍್ಯಾಂಕಿಂಗ್ ಪಟ್ಟಿ ಪ್ರಕಟವಾಗುವವರೆಗೂ (ಸೆ.01) ರೇಟಿಂಗ್ ಕಾಯ್ದುಕೊಂಡಿದ್ದೇ ಆದರೆ ಗುಕೇಶ್ ಮತ್ತೊಂದು ದಾಖಲೆ ಬರೆಯಲಿದ್ದಾರೆ. 1986ರಲ್ಲಿ ಪ್ರವೀಣ್ ಥಿಪ್ಸೆ ಅವರು ಆನಂದ್‌ಗಿಂತ ಉತ್ತಮ ರ‍್ಯಾಂಕಿಂಗ್ ಪಡೆದಿದ್ದರು. ಇದೀಗ 1986 ರಿಂದ ಇದು ಎರಡನೇ ಬಾರಿಗೆ ಆನಂದ್ ಅವರನ್ನು ಉನ್ನತ ಸ್ಥಾನದಿಂದ ಸ್ಥಳಾಂತರಿಸಲಾಗಿದೆ.
ಐರ್ಲೆಂಡ್ ತಂಡ ಪ್ರಕಟ
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ತಂಡವು (India vs West Indies) ಆ ಬಳಿಕ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ 3 ಟಿ20 ಪಂದ್ಯಗಳನ್ನು ಆಡಲಿದ್ದು, ಈಗಾಗಲೇ ಜಸ್ಪ್ರಿತ್ ಬೂಮ್ರಾ ನೇತೃತ್ವದ ತಂಡವನ್ನು ಪ್ರಕಟಿಸಲಾಗಿದೆ. ಇದರ ಬೆನ್ನಲ್ಲೇ ಅತಿಥೇಯ ಐರ್ಲೆಂಡ್ ಕೂಡ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆಗಸ್ಟ್ 18ರಂದು ಆರಂಭವಾಗುವ ಈ ಸರಣಿ ಆಗಸ್ಟ್ 23ಕ್ಕೆ ಮುಕ್ತಾಯಗೊಳ್ಳಲಿದೆ.
ಐರ್ಲೆಂಡ್ ತಂಡ: ಪೌಲ್ ಸ್ಟಿರ್ಲಿಂಗ್ (ನಾಯಕ), ಮಾರ್ಕ್ ಅಡೈರ್, ಆಂಡ್ರ್ಯೂ ಬಾಲ್ಬಿರ್ನಿ, ಕರ್ಟಿಸ್ ಕ್ಯಾಂಫರ್, ರಾಸ್ ಅಡೈರ್, ಗರೆಥ್ ಡೆಲಾನಿ, ಫಿಯಾನ್ ಹ್ಯಾಂಡ್, ಜಾರ್ಜ್ ಡಾಕ್ರೆಲ್, ಜೋಶುವಾ ಲಿಟಲ್, ಹ್ಯಾರಿ ಟೆಕ್ಟರ್, ಬ್ಯಾರಿ ಮೆಕಾರ್ಥಿ, ಲೋರ್ಕನ್ ಥಿಕರ್ (ವಿಕೆಟ್ ಕೀಪರ್), ವ್ಯಾನ್ ವೋರ್ಕಾಮ್, ಕ್ರೇಗ್ ಯಂಗ್, ಬೆನ್ ವೈಟ್.
ಭಾರತ ತಂಡಕ್ಕೆ ದಂಡದ ಬರೆ
ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್, ಏಕದಿನ ಸರಣಿ ವಶಪಡಿಸಿಕೊಂಡ ಭಾರತ ಇದೀಗ ಮೊದಲ ಟಿ20 ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಟ್ರಿನಿಡಾಡ್ನ ಬ್ರಿಯನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ವಿಂಡೀಸ್ 4 ರನ್ಗಳ ರೋಚಕ ಗೆಲುವು ಸಾಧಿಸಿತು. ಆದರೆ ಉಭಯ ತಂಡಗಳಿಗೂ ಐಸಿಸಿ ಬರೆ ಎಳೆದಿದೆ. ಭಾರತವು ನಿಧಾನಗತಿಯ ಓವರ್ ಮಾಡಿದ್ದರ ಪರಿಣಾಮ, ಐಸಿಸಿ ತನ್ನ ಪಂದ್ಯದ ಶುಲ್ಕದ 5ರಷ್ಟು ದಂಡ ವಿಧಿಸಿದೆ. ಇನ್ನು ವೆಸ್ಟ್ ಇಂಡೀಸ್ಗೂ ಪಂದ್ಯದ 10ರಷ್ಟು ದಂಡ ವಿಧಿಸಲಾಗಿದೆ.