CWG 2022: ಕಾಮನ್‌ವೆಲ್ತ್ ಕ್ರಿಕೆಟ್ ನಲ್ಲಿ ಫೈನಲ್ ಪ್ರವೇಶಿಸಿದ ಭಾರತ ಮಹಿಳಾ ತಂಡ; ಪದಕ ಖಚಿತ
Aug 06, 2022 11:23 PM IST
ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಭಾರತದ ಮಹಿಳಾ ತಂಡ (ಫೋಟೋ-ಸಂಗ್ರಹ)
ಕಾಮನ್‌ವೆಲ್ತ್ ಕ್ರಿಕೆಟ್ ನಲ್ಲಿ ಫೈನಲ್ ಪ್ರವೇಶಿಸಿದ ಭಾರತ ಮಹಿಳಾ ತಂಡ ದೇಶಕ್ಕೆ ಪದಕ ತರುವುದು ಖಚಿತವಾಗಿದೆ. ಸೆಮಿ ಫೈನಲ್ ನಲ್ಲಿ ಭಾರತ ಮಹಿಳಾ ತಂಡ ಇಂಗ್ಲೆಂಡ್ ತಂಡದ ವಿರುದ್ಧ 4 ರನ್ ಗಳ ರೋಚಕ ಗೆಲುವು ಸಾಧಿಸಿತು.
ಬರ್ಮಿಂಗ್ ಹ್ಯಾಮ್: ಕಾಮನ್‌ವೆಲ್ತ್ 2022 ಕ್ರಿಕೆಟ್ ನಲ್ಲಿ ಭಾರತದ ಮಹಿಳಾ ತಂಡ ಹೊಸ ದಾಖಲೆಯನ್ನು ಬರೆದಿದ್ದು, ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ಮಹಿಳಾ ತಂಡವನ್ನು ಮಣಿಸಿ ಫೈನಲ್ ಗೆ ಪ್ರವೇಶಿಸಿದೆ. ಆ ಮೂಲಕ ಪದಕವೊಂದನ್ನು ಖಾತ್ರಿ ಪಡಿಸಿದೆ.
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಸೆಮಿ ಫೈನಲ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 164 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಮಹಿಳಾ ತಂಡ ನಿಗಿದಿತ 20 ಓವರ್ ಗಳಲ್ಲಿ 160 ರನ್ ಗಳಷ್ಟೇ ಗಳಿಸಲು ಶಕ್ತವಾಯಿತು.
165 ರನ್ ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಇಂಗ್ಲೆಂಡ್ ಮಹಿಳಾ ತಂಡ ಮೊದಲ ಓವರ್ ನಿಂದಲೇ ಭಾರತೀಯ ಬೌಲರ್ ಗಳನ್ನು ದಿಟ್ಟವಾಗಿ ಎದುರಿಸಿತು. ಇಂಗ್ಲೆಂಡ್ ಆರಂಭಿಕರು 2.4 ಓವರ್‌ಗಳಲ್ಲಿ 28 ರನ್ ಗಳಿಸಿದರು. 10 ಎಸೆತಗಳಲ್ಲಿ 4 ಬೌಂಡರಿ ಸಹಿತ 19 ರನ್ ಗಳಿಸಿದ್ದ ಸೋಫಿಯಾ ಡಂಕ್ಲಿ ದೀಪ್ತಿ ಶರ್ಮಾ ಎಸೆತದಲ್ಲಿ ಎಲ್ ಬಿಡಬ್ಲ್ಯು ಬಲೆಗೆ ಬಿದ್ದರು.
ಆ ಬಳಿಕ 8 ಎಸೆತಗಳಲ್ಲಿ 2 ಬೌಂಡರಿ ಸಹಿತ 13 ರನ್ ಗಳಿಸಿದ್ದ ಆಲಿಸ್ ಕ್ಯಾಪ್ಸಿ ರನೌಟ್ ಆದರು. 27 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 35 ರನ್ ಗಳಿಸಿದ್ದ ಡೇನಿಯಲ್ ವ್ಯಾಟ್ ಅವರನ್ನು ಸ್ನೇಹ ರಾಣಾ ಕ್ಲೀನ್ ಬೌಲ್ಡ್ ಮಾಡಿದರು. ಈ ಕ್ರಮದಲ್ಲಿ ಇಂಗ್ಲೆಂಡ್ 81 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಆದರೆ ಆಮಿ ಜೋನ್ಸ್ ಮತ್ತು ನಾಯಕಿ ನಟಾಲಿಯಾ ಸಿವರ್ ಜೋಡಿ ಇಂಗ್ಲೆಂಡ್ ಸ್ಕೋರ್ ಬೋರ್ಡ್ ಅನ್ನು ಮತ್ತೆ ಹೆಚ್ಚಿಸಿದರು. ಆದರೆ ಇವರ ಆಟ ಕೂಡ ಹೆಚ್ಚು ಹೊತ್ತು ನಿಂತಿಲ್ಲ. 24 ಎಸೆತಗಳಲ್ಲಿ 3 ಬೌಂಡರಿ ಸಹಿತ 31 ರನ್ ಗಳಿಸಿದ್ದ ಆಮಿ ಜೋನ್ಸ್ ರನೌಟ್ ಆದರೆ, 43 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 41 ರನ್ ಗಳಿಸಿದ್ದ ಇಂಗ್ಲೆಂಡ್ ನಾಯಕ ಸಿವರ್ ಕೂಡ ರನ್ ಔಟ್ ಆಗುವ ಮೂಲಕ ಪೆವಿಲಿಯನ್ ಸೇರಿದರು.
ಒಂದು ಹಂತದಲ್ಲಿ ಇಂಗ್ಲೆಂಡ್ ಗೆಲುವಿಗೆ 48 ಎಸೆತಗಳಲ್ಲಿ 68 ರನ್ ಗಳ ಅಗತ್ಯವಿದ್ದು, ಕೈಯಲ್ಲಿ 7 ವಿಕೆಟ್ ಗಳಿದ್ದರೆ ಸುಲಭವಾಗಿ ಗೆಲುವು ಸಾಧಿಸುವಂತಿತ್ತು. ಆದರೆ, ಇಂಗ್ಲೆಂಡಿನ ಬ್ಯಾಟ್ಸ್ ಮನ್ ಗಳು ದೊಡ್ಡ ಹೊಡೆತಗಳನ್ನು ಬಾರಿಸದಂತೆ ತಡೆದ ಭಾರತದ ಬೌಲರ್ ದೀಪ್ತಿ ಶರ್ಮಾ ಪಂದ್ಯವನ್ನು 18 ಎಸೆತಗಳಲ್ಲಿ 30 ರನ್ ಗಳಿಸುವ ಮಟ್ಟಕ್ಕೆ ತಂದರು.
ಈ ಹಂತದಲ್ಲಿ 18ನೇ ಓವರ್ ಬೌಲ್ ಮಾಡಿದ ಸ್ನೇಹ್ ರಾಣಾ ಕೇವಲ 3 ರನ್ ನೀಡಿದರಾದರೂ, ಮುಂದಿನ ಓವರ್ ನಲ್ಲಿ 13 ರನ್ ಗಳು ಬಂದವು, ಆದರೆ ಇಂಗ್ಲೆಂಡ್ ನಾಯಕಿ ಸಿವರ್ ರನೌಟ್ ಆಗಿದ್ದರಿಂದ ಕೊನೆಯ ಓವರ್ ನಲ್ಲಿ ಇಂಗ್ಲೆಂಡ್ ಗೆಲುವಿಗೆ 14 ರನ್ ಬೇಕಿತ್ತು. ಸ್ನೇಹ್ ರಾಣಾ 20 ನೇ ಓವರ್ ಬೌಲ್ ಮಾಡಿದರು. ಮೊದಲ ಎಸೆತದಲ್ಲಿ ಯಾವುದೇ ರನ್ ನೀಡಲಿಲ್ಲ. ಎರಡನೇ ಎಸೆತದಲ್ಲಿ ಸಿಂಗಲ್ ಮತ್ತು ಬ್ರಂಟ್ ಮೂರನೇ ಎಸೆತದಲ್ಲಿ ಡಕ್ ಔಟ್ ಆದರು.
ಇಂಗ್ಲೆಂಡ್ ಗೆಲುವಿಗೆ ಕೊನೆಯ 3 ಎಸೆತಗಳಲ್ಲಿ 13 ರನ್ ಅಗತ್ಯವಿದ್ದಾಗ ಎಕ್ಲೆಸ್ಟೋನ್ ನೀಡಿದ ಕ್ಯಾಚ್ ಅನ್ನು ಹರ್ಲೀನ್ ಕೈಬಿಟ್ಟರು. ಈ ಮೂಲಕ ಇಂಗ್ಲೆಂಡ್ ರನ್ ಗಳಿಸಿತು. ಐದನೇ ಎಸೆತದಲ್ಲಿ ಸಿಂಗಲ್‌ನೊಂದಿಗೆ ಭಾರತ ತಂಡದ ಗೆಲುವು ಅಂತಿಮಗೊಂಡಿತು.
ಭಾರತ ವನಿತೆಯರ ತಂಡ 4 ರನ್ ಗಳ ರೋಚಕ ಜಯ ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿತು . ಮೊದಲು ಭಾರತ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಆರಂಭಿಕ ಆಟಗಾರ್ತಿ ಮಂಧಾನ ಜತೆಗೂಡಿ ಶಫಾಲಿ ವರ್ಮಾ (15) ಮೊದಲ ವಿಕೆಟ್‌ಗೆ 76 ರನ್ ಸೇರಿಸಿದರು. ಆರಂಭಿಕರಿಬ್ಬರೂ ಚುರುಕಿನ ಆಟವಾಡಿ ಔಟಾದರು.
ನಂತರ ಬಂದ ನಾಯಕಿ ಹರ್ಮನ್ ಪ್ರೀತ್ ಕೌರ್ (20) ನಿಧಾನವಾಗಿ ಬ್ಯಾಟ್ ಬೀಸಿದರೆ, ಜೆಮಿಮಾ ರಾಡ್ರಿಗಸ್ (44*) ಅದ್ಭುತ ಆಟವಾಡಿದರು. ಒಂದೆಡೆ ವಿಕೆಟ್ ಉರುಳಿದರೂ ಕೊನೆಯವರೆಗೂ ಕ್ರೀಸ್ ನಲ್ಲಿದ್ದು ಆಕ್ರಮಣಕಾರಿ ಆಟವಾಡಿದರು.
ವಿಭಾಗ