Asia Cup: ‘ಈ ತಂಡ ಟಿ20 ವಿಶ್ವಕಪ್‌ಗೆ ಹೋಗಲು ಸಾಧ್ಯವೇ ಇಲ್ಲ; ತಂಡದಲ್ಲಿ ಶಮಿ ಇರಲೇ ಬೇಕುʼ
Aug 09, 2022 12:44 PM IST
ಮೊಹಮ್ಮದ್ ಶಮಿ
- ಭಾರತದ ತಂಡದಲ್ಲಿ ಶಮಿ ದೀರ್ಘಾಕಾಲ ಸ್ಥಾನ ಪಡೆಯದಿದ್ದರೂ, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಂಡಕ್ಕೆ ಎಂಟ್ರಿ ಕೊಟ್ಟರೆ ಯಾವುದೇ ಆಶ್ಚರ್ಯ ಇಲ್ಲ ಎಂದು ಕಿರಣ್ ಮೋರ್ ಹೇಳುತ್ತಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯು, ಈ ಬಾರಿಯ ಏಷ್ಯಾ ಕಪ್‌ಗೆ ಸೋಮವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ತಂಡಕ್ಕೆ ವಿರಾಟ್ ಕೊಹ್ಲಿ ಮರಳಿದ್ದು, ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಗಾಯದ ಕಾರಣದಿಂದ ಹೊರಗುಳಿದಿದ್ದಾರೆ. ಇನ್ನೊಂದೆಡೆ ಕೆ ಎಲ್ ರಾಹುಲ್ ಕೂಡ ಸಂಪೂರ್ಣ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಇನ್ನೊಂದೆಡೆ ತಂಡಕ್ಕೆ ಶ್ರೇಯಸ್ ಅಯ್ಯರ್, ದೀಪಕ್ ಚಹಾರ್ ಮತ್ತು ಅಕ್ಷರ್ ಪಟೇಲ್ ಅವರನ್ನು ಸ್ಟ್ಯಾಂಡ್‌ಬೈಗಳಾಗಿ ಹೆಸರಿಸಲಾಗಿದೆ.
ಈ ಬಗ್ಗೆ ದೇಶಾದ್ಯಂತ ಪರ ವಿರೋಧಗಳ ಚರ್ಚೆ ಆರಂಭವಾಗಿದೆ. ಅದೇ ರೀತಿ ಭಾರತದ ಮಾಜಿ ಮುಖ್ಯ ಆಯ್ಕೆಗಾರ ಕಿರಣ್ ಮೋರ್, ಭಾರತ ತಂಡದಿಂದ ಒಬ್ಬರ ಹೆಸರು ಕಾಣೆಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಈ ತಂಡದ ಬಗ್ಗೆ ಅಮಾಧಾನ ಹೊರಹಾಕಿದ್ದಾರೆ.
ಕಿರಣ್ ಮೋರ್ ಅವರು ಮೊಹಮ್ಮದ್ ಶಮಿ ಆಯ್ಕೆಯಾಗದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ನಡೆದ ವಿಶ್ವಕಪ್‌ನಿಂದ ಶಮಿ ಭಾರತೀಯ ಟಿ20 ತಂಡದಲ್ಲಿ ಸ್ಥಾನ ಪಡೆದಿಲ್ಲ. ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲ್ಲಿ ಪ್ರಶಸ್ತಿ ವಿಜೇತ ತಂಡವಾದ ಗುಜರಾತ್ ಟೈಟಾನ್ಸ್ ತಂಡದ ಪರ ಸ್ಥಿರ ಪ್ರದರ್ಶನ ನೀಡಿದ್ದರೂ, ಶಮಿ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಭಾರತದ ತಂಡದಲ್ಲಿ ಶಮಿ ದೀರ್ಘಾಕಾಲ ಸ್ಥಾನ ಪಡೆಯದಿದ್ದರೂ, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಂಡಕ್ಕೆ ಎಂಟ್ರಿ ಕೊಟ್ಟರೆ ಯಾವುದೇ ಆಶ್ಚರ್ಯ ಇಲ್ಲ ಎಂದು ಮೋರ್ ಹೇಳುತ್ತಾರೆ.
ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾ ಆಯ್ಕೆಯ ಬಗ್ಗೆ ಯಾವುದೇ ಅಭ್ಯಂತರ ವ್ಯಕ್ತಪಡಿಸದ ಮೋರ್; ಪಾಂಡ್ಯಾ ಉಪಸ್ಥಿತಿ ನಿರ್ಣಾಯಕವಾಗಿದ್ದರೂ, ಶಮಿ ವೇಗದ ಬೌಲರ್ ಆಗಿ ಆಡುವ ಬಳಗದಲ್ಲಿ ಇರಲೇ ಬೇಕು ಎಂದು ಹೇಳಿದ್ದಾರೆ.
“ತಂಡಕ್ಕೆ ಹಾರ್ದಿಕ್ ಪುನರಾಗಮನ ಮಾಡಿದ ರೀತಿ ಆಕರ್ಷಕವಾಗಿತ್ತು. ಅವರು ಈಗ 140+ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಒಬ್ಬ ನಾಯಕನಿಗೆ ಅಂತಹ ಆಟಗಾರ ಬೇಕು. ಉತ್ತಮ ರನ್ ಗಳಿಸಬಲ್ಲ, ವಿಕೆಟ್‌ಗಳನ್ನು ತೆಗೆಯಬಲ್ಲ ಮತ್ತು ಮೈದಾನದಲ್ಲಿ ಎಚ್ಚರದಿಂದ ಇರಬಲ್ಲ ಆಟಗಾರನೇ ತಂಡಕ್ಕೆ ಬೇಕು. ಆದರೆ ನಾನು ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಮೊಹಮ್ಮದ್ ಶಮಿ ತಂಡಕ್ಕೆ ಬರುವವರೆಗೂ, ಈ ತಂಡವು ವಿಶ್ವಕಪ್‌ಗೆ ಹೋಗುವುದಿಲ್ಲ. ವಿಶ್ವಕಪ್‌ಗೆ ತಯಾರಿಯಾಗಿ ಇರುವ ಬ್ಯಾಕ್‌ಅಪ್‌ಗಳು” ಎಂದು ಕಾರ್ಯಕ್ರಮವೊಂದರಲ್ಲಿ ಮೋರ್ ಹೇಳಿದ್ದಾರೆ.
“ಶಮಿ ವಿಶ್ವಕಪ್ ತಂಡದಲ್ಲಿ ಇರಬೇಕು. ನಾನು ಈಗಲೂ ಅದನ್ನೇ ಹೇಳುತ್ತೇನೆ. ರಾಹುಲ್ ದ್ರಾವಿಡ್ ಈ ಪ್ರಕ್ರಿಯೆಯನ್ನು ಮಾಡುತ್ತಾರೆ. ಅವರು ಬ್ಯಾಕ್-ಅಪ್‌ಗಳನ್ನು ಹೊಂದಲು ಇಷ್ಟಪಡುತ್ತಾರೆ. ಒಬ್ಬ ಬೌಲರ್ ಗಾಯಗೊಂಡರೆ, ಅವೇಶ್ ಖಾನ್ ಅವರಂತಹವರು ವಿಶ್ವಕಪ್‌ನಲ್ಲಿ ಉಪಯುಕ್ತವಾಗಬಹುದು. ಬುಮ್ರಾ ಅವರ ಗಾಯದ ಪ್ರಮಾಣ ಏನೆಂದು ನನಗೆ ತಿಳಿದಿಲ್ಲ. ಆದರೆ ಅವರುವಿಶ್ವಕಪ್‌ನಲ್ಲಿ ಆಡಬೇಕು. ಶಮಿ ಕೂಡಾ ಖಂಡಿತವಾಗಿಯೂ ವಿಶ್ವಕಪ್‌ಗೆ ತಂಡದಲ್ಲಿ ಆಡುತ್ತಾರೆ”ಎಂದು ಭಾರತದ ಮಾಜಿ ಮುಖ್ಯ ಆಯ್ಕೆಗಾರ ಹೇಳಿದ್ದಾರೆ.
ಬೆನ್ನಿನ ಗಾಯದಿಂದಾಗಿ ಬುಮ್ರಾ ತಂಡದಿಂದ ಹೊರಗುಳಿದಿದ್ದಾರೆ. ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಏಷ್ಯಾ ಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಯಾಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಆರ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಜಡೇಜಾ, ಆರ್ ಅಶ್ವಿನ್, ಯಜುವೇಂದ್ರ ಚಾಹಲ್, ಆರ್ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಸ್ಟ್ಯಾಂಡ್‌ಬೈ: - ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಮತ್ತು ದೀಪಕ್ ಚಹಾರ್