Watch: ಮಾಜಿ ನಾಯಕಿ ತಬ್ಬಿಕೊಂಡಾಗ ಬಿಕ್ಕಿ ಬಿಕ್ಕಿ ಅತ್ತ ಕೌರ್; ಜ್ವರದ ನಡುವೆ ನಾಯಕಿ ಆಟಕ್ಕೆ ಅಭಿಮಾನಿಗಳ ಫುಲ್ ಮಾರ್ಕ್ಸ್
Feb 24, 2023 01:39 PM IST
ಹರ್ಮನ್‌ಪ್ರೀತ್ ಕೌರ್ ಅವರನ್ನು ಸಮಾಧಾನಪಡಿಸುತ್ತಿರುವ ಅಂಜುಮ್ ಚೋಪ್ರಾ
- ಬಲಗೈ ಬ್ಯಾಟರ್ ಡೆಸ್ಸಿಂಗ್ ಕೋಣೆಯನ್ನು ಸೇರಿಕೊಳ್ಳಲು ಹೊರನಡೆಯುತ್ತಿದ್ದಾಗ, ಭಾರತ ವನಿತೆಯರ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾ ಎದುರಾದರು. ಕೌರ್ ಅವರನ್ನು ಚೋಪ್ರಾ ತಬ್ಬಿಕೊಂಡಾಗ, ಎಲ್ಲಾ ಗಾಂಭೀರ್ಯತೆಯನ್ನು ಕಳೆದುಕೊಂಡು ಕೌರ್ ಬಿಕ್ಕಿ ಬಿಕ್ಕಿ ಅತ್ತರು.
ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ 52 ರನ್ ಗಳಿಸಿ ರನೌಟ್ ಆಗಿ ಪೆವಿಲಿಯನ್‌ಗೆ ವಾಪಸಾಗುತ್ತಿರುವಾಗ, ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಲ್ಲಿ ಭಾವಸಾಗರ ತುಂಬಿಕೊಂಡಿತ್ತು. ಕೋಪ, ಹತಾಶೆ, ನಿರಾಸೆ, ಆತಂಕ, ಸಂವೇದನೆ, ಜವಾಬ್ದಾರಿ ಎಲ್ಲವೂ ಏಕಕಾಲದಲ್ಲಿ ಅವರಲ್ಲಿ ಕಾಣಿಸುತ್ತಿತ್ತು. ಇದು ಬಹುಶಃ ಪಂದ್ಯದ ನಿರ್ಣಾಯಕ ಕ್ಷಣವಾಗಬಹುದೆಂದು ಅವರು ಮುಂಚೆಯೇ ತಿಳಿದಿದ್ದರು.
ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿನ ಬೃಹತ್ ಪರದೆಯ ಮೇಲೆ ಕೆಂಪು ಬಣ್ಣದಲ್ಲಿ 'ಔಟ್' ಎಂದು ಕಾಣಿಸಿಕೊಳ್ಳುತ್ತಿದ್ದಂತೆಯೇ, ಹರ್ಮನ್ ತಮ್ಮ ಮೇಲೆ ತಾವೇ ಕೋಪಗೊಂಡು ತಮ್ಮ ಬ್ಯಾಟ್ ಅನ್ನು ಎಸೆದರು. ಆದರೆ, ಪಂದ್ಯ ಇನ್ನೂ ಸೋತಿಲ್ಲ ಎಂಬ ಭರವಸೆಯೊಂದಿಗೆ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಅವರು ಹೊರಹೋಗುತ್ತಿದ್ದಂತೆಯೇ ಬ್ಯಾಟಿಂಗ್ ನಡೆಸಲು ಕ್ರೀಸ್‌ನತ್ತ ಬರುತ್ತಿದ್ದ ಬ್ಯಾಟರ್ ದೀಪ್ತಿ ಶರ್ಮಾಗೆ ಪ್ರೋತ್ಸಾಹದ ಮಾತುಗಳನ್ನು ಆಡಿದರು. ಆಗ ಒಂದು ರೀತಿಯ ಶಾಂತತೆ ಅವರಲ್ಲಿ ಕಾಣುತ್ತಿತ್ತು. ಆದರೆ, ತಮ್ಮ ಭಾವನೆಗಳನ್ನು ನಿಯಂತ್ರಿಸಲು ಅವರಿಗೆ ತುಂಬಾ ಕಷ್ಟವಾಗಿತ್ತು.
2019ರ ಪುರುಷರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಎಂಎಸ್ ಧೋನಿ ಔಟಾದಂತೆಯೇ, ಹರ್ಮನ್‌ಪ್ರೀತ್ ಅವರ ದುರದೃಷ್ಟಕರ ರನೌಟ್ ಸಂಭವಿಸಿತು. ಆ ವೇಳೆ ಭಾರತಕ್ಕೆ 33 ಎಸೆತಗಳಲ್ಲಿ ಕೇವಲ 41 ರನ್‌ಗಳಷ್ಟೇ ಅಗತ್ಯವಿತ್ತು. ಅಲ್ಲದೆ ಆರು ವಿಕೆಟ್‌ಗಳು ಕೂಡಾ ಇತ್ತು. ಆದರೆ, ಅಂದುಕೊಂಡಂತೆ ಯಾವುದೂ ಸಾಗಲಿಲ್ಲ.
ಎಲ್ಲಾ ಭಾವನೆಗಳನ್ನು ಮೈಮನಸ್ಸಲ್ಲಿ ತುಂಬಿಕೊಂಡಿದ್ದರೂ, ಕ್ಯಾಮರಾ ಮುಂದೆ ಯಾವುದನ್ನೂ ತೋರಿಸುವಂತಿರಲಿಲ್ಲ. ಏಕೆಂದರೆ ನಾಯಕಿಯ ಜವಾಬ್ದಾರಿ ಅವರ ಮೇಲಿತ್ತು. ಅಲ್ಲದೆ ಪಂದ್ಯವನ್ನು ಕಳೆದುಕೊಂಡ ಬೇಸರದಲ್ಲಿರುವ ಅಭಿಮಾನಿಗಳಿಗೆ ಅವರೇ ಧೈರ್ಯ ಹೇಳಬೇಕಿತ್ತು. ಪಂದ್ಯದ ನಂತರದ ಪ್ರೆಸೆಂಟೇಷನ್ ಕಾರ್ಯಕ್ರಮಕ್ಕೆ ಬಂದ ಅವರು, ತಾವು ಅಳುವುದನ್ನು ಯಾರೂ ನೋಡಬಾರದೆಂದು ಸನ್‌ಗ್ಲಾಸ್ ಧರಿಸಿದ್ದರು.
ಎಲ್ಲಾ ಆಗಿ ಬಲಗೈ ಬ್ಯಾಟರ್ ತಮ್ಮ ಡೆಸ್ಸಿಂಗ್ ಕೋಣೆಯನ್ನು ಸೇರಿಕೊಳ್ಳಲು ಹೊರನಡೆಯುತ್ತಿದ್ದಾಗ, ಭಾರತ ವನಿತೆಯರ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾ ಎದುರಾದರು. ಕೌರ್ ಅವರನ್ನು ಚೋಪ್ರಾ ತಬ್ಬಿಕೊಂಡಾಗ, ಎಲ್ಲಾ ಗಾಂಭೀರ್ಯತೆಯನ್ನು ಕಳೆದುಕೊಂಡು ಕೌರ್ ಬಿಕ್ಕಿ ಬಿಕ್ಕಿ ಅತ್ತರು.
ಅಂಜುಮ್ ಭಾರತದ ನಾಯಕಿಯನ್ನು ದೀರ್ಘಕಾಲ ತಬ್ಬಿ ಹಿಡಿದಿಟ್ಟುಕೊಂಡಾಗ, ಹರ್ಮನ್‌ಪ್ರೀತ್ ಅವರ ಕಣ್ಣಾಲಿಗಾಳು ಒದ್ದೆಯಾದವು. ಕಣ್ಣಂಚಲ್ಲಿ ನೀರು ಹರಿಯತೊಡಗಿತು. ಈ ವೇಳೆ ತಂಡದ ಸಹ ಆಟಗಾರ್ತಿ ಹರ್ಲೀನ್ ಡಿಯೋಲ್ ಅವರು ತಮ್ಮ ನಾಯಕಿಯ ಕಣ್ಣೀರನ್ನು ಒರೆಸುವ ಪ್ರಯತ್ನ ಮಾಡಿದರು.
ಈ ಭಾವನಾತ್ಮಕ ಕ್ಷಣದ ಬಗ್ಗೆ ಅಂಜುಮ್ ಅವರ ಬಳಿ ಕೇಳಿದದಾಗ, ಇದು ನೈಜ ಭಾವನೆ ಎಂದು ಅವರು ವಿವರಿಸಿದರು. “ನಾಯಕಿಗೆ ಸ್ವಲ್ಪ ಸಹಾನುಭೂತಿ ತೋರುವುದು ನನ್ನ ಉದ್ದೇಶವಾಗಿತ್ತು. ಏಕೆಂದರೆ ಹೊರಗಿನಿಂದ ನಾನು ಅದನ್ನು ಮಾತ್ರ ಮಾಡಬಲ್ಲೆ. ಇದು ನಮ್ಮಿಬ್ಬರಿಗೂ ಭಾವನಾತ್ಮಕ ಕ್ಷಣವಾಗಿತ್ತು. ಭಾರತ ಸಾಕಷ್ಟು ಬಾರಿ ಸೆಮಿಫೈನಲ್ ತಲುಪಿದೆ. ಮತ್ತು ಹಲವು ಬಾರಿ ಅಲ್ಲಿ ಸೋಲೊಪ್ಪಿದ್ದೇವೆ. ನಾನು ಹರ್ಮನ್‌ಪ್ರೀತ್ ಈ ರೀತಿ ಬ್ಯಾಟ್ ಮಾಡುವುದನ್ನು ಇದೇ ಮೊದಲ ಬಾರಿ ನೋಡುತ್ತಿಲ್ಲ. ಆಕೆ ತನ್ನ ಗಾಯ ಮತ್ತು ಆರೋಗ್ಯದೊಂದಿಗೆ ಹೋರಾಡಿ ಗಾಂಭೀರ್ಯದಿಂದ ಆಡುವುದನ್ನು ಈ ಮುಂಚೆಯೇ ನೋಡಿದ್ದೇನೆ. ಇಂದು ಪಂದ್ಯ ಪ್ರಾರಂಭವಾಗುವ ಮೊದಲು ಅವಳು ಆಡುವ ಪರಿಸ್ಥಿತಿಗೆ ತನ್ನನ್ನು ತಂದುಕೊಂಡಳು. ಅವಳು ಮೈದಾನದಲ್ಲಿ ಓಡಿದಳು. ಬ್ಯಾಟಿಂಗ್ ಮಾಡುವಾಗ, ಅವರು ಭಾರತದ ಭರವಸೆಯನ್ನು ಪುನರುಜ್ಜೀವನಗೊಳಿಸಿದರು. ಸಹಜವಾಗಿ, ಜೆಮಿಮಾ ರೋಡ್ರಿಗಸ್ ಕೂಡ ತಮ್ಮ ಪಾತ್ರವನ್ನು ನಿರ್ವಹಿಸಿದರು. ಹರ್ಮನ್‌ಪ್ರೀತ್ ಕೌರ್ ಏನನ್ನು ಅನುಭವಿಸುತ್ತಿದ್ದಾರೆಂದು ನನಗೆ ಅರ್ಥವಾಗುತ್ತದೆ. ಇದು ಒಬ್ಬಳು ಆಟಗಾರ್ತಿಯು ಮತ್ತೋರ್ವ ಆಟಗಾರ್ತಿಯೊಂದಿಗೆ ಕಳೆದ ಕ್ಷಣವಾಗಿದೆ. ನಾನು ಆಕೆಯ ದುಃಖವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೆ,” ಎಂದು ಅಂಜುಮ್ ಐಸಿಸಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.