Harmanpreet on run-out: 'ಒಂದು ಓವರ್ ಉಳಿಸಿ ಗೆಲ್ಲುತ್ತಿದ್ದೆವು'; ಆಘಾತಕಾರಿ ರನೌಟ್ ಕುರಿತು ಕೌರ್ ಭಾವನಾತ್ಮಕ ಪ್ರತಿಕ್ರಿಯೆ
Feb 24, 2023 11:05 AM IST
ಹರ್ಮನ್‌ಪ್ರೀತ್ ಕೌರ್
- ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಭಾರತವನ್ನು ಕೇವಲ 5 ರನ್‌ಗಳಿಂದ ಸೋಲಿಸುವ ಮೂಲಕ ಮೆಗ್ ಲ್ಯಾನಿಂಗ್ ಪಡೆಯು ಏಳನೇ ಬಾರಿಗೆ ಮಹಿಳಾ ಟಿ20 ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ. ಸದ್ಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವು ಇಂಗ್ಲೆಂಡ್ ಅಥವಾ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಗುರುವಾರ ಕೇಪ್ ಟೌನ್‌ನಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ವನಿತೆಯರು ಸೋಲೊಪ್ಪಿದರು. ಪ್ರತಿ ಬಾರಿಯೂ ಅಂತಿಮ ಕ್ಷಣದಲ್ಲಿ ಎಡವಿ ಸೋಲೊಪ್ಪಿಕೊಂಡಿರುವ ಭಾರತ, ಈ ಬಾರಿಯೂ ಮತ್ತೆ ನಿರಾಸೆ ಅನುಭವಿಸಬೇಕಾಯ್ತು. ಅದರಲ್ಲೂ ನಾಯಕಿ ಕೌರ್ ಅವರ ರನೌಟ್‌ಗೆ ಭಾರತ ತಂಡ ಬೆಲೆ ತೆರಬೇಕಾಯ್ತು. ಈ ಬಗ್ಗೆ ಪಂದ್ಯದ ಬಳಿಕ ನಡೆದ ಪೋಸ್ಟ್ ಮ್ಯಾಚ್ ಪ್ರಸೆಂಟೇಶನ್ ಸಮಯದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಭಾವನಾತ್ಮಕ ಮಾತುಗಳನ್ನಾಡಿದರು.
ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಭಾರತವನ್ನು ಕೇವಲ 5 ರನ್‌ಗಳಿಂದ ಸೋಲಿಸುವ ಮೂಲಕ ಮೆಗ್ ಲ್ಯಾನಿಂಗ್ ಪಡೆಯು ಏಳನೇ ಬಾರಿಗೆ ಮಹಿಳಾ ಟಿ20 ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ. ಸದ್ಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವು ಇಂಗ್ಲೆಂಡ್ ಅಥವಾ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಆಸ್ಟ್ರೇಲಿಯಾದ ಕೈಯಲ್ಲಿ ಭಾರತವು ಮತ್ತೊಮ್ಮೆ ಹೃದಯವಿದ್ರಾವಕ ಸೋಲು ಅನುಭವಿಸಿತು. ಈ ಬಗ್ಗೆ ಮಾತನಾಡುತ್ತಾ ನಾಯಕಿ ಹರ್ಮನ್‌ಪ್ರೀತ್ ಭಾವುಕರಾದರು. ಪವರ್ ಹಿಟ್ಟರ್ ಜೆಮಿಮಾ ರೋಡ್ರಿಗಸ್ ಅವರೊಂದಿಗೆ ಉತ್ತಮ ಹೋರಾಟವನ್ನು ಪ್ರದರ್ಶಿಸಿದ ಹರ್ಮನ್‌ಪ್ರೀತ್, ವಿಲಕ್ಷಣ ಶೈಲಿಯಲ್ಲಿ ರನೌಟ್ ಆದರು. ಅದು ಅಂತಿಮವಾಗಿ ಕೇಪ್ ಟೌನ್‌ನಲ್ಲಿ ಭಾರತವು ಆಸೀಸ್‌ಗೆ ತಲೆಬಾಗುವಂತೆ ಮಾಡಿತು. ಆದರೂ, ಭಾರತದ ಪರ ಹರ್ಮನ್‌ಪ್ರೀತ್ ಗರಿಷ್ಠ ಸ್ಕೋರ್ ದಾಖಲಿಸಿದರು. ಇವರೊಂದಿಗೆ ಜೆಮಿಮಾ ಅವರ ಕೆಚ್ಚೆದೆಯ ಹೋರಾಟ ಸೋಲಿನೊಂದಿಗೆ ವ್ಯರ್ಥವಾಯಿತು.
“ನಾನು ಮತ್ತು ಜೆಮಿಮಾ ಬ್ಯಾಟಿಂಗ್ ಮಾಡುವಾಗ ಗೆಲುವಿನ ವೇಗವನ್ನು ಮರಳಿ ಪಡೆದೆವು. ಆದರೆ, ಅಂತಿಮವಾಗಿ ನಾವು ಇದಕ್ಕಿಂತ ಹೆಚ್ಚು ದುರದೃಷ್ಟರಾಗಲು ಸಾಧ್ಯವಿಲ್ಲ. ಎಲ್ಲಾ ಪ್ರಯತ್ನಗಳ ನಡುವೆಯೂ ಈ ಸೋಲನ್ನು ನಾವು ನಿರೀಕ್ಷಿಸಿರಲಿಲ್ಲ. ಮುಖ್ಯವಾಗಿ ನಾನು ರನ್ ಔಟ್ ಆದ ರೀತಿಗಿಂತ ಹೆಚ್ಚು ದುರದೃಷ್ಟ ಬೇರೆ ಇರಲಿಕಿಲ್ಲ. ಪ್ರಯತ್ನಪಡುವುದು ತುಂಬಾ ಮುಖ್ಯವಾಗಿತ್ತು. ಕೊನೆಯ ಎಸೆತದವರೆಗೂ ಹೋರಾಟ ನಡೆಸುವ ಬಗ್ಗೆ ಚರ್ಚಿಸಿದ್ದೆವು. ಆದರೆ, ಫಲಿತಾಂಶ ನಾವು ಅಂದುಕೊಂಡಂತೆ ಆಗಲಿಲ್ಲ. ಆದರೆ ಈ ಪಂದ್ಯಾವಳಿಯಲ್ಲಿ ನಾವು ಆಡಿದ ರೀತಿ ಬಗ್ಗೆ ನನಗೆ ಸಂತೋಷವಾಗಿದೆ,” ಎಂದು ಭಾರತವು ಟಿ20 ವಿಶ್ವಕಪ್‌ನಿಂದ ಸೆಮಿಫೈನಲ್‌ನಲ್ಲಿ ಹೊರಬಿದ್ದ ಬಳಿಕ ಹರ್ಮನ್‌ಪ್ರೀತ್ ಹೇಳಿದರು.
ತಮ್ಮ ಅನಿರೀಕ್ಷಿತ ಹಾಗೂ ದುರದೃಷ್ಟಕರ ರನ್ ಔಟ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹರ್ಮನ್‌ಪ್ರೀತ್, ತನ್ನ ಬ್ಯಾಟ್ ವಿಕೆಟ್ ಬಳಿ ಸಿಲುಕಿಕೊಳ್ಳದಿದ್ದರೆ ಭಾರತವು ಒಂದು ಓವರ್‌ಗೆ ಮುಂಚಿತವಾಗಿ ಪಂದ್ಯವನ್ನು ಮುಗಿಸಬಹುದಿತ್ತು ಎಂದು ಹೇಳಿದರು.
“ಒಂದು ವೇಳೆ ನನ್ನ ಬ್ಯಾಟ್ ವಿಕೆಟ್ ಬಳಿ ಸಿಕ್ಕಿಹಾಕಿಕೊಳ್ಳದಿದ್ದರೆ, ನಾನು ಆ ಓಟವನ್ನು ಸುಲಭವಾಗಿ ಮುಗಿಸುತ್ತಿದ್ದೆ ಎಂದು ನಾನು ಭಾವಿಸುತ್ತೇನೆ. ನಾನು ಕೊನೆಯ ಕ್ಷಣದವರೆಗೂ ಕ್ರೀಸ್‌ನಲ್ಲಿದ್ದರೆ, ನಾವು ಖಂಡಿತವಾಗಿಯೂ ಒಂದು ಓವರ್‌ಗೆ ಮುಂಚಿತವಾಗಿಯೇ ಪಂದ್ಯವನ್ನು ಮುಗಿಸಬಹುದಿತ್ತು. ಏಕೆಂದರೆ ಪಂದ್ಯ ಆ ರೀತಿಯಿಂದ ಸಾಗುತ್ತಿತ್ತು. ನಾನು ಔಟಾದ ಬಳಿಕವೂ ದೀಪ್ತಿ, ರಿಚಾ ಇದ್ದರು. ರಿಚಾ ಇಲ್ಲಿಯವರೆಗಿನ ಎಲ್ಲಾ ಪಂದ್ಯಗಳಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರಿಂದ ಅವರೂ ಚೇಸ್ ಮಾಡಬಲ್ಲರು ಎಂಬ ಆತ್ಮ ವಿಶ್ವಾಸ ನನ್ನಲ್ಲಿತ್ತು. ಆದರೆ ನಾನು ಔಟ್ ಆದ ನಂತರ ಮಧ್ಯದಲ್ಲಿ 7-8 ಬಾಲ್‌ಗಳನ್ನು ಡಾಟ್ ಮಾಡಿದ್ದೇವೆ. ಆ ವೇಳೆ ಪಂದ್ಯ ಅವರತ್ತ ತಿರುಗಿತು. ಇಲ್ಲದಿದ್ದರೆ, ನಾವು ಉತ್ತಮ ವೇಗವನ್ನು ಕಂಡುಕೊಳ್ಳುತ್ತಿದ್ದೆವು,” ಎಂದು ಅವರು ಹೇಳಿದರು.
“ನಾವು ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡರೂ ನಾವು ಉತ್ತಮ ಬ್ಯಾಟಿಂಗ್ ಲೈನ್‌ಅಪ್ ಹೊಂದಿದ್ದೇವೆ ಎಂದು ನಮಗೆ ತಿಳಿದಿದೆ. ಜೆಮಿ ಇಂದು ಬ್ಯಾಟಿಂಗ್ ಮಾಡಿದ ರೀತಿಗೆ ನಿಜಕ್ಕೂ ಮನ್ನಣೆ ನೀಡಬೇಕಾಗಿದೆ. ನಮಗೆ ಬೇಕಿದ್ದ ವೇಗದ ರನ್ ಗಳಿಕೆ ಅವಳಿಂದ ಬಂತು. ಇಂತಹ ಪ್ರದರ್ಶನಗಳನ್ನು ನೋಡಿ ಸಂತೋಷವಾಗುತ್ತದೆ. ಅವರ ಸಹಜ ಆಟವನ್ನು ನೋಡಿ ಸಂತೋಷವಾಯಿತು. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡದಿದ್ದರೂ ಸೆಮಿಸ್ ತಲುಪಿದೆವು. ನಾವು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ್ದೇವೆ. ಮಿಸ್ ಫೀಲ್ಡ್ ಮಾಡಿದೆವು. ನಾವು ಇದರಿಂದ ಪಾಠ ಕಲಿಯಬಹುದು. ಇಂತಹ ತಪ್ಪುಗಳನ್ನು ಪುನರಾವರ್ತಿಸಬಾರದು” ಎಂದು ಹರ್ಮನ್‌ಪ್ರೀತ್ ಹೇಳಿದರು.