Harmanpreet Kaur: 'ನಾನು ಅಳುವುದನ್ನು ನೋಡಲು ಭಾರತ ಬಯಸುವುದಿಲ್ಲ'; ಕಣ್ಣೀರು ಕಾಣಬಾರದೆಂದು ಸನ್‌ಗ್ಲಾಸ್ ಧರಿಸಿದ್ದ ಕೌರ್
Feb 24, 2023 11:50 AM IST
ಹರ್ಮನ್‌ಪ್ರೀತ್ ಕೌರ್ ಪಂದ್ಯದ ನಂತರ ಕಣ್ಣೀರನ್ನು ಮರೆಮಾಡಲು ಸನ್‌ಗ್ಲಾಸ್ ಧರಿಸಿದ್ದರು.
- “ನಾನು ಅಳುವುದನ್ನು ನೋಡಲು ನನ್ನ ದೇಶ ಬಯಸುವುದಿಲ್ಲ. ಆದ್ದರಿಂದ ನಾನು ಈ ಕನ್ನಡಕವನ್ನು ಧರಿಸಿದ್ದೇನೆ. ನಾವು ಖಂಡಿತಾ ಸುಧಾರಿಸುತ್ತೇವೆ. ನಮ್ಮ ದೇಶದ ಅಭಿಮಾನಿಗಳಿಗೆ ಮತ್ತೆ ಈ ರೀತಿ ನಿರಾಸೆಗೊಳಿಸುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ,” ಎಂದು ಹರ್ಮನ್‌ಪ್ರೀತ್ ತಿಳಿಸಿದ್ದಾರೆ.
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಗುರುವಾರ ನಡೆದ ಪಂದ್ಯದ ಬಳಿಕ ಸನ್‌ಗ್ಲಾಸ್ ಹಾಕಿಕೊಂಡು ಪೋಸ್ಟ್ ಮ್ಯಾಚ್ ಪ್ರೆಸೆಂಟೇಶನ್‌ಗೆ ಬಂದರು. ಇದು ಯಾವುದೇ ರೀತಿಯ ಫ್ಯಾಶನ್ ಅಥವಾ ಬಿಸಿಲಿನ ಕಾರಣಕ್ಕೆ ಆಗಿರಲಿಲ್ಲ. ಬದಲಾಗಿ ಅವರು ತಮ್ಮ ಕಣ್ಣೀರನ್ನು ಮರೆಮಾಚಲು ಹಾಗೆ ಮಾಡಿದ್ದರು.
ನಿನ್ನೆಯ ಪಂದ್ಯದಲ್ಲಿನ ವೀರೋಚಿತ ಸೋಲು, ಭಾರತೀಯ ಆಟಗಾರ್ತಿಯರ ನಿದ್ದೆಗೆಡಿಸಿದ್ದು ಖಚಿತ. ಸೋಲಿನ ಬೆನ್ನಲ್ಲೇ ಭಾರತ ಆಟಗಾರ್ತಿಯರೆಲ್ಲಾ ಮೌನಿಗಳಾಗಿದ್ದರು. ಅದರಲ್ಲೂ ನಾಯಕಿಯ ಅನಿರೀಕ್ಷಿತ ರನೌಟ್, ಭಾರತೀಯ ಅಭಿಮಾನಿಗಳಿಗೂ ಸಂಕಟ ತಂದಿಕ್ಕಿತು. ಪಂದ್ಯದ ಬಳಿಕ ನಡೆದ ಪ್ರೆಸೆಂಟೇಶನ್‌ಗೆ ಸನ್‌ಗ್ಲಾಸ್ ಹಾಕಿಕೊಂಡು ಬಂದ ಹರ್ಮನ್‌ಪ್ರೀತ್, ಅದರ ಹಿಂದೆ ಭಾವನಾತ್ಮಕ ಉದ್ದೇಶ ಇಟ್ಟುಕೊಂಡಿದ್ದರು. ತಮ್ಮ ದೇಶ ಆಕೆ ಅಳುವುದನ್ನು ನೋಡಲು ಬಯಸುವುದಿಲ್ಲ ಎಂಬುದನ್ನು ಅರ್ಥಮಾಡಿಕೊಂಡಿದ್ದ ಕೌರ್, ಅದಕ್ಕಾಗಿ ಕಣ್ಣುಗಳನ್ನು ಸನ್‌ಗ್ಲಾಸ್‌ನಿಂದ ಮರೆಮಾಚಿದ್ದರು.
ಹರ್ಮನ್‌ಪ್ರೀತ್ ಅವರು ಭಾರತ ತಂಡದ ದಿಟ್ಟ ನಾಯಕಿ ಎಂಬುದು ಈ ಹಿಂದೆಯೇ ಸಾಬೀತಾದ ಮಾತು. ಅನಾರೋಗ್ಯದ ವಿರುದ್ಧ ಹೋರಾಡಿದ್ದ ಕೌರ್, ತನ್ನಿಂದ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರು. ಒಂದು ವೇಳೆ ಇದು ವಿಶ್ವಕಪ್ ಸೆಮಿಫೈನಲ್ ಆಗಿರದಿದ್ದರೆ, ಕೌರ್ ಈ ಪಂದ್ಯವನ್ನು ಆಡದೇ ಇರುತ್ತಿದ್ದರು. ಆದರೆ, ಪ್ರಮುಖ ಘಟ್ಟವಾಗಿದ್ದರಿಂದ, ಜ್ವರದ ನಡುವೆಯೂ ಮೈದಾನಕ್ಕಿಳಿದು ಬ್ಯಾಟ್ ಬೀಸಿದರು. ಮೈದಾನದಲ್ಲಿ ತನ್ನಿಂದ ಸಾಧ್ಯವಾದ ಎಲ್ಲಾ ರೀತಿಯ ಪ್ರಯತ್ನವನ್ನೂ ಮಾಡಿದರು. ಆಕರ್ಷಕ ಅರ್ಧಶತಕ ದಾಖಲಿಸಿ ಮಿಂಚಿದರು.
ಆಸ್ಟ್ರೇಲಿಯಾದ ಬೌಲರ್‌ಗಳನ್ನು ಮೈದಾನದ ಎಲ್ಲಾ ಭಾಗಗಳಿಗೆ ಹೊಡೆದು ದಂಡಿಸಿದರು. ಆದರೆ, ಅಂತಿಮವಾಗಿ ತಂಡವನ್ನು ಗೆಲುವಿನ ದಡ ಸೇರಿಸಲು ಅವರಿಂದಾಗಲಿಲ್ಲ. ದುರದೃಷ್ಟಕರ ರೀತಿಯಲ್ಲಿ ರನೌಟ್ ಆಗಿ ಪೆವಿಲಿಯನ್ ಸೇರಿಕೊಂಡರು. 2017ರ ಏಕದಿನ ವಿಶ್ವಕಪ್ ಫೈನಲ್ ಮತ್ತು ಕಳೆದ ವರ್ಷ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕದ ಪಂದ್ಯದಲ್ಲೂ ಅಂತಿಮ ಹಂತದ ಸೋಲಿನ ಬಳಿಕ, ಮತ್ತೊಂದು ಹೃದಯ ವಿದ್ರಾವಕ ಸನ್ನಿವೇಶ ಭಾರತೀಯ ವನಿತೆಯರಿಗೆ ಎದುರಾಯ್ತು. ಕೊನೆಯ ಓವರ್ ಥ್ರಿಲ್ಲರ್‌ನಲ್ಲಿ ಭಾರತವು ಕೇವಲ ಐದು ರನ್‌ಗಳಿಂದ ಸೋತಿತು.
ಪಂದ್ಯದ ಬಳಿಕ ಎಲ್ಲಾ ಭಾರತೀಯ ವನಿತೆಯರ ಕಣ್ಣಲ್ಲೂ ನೀರು ತುಂಬಿಕೊಂಡಿತ್ತು. ರಿಚಾ ಘೋಷ್ ಸೇರಿದಂತೆ ಇತರ ಭಾರತೀಯ ಆಟಗಾರ್ತಿಯರು ಕಣ್ಣೀರನ್ನು ಹತೋಟಿಯಲ್ಲಿಲು ಪ್ರಯತ್ನ ಮಾಡಿದರು. ಆದರೆ, ಅವರು ಯಾರಿಗೂ ನಾಯಕಿ ಹರ್ಮನ್‌ಪ್ರೀತ್ ಅವರಂತೆ ನೇರವಾಗಿ ಕ್ಯಾಮರಾ ಎದುರಿಸುವ ಜವಾಬ್ದಾರಿ ಇರಲಿಲ್ಲ. ಹೀಗಾಗಿ ಎಲ್ಲರೂ ತೆರೆಮರೆಯಲ್ಲಿ ಅಳುವನ್ನು ಅಪ್ಪಿಕೊಂಡು ನಿಂತಿದ್ದರೆ. ಆದರೆ, ನಾಯಕಿಯಾಗಿರುವ ಕೌರ್‌ಗೆ ಕ್ಯಾಮರಾ ಎದುರಿಸದೆ ಬೇರೆ ದಾರಿ ಇರಲಿಲ್ಲ. ಪಂದ್ಯದ ನಂತರದ ಪ್ರಸಾರದ ಬದ್ಧತೆಗಳನ್ನು ಅವರು ಪೂರೈಸಬೇಕಾಗಿತ್ತು. ಹೀಗಾಗಿ ಅವರು ಸನ್‌ಗ್ಲಾಸ್ ಧರಿಸಿದ್ದರು.
“ನಾನು ಅಳುವುದನ್ನು ನೋಡಲು ನನ್ನ ದೇಶ ಬಯಸುವುದಿಲ್ಲ. ಆದ್ದರಿಂದ ನಾನು ಈ ಕನ್ನಡಕವನ್ನು ಧರಿಸಿದ್ದೇನೆ. ನಾವು ಖಂಡಿತಾ ಸುಧಾರಿಸುತ್ತೇವೆ. ನಮ್ಮ ದೇಶದ ಅಭಿಮಾನಿಗಳಿಗೆ ಮತ್ತೆ ಈ ರೀತಿ ನಿರಾಸೆಗೊಳಿಸುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ,” ಎಂದು ಹರ್ಮನ್‌ಪ್ರೀತ್ ತಿಳಿಸಿದ್ದಾರೆ.
“ನಾನು ಮತ್ತು ಜೆಮಿಮಾ ಬ್ಯಾಟಿಂಗ್ ಮಾಡುವಾಗ ಗೆಲುವಿನ ವೇಗವನ್ನು ಮರಳಿ ಪಡೆದೆವು. ಆದರೆ, ಅಂತಿಮವಾಗಿ ನಾವು ಇದಕ್ಕಿಂತ ಹೆಚ್ಚು ದುರದೃಷ್ಟರಾಗಲು ಸಾಧ್ಯವಿಲ್ಲ. ಎಲ್ಲಾ ಪ್ರಯತ್ನಗಳ ನಡುವೆಯೂ ಈ ಸೋಲನ್ನು ನಾವು ನಿರೀಕ್ಷಿಸಿರಲಿಲ್ಲ. ಮುಖ್ಯವಾಗಿ ನಾನು ರನ್ ಔಟ್ ಆದ ರೀತಿಗಿಂತ ಹೆಚ್ಚು ದುರದೃಷ್ಟ ಬೇರೆ ಇರಲಿಕಿಲ್ಲ. ಕೊನೆಯ ಎಸೆತದವರೆಗೂ ಹೋರಾಟ ನಡೆಸುವ ಬಗ್ಗೆ ಚರ್ಚಿಸಿದ್ದೆವು. ಆದರೆ, ಫಲಿತಾಂಶ ನಾವು ಅಂದುಕೊಂಡಂತೆ ಆಗಲಿಲ್ಲ. ಆದರೆ ಈ ಪಂದ್ಯಾವಳಿಯಲ್ಲಿ ನಾವು ಆಡಿದ ರೀತಿ ಬಗ್ಗೆ ನನಗೆ ಸಂತೋಷವಾಗಿದೆ,” ಎಂದು ಭಾರತವು ಟಿ20 ವಿಶ್ವಕಪ್‌ನಿಂದ ಸೆಮಿಫೈನಲ್‌ನಲ್ಲಿ ಹೊರಬಿದ್ದ ಬಳಿಕ ಹರ್ಮನ್‌ಪ್ರೀತ್ ಹೇಳಿದರು.