Asia Cup 2022: ಇದುವರೆಗೆ ನಡೆದೇ ಇಲ್ಲ ಇಂಡೋ-ಪಾಕ್ ಫೈನಲ್ ಕದನ, ಈ ಬಾರಿ ಇತಿಹಾಸ ಬದಲಾಗುತ್ತಾ?
Aug 16, 2022 12:08 PM IST
ಕಳೆದ ಬಾರಿ ವಿಶ್ವಕಪ್ ಪಂದ್ಯದ ದೃಶ್ಯ
- ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಪಂದ್ಯ ನಡೆಯಬೇಕು ಎಂಬುದು ಅಭಿಮಾನಿಗಳ ಆಸೆ. ಏಕೆಂದರೆ ಎಂದಿನಂತೆ ಈ ಪಂದ್ಯಗಳು ಬಲು ರೋಚಕತೆಯಿಂದ ಕೂಡಿರುತ್ತವೆ. ಏಷ್ಯಾಕಪ್ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು ಫೈನಲ್‌ನಲ್ಲಿ ಎದುರಾಗಿಲ್ಲ. ಹೀಗಾಗಿ ಈ ಬಾರಿಯಾದರೂ ಈ 2 ತಂಡಗಳು ಫೈನಲ್‌ನಲ್ಲಿ ಸೆಣಸಾಡಲಿದೆಯೇ ಎಂದು ಕಾದು ನೋಡಬೇಕಿದೆ.
ಈ ಬಾರಿಯ ಏಷ್ಯಾ ಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಚುಟುಕು ಕ್ರಿಕೆಟ್ ಸರಣಿಗೆ ಕೆಲವೇ ದಿನಗಳು ಬಾಕಿ ಇದ್ದು, ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಈ ಬಾರಿಯ ಕ್ರಿಕೆಟ್ ಸಮರ ಅರಬ್ ರಾಷ್ಟ್ರಕ್ಕೆ ಸ್ಥಳಾಂತರಗೊಂಡಿದೆ. ಈ ನಡುವೆ ಇಂಡೋ ಪಾಕ್ ಕದನದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.
ಟಿ20 ಏಷ್ಯಾಕಪ್‌ಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡ ಕಪ್‌ಗಾಗಿ ಕಾದಾಡಲಿದೆ. ಇದೇ ತಿಂಗಳ 27 ರಿಂದ ಪಂದ್ಯಗಳು ಆರಂಭವಾಗಲಿದ್ದು, ಎರಡನೇ ದಿನ ಭಾರತದ ಅಭಿಯಾನ ಆರಂಭವಾಗಲಿದೆ. ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಏಷ್ಯಾದಲ್ಲೇ ಬಲಿಷ್ಠ ಕ್ರಿಕೆಟ್ ತಂಡ ಭಾರತ. ಈವರೆಗೆ ಅತಿ ಹೆಚ್ಚು ಬಾರಿ ಏಷ್ಯಾಕಪ್ ಗೆದ್ದಿರುವ ಭಾರತ, ಇದುವರೆಗೆ ಫೈನಲ್‌ನಲ್ಲಿ ಒಮ್ಮೆಯೂ ಪಾಕಿಸ್ತಾನವನ್ನು ಎದುರಿಸಿಲ್ಲ ಎಂಬುವುದು ವಿಶೇಷ. ಈವರೆಗೆ ಭಾರತ ಏಳು ಬಾರಿ ಕಪ್ ಎತ್ತಿದರೆ; ಪಾಕ್ ಎರಡು ಬಾರಿಯಷ್ಟೇ ಕಪ್ ಗೆದ್ದಿದೆ. ಮತ್ತೆರಡು ಬಾರಿ ಫೈನಲ್‌ನಲ್ಲಿ ಮುಗ್ಗರಿಸಿದೆ. ಮತ್ತೊಂದೆಡೆ ಭಾರತ ಕೂಡಾ ಮೂರು ಬಾರಿ ಫೈನಲ್‌ನಲ್ಲಿ ಸೋತಿದೆ. ಆದರೂ ಕಪ್ ಗೆದ್ದಿರುವ ಲೆಕ್ಕಾಚಾರದಲ್ಲಿ ಭಾರತವೇ ಬಲಿಷ್ಠ.
ಏನೇ ಲೆಕ್ಕಾಚಾರವಿದ್ದರೂ, ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಪಂದ್ಯ ನಡೆಯಬೇಕು ಎಂಬುದು ಅಭಿಮಾನಿಗಳ ಆಸೆ. ಏಕೆಂದರೆ ಎಂದಿನಂತೆ ಈ ಪಂದ್ಯಗಳು ಬಲು ರೋಚಕತೆಯಿಂದ ಕೂಡಿರುತ್ತವೆ. ಏಷ್ಯಾಕಪ್ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು ಫೈನಲ್‌ನಲ್ಲಿ ಎದುರಾಗಿಲ್ಲ. ಹೀಗಾಗಿ ಈ ಬಾರಿಯಾದರೂ ಈ 2 ತಂಡಗಳು ಫೈನಲ್‌ನಲ್ಲಿ ಸೆಣಸಾಡಲಿದೆಯೇ ಎಂದು ಕಾದು ನೋಡಬೇಕಿದೆ. ಈ ಮೂಲಕ ಇತಿಹಾಸ ಬದಲಾಗುತ್ತದೆಯೇ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ.
ಏಷ್ಯಾಕಪ್ ಮೂಲಕ ಬರೋಬ್ಬರಿ ಒಂಬತ್ತು ತಿಂಗಳ ಬಳಿಕ ಬದ್ಧ ವೈರಿಗಳಾದ ಇಂಡೋ-ಪಾಕ್ ಕದನಕ್ಕೆ ಅಖಾಡ ಸಿದ್ಧವಾಗುತ್ತಿದೆ. ಜಾಗತಿಕ ಆಕರ್ಷಣೆಗೆ ಕಾರಣವಾಗುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಈ ಬಾರಿ ಒಮ್ಮೆ ಮಾತ್ರ ಅಲ್ಲ. ಎಲ್ಲವೂ ಅಂದುಕೊಂಡಂತೆ ಲೆಕ್ಕಾಚಾರದ ಪ್ರಕಾರವೇ ನಡೆದರೆ, ಒಟ್ಟು ಮೂರು ಬಾರಿ ಭಾರತ ಮತ್ತು ಪಾಕ್ ತಂಡಗಳು ಮುಖಾಮುಖಿಯಾಗಲಿವೆ.
ಗುಂಪು ಹಂತದ ಪಂದ್ಯದಲ್ಲಿ ಭಾರತ ಮತ್ತು ಪಾಕ್ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಈ ಗ್ರೂಪ್ ಹಂತದ ಪಂದ್ಯದಲ್ಲಿ ಅಗ್ರಸ್ಥಾನದಲ್ಲಿರುವ ಎರಡು ತಂಡಗಳು ಸೆಪ್ಟೆಂಬರ್ 4ರಂದು ಸೂಪರ್ ಫೋರ್ ಹಂತದಲ್ಲಿ ಮುಖಾಮುಖಿಯಾಗಲಿವೆ. ಹೀಗಾಗಿ ಎ ಗ್ರೂಪ್‌ನಲ್ಲಿ ಭಾರತ ಮತ್ತು ಪಾಕ್ ಅಗ್ರಸ್ಥಾನದಲ್ಲಿ ಉಳಿಯುವುದು 99 ಪ್ರತಿಶತ ಖಚಿತ. ಹೀಗಾಗಿ ಸೂಪರ್ ಫೋರ್ ಹಂತದಲ್ಲಿ ಈ ಎರಡು ತಂಡಗಳ ನಡುವೆ ಪಂದ್ಯ ನಡೆಯುವುದು ಖಚಿತವಾಗಿದೆ. ಅಲ್ಲಿಗೆ ಎರಡನೇ ಪಂದ್ಯ ನಡೆದಂತಾಗುತ್ತದೆ.
ಇನ್ನು ಇದೇ ಎರಡು ತಂಡಗಳ ನಡುವೆ ಮೂರನೇ ಪಂದ್ಯ ಕೂಡಾ ನಡೆಯುವ ಸಾಧ್ಯತೆ ಇದು. ಅದು ಫೈನಲ್‌ನಲ್ಲಿ. ಇತಿಹಾಸ ಬದಲಾಯಿಸುವ ಇಂಡೋ-ಪಾಕ್ ಮೊದಲ ಫೈನಲ್ ನಡುಯುವ ಸಾಧಯತೆ ಈ ಬಾರಿ ಹೆಚ್ಚಿದೆ. ಸೂಪರ್ ಫೋರ್ ಹಂತದಲ್ಲಿ ಅಗ್ರಸ್ಥಾನದಲ್ಲಿ ಬರುವ ಎರಡು ತಂಡಗಳು ನೇರವಾಗಿ ಫೈನಲ್ ಪ್ರವೇಶಿಸಲಿದೆ. ಇಲ್ಲಿ ಸೆಮಿಫೈನಲ್ ಇರುವುದಿಲ್ಲ. ಪ್ರಸ್ತುತ ಭಾರತ ಮತ್ತು ಪಾಕಿಸ್ತಾನವು ವಿಶ್ವದ ಎರಡು ಬಲಿಷ್ಠ ತಂಡಗಳು. ಇದರೊಂದಿಗೆ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಂತಹ ಉತ್ತಮ ತಂಡಗಳು ತೀವ್ರ ಪೈಪೋಟಿ ನೀಡಲಿದೆ. ಇದರ ಹೊರತಾಗಿಯೂ, ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ಪಡೆ ಅಗ್ರ ಸ್ಥಾನದಲ್ಲಿ ಫೈನಲ್ ಪ್ರವೇಶಿಸುವ ಲೆಕ್ಕಾಚಾರವಿದೆ.