Sara Khadem: ಹಿಜಾಬ್ ಧರಿಸದೆ ಚೆಸ್ ಆಡಿದ್ದ ಇರಾನ್ ಆಟಗಾರ್ತಿಗೆ ಸ್ಪೇನ್ ಪೌರತ್ವ; ಸಾರಾ ಖಾದೆಮ್ ದೇಶ ತೊರೆಯಲು ಕಾರಣವಿದು
Jul 27, 2023 06:03 PM IST
ಸಾರಾ ಖಾದೆಮ್
- Sarasadat Khademalsharieh: ಸ್ಪೇನ್‌ಗೆ ತೆರಳಿದ್ದ ಸಾರಾ ಖಾದೆಮ್ ಅವರಿಗೆ ಸ್ಪೇನ್ ರಾಷ್ಟ್ರದ ಪೌರತ್ವವನ್ನು ನೀಡಲಾಗಿದೆ ಎಂದು ಸ್ಪೇನ್ ಸುದ್ದಿಮೂಲಗಳು ತಿಳಿಸಿವೆ.
ಹಿಜಾಬ್ ಧರಿಸದೆ ಅಂತಾರಾಷ್ಟ್ರೀಯ ಚೆಸ್ ಪಂದ್ಯದಲ್ಲಿ ಆಡಿ, ತಮ್ಮದೇ ದೇಶದಿಂದ ಅರೆಸ್ಟ್ ವಾರೆಂಟ್ ಪಡೆದ ಇರಾನ್‌ನ ಸಾರಾ ಖಾದೆಮ್ (Sara Khadem) ಅವರಿಗೆ ಇದೀಗ ಸ್ಪೇನ್ ದೇಶದ ಪೌರತ್ವ (Spain Citizenship) ಸಿಕ್ಕಿದೆ.
ಇರಾನ್‌ನ ಚೆಸ್ ಆಟಗಾರ್ತಿಯು ಕಳೆದ ಜನವರಿಯಲ್ಲಿ ಹಿಜಾಬ್ ಇಲ್ಲದೆ ಚೆಸ್ ಆಡಿದ್ದರು. ಆ ಮೂಲಕ ಅವರದ್ದೇ ದೇಶದ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಾದ ಬೆನ್ನಲ್ಲೇ ಸಾರಾ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗಿತ್ತು. ಹೀಗಾಗಿ ಸ್ಪೇನ್‌ಗೆ ತೆರಳಿದ್ದ ಅವರಿಗೆ ಸ್ಪೇನ್ ರಾಷ್ಟ್ರದ ಪೌರತ್ವವನ್ನು ನೀಡಲಾಗಿದೆ ಎಂದು ಬುಧವಾರ ಸ್ಪೇನ್ ಸುದ್ದಿಮೂಲಗಳು ತಿಳಿಸಿವೆ.
“ಸಾರಾ ಖಾದೆಮ್ ಅವರಿಗೆ ಸಂಬಂಧಿಸಿದ ಸನ್ನಿವೇಶಗಳಿಗೆ ಪ್ರತಿಕ್ರಿಯೆಯಾಗಿ, ನಾನು ಅವರಿಗೆ ಸ್ಪ್ಯಾನಿಷ್ ಪೌರತ್ವವನ್ನು ನೀಡಿದ್ದೇನೆ” ಎಂದು ಕಾನೂನು ಸಚಿವ ಪಿಲಾರ್ ಲೊಪ್ ಹೇಳಿಕೆಯನ್ನು ದೇಶದ ಅಧಿಕೃತ ಜರ್ನಲ್ ಆಫ್ ದಿ ಸ್ಟೇಟ್ (BOE)ನಲ್ಲಿ ಉಲ್ಲೇಖಿಸಲಾಗಿದೆ.
ಇರಾನ್‌ನಲ್ಲಿ ಮಹಿಳೆಯರಿಗಿದೆ ಡ್ರೆಸ್ ಕೋಡ್
ಸಾರಾ ಖಾದೆಮ್ ಎಂದು ಖ್ಯಾತರಾಗಿರುವ ಸಾರಸಾದತ್ ಖದೆಮಲ್ಶರೀಹ್, ಕಳೆದ ವರ್ಷದ ಡಿಸೆಂಬರ್ ಅಂತ್ಯದಲ್ಲಿ ಕಝಾಕಿಸ್ತಾನ್‌ನಲ್ಲಿ ನಡೆದ FIDE ವರ್ಲ್ಡ್ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದರು. ಇಸ್ಲಾಂ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುವ ಇರಾನ್ ದೇಶವನ್ನು ಪ್ರತಿನಿಧಿಸಿದ ಸಾರಾ, ಇರಾನ್ ವನಿತೆಯರಿಗಿರುವ ಡ್ರೆಸ್ ಕೋಡ್ ಪ್ರಕಾರವಾಗಿ ಕಡ್ಡಾಯವಾಗಿ ಹಿಜಾಬ್ ಧರಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಿತ್ತು. ಆದೆರೆ, ಅವರು ಹಿಜಾಬ್ ಧರಿಸಿದೆ ಆಡಿದ್ದರು.
ಮಹ್ಸಾ ಅಮಿನಿ ಸಾವು
ಇರಾನ್ ಮಹಿಳೆಯರಿಗೆ ಇರುವ ಕಠಿಣ ಡ್ರೆಸ್ ಕೋಡ್ ವಿಚಾರವಾಗಿ ವ್ಯಾಪಕ ವಿರೋಧಗಳಿವೆ. ಇದಕ್ಕೆ ಪುಷ್ಠಿ ನೀಡುವಂತೆ 22 ವರ್ಷದ ಮಹ್ಸಾ ಅಮಿನಿ ಎಂಬ ಮಹಿಳೆ ಕಳೆದ ವರ್ಷದ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಪೋಲೀಸ್ ವಶದಲ್ಲಿದ್ದಾಗ ಸಾವನ್ನಪ್ಪಿದ್ದರು. ಹಿಜಾಬ್ ಅನ್ನು ಸರಿಯಾಗಿ ಧರಿಸಿಲ್ಲ ಎಂಬ ಕಾರಣಕ್ಕೆ ಅಮಿನಿ ಎಂಬ ಮಹಿಳೆಯನ್ನು ಬಂಧಿಸಲಾಗಿತ್ತು. ಅಲ್ಲದೆ ಬಂಧನದಲ್ಲಿದ್ದಾಗಲೇ ಅವರು ಸಾವನ್ನಪ್ಪಿದ್ದರು. ಇದು ಇರಾನ್‌ನಲ್ಲಿ ಅಶಾಂತಿಯ ವಾತಾವರಣಕ್ಕೆ ಕಾರಣವಾಯ್ತು. ಆ ಸಮಯದಲ್ಲಿ ಹಿಜಾಬ್ ಅನ್ನು ಕಡ್ಡಾಯವಾಗಿ ಧರಿಸುವ ಕಾನೂನು ಭಾರಿ ಚರ್ಚೆಗೆ ಕಾರಣವಾಯ್ತು. ಇದರ ವಿರುದ್ಧ ದೇಶಾದ್ಯಂತ ಭಾರಿ ಪ್ರತಿಭಟನೆ ನಡೆಯಿತು. ಮಹಿಳೆಯರ ಡ್ರೆಸ್ ಕೋಡ್‌ಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
26 ವರ್ಷದ ಆಟಗಾರ್ತಿ ಸಾರಾ, ತಮ್ಮ ರಾಷ್ಟ್ರದ ನೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ದೇಶದ ಆಡಳಿತದ ವಿರುದ್ಧದ ಪ್ರತಿಭಟನಾ ಚಳವಳಿಯನ್ನು ಬೆಂಬಲಿಸುವ ಇಂಗಿತದ ಬಗ್ಗೆ ಯಾವುದೇ ವಿಷಾದವಿಲ್ಲ ಎಂದು ಅವರು ಸುದ್ದಿ ಮಾಧ್ಯಮಗಳಿಗೆ ಹೇಳಿದ್ದಾರೆ.
ಅತ್ತ ಖಾದೆಮ್ ಅವರ ಪ್ರಕರಣವನ್ನು “ವಿಶೇಷ ಸಂದರ್ಭ” ಎಂದು ಗಣನೆಗೆ ತೆಗೆದುಕೊಂಡು ಕಳೆದ ಮಂಗಳವಾರ ಸಾರಾಗೆ ಪೌರತ್ವವನ್ನು ನೀಡಲು ಸ್ಪೇನ್‌ನ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಸ್ಪೇನ್‌ನ ಸರ್ಕಾರದ ಅಧಿಕೃತ ಮೂಲ ತಿಳಿಸಿದೆ.
ಬೆದರಿಕೆ ಕರೆಗಳು
ಹಿಜಾಬ್ ಇಲ್ಲದೆ ಆಡಿದ ಬಳಿಕ ಸಾರಾಗೆ ಬೆದರಿಕೆ ಕರೆಗಳು ಬಂದಿದ್ದವು. ಅಲ್ಲದೆ ಪಂದ್ಯಾವಳಿ ಮುಗಿಸಿ ಇರಾನ್‌ಗೆ ಹಿಂತಿರುಗದಂತೆ ಎಚ್ಚರಿಕೆ ಬಂದಿದ್ದವು ಎಂದು ವರದಿಯಾಗಿತ್ತು. ಅಲ್ಲದೆ ಇರಾನ್‌ನಲ್ಲಿದ್ದ ಸಾರಾ ಖಾದೆಮ್ ಅವರ ಸಂಬಂಧಿಕರು ಮತ್ತು ಪೋಷಕರಿಗೂ ಬೆದರಿಕೆಗಳು ಬಂದಿದ್ದವು. ಹೀಗಾಗಿ ಆಟಗಾರ್ತಿ ಸ್ಪೇನ್‌ಗೆ ತೆರಳಿದ್ದರು.
ಇತರ ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ