ಮಲೇಷ್ಯಾ ಓಪನ್ 2024: ಫೈನಲ್ನಲ್ಲಿ ಚೀನಿಯರ ವಿರುದ್ಧ ಭಾರತದ ಸಾತ್ವಿಕ್-ಚಿರಾಗ್ ಜೋಡಿಗೆ ಸೋಲು
Jan 14, 2024 05:41 PM IST
ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ.
- Satwiksairaj Rankireddy and Chirag Shetty: ಮಲೇಷ್ಯಾ ಓಪನ್ ಪುರುಷರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಚೀನಾದ ವೀ ಕೆಂಗ್ ಲಿಯಾಂಗ್ ಮತ್ತು ಚಾಂಗ್ ವಾಂಗ್ ವಿರುದ್ಧ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೋಲನುಭವಿಸಿದರು.
ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ (Satwiksairaj Rankireddy and Chirag Shetty) 2024ರ ಮೊದಲ ಬ್ಯಾಡ್ಮಿಂಟನ್ ಪ್ರಶಸ್ತಿಗೆ ವಿಫಲರಾದರು. ಈ ಜೋಡಿ ಮಲೇಷ್ಯಾ ಓಪನ್ ಸೂಪರ್ 1000′ ಬ್ಯಾಡ್ಮಿಂಟನ್ ಕೂಟದ ಪುರುಷರ ಡಬಲ್ಸ್ ಫೈನಲ್ ಪಂದ್ಯದಲ್ಲಿ ವಿಶ್ವ ನಂಬರ್ 1 ಜೋಡಿಯಾದ ಚೀನಾದ ವೀ ಕೆಂಗ್ ಲಿಯಾಂಗ್ ಮತ್ತು ಚಾಂಗ್ ವಾಂಗ್ (We Keng Liang vs Chang Wang) ವಿರುದ್ಧ ಸೋಲನುಭವಿಸಿ ರನ್ನರ್ಅಪ್ಗೆ ತೃಪ್ತಿಪಟ್ಟರು.
ಜನವರಿ 14ರ ಭಾನುವಾರ ನಡೆದ ಈ ಪಂದ್ಯ 58 ನಿಮಿಷಗಳಲ್ಲಿ 21-9, 18-21, 17-21 ಅಂತರದಿಂದ ಪೂರ್ಣಗೊಂಡಿತು. ಮೊದಲ ಸೆಟ್ ಗೆದ್ದ ಭಾರತದ ಯುವ ಜೋಡಿ, ಬಳಿಕ 2 ಮತ್ತು 3ನೇ ಸೆಟ್ನಲ್ಲಿ ಅದೇ ವೇಗವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಆ ಮೂಲಕ ವರ್ಷದ ಮೊದಲ ಚಿನ್ನ ಗೆಲ್ಲುವ ನಿರೀಕ್ಷೆ ಹುಸಿಯಾಯಿತು.
ತಿರುಗೇಟು ನೀಡಿದ ಚೀನಾ ಜೋಡಿ
ವಿಶ್ವದ ನಂ 2 ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಉನ್ನತ ಶ್ರೇಯಾಂಕದ ಚೀನಾದ ಷಟ್ಲರ್‌ಗಳಿಗೆ ಒಂದು ಅವಕಾಶ ನೀಡದೆ ಆರಂಭಿಕ ಸೆಟ್ ಗೆದ್ದ ನಂತರ, ಕಿಕ್ಕಿರಿದ ಪ್ರೇಕ್ಷಕರನ್ನು ಬಿರುಗಾಳಿಯಿಂದ ಸೆಳೆದರು. ಆದರೆ, ಎದೆಗುಂದದ ಚೀನಾ ಷಟ್ಲರ್ಗಳು ಉಳಿದೆರಡು ಸೆಟ್ಗಳಲ್ಲಿ ಬಲವಾಗಿ ತಿರುಗೇಟು ನೀಡಿದರು.
ವೀ ಮತ್ತು ಚಾಂಗ್ ಎರಡು ಮತ್ತು ಮೂರನೇ ಗೇಮ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್‌ಗೆ ಮುನ್ನಡೆ ಪಡೆಯಲು ಅವಕಾಶವೇ ನೀಡಲಿಲ್ಲ. ಸಾತ್ವಿಕ್ ಮತ್ತು ಚಿರಾಗ್ 10-3 ಮುನ್ನಡೆ ಸಾಧಿಸಿ ನಿರ್ಣಾಯಕ ಗೇಮ್‌ನಲ್ಲಿ ತಿರುಗಿಬಿದ್ದರು. ಇದರೊಂದಿಗೆ ಆರಂಭಿಕ ಮಲೇಷ್ಯಾ ಓಪನ್ ಸೂಪರ್ 1000 ಟೂರ್ನಿ ಗೆಲ್ಲಲು ಸಿದ್ಧರಾದರು.
ವಿರಾಮದ ನಂತರ ತಿರುಗಿಬಿದ್ದರು
ಆದಾಗ್ಯೂ ವಿರಾಮದ ನಂತರ ಸಾತ್ವಿಕ್ ಮತ್ತು ಚಿರಾಗ್‌ಗೆ ಚೀನಾ ಜೋಡಿ ಬಲವಾದ ತಿರುಗೇಟು ನೀಡಿತು. ಸೋಲುತ್ತಾರೆ ಎನ್ನಲಾಗ್ತಿದ್ದ ಗೇಮ್ನ ಚಿತ್ರಣವನ್ನೇ ಬದಲಿಸಿದರು. ಕೇವಲ 3 ಅಂಕ ಪಡೆದಿದ್ದವರು ಗೆಲ್ಲುವ ತನಕ ಭಾರತದ ಜೋಡಿ ಅಂಕ ಗಳಿಸಲು ಬಿಟ್ಟುಕೊಡಲೇ ಇಲ್ಲ. ಕೊನೆಗೆ 17-21 ಅಂತರದಲ್ಲಿ ಗೆದ್ದು ಚಾಂಪಿಯನ್ ಆದರು.
ಇತ್ತೀಚೆಗಷ್ಟೇ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾದ ಇಬ್ಬರು ಭಾರತೀಯ ತಾರೆಗಳಾದ ಸಾತ್ವಿಕ್ ಮತ್ತು ಚಿರಾಗ್ ಈಗ ಚೀನಾದ ಜೋಡಿಯೊಂದಿಗೆ ಒಟ್ಟು 5 ಬಾರಿ ಮುಖಾಮುಖಿಯಾಗಿದ್ದಾರೆ. ಒಟ್ಟು 5 ಬಾರಿ ಪರಸ್ಪರ ಎದುರಾಗಿದ್ದು, 4ರಲ್ಲಿ ಚೀನೀ ಜೋಡಿ ಎದುರು ಸೋತಿದ್ದಾರೆ. ಸೋತರೂ ಭಾರತೀಯ ಯುವ ಜೋಡಿ ಮನ ಗೆದ್ದಿತು.
ಸೆಮಿಫೈನಲ್ನಲ್ಲಿ ನೇರ ಗೇಮ್ಗಳ ಗೆಲುವು
ಜನವರಿ 12ರ ಶನಿವಾರ ನಡೆದ ಸೆಮಿಫೈನಲ್ನಲ್ಲಿ ವಿಶ್ವ ಚಾಂಪಿಯನ್ ಕೊರಿಯಾದ ಸಿಯೊ ಸೆಯುಂಗ್ ಜೇ ಮತ್ತು ಕಾಂಗ್ ಮಿನ್ ಹ್ಯುಕ್ದಿಶ್ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿದ ಭಾರತದ ಜೋಡಿಯು ವರ್ಷದ ಮೊದಲ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಕೊರಿಯನ್ ಜೋಡಿ ವಿರುದ್ಧ 21-18 22-20 ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿದ್ದರು.
ಕಳೆದ ವರ್ಷ ಜೂನ್‌ನಲ್ಲಿ ನಡೆದ ಮಲೇಷ್ಯಾ ಓಪನ್ ಸೂಪರ್ 1000 ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಜೋಡಿಯು ಇದೇ ಕೊರಿಯಾ ಜೋಡಿಯನ್ನು ಸೋಲಿಸಿದ್ದರು. ಸಾತ್ವಿಕ್ ಮತ್ತು ಚಿರಾಗ್ ಈಗ ವಿಶ್ವದ 3ನೇ ಶ್ರೇಯಾಂಕದ ಜೋಡಿ ವಿರುದ್ಧ 3-1 ಅಂತರದ ಗೆಲುವಿನ ದಾಖಲೆ ಹೊಂದಿದ್ದಾರೆ. ಆದರೆ ಎರಡನೇ ಸೂಪರ್ 1000 ಪ್ರಶಸ್ತಿ ಗೆಲ್ಲಲು ವಿಫಲರಾದರು.
2023ರಲ್ಲಿ ಭರ್ಜರಿ ಪ್ರದರ್ಶನ
ಏಷ್ಯನ್ ಚಾಂಪಿಯನ್‌ಶಿಪ್, ಇಂಡೋನೇಷಿಯನ್ ಸೂಪರ್ 1000, ಕೊರಿಯಾ ಸೂಪರ್ 500 ಮತ್ತು ಸ್ವಿಸ್ ಓಪನ್ ಸೂಪರ್ 300 ಪ್ರಶಸ್ತಿಗಳನ್ನು ಗೆದ್ದಿರುವ ಸಾತ್ವಿಕ್ ಮತ್ತು ಚಿರಾಗ್, ಕಳೆದ ವರ್ಷ ಭಾರತದ ಅತ್ಯಂತ ಯಶಸ್ವಿ ಆಟಗಾರರಾಗಿದ್ದಾರೆ. ಒಂದೇ ವರ್ಷ ಒಟ್ಟು ಆರು ಪ್ರಶಸ್ತಿ ಗೆದ್ದಿರುವ ಅವರು, ಕಳೆದ ವರ್ಷ ನವೆಂಬರ್‌ನಲ್ಲಿ ಚೀನಾ ಮಾಸ್ಟರ್ಸ್ ಸೂಪರ್ 750ರ ಫೈನಲ್‌ಗೆ ತಲುಪಿದ್ದರು.