logo
ಕನ್ನಡ ಸುದ್ದಿ  /  ಕ್ರೀಡೆ  /  World Boxing Championships: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಚಿನ್ನ ಗೆದ್ದ ನಿಖತ್ ಜರೀನ್

World Boxing Championships: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಚಿನ್ನ ಗೆದ್ದ ನಿಖತ್ ಜರೀನ್

HT Kannada Desk HT Kannada

Mar 26, 2023 07:40 PM IST

google News

ನಿಖತ್ ಜರೀನ್

  • ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇದು ನಿಖತ್ ಅವರ ಎರಡನೇ ಚಿನ್ನವಾಗಿದೆ. ಕಳೆದ ವರ್ಷ ಕೂಡಾ ಒಂದು ಚಿನ್ನ ಗೆದ್ದಿದ್ದರು. ಆ ವರ್ಷ ಅವರು 52 ಕೆಜಿ ವಿಭಾಗದಲ್ಲಿ ಈ ಸಾಧನೆ ಮಾಡಿದ್ದರು.

ನಿಖತ್ ಜರೀನ್
ನಿಖತ್ ಜರೀನ್ (PTI)

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌(Women's World Boxing Championships)ನಲ್ಲಿ ಭಾರತದ ಭರವಸೆಯ ಯುವ ಬಾಕ್ಸರ್‌ ನಿಖತ್ ಜರೀನ್ (Nikhat Zareen) ಚಿನ್ನ ಗೆದ್ದಿದ್ದಾರೆ. 48ರಿಂದ 50 ಕೆಜಿ ವಿಭಾಗದ ಫೈನಲ್‌ ಪಂದ್ಯದಲ್ಲಿ ವಿಯೆಟ್ನಾಂನ ನ್ಗುಯೆನ್ ಥಿ ಟಾಮ್ (Nguyen Thi Tam) ವಿರುದ್ಧ ಪ್ರಬಲ ಪ್ರದರ್ಶನ ನೀಡಿದ ಜರೀನ್‌, ಎರಡನೇ ವಿಶ್ವ ಚಾಂಪಿಯನ್‌ಶಿಪ್‌ ಬಂಗಾರಕ್ಕೆ ಕೊರಳೊಡ್ಡಿದರು.

ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗೆ ತಲುಪಿದ ಮೊದಲ ವಿಯೆಟ್ನಾಂ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಥಿ ಟಾಮ್ ವಿರುದ್ಧ ಭಾರತದ ಬಾಕ್ಸರ್‌ ಗೆಲುವನ್ನು ತಮ್ಮದಾಗಿಸಿದರು.

ನಿಖತ್ ಜರೀನ್ ಆಟದ ವೈಖರಿ ಹೇಗಿತ್ತು?

ಭಾರತದ ಬಾಕ್ಸರ್‌ ಆಟದುದ್ದಕ್ಕೂ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿದರು. ಇದೇ ವೇಳೆ ಎದುರಾಳಿ ಥಿ ಟಾಮ್ ಅವರು ಶಾಂತವಾಗಿ ಪಂದ್ಯವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡರು. ನಿಖತ್ ನಿಧಾನವಾಗಿ ತಮ್ಮ ಆಟದ ವೈಖರಿ ಬದಲಿಸಿ, ಎದುರಾಳಿಗೆ ಸರಣಿ ಹೊಡೆತಗಳ ಪಂಚ್‌ ನೀಡಿದರು. ಇದೇ ವೇಳೆ ಜರೀನ್‌ ಅವರ ಕೋಚ್‌ ಪಕ್ಕದಲ್ಲೇ ಇದ್ದು ಜರೀನ್‌ ಅವರಿಗೆ ಸಲಹೆ ಸೂಚನೆ ನೀಡುತ್ತಿದ್ದರು. “ದೂರ್ ಸೆ, ಸಾಮ್ನೆ ಮತ್ ಜಾ” ಎಂದು ಸಲಹೆ ನೀಡಿದರು. ಅಂದರೆ, ದೂರದಿಂದಲೇ ಪಂಚ್‌ ಮಾಡು, ಎದುರಾಳಿ ಸಮೀಪ ಹೋಗಬೇಡ ಎಂದು ಕೋಚ್‌ ಹೇಳಿದರು. ತನ್ನ ಕೋಚ್‌ ಸಲಹೆ ಪಾಲಿಸಿದ ನಿಖತ್, ಅದೇ ರೀತಿ ಮಾಡಿದರು. ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಮತ್ತೆ ಪ್ರಾಬಲ್ಯ ಮೆರೆದರು. ಹೀಗಾಗಿ ಎಲ್ಲಾ ಐವರು ತೀರ್ಪುಗಾರರು ಆರಂಭಿಕ ಸುತ್ತಿನಲ್ಲಿ ಭಾರತೀಯರ ಬಾಕ್ಸರ್‌ ಪರ ತೀರ್ಪು ನೀಡಿದರು.

ಎರಡನೇ ಸುತ್ತಿನಲ್ಲಿ ಜರೀನ್‌ ತುಸು ಹಿನ್ನಡೆ ಅನುಭವಿಸಿದರು. ಎದುರಾಳಿ ಈ ಸುತ್ತಿನಲ್ಲಿ ಉತ್ತಮ ಚೇತರಿಕೆ ಕಂಡರು. ಆದರೂ, ನಿಖತ್ ತಮ್ಮ ಆಟವನ್ನು ಮುಂದುವರೆಸಿದರು. ಅಂತಿಮವಾಗಿ ಆ ಸುತ್ತನ್ನು ಎದುರಾಳಿ ಥಿ ತಮ್ 3-2 ಅಂತರದಿಂದ ತನ್ನದಾಗಿಸಿಕೊಂಡರು. ಹೀಗಾಗಿ ಇಬ್ಬರೂ ಬಾಕ್ಸರ್‌ಗಳು ಮತ್ತೊಮ್ಮೆ ಅಂತಿಮ ಸುತ್ತಿನಲ್ಲಿ ರೋಚಕ ಪೈಪೋಟಿಗಿಳಿದರು. ಈ ವೇಳೆ ಮತ್ತೆ ಅಂತರ ಕಾಯ್ದುಕೊಂಡು ಪಂಚ್‌ ಮಾಡಿದ ನಿಖತ್‌, ಆಕ್ರಮಣ ಮತ್ತು ರಕ್ಷಣೆಯ ಉತ್ತಮ ಸಂಯೋಜನೆಯೊಂದಿಗೆ ಥಿ ತಮ್ ಅವರನ್ನು ಸೋಲಿಸಿಬಿಟ್ಟರು. ಅಲ್ಲಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಚಿನ್ನ ಖಚಿತವಾಯ್ತು.

ಫೈನಲ್‌ಗೆ ಲಗ್ಗೆ ಹಾಕುವ ನಿಖತ್ ಅವರ ಓಟವು ಅದ್ಭುತವಾಗಿತ್ತು. ಸೆಮಿಫೈನಲ್‌ನಲ್ಲಿ ಅವರು ಕೊಲಂಬಿಯಾದ ಇಂಗ್ರಿಟ್ ವೇಲೆನ್ಸಿಯಾ ವಿರುದ್ಧ 5-0 ಅಂತರದಿಂದ ಗೆಲುವು ಸಾಧಿಸಿದ್ದರು. ವೇಲೆನ್ಸಿಯಾ ಬಲಿಷ್ಠ ಆಟಗಾರ್ತಿ ಎನ್ನುವುದರಲ್ಲಿ ಅನುಮಾನವಿಲ್ಲ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ದಿಗ್ಗಜ ಬಾಕ್ಸರ್ ಮೇರಿ ಕೋಮ್ ಅವರನ್ನು ವೆಲೆನ್ಸಿಯಾ ಸೋಲಿಸಿದ್ದೇ ಇದಕ್ಕೆ ಉತ್ತಮ ನಿದರ್ಶನ.

ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಥಾಯ್ಲೆಂಡ್‌ನ ಚುತಮಾತ್ ರಕ್ಸತ್ ವಿರುದ್ಧ ಕಠಿಣ ಸವಾಲನ್ನು ಎದುರಿಸಿದರು. ಅಂತಿಮವಾಗಿ ಅವರನ್ನು 5-2 ಅಂತರದಿಂದ ಸೋಲಿಸಿದ್ದರು. ‌

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇದು ನಿಖತ್ ಅವರ ಎರಡನೇ ಚಿನ್ನವಾಗಿದೆ. ಕಳೆದ ವರ್ಷ ಕೂಡಾ ಒಂದು ಚಿನ್ನ ಗೆದ್ದಿದ್ದರು. ಆ ವರ್ಷ ಅವರು 52 ಕೆಜಿ ವಿಭಾಗದಲ್ಲಿ ಈ ಸಾಧನೆ ಮಾಡಿದ್ದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ