ಪ್ಯಾರಾ ಗೇಮ್ಸ್ ಪದಕಕ್ಕೆ ಪ್ರಧಾನಿ ಮೋದಿ ಆಟೋಗ್ರಾಫ್; ಖುಷಿಯ ಕ್ಷಣ ಹಂಚಿಕೊಂಡ ಸುಯಶ್ ಜಾಧವ್
Nov 04, 2023 11:37 AM IST
ಪದಕಕ್ಕೆ ಮೋದಿ ಅವರಿಂದ ಸಹಿ ಹಾಕಿಸಿಕೊಂಡ ಸುಯಶ್ ಜಾಧವ್
- Suyash Jadhav: ಪ್ರಧಾನಿ ನರೇಂದ್ರ ಮೋದಿ ಅವರು ಸಹಿ ಹಾಕಿದ ಏಷ್ಯನ್ ಪ್ಯಾರಾ ಗೇಮ್ಸ್ ಚಿನ್ನದ ಪದಕವನ್ನು ಸ್ವೀಕರಿಸಿದ ಅನುಭವವನ್ನು ಭಾರತದ ಪ್ಯಾರಾ ಈಜುಪಟು ಸುಯಶ್ ಜಾಧವ್ ಹಂಚಿಕೊಂಡಿದ್ದಾರೆ.
ಭಾರತದ ಪ್ಯಾರಾ ಈಜುಪಟು ಸುಯಶ್ ಜಾಧವ್ (Suyash Jadhav), ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi.) ಸಹಿ ಹಾಕಿದ ಏಷ್ಯನ್ ಪ್ಯಾರಾ ಗೇಮ್ಸ್ (Asian Para Games 2023) ಬಂಗಾರದ ಪದಕವನ್ನು ಸ್ವೀಕರಿಸಿದ ವಿಶೇಷ ಅನುಭವವನ್ನು ಹಂಚಿಕೊಂಡಿದ್ದಾರೆ.
ಏಳು ವರ್ಷಗಳ ಹಿಂದೆ, ಅಂದರೆ 2015ರಲ್ಲಿ S7 ವಿಭಾಗದಲ್ಲಿ ಸ್ಪರ್ಧಿಸಿದ ಸುಯಶ್, 2016ರ ಪ್ಯಾರಾಲಿಂಪಿಕ್ಸ್‌ಗೆ 'ಎ' ಅರ್ಹತಾ ಅಂಕವನ್ನು ಗಳಿಸಿದ ಏಕೈಕ ಭಾರತೀಯ ಪ್ಯಾರಾ ಈಜುಗಾರ ಎಂಬ ದಾಖಲೆ ನಿರ್ಮಿಸಿದರು. ಇದೀಗ 2023ರ ಅಕ್ಟೋಬರ್ ತಿಂಗಳಲ್ಲಿ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪದಕ ಗೆದ್ದ ಏಕೈಕ ಭಾರತೀಯ ಈಜುಪಟು ಎಂಬ ರೆಕಾರ್ಡ್ ಮಾಡಿದ್ದಾರೆ.
ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪದಕ ಗೆದ್ದ ಇತರ 110 ಭಾರತೀಯ ಕ್ರೀಡಾಳುಗಳೊಂದಿಗೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸಂವಹನ ನಡೆಸುವ ಅವಕಾಶ ಸುಯಶ್ ಜಾಧವ್‌ಗೆ ಲಭಿಸಿತು. ಈ ಸಂದರ್ಭದಲ್ಲಿ ತಾವು ಗೆದ್ದ ಪದಕಕ್ಕೆ ಮೋದಿ ಅವರಿಂದ ಆಟೋಗ್ರಾಫ್ ಹಾಕಿಸಿಕೊಂಡ ನೆನಪನ್ನು ಅವರು ಹಂಚಿಕೊಂಡಿದ್ದಾರೆ.
ಮೋದಿ ಭೇಟಿಯಾಗುವ ಅವಕಾಶ
“ನಾನು 2018ರಲ್ಲಿ ಮೊದಲ ಬಾರಿ ಮೋದಿಯವರನ್ನು ಭೇಟಿಯಾಗಿದ್ದೆ. ಜಕಾರ್ತಾ ಏಷ್ಯನ್ ಪ್ಯಾರಾ ಗೇಮ್ಸ್ ನಂತರ ಮತ್ತೆ 2021ರಲ್ಲಿ ಪ್ಯಾರಾಲಿಂಪಿಕ್ಸ್ ಗೇಮ್ಸ್ ಬಳಿಕ ಅವರನ್ನು ಭೇಟಿಯಾದೆ. ಆಗ ಅವರೊಂದಿಗೆ ಫೋಟೋಗಳನ್ನು ತೆಗೆಸಿಕೊಂಡೆ. ಆದರೆ ಆಗ ಅವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿಲ್ಲ. ಈ ಬಾರಿ ಆ ಅವಕಾಶ ಸಿಕ್ಕಿತು. ನನ್ನ ಈಜುವಿಕೆ ಬಗ್ಗೆ ಮತ್ತು ತಂದೆಯ ಬಗ್ಗೆ ಮಾತನಾಡಿದ್ದು ವಿಶೇಷವಾಗಿತ್ತು,” ಎಂದು ಸುಯಶ್ ಹೇಳಿದ್ದಾರೆ.
ಪದಕಕ್ಕೆ ಮೋದಿ ಆಟೋಗ್ರಾಫ್
“ನನ್ನ ಸಂಭಾಷಣೆಯ ನಂತರ, ಅವರು ಆ ಸಮಯದಲ್ಲಿ ನನ್ನೊಂದಿಗೆ ನಿಂತಿದ್ದ ಇತರ ಪದಕ ವಿಜೇತರೊಂದಿಗೆ ಮಾತನಾಡುತ್ತಿದ್ದರು. ಅವರಲ್ಲಿ ಆರ್ಚರ್ ಶೀತಲ್ ಅವರು ತಮ್ಮ ಪದಕಗಳಲ್ಲಿ ಒಂದಕ್ಕೆ ಸಹಿ ಹಾಕುವಂತೆ ಪ್ರಧಾನಿ ಬಳಿ ವಿನಂತಿಸಿದರು. ನಾನು ಕೂಡಾ ಅದೇ ರೀತಿ ಸಹಿ ಹಾಕುವಂತೆ ಅವರಲ್ಲಿ ಕೇಳಿದೆ. ಅವರು ನನ್ನ ಪದಕಕ್ಕೆ ಸಹಿ ಹಾಕಿದರು. ಅದರಿಂದ ನನಗೆ ತುಂಬಾ ಸಂತೋಷವಾಗಿದೆ,” ಎಂದು ಸುಯಶ್ ಹೇಳಿಕೊಂಡಿದ್ದಾರೆ.
ನಡೆದಿತ್ತು ಅವಘಡ
ಸುಯಶ್ ಅವರ ತಂದೆ ರಾಜ್ಯಮಟ್ಟದ ಈಜುಪಟುವಾಗಿದ್ದರು. ತಂದೆಯ ಪ್ರೋತ್ಸಾಹದ ಮೇರೆಗೆ ಸುಯಾಶ್ ಕೂಡಾ ಮೂರು ವರ್ಷದವರಾಗಿದ್ದಾಗಲೇ ಈಜು ಕಲಿತರು. ಆದರೆ ವಿಧಿಯು ಸುಯಶ್ ಬಾಳಲ್ಲಿ ಕತ್ತಲೆ ತಂದಿತು. ದುರದೃಷ್ಟಕರ ಅವಘಡದಲ್ಲಿ ಸುಯಶ್ ವಿದ್ಯುತ್ ಸ್ಪರ್ಶದಿಂದ ತನ್ನ ಅಂಗೈ ಮತ್ತು ಮಣಿಕಟ್ಟುಗಳನ್ನು ಕಳೆದುಕೊಂಡರು.
ಛಲ ಬಿಡದೆ ಪ್ರಯತ್ನ
ಎರಡೂ ಕೈಗಳ ಅರ್ಧದಷ್ಟು ಭಾಗವನ್ನು ಕಳೆದುಕೊಂಡರೂ ಸುಯಶ್ ಛಲ ಮಾತ್ರ ಬಿಡಲಿಲ್ಲ. ಅಪಘಾತವಾಗಿ ಎರಡು ವರ್ಷಗಳ ಬಳಿಕ ದೈಹಿಕ ಮಾತ್ರವಲ್ಲದೆ ಮಾನಸಿಕವಾಗಿ ಗಟ್ಟಿಯಾದ ಅವರು, ಮತ್ತೆ ಈಜು ತರಬೇತಿ ಪಡೆದರು. ಅಲ್ಲಿಂದ ಹಿಂತಿರುಗಲೇ ಇಲ್ಲ. 2015ರಲ್ಲಿ ಜಾಧವ್ ರಷ್ಯಾದ ಸೋಚಿಯಲ್ಲಿ ನಡೆದ IWAS ವಿಶ್ವ ಕ್ರೀಡಾಕೂಟದಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಕ್ಕೆ ಮುತ್ತಿಟ್ಟರು. ಅದರ ಬೆನ್ನಲ್ಲೇ ರಿಯೊದಲ್ಲಿ ನಡೆದ 2016ರ ಪ್ಯಾರಾಲಿಂಪಿಕ್ಸ್‌ಗೆ 'ಎ' ಅರ್ಹತಾ ಅಂಕವನ್ನು ಪಡೆದ ಮೊದಲ ಭಾರತೀಯ ಪ್ಯಾರಾ ಈಜುಪಟು ಎಂಬ ದಾಖಲೆ ಬರೆದರು. 2018ರ ಜಕಾರ್ತಾ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಒಟ್ಟು ಮೂರು ಪದಕಗಳನ್ನು ಗೆದ್ದರು. 2021ರಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.