ಹೊಸ ವರ್ಷಕ್ಕೆ ಗೆಲುವಿನ ಸಿಹಿ ನೀಡಿದ ಬೆಂಗಳೂರು ಬುಲ್ಸ್; ಗೆದ್ದು ಅಗ್ರಸ್ಥಾನಕ್ಕೇರಿದ ಗುಜರಾತ್
Jan 01, 2024 05:00 AM IST
ಹೊಸ ವರ್ಷಕ್ಕೆ ಗೆಲುವಿನ ಸಿಹಿ ನೀಡಿದ ಬೆಂಗಳೂರು ಬುಲ್ಸ್.
- Pro Kabaddi League 10: ಪ್ರೊ ಕಬಡ್ಡಿ ಲೀಗ್ನ 10ನೇ ಆವೃತ್ತಿಯ 50ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬೆಂಗಳೂರು ಬುಲ್ಸ್, ಹೊಸ ವರ್ಷಕ್ಕೆ ಉಡುಗೊರೆ ನೀಡಿದೆ.
2023 ವರ್ಷದ ಕೊನೆಯ ದಿನದಂದು ನಡೆದ ಡಬಲ್ ಹೆಡ್ಡರ್ ಪಂದ್ಯದಲ್ಲಿ ಒಂದು ಅಂಕದ ಗೆಲುವಿನೊಂದಿಗೆ ಗೆದ್ದ ಬೆಂಗಳೂರು ಬುಲ್ಸ್, ಹೊಸ ವರ್ಷಕ್ಕೆ ಉಡುಗೊರೆ ನೀಡಿದೆ. ಸತತ 2 ಸೋಲುಗಳ ನಂತರ ಮತ್ತೆ ಲಯಕ್ಕೆ ಮರಳಿದೆ. ಅಲ್ಲದೆ, 10ನೇ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಬುಲ್ಸ್, 6ನೇ ಲಗ್ಗೆಯಿಟ್ಟಿದೆ. ತಮಿಳ್ ತಲೈವಾಸ್ ವಿರುದ್ಧ 37-38 ಅಂಕಗಳಿಂದ ರಣರೋಚಕ ಗೆಲುವು ಸಾಧಿಸಿದೆ.
ಶಾಹೀದ್ ವಿಜಯ್ ಸಿಂಗ್ ಪಥಿಕ್ ಕ್ರೀಡಾ ಸಂಕೀರ್ಣದಲ್ಲಿ ಜರುಗಿದ ಲೀಗ್ನ 50ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ಎದುರು ಅದ್ಭುತ ಹೋರಾಟ ನಡೆಸಿತು. ತಮಿಳ್ ತಂಡ ನೀಡಿದ ಪ್ರಬಲ ಹೋರಾಟದ ನಡುವೆ ಮೈಕೊಡವಿ ನಿಂತ ಗೂಳಿಗಳು ಲೀಗ್ನಲ್ಲಿ 4ನೇ ಜಯದ ನಗೆ ಬೀರಿದರು. ಒಂದು ಹಂತದಲ್ಲಿ ಸೋಲುವ ಭೀತಿಗೆ ಒಳಗಾಗಿದ್ದ ಬುಲ್ಸ್, ನಂತರ ಬಲವಾಗಿ ಪುನರಾಗಮನ ಮಾಡಿ ಎದುರಾಳಿ ಆಘಾತ ನೀಡಿತು.
ಮೈ ಕೊಡವಿ ನಿಂತ ಬುಲ್ಸ್
ಬೆಂಗಳೂರು ಪರ ಭರತ್ ಮತ್ತೆ ಮಿಂಚಿದರು. 4 ಬೋನಸ್ ಸೇರಿ 9 ರೇಡಿಂಗ್ ಅಂಕಗಳನ್ನು ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನೀರಜ್ ನರ್ವಾಲ್ 5, ವಿಕಾಸ್ ಖಂಡೋಸ್, ಪರ್ತೀಕ್, ಸೌರಭ್ ನಂದಲ್ ತಲಾ ಅಂಕ ಪಡೆದರು. ಸುರ್ಜೀತ್ ಸಿಂಗ್, ಸಚಿನ್ ನರ್ವಾಲ್ ತಲಾ 3 ಅಂಕ ಪಡೆದರು. ಅಮನ್ 1 ಅಂಕ ಗಳಿಸಿದರು. ಅಂಕಪಟ್ಟಿಯಲ್ಲಿ 25 ಅಂಕ ಪಡೆದಿದೆ.
ತಮಿಳ್ ತಲೈವಾಸ್ ಮತ್ತೊಂದು ರೋಚಕ ಸೋಲು ಅನುಭವಿಸಿದೆ. ಗೆಲುವಿನ ಅಂಚಿನಲ್ಲಿ ಶರಣಾಗಿದೆ. ನರೇಂದರ್ ಹೋಶಿಯರ್ 12 ಅಂಕ ಪಡೆದು ಅದ್ಭುತ ಪ್ರದರ್ಶನ ನೀಡಿದ್ದರ ಹೊರತಾಗಿಯೂ ಗೆಲುವು ಸಿಗಲಿಲ್ಲ. ಅಜಿಂಕ್ಯ ಪವಾರ್ 6, ನಿತಿನ್ ಸಿಂಗ್, ಸಾಗರ್ ತಲಾ 5 ಅಂಕ ಪಡೆದರೂ ನಿರಾಸೆ ಅನುಭವಿಸಿದರು. ತಮಿಳ್ ತಂಡ ಲೀಗ್ನಲ್ಲಿ 7 ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ.
ಗುಜರಾತ್ಗೆ ಭರ್ಜರಿ ಗೆಲುವು
ಇನ್ನು ಡಿಸೆಂಬರ್ 31ರಂದು ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಎದುರು ಗೆದ್ದ ಗುಜರಾತ್ ಜೈಂಟ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಗುಜರಾತ್ 51-42 ಅಂಕಗಳಿಂದ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಲೀಗ್ನಲ್ಲಿ 6ನೇ ಗೆಲುವನ್ನು ತನ್ನದಾಗಿಸಿಕೊಂಡಿತು. ಒಟ್ಟು 33 ಅಂಕ ಸಂಪಾದಿಸಿದೆ. ಇನ್ನು ಸೋತ ಬೆಂಗಾಲ್ ವಾರಿಯರ್ಸ್ 9ನೇ ಸ್ಥಾನಕ್ಕೆ ಕುಸಿತ ಕಂಡಿದೆ.