Mumbai Indians: ಐಪಿಎಲ್‌ನ ಎಲ್ಲಾ ಪಂದ್ಯಗಳಲ್ಲಿ ರೋಹಿತ್ ಆಡಲ್ಲ; ಈ ಸ್ಫೋಟಕ ಆಟಗಾರನೇ ಎಂಐ ನಾಯಕ
Mar 29, 2023 11:29 AM IST
ರೋಹಿತ್ ಶರ್ಮಾ
ವರದಿಯ ಪ್ರಕಾರ, ಈ ಋತುವಿನ ಒಂದೆರಡು ಐಪಿಎಲ್ ಪಂದ್ಯಗಳಿಂದ ರೋಹಿತ್ ಶರ್ಮಾ ಹೊರಗುಳಿಯಬಹುದು ಎಂದು ತಿಳಿದುಬಂದಿದೆ.
ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ (MI) ತಂಡವು, ದುಬಾರಿ ಕ್ರಿಕೆಟ್ ಲೀಗ್‌ನ ಮುಂಬರುವ ಆವೃತ್ತಿನಲ್ಲಿ ದಾಖಲೆಯ ಆರನೇ ಪ್ರಶಸ್ತಿ ಗೆಲ್ಲಲು ಸಜ್ಜಾಗಿ ನಿಂತಿದೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್, 2022ರ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು.
2023ರ ಆವೃತ್ತಿಯಲ್ಲಿ ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್, ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಐಪಿಎಲ್ 2023ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕ ರೋಹಿತ್ ಶರ್ಮಾ ಇಲ್ಲದೆ ಕೆಲವು ಪಂದ್ಯಗಳನ್ನು ಆಡುವ ಸಾಧ್ಯತೆಯಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಈ ಋತುವಿನ ಒಂದೆರಡು ಐಪಿಎಲ್ ಪಂದ್ಯಗಳನ್ನು ರೋಹಿತ್ ಶರ್ಮಾ ಕಳೆದುಕೊಳ್ಳಬಹುದು ಎಂದು ತಿಳಿದುಬಂದಿದೆ. ತನ್ನ ಕೆಲಸದ ಹೊರೆಯನ್ನು ನಿರ್ವಹಿಸುವ ಸಲುವಾಗಿ, ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಐಪಿಎಲ್‌ನ ಕೆಲ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. ಅನುಭವಿ ಆರಂಭಿಕ ಆಟಗಾರನ ಅನುಪಸ್ಥಿತಿಯಲ್ಲಿ ಟಿ20 ಕ್ರಿಕೆಟ್‌ನ ನಂಬರ್ ವನ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿನ ವರದಿಗಳ ಪ್ರಕಾರ, ರೋಹಿತ್ ಅವರು ಆಯ್ದ ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಯುತ್ತಾರೆ. ಅದಾಗ್ಯೂ, ರೋಹಿತ್ ಅವರು ಈ ಋತುವಿನಲ್ಲಿ ಮುಂಬೈ ತಂಡದ ಆಡುವ ಬಳಗದ ಭಾಗವಾಗದಿದ್ದಾಗ ಸ್ಟ್ಯಾಂಡ್ ಇನ್ ನಾಯಕ ಸೂರ್ಯಕುಮಾರ್ ಅವರಿಗೆ ಮಾರ್ಗದರ್ಶನ ನೀಡಲು ತಂಡದೊಂದಿಗೆ ಪ್ರಯಾಣಿಸುತ್ತಾರೆ ಎಂದು ತಿಳಿದು ಬಂದಿದೆ.
ಕಳೆದ ಋತುವಿನಲ್ಲಿ ರೋಹಿತ್ ಶರ್ಮಾ ಮತ್ತು ಮುಂಬೈ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಮುಂಬೈ ಇಂಡಿಯನ್ಸ್ ಕಳೆದ ಋತುವಿನಲ್ಲಿ ರೋಹಿತ್ ನಾಯಕತ್ವದಲ್ಲಿ ಆಡಿದ ಮೊದಲ ಎಂಟು ಪಂದ್ಯಗಳನ್ನು ಸೋತಿತ್ತು. ನಾಯಕ ರೋಹಿತ್, 19.14ರ ಸರಾಸರಿಯಲ್ಲಿ 14 ಪಂದ್ಯಗಳಿಂದ 268 ರನ್ ಮಾತ್ರ ಗಳಿಸಿದ್ದರು. ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ ಕಳೆದ ಋತುವಿನಲ್ಲಿ 8 ಪಂದ್ಯಗಳಲ್ಲಿ 303 ರನ್ ಸಿಡಿಸಿದ್ದರು.
ಭಾರತದ ನಾಯಕ ರೋಹಿತ್, ಕೆಲ ದಿನಗಳ ಹಿಂದೆ ಪ್ರಮುಖ ಹೇಳಿಕೆಯೊಂದನ್ನು ನೀಡಿ ಗಮನ ಸೆಳೆದಿದ್ದರು. ವಿಶ್ವದ ಶ್ರೀಮಂತ ಟಿ20 ಪಂದ್ಯಾವಳಿಯಲ್ಲಿ ಆಡುವ ಭಾರತದ ಆಟಗಾರರು, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಸಲುವಾಗಿ ತಮ್ಮನ್ನು ತಾವು ಫಿಟ್ ಆಗಿಟ್ಟುಕೊಳ್ಳುವುದು ಆಯಾ ಆಟಗಾರನ ಜವಾಬ್ದಾರಿ ಎಂದು ಪ್ರತಿಪಾದಿಸಿದ್ದರು. “ಇದು ಈಗ ಫ್ರಾಂಚೈಸಿಗಳಿಗೆ ಬಿಟ್ಟದ್ದು. ನಾವು ತಂಡಗಳಿಗೆ ಕೆಲವು ಸೂಚನೆಗಳನ್ನು ನೀಡಿದ್ದೇವೆ. ಆದರೆ ಅಂತಿಮವಾಗಿ ಅದು ಫ್ರಾಂಚೈಸಿಗಳ ನಿರ್ಧಾರಕ್ಕೆ ಬಿಟ್ಟದ್ದು. ಮುಖ್ಯವಾಗಿ ಆಟಗಾರರು ಅದನ್ನು ಪರಿಗಣಿಸಬೇಕು. ಅವರೆಲ್ಲರೂ ವಯಸ್ಕರು. ಅವರೇ ತಮ್ಮ ದೈಹಿಕ ಕ್ಷಮತೆಯನ್ನು ನೋಡಿಕೊಳ್ಳಬೇಕು. ಹೀಗಾಗಿ ಒಂದು ಅಥವಾ ಎರಡು ಪಂದ್ಯಗಳಲ್ಲಿ ಅವರು ವಿರಾಮ ತೆಗೆದುಕೊಳ್ಳಬಹುದು. ಆದರೆ, ಅದು ನಿಜಕ್ಕೂ ಆಗುತ್ತದೆಯೇ ಎಂಬುದು ನನಗೆ ಅನುಮಾನ” ಎಂದು ರೋಹಿತ್ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ
ರೋಹಿತ್ ಶರ್ಮಾ, ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಅರ್ಜುನ್ ತೆಂಡೂಲ್ಕರ್, ಅರ್ಷದ್ ಖಾನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಾಧ್ವಲ್, ಕ್ಯಾಮೆರಾನ್ ಗ್ರೀನ್, ಜ್ಯೆ ರಿಚರ್ಡ್ಸನ್, ಪಿಯೂಷ್ ಚಾವ್ಲಾ, ದುವಾನ್ ಜಾನ್ಸೆನ್, ವಿಷ್ಣು ವಿನೋದ್, ಶಾಮ್ಸ್ ಮುಲಾನಿ, ನೆಹಾಲ್ ವಾಧೇರಾ, ರಾಘವ್ ಗೋಯಲ್.