RCB vs DC: ಟಾಸ್ ಸೋತು ಬ್ಯಾಟಿಂಗ್‌ಗಿಳಿದ ಆರ್‌ಸಿಬಿ; ಫಾಫ್ ಪಡೆಗೆ ಹಸರಂಗ ಎಂಟ್ರಿ
Apr 15, 2023 05:00 PM IST
ಫಾಫ್ ಡುಪ್ಲೆಸಿಸ್ - ವಾರ್ನರ್
- ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಈವರೆಗೆ 29 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಅದರಲ್ಲಿ ಆರ್‌ಸಿಬಿ 17 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ. ಡೆಲ್ಲಿ 10 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ.
ಸತತ ನಾಲ್ಕು ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್, ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೆಲ್ಲುವ ಯೋಜನೆ ಹಾಕಿಕೊಂಡಿದೆ. ಮತ್ತೊಂದೆಡೆ ತವರು ಮೈದಾನ ಎಂ ಚಿನ್ನಸ್ವಾಮಿಯಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಸೋಲು ಕಂಡಿದ್ದ ಆರ್‌ಸಿಬಿಗೆ ಇಂದು ಗೆಲ್ಲಲೇ ಬೇಕಾದ ಅನಿರ್ವಾರ್ಯತೆ ಇದೆ. ಮೊದಲ ಗೆಲುವಿನ ಬಳಿಕ ಸತತ ಎರಡು ಸೋಲು ಕಂಡಿರುವ ತಂಡವು, ತವರಿನ ಪಂದ್ಯಗಳನ್ನು ಸೋತರೆ ಮುಂದೆ ಕಷ್ಟವಾಗಲಿದೆ. ಆಲ್‌ರೌಂಡರ್ ಹಸರಂಗ ತಂಡ ಸೇರಿಕೊಳ್ಳುವ ಮೂಲಕ ಬಲ ಹೆಚ್ಚಿಸಿಕೊಂಡಿರುವ ರೆಡ್ ಆರ್ಮಿ, ಇಂದು ಗೆಲುವಿನ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದೆ.
ವೀಕೆಂಡ್ ಡಬಲ್ ಹೆಡರ್ ದಿನವಾದ ಇಂದಿನ ಮೊದಲು ಪಂದ್ಯದಲ್ಲಿ ಡೆಲ್ಲಿ ಮತ್ತು ಆರ್‌ಸಿಬಿಯು ಮೊದಲನೆ ಪಂದ್ಯ ಆಡುತ್ತಿವೆ. ಪ್ರಮುಖ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ನಾಯಕ ಡೇವಿಡ್ ವಾರ್ನರ್ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಆರ್‌ಸಿಬಿ ಮೊದಲಿಗೆ ಬ್ಯಾಟಿಂಗ್ ಮಾಡಲಿದೆ.
ಡೆಲ್ಲಿ ತಂಡಕ್ಕೆ ಇಂದು ಮಿಚೆಲ್ ಮಾರ್ಶ್ ಹಿಂದಿರುಗಿದ್ದಾರೆ. ಹೀಗಾಗಿ ಪೊವೆಲ್ ಆಡುವ ಬಳಗದಲ್ಲಿ ಇಂದು ಕಾಣಿಸಿಕೊಳ್ಳುವುದಿಲ್ಲ. ಆರ್‌ಸಿಬಿ ತಂದದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದ್ದು, ಲಂಕಾ ಸ್ಪಿನ್ನರ್ ವನಿಂದು ಹಸರಂಗ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಡೇವಿಡ್ ವಿಲ್ಲಿ ತಂಡದಿಂದ ಹೊರಗುಳಿದಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉತ್ತಮ ಮೊತ್ತ ನಿರೀಕ್ಷಿಸಲಾಗಿದೆ. ಇದು ಬ್ಯಾಟ್ಸ್ಮನ್ಗಳ ಸ್ವರ್ಗ ಎನಿಸಿದೆ. ವೇಗಿಗಳಿಗೆ ಈ ಪಿಚ್ ನೆರವಾಗಲಿದೆ. ಕಳೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ 212 ರನ್ಗಳ ಗುರಿ ಬೆನ್ನತ್ತಿತ್ತು.
ಮುಖಾಮುಖಿ ದಾಖಲೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಈವರೆಗೆ 29 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಅದರಲ್ಲಿ ಆರ್‌ಸಿಬಿ 17 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ. ಡೆಲ್ಲಿ 10 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ತಂಡವು ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿದ ಕೊನೆಯ ಮೂರು ಪಂದ್ಯಗಳಲ್ಲಿ ಮೂರನ್ನೂ ಗೆದ್ದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್, ವಿಜಯ್‌ಕುಮಾರ್ ವೈಶಾಕ್.
ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ
ಡೇವಿಡ್ ವಾರ್ನರ್ (ನಾಯಕ), ಮಿಚೆಲ್ ಮಾರ್ಷ್, ಯಶ್ ಧುಲ್, ಮನೀಶ್ ಪಾಂಡೆ, ಅಕ್ಸರ್ ಪಟೇಲ್, ಅಮನ್ ಹಕೀಮ್ ಖಾನ್, ಲಲಿತ್ ಯಾದವ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಅನ್ರಿಚ್ ನೋರ್ಟ್ಜೆ, ಮುಸ್ತಾಫಿಜುರ್ ರೆಹಮಾನ್.
ಆರ್‌ಸಿಬಿ ಮತ್ತು ಡೆಲ್ಲಿ ಪಂದ್ಯವು ಬೆಂಗಳೂರಿನಲ್ಲಿ ನಡೆಯುತ್ತಿರುವ ಕಾರಣದಿಂದ, ವಾಹನ ಸವಾರರ ಸುಗಮ ಸಂಚಾರಕ್ಕಾಗಿ ನಗರ ಸಂಚಾರ ಪೊಲೀಸ್ ಇಲಾಖೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿದೆ. ಪಂದ್ಯ ಮಧ್ಯಾಹ್ನ ನಡೆಯಲಿದೆ. ಮಧ್ಯಾಹ್ನ 12.30 ಗಂಟೆಯಿಂದ ರಾತ್ರಿ 9 ಗಂಟೆರವರೆಗೆ ಈ ಬದಲಾವಣೆ ಇರಲಿದೆ. ನಂತರ ಎಂದಿನಂತೆ ಎಲ್ಲಾ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಬಗ್ಗೆ ನಗರ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ.