ಮಲೇಷ್ಯಾ ಓಪನ್: ಸೆಮಿ ಕದನಕ್ಕೆ ಸಾತ್ವಿಕ್-ಚಿರಾಗ್ ಮಾಸ್ ಎಂಟ್ರಿ; ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ-ತನಿಶಾಗೆ ಸೋಲು
Jan 12, 2024 08:54 PM IST
ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ
- Malaysia Open Super 1000: ವಿಶ್ವದ ಎರಡನೇ ಶ್ರೇಯಾಂಕದ ಡಬಲ್ಸ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ, ಮಲೇಷ್ಯಾ ಓಪನ್ ಸೆಮಿಫೈನಲ್‌ನಲ್ಲಿ ಕೊರಿಯಾ ಅಥವಾ ಮಲೇಷ್ಯಾದ ಜೋಡಿಯನ್ನು ಎದುರಿಸಲಿದ್ದಾರೆ.
ಮಲೇಷ್ಯಾ ಓಪನ್ ಸೂಪರ್ 1000 ಟೂರ್ನಮೆಂಟ್‌ನಲ್ಲಿ (Malaysia Open Super 1000) ಭಾರತದ ಸ್ಟಾರ್ ಶಟ್ಲರ್‌ಗಳ ಜೋಡಿಯು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಖೇಲ್ ರತ್ನ ಪ್ರಶಸ್ತಿ ಗೆದ್ದಿರುವ ಬ್ಯಾಡ್ಮಿಂಟನ್‌ನ ಬಲಿಷ್ಠ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwiksairaj Rankireddy and Chirag Shetty), ಚೀನಾದ ರೆನ್ ಕ್ಸಿಯಾಂಗ್ ಯು ಮತ್ತು ಹೀ ಜಿ ಟಿಂಗ್ ಅವರನ್ನು ನೇರ ಗೇಮ್‌ಗಳಿಂದ ಮಣಿಸಿ ಸತತ ಎರಡನೇ ಬಾರಿ ಮಲೇಷ್ಯಾ ಓಪನ್ ಸೆಮಿಫೈನಲ್ ತಲುಪಿದ್ದಾರೆ.
ಜನವರಿ 12ರ ಶುಕ್ರವಾರ ನಡೆದ ರೋಚಕ ಪಂದ್ಯದಲ್ಲಿ ಗೆದ್ದ ಜೋಡಿಯು, ಮತ್ತೊಂದು ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಕಳೆದ ವರ್ಷ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ವಿಶ್ವದ 2ನೇ ಶ್ರೇಯಾಂಕದ ಭಾರತೀಯ ಜೋಡಿಯು, ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣದಲ್ಲೇ ಕೊಂಡೊಯ್ದರು. ವಿಶ್ವದ 32ನೇ ಶ್ರೇಯಾಂಕದ ಜೋಡಿಯನ್ನು 21-11 21-8ರ ನೇರ ಸೆಟ್‌ಗಳಿಂದ ಮಣಿಸಿದರು. ಕೇವಲ 35 ನಿಮಿಷಗಳಲ್ಲಿ ಪಂದ್ಯದ ಫಲಿತಾಂಶ ಹೊರಬಿತ್ತು.
ಇದನ್ನೂ ಓದಿ | ಸ್ಮಿತ್ ಟೆನಿಸ್ ಕೌಶಲಕ್ಕೆ ಶಿರಬಾಗಿದ ನೊವಾಕ್; ಬ್ಯಾಟ್ ಹಿಡಿದು ಸಿಕ್ಸರ್ ಚಚ್ಚಿದ ಜೊಕೊವಿಕ್, ವಿಡಿಯೋ
ವಿಶ್ವದ ಎರಡನೇ ಶ್ರೇಯಾಂಕದ ಭಾರತೀಯ ಜೋಡಿಯು, ಸೆಮಿಫೈನಲ್‌ನಲ್ಲಿ ಕೊರಿಯಾದ ಕಾಂಗ್ ಮಿನ್ ಹ್ಯುಕ್ ಮತ್ತು ಸಿಯೊ ಸೆಯುಂಗ್ ಜೇ ಅಥವಾ ಮೂರನೇ ಶ್ರೇಯಾಂಕದ ಮಲೇಷ್ಯಾದ ಜೋಡಿಯಾದ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ಅವರನ್ನು ಎದುರಿಸಲಿದ್ದಾರೆ.
2023ರಲ್ಲಿ ಆರು ಪ್ರಶಸ್ತಿ
2023ರಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ಈ ಜೋಡಿಯು ದಾಖಲೆಯ ಆರು ಪ್ರಶಸ್ತಿಗಳನ್ನು ಗೆದ್ದಿದ್ದರು. ಸಾತ್ವಿಕ್ ಮತ್ತು ಚಿರಾಗ್ ಹೊಸ ವರ್ಷವನ್ನು ಮತ್ತೊಂದು ಪ್ರಶಸ್ತಿಯೊಂದಿಗೆ ಆರಂಭಿಸುವ ಗುರಿ ಹಾಕಿಕೊಂಡಿದ್ದಾರೆ.
ಮಹಿಳಾ ಡಬಲ್ಸ್ ಜೋಡಿಗೆ ನಿರಾಶೆ
ಅತ್ತ, ರೋಚಕ ಪಂದ್ಯದಲ್ಲಿ ಗೆದ್ದು ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿದ್ದ ಮಹಿಳೆಯರ ಡಬಲ್ಸ್ ಜೋಡಿಯಾದ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಸೋತಿದ್ದಾರೆ. ಜಪಾನ್‌ನ ರಿನ್ ಇವಾನಾಗಾ ಮತ್ತು ಕೀ ನಕಾನಿಶಿ ವಿರುದ್ಧ 15-21 13-21 ಅಂತರದಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಇದನ್ನೂ ಓದಿ | ಮಲೇಷ್ಯಾ ಓಪನ್: ಕ್ವಾರ್ಟರ್ ಫೈನಲ್ ಲಗ್ಗೆ ಇಟ್ಟ ಸಾತ್ವಿಕ್-ಚಿರಾಗ್ ಜೋಡಿ; ಅಶ್ವಿನಿ-ತನಿಶಾಗೂ ಗೆಲುವು
ಪೊನ್ನಪ್ಪ ಮತ್ತು ಕ್ರಾಸ್ಟೊ ಕಳೆದ ತಿಂಗಳು ಲಕ್ನೋ ಮತ್ತು ಒಡಿಶಾದಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಫೈನಲ್‌ಗೆ ತಲುಪಿದ್ದರು. ಅಲ್ಲದೆ ಗುವಾಹಟಿ ಮಾಸ್ಟರ್ಸ್ ಸೂಪರ್ 100 ಗೆದ್ದುಕೊಂಡಿದ್ದರು.
ಅತ್ತ ಜನವರಿ 10ರ ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಎಚ್‌ಎಸ್ ಪ್ರಣಯ್ ಮತ್ತು ಲಕ್ಷ್ಯ ಸೇನ್ ಸೋತು ಹೊರಬಿದ್ದಿದ್ದಾರೆ. ಇದೀಗ ಡಬಲ್ಡ್ ಜೋಡಿ ಮೇಲೆ ಭಾರಿ ನಿರೀಕ್ಷೆಗಳಿವೆ.
ವಿಡಿಯೋ ನೋಡಿ | Delhi : ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಶೀತಮಾರುತದ ಎಫೆಕ್ಟ್ ; ಕನಿಷ್ಠ ಉಷ್ಣಾಂಶದಿಂದ ಜನಜೀವನ ತತ್ತರ