logo
ಕನ್ನಡ ಸುದ್ದಿ  /  ಕ್ರೀಡೆ  /  ರೋಜರ್ ಫೆಡರರ್ ದಾಖಲೆ ಮುರಿದ ಜೊಕೊವಿಕ್; ಗ್ರ್ಯಾಂಡ್ ಸ್ಲಾಮ್‌ನಲ್ಲಿ 47ನೇ ಸೆಮೀಸ್‌ ತಲುಪಿದ ಟೆನಿಸ್‌ ದಿಗ್ಗಜ

ರೋಜರ್ ಫೆಡರರ್ ದಾಖಲೆ ಮುರಿದ ಜೊಕೊವಿಕ್; ಗ್ರ್ಯಾಂಡ್ ಸ್ಲಾಮ್‌ನಲ್ಲಿ 47ನೇ ಸೆಮೀಸ್‌ ತಲುಪಿದ ಟೆನಿಸ್‌ ದಿಗ್ಗಜ

HT Sports Desk HT Kannada

Dec 22, 2023 06:08 PM IST

google News

ನೊವಾಕ್ ಜೊಕೊವಿಕ್

    • ಯುಎಸ್ ಓಪನ್‌ ಕ್ವಾರ್ಟರ್-ಫೈನಲ್‌ನಲ್ಲಿ ವಿಶ್ವದ ಒಂಬತ್ತನೇ ಶ್ರೇಯಾಂಕದ ಟೆನ್ನಿಸ್‌ ಆಟಗಾರ ಅಮೆರಿಕದ ಟೇಲರ್ ಫ್ರಿಟ್ಜ್ ಅವರನ್ನು ಮಣಿಸುವ ಮೂಲಕ ದಾಖಲೆಯ 24ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಯತ್ತ ಜೊಕೊವಿಕ್ ಮುನ್ನಡೆದಿದ್ದಾರೆ.
ನೊವಾಕ್ ಜೊಕೊವಿಕ್
ನೊವಾಕ್ ಜೊಕೊವಿಕ್ (AFP)

ಖ್ಯಾತ ಟೆನ್ನಿಸ್‌ ಆಟಗಾರ ನೊವಾಕ್ ಜೊಕೊವಿಕ್ (Novak Djokovic), ಯುಎಸ್ ಓಪನ್‌ (US Open) ಟೂರ್ನಿಯಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಯುಎಸ್ ಓಪನ್‌ ಕ್ವಾರ್ಟರ್-ಫೈನಲ್‌ನಲ್ಲಿ ವಿಶ್ವದ ಒಂಬತ್ತನೇ ಶ್ರೇಯಾಂಕದ ಟೆನ್ನಿಸ್‌ ಆಟಗಾರ ಅಮೆರಿಕದ ಟೇಲರ್ ಫ್ರಿಟ್ಜ್ ಅವರನ್ನು 6-1, 6-4, 6-4ರ ನೇರ ಸೆಟ್‌ಗಳಿಂದ ಮಣಿಸುವ ಮೂಲಕ ದಾಖಲೆಯ 24ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಯತ್ತ ಮುನ್ನಡೆದಿದ್ದಾರೆ.

ಈ ಅಮೋಘ ಗೆಲುವಿನೊಂದಿಗೆ ಜೊಕೊವಿಕ್ ಮತ್ತೊಂದು ರೆಕಾರ್ಡ್‌ ಮಾಡಿದ್ದಾರೆ. ದಾಖಲೆಯ 47ನೇ ಗ್ರ್ಯಾಂಡ್‌ಸ್ಲಾಮ್ ಸೆಮಿಫೈನಲ್ ಪ್ರವೇಶಿಸುವಲ್ಲಿ ದಿಗ್ಗಜ ಆಟಗಾರ ಯಶಸ್ವಿಯಾಗಿದ್ದಾರೆ.

ಫೆಡರರ್‌ ದಾಖಲೆ ಬ್ರೇಕ್

ಈವರೆಗೆ ಈ ದಾಖಲೆ ಸ್ವಿಸ್ ಆಟಗಾರ ರೋಜರ್ ಫೆಡರರ್ ಹೆಸರಲ್ಲಿತ್ತು. ಪುರುಷರ ವಿಭಾಗದಲ್ಲಿ 46 ಬಾರಿ ಸೆಮಿಫೈನಲ್ ಪ್ರವೇಶಿಸಿದ ಫೆಡರರ್‌ ದಾಖಲೆ ಬ್ರೇಕ್‌ ಮಾಡಿದ ಸೆರ್ಬಿಯಾ ಆಟಗಾರ, ದೈತ್ಯ ದಾಖಲೆ ಬರೆದಿದ್ದಾರೆ. ಇದೇ ವೇಳೆ ವಿಶ್ವದ ಅಗ್ರ ಆಟಗಾರರ ವಿರುದ್ಧ ತಮ್ಮ ವೃತ್ತಿಜೀವನದಲ್ಲಿ 250 ಗೆಲುವುಗಳನ್ನು ಪಡೆದ ಮೊದಲ ಟೆನ್ನಿಸ್‌ ಆಟಗಾರ ಎಂಬ ದಾಖಲೆಯೂ ಸೃಷ್ಟಿಯಾಯ್ತು. ಈ ಪಂದ್ಯ ಆಡುವ ಮುನ್ನವೇ, ಜೊಕೊವಿಕ್ ಫೆಡರರ್‌ಗಿಂತ 25 ಹೆಚ್ಚು ಗೆಲುವು ಸಾಧಿಸಿದ್ದರು.

ಸೆಮಿ ಕದನದಲ್ಲಿ ಬೆನ್ ಶೆಲ್ಟನ್ ಎದುರಾಳಿ

ಯುಎಸ್‌ ಓಪನ್‌ ನಡೆಯುವ ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ತನ್ನ 13ನೇ ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸುವತ್ತ ಜೊಕೊವಿಕ್ ದೃಷ್ಟಿ ನೆಟ್ಟಿದ್ದಾರೆ. ಯುಎಸ್ ಓಪನ್ ಮುಖಾಮುಖಿಯಲ್ಲಿ ಜೊಕೊವಿಕ್, ಅಮೆರಿಕದ ಬೆನ್ ಶೆಲ್ಟನ್ ವಿರುದ್ಧ ಸೆಮಿಫೈನಲ್‌ ಪಂದ್ಯದಲ್ಲಿ ಸೆಣಸಲಿದ್ದಾರೆ. ಒಂದು ವೇಳೆ 20ರ ಹರೆಯದ ಯುವ ಎದುರಾಳಿಯ ವಿರುದ್ಧ 36 ವರ್ಷದ ದಿಗ್ಗಜ ಆಟಗಾರ ಜೋಕೊವಿಕ್ ಜಯ ಸಾಧಿಸಿದರೆ,‌ ಮತ್ತೊಂದು ದಾಖಲೆ ನಿರ್ಮಾಣವಾಗಲಿದೆ. ತಮ್ಮ ವೃತ್ತಿಜೀವನದಲ್ಲಿ ಒಟ್ಟು ಮೂರನೇ ಬಾರಿಗೆ ಒಂದೇ ವರ್ಷದಲ್ಲಿ ಎಲ್ಲಾ ನಾಲ್ಕು ಗ್ರ್ಯಾಂಡ್‌ಸ್ಲಾಮ್‌ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದಂತಾಗುತ್ತದೆ.

ಫ್ರಿಟ್ಜ್‌ ವಿರುದ್ಧ ಗೆಲುವಿನ ನಗಾರಿ ಬಾರಿಸಲು ಜೊಕೊವಿಕ್ ಬರೋಬ್ಬರಿ ಎರಡು ಗಂಟೆ 35 ನಿಮಿಷಗಳನ್ನು ತೆಗೆದುಕೊಂಡರು.

ಅತ್ತ, ಪ್ರಸ್ತುತ ವಿಶ್ವದ ನಂಬರ್ ವನ್ ಟೆನ್ನಿಸ್‌ ಆಟಗಾರ ಕಾರ್ಲೊಸ್ ಅಲ್ಕರಾಜ್ ಯುಎಸ್ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಎದುರಿಸಲಿದ್ದಾರೆ.

ಸೆಮಿಫೈನಲ್‌ ಲಗ್ಗೆ ಇಟ್ಟ ರೋಹನ್ ಬೋಪಣ್ಣ-ಎಬ್ಡೆನ್ ಜೋಡಿ

ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ (Rohan Bopanna and Matthew Ebden) ಜೋಡಿಯು ಯುಎಸ್ ಓಪನ್ (US Open 2023) ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಅಮೆರಿಕದ ನಥಾನಿಯಲ್ ಲ್ಯಾಮನ್ಸ್ ಮತ್ತು ಜಾಕ್ಸನ್ ವಿಥ್ರೊ ಜೋಡಿಯನ್ನು ಸೋಲಿಸಿದ ಈ ಜೋಡಿ, ಈ ವರ್ಷದ ಗ್ರ್ಯಾಂಡ್ ಸ್ಲಾಮ್‌ಗಳಲ್ಲಿ ಎರಡನೇ ಬಾರಿ ಸೆಮೀಸ್‌ ಹಂತ ಪ್ರವೇಶಿಸಿದ ಸಾಧನೆ ಮಾಡಿದರು. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ