logo
ಕನ್ನಡ ಸುದ್ದಿ  /  ಕ್ರೀಡೆ  /  Novak Djokovic: ಮೂರನೇ ಫ್ರೆಂಚ್ ಓಪನ್ ಟ್ರೋಫಿ ಗೆದ್ದ ನೊವಾಕ್ ಜೊಕೊವಿಕ್; ಬತ್ತಳಿಕೆ ಸೇರಿತು ದಾಖಲೆಯ 23ನೇ ಗ್ರಾಂಡ್ ಸ್ಲಾಮ್ ಕಿರೀಟ

Novak Djokovic: ಮೂರನೇ ಫ್ರೆಂಚ್ ಓಪನ್ ಟ್ರೋಫಿ ಗೆದ್ದ ನೊವಾಕ್ ಜೊಕೊವಿಕ್; ಬತ್ತಳಿಕೆ ಸೇರಿತು ದಾಖಲೆಯ 23ನೇ ಗ್ರಾಂಡ್ ಸ್ಲಾಮ್ ಕಿರೀಟ

Jayaraj HT Kannada

Jun 12, 2023 12:17 PM IST

google News

ನೊವಾಕ್ ಜೊಕೊವಿಕ್

    • French Open 2023: ಸರ್ಬಿಯಾದ ಟೆನ್ನಿಸ್‌ ದೊರೆ ನೊವಾಕ್‌ ಜೋಕೊವಿಕ್ ಗ್ರಾಂಡ್‌ ಸ್ಲಾಮ್‌ ಗೆಲುವುಗಳ ದಾಖಲೆಯನ್ನು 23ಕ್ಕೆ ಏರಿಸಿಕೊಂಡಿದ್ದಾರೆ.
ನೊವಾಕ್ ಜೊಕೊವಿಕ್
ನೊವಾಕ್ ಜೊಕೊವಿಕ್ (AFP)

ಪ್ಯಾರಿಸ್: ಖ್ಯಾತ ಟೆನ್ನಿಸ್‌ ತಾರೆ ನೊವಾಕ್ ಜೊಕೊವಿಕ್ (Novak Djokovic) ಮೂರನೇ ಬಾರಿಗೆ ಫ್ರೆಂಚ್ ಓಪನ್‌ (French Open 2023) ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಆ ಮೂಲಕ ಬರೋಬ್ಬರಿ 23 ಬಾರಿ ಗ್ರ್ಯಾಂಡ್ ಸ್ಲಾಮ್ (Grand Slam) ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಫ್ರೆಂಚ್‌ ಓಪನ್‌ ಫೈನಲ್‌ ಪಂದ್ಯದಲ್ಲಿ, ಸರ್ಬಿಯಾದ 36 ವರ್ಷ ವಯಸ್ಸಿನ ಜೋಕೊವಿಕ್, ವಿಶ್ವದ ನಾಲ್ಕನೇ ಶ್ರೇಯಾಂಕಿತ ಆಟಗಾರ ನಾರ್ವೆಯ ಕ್ಯಾಸ್ಪರ್ ರುಡ್ (Casper Ruud) ಅವರನ್ನು 7-6(1), 6-3, 7-5ರ ನೇರ ಸೆಟ್‌ಗಳಲ್ಲಿ ಸೋಲಿಸಿದರು. ಆ ಮೂಲಕ ತಮ್ಮ ದಾಖಲೆಯ 23ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದರು. ಗ್ರಾಂಡ್‌ ಸ್ಲಾಮ್‌ ರೇಸ್‌ನಲ್ಲಿ ತಮ್ಮ ಪ್ರಾಬಲ್ಯ ಮುಂದುವರೆಸಿದ ಅವರು, ಮಹತ್ವದ ಸಾಧನೆಯೊಂದನ್ನು ಮಾಡಿದ್ದಾರೆ. 2023ರ ಫ್ರೆಂಚ್ ಓಪನ್ ಕಿರೀಟ ಗೆಲ್ಲುವುದರೊಂದಿಗೆ ಎಲ್ಲಾ ನಾಲ್ಕು ಪ್ರಮುಖ ಟ್ರೋಫಿಗಳನ್ನು ಕನಿಷ್ಠ ಮೂರು ಬಾರಿ ಗೆದ್ದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ ತಾನು ಭಾಗವಹಿಸಿದ ಕೊನೆಯ ಎಂಟು ಪ್ರಮುಖ ಟ್ರೋಫಿಗಳ ಪೈಕಿ ಆರರಲ್ಲಿ ಗೆದ್ದಿದ್ದಾರೆ.

ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನ ಕೋರ್ಟ್ ಫಿಲಿಪ್-ಚಾಟ್ರಿಯರ್‌ನಲ್ಲಿ ನಡೆದ ಫ್ರೆಂಚ್ ಓಪನ್ 2023ರ ಫೈನಲ್‌ ಪಂದ್ಯದಲ್ಲಿ, ಜೊಕೊವಿಕ್ ತಮ್ಮ ಐತಿಹಾಸಿಕ ವಿಜಯ ಸಾಧಿಸಲು ಎದುರಾಳಿ ರುಡ್ ವಿರುದ್ಧ ಬಲವಾದ ಆರಂಭ ಪಡೆದರು. ಟೈ-ಬ್ರೇಕ್‌ನಲ್ಲಿ 1-4 ರಿಂದ ಹಿನ್ನಡೆಯಲ್ಲಿದ್ದ ಮೂರನೇ ಶ್ರೇಯಾಂಕದ ಆಟಗಾರ ಮೊದಲ ಸೆಟ್ ಅನ್ನು ಗೆದ್ದರು. ನಂತರ ಅವರು ಮೂರು ಗಂಟೆ ಹಾಗೂ 13 ನಿಮಿಷಗಳ ಕಾಲ ಆಡಿ ಎರಡು ಮತ್ತು ಮೂರನೇ ಸೆಟ್‌ಗಳನ್ನು ಕೂಡಾ ವಶಪಡಿಸಿಕೊಂಡರು. ಈ ನಡುವೆ ಕೆಲವು ಅತ್ಯುತ್ತಮ ಹೊಡೆತಗಳನ್ನಾಡಿ ಗಮನಸೆಳೆದರು.

ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳು, ಒಲಂಪಿಕ್ ಸಿಂಗಲ್ಸ್ ಚಿನ್ನದ ಪದಕಗಳು, ನಿಟ್ಟೊ ಎಟಿಪಿ ಫೈನಲ್ಸ್ ಮತ್ತು ಎಟಿಪಿ ಮಾಸ್ಟರ್ಸ್ 1000 ಸ್ಪರ್ಧೆಗಳನ್ನು ಒಳಗೊಂಡಿರುವ ವಿಶ್ವದ ಬಹುದೊಡ್ಡ ಮತ್ತು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದ ಸಾಧಕರ ಪಟ್ಟಿಯಲ್ಲಿ ಜೊಕೊವಿಕ್ ಈಗ ಅಗ್ರ ಸ್ಥಾನದಲ್ಲಿದ್ದಾರೆ. ತಮ್ಮ ಪ್ರಬಲ ಸ್ಪರ್ಧಿಗಳಾದ ರಾಫೆಲ್ ನಡಾಲ್ ಮತ್ತು ರೋಜರ್ ಫೆಡರರ್ (ಈಗ ನಿವೃತ್ತರಾಗಿದ್ದಾರೆ) ಅವರಿಗಿಂತ ಜೋಕೊವಿಕ್‌ ಮುಂದಿದ್ದಾರೆ.

ಸರ್ಬಿಯಾದ ಟೆನ್ನಿಸ್‌ ದೊರೆ ಪ್ರಮುಖ ಚಾಂಪಿಯನ್‌ಶಿಪ್ ಗೆಲುವುಗಳ ದಾಖಲೆಯನ್ನು 23ಕ್ಕೆ ಏರಿಸಿಕೊಂಡಿದ್ದಾರೆ. ಇದು ಇತರರಿಗಿಂತ ಹೆಚ್ಚು. ಉಳಿದಂತೆ 6 ನಿಟ್ಟೊ ಎಟಿಪಿ ಫೈನಲ್ಸ್ ಗೆಲುವನ್ನು ಸಾಧಿಸಿದ್ದಾರೆ. ಆ ಮೂಲಕ ಫೆಡರರ್‌ ಜೊತೆಗೆ ಸಮಬಲ ಸಾಧಿಸಿದ್ದಾರೆ. ಮಾಸ್ಟರ್ಸ್ 1000ರಲ್ಲಿ ಇವರ ಗೆಲುವುಗಳ ಸಂಖ್ಯೆ‌ 38. ಪ್ರಸ್ತುತ ವಿಶ್ವದ ಪ್ರಮುಖ ಟೆನ್ನಿಸ್‌ ಪ್ರಶಸ್ತಿ ಗೆಲುವುಗಳ ಸಂಖ್ಯೆಯನ್ನು ಜೋಕೊವಿಕ್‌ 67ಕ್ಕೆ ಏರಿಸಿಕೊಂಡಿದ್ದಾರೆ. ಇದು ಇತರರಿಗಿಂತ ಹೆಚ್ಚು. ಪ್ರಸ್ತುತ ನಡಾಲ್ 59 ಮತ್ತು ಫೆಡರರ್ 54 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ