Carlos Alcaraz: ವಿರಾಟ್ ಕೊಹ್ಲಿ ಆಟಕ್ಕೆ ಕಾರ್ಲೊಸ್ ಅಲ್ಕರಾಜ್ ಹೋಲಿಕೆ; ವೈರಲ್ ಆಯ್ತು ವಿಡಿಯೋ
Jul 31, 2023 01:14 PM IST
ಕಾರ್ಲೊಸ್ ಅಲ್ಕರಾಜ್ ಮತ್ತು ವಿರಾಟ್ ಕೊಹ್ಲಿ
- Carlos Alcaraz and Virat Kohli: ವಿಂಬಲ್ಕಾಡನ್ ವಿಜೇತ ಟೆನ್ನಿಸ್ ಆಟಗಾರ ಅಲ್ಕರಾಜ್ ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಸಿರುವ ವಿಡಿಯೋ ವೈರಲ್ ಆಗಿದೆ.
ಭಾನುವಾರ ನಡೆದ ಪ್ರತಿಷ್ಠಿತ ವಿಂಬಲ್ಡನ್ (Wimbledon 2023 ಟೆನ್ನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ಪೇನ್‌ನ ಯುವ ಟೆನ್ನಿಸ್ ಆಟಗಾರ ಕಾರ್ಲೊಸ್ ಅಲ್ಕರಾಜ್ (Carlos Alcaraz), ನೊವಾಕ್ ಜೊಕೊವಿಕ್ (Novak Djokovic) ಸೋಲಿಸಿದರು. ಐದು ಸೆಟ್‌ಗಳ ರೋಚಕ ಪಂದ್ಯದಲ್ಲಿ 23 ಬಾರಿ ಗ್ರ್ಯಾಂಡ್ ಸ್ಲಾಮ್ ಗೆದ್ದಿರುವ ಬಲಿಷ್ಠ ಹಾಗೂ ಅನುಭವಿ ಆಟಗಾರ ಜೊಕೊವಿಕ್ ಮಣಿಸುವ ಮೂಲಕ ಚೊಚ್ಚಲ ವಿಂಬಲ್ಡನ್ ಟ್ರೋಫಿಯನ್ನು ಅಲ್ಕರಾಜ್ ತಮ್ಮದಾಗಿಸಿಕೊಂಡರು.
ವಯಸ್ಸಿನಲ್ಲಿ ಕಿರಿಯಾನಾದರೂ, ಅಲ್ಕರಾಜ್ ಆಟದ ವೈಖರಿ, ಹೊಡೆತಗಳ ಆಯ್ಕೆಯಿಂದ ಜಾಗತಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚಾಣಾಕ್ಷ ಹೊಡೆತಗಳಿಂದ ತಮ್ಮ ಎದುರಾಳಿಯನ್ನು ಅಚ್ಚರಿಯ ರೀತಿಯಲ್ಲಿ ಸೋಲಿಸುವ ಸಾಮರ್ಥ್ಯ ಮೈಗೂಡಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿಗೆ ಅಲ್ಕರಾಜ್ ಹೋಲಿಕೆಯ ಹಳೆಯ ವಿಡಿಯೋ ವೈರಲ್
ಪಂದ್ಯದ ಕುರಿತು ಕಾಮೆಂಟೇಟರ್ ಒಬ್ಬರು ಅಲ್ಕರಾಜ್ ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಸಿರುವ ಹಳೆಯ ವಿಡಿಯೋ ಇದೀಗ ವೈರಲ್ ಆಗಿದೆ. ಇದೇ ವೇಳೆ ಖ್ಯಾತ ಬಾಸ್ಕೆಟ್ ಆಟಗಾರ ಮೈಕೆಲ್ ಜೋರ್ಡಾನ್ ಆಟಕ್ಕೂ ಹೋಲಿಕೆ ಮಾಡಿದ್ದಾರೆ. ಅಲ್ಕರಾಜ್ ಆಟವನ್ನು ನೋಡುವಾಗ "ಇದು ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅಥವಾ ಮೈಕೆಲ್ ಜೋರ್ಡಾನ್ ಅವರನ್ನು ನೋಡಿದಂತಾಗುತ್ತದೆ" ಎಂದು ಕಾಮೆಂಟೇಟರ್ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು.
20ರ ಹರೆಯದ ಯುವಕ ಅಲ್ಕರಾಜ್ ಸಾಧಿಸಿದ ಅಮೋಘ ವಿಜಯವನ್ನು ವಿಶ್ವವೇ ಸಂಭ್ರಮಿಸುತ್ತಿದೆ. ಇದೇ ವೇಳೆ ಮಣ್ಣಿನ ಕೋರ್ಟ್‌ನಲ್ಲಿ ಆಡಿದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಹೆಸರನ್ನು ಕಾಮೆಂಟೇಟರ್‌ಗಳು ಉಲ್ಲೇಖಿಸಿದ್ದಾರೆ. ಇದು ಅಲ್ಕಾರಾಜ್ ಮತ್ತು ಸ್ಟೆಫಾನೋಸ್ ಸಿಟ್ಸಿಪಾಸ್ ನಡುವಿನ ಪಂದ್ಯದ ವಿಡಿಯೋ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ 75 ಶತಕಗಳನ್ನು ಸಿಡಿಸಿರುವ ವಿರಾಟ್ ಕೊಹ್ಲಿ, ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ಎಂದೇ ಕರೆಸಿಕೊಳ್ಳುತ್ತಾರೆ. ಇದದುವರೆಗೆ 25461 ರನ್ ಗಳಿಸಿರುವ ಅವರು, ಇನ್ನೂ ಹಲವಾರು ಸಾಧನೆಗಳನ್ನು ಮಾಡುವ ಅಂಛಿನಲ್ಲಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿಯೂ ಕೊಹ್ಲಿ ಆರನೇ ಸ್ಥಾನದಲ್ಲಿದ್ದಾರೆ.
ಕಳೆದ ವರ್ಷ ಯುಎಸ್ ಓಪನ್ ಗೆದ್ದಿದ್ದ ಅಲ್ಕಾರಾಜ್, ಮೊದಲ ಗ್ರ್ಯಾಂಡ್ ಸ್ಲಾಮ್ ಕಿರೀಟ ಒಲಿಸಿಕೊಂಡಿದ್ದರು. ಇದೀಗ ಚೊಚ್ಚಲ ಚಿಂಬಲ್ಡನ್ ಟ್ರೋಫಿ ಗೆಲ್ಲುವ ಮೂಲಕ ಎರಡನೇ ಗ್ರ್ಯಾಂಡ್ ಸ್ಲಾಮ್ ಗೆದ್ದ ಸಾಧನೆ ಮಾಡಿದ್ದಾರೆ. ಈ ಬಾರಿಯ ವಿಂಬಲ್ಡನ್ ಫೈನಲ್‌ನಲ್ಲಿ, ಅನುಭವಿ ಜೊಕೊವಿಕ್ ವಿರುದ್ಧ ದಿಟ್ಟ ಹೋರಾಟ ನಡೆಸಿದ ಕಾರ್ಲೊಸ್ ಅಲ್ಕರಾಜ್, 1-6, 7-6 (6), 6-1, 3-6, 6-4ರ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು. ಒಟ್ಟು ಐದು ಸುತ್ತುಗಳಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಸುತ್ತಿನಲ್ಲಿ ಅಂತಿಮವಾಗಿ 6-4 ಅಂಕಗಳಿಂದ ಮೇಲುಗೈ ಸಾಧಿಸಿ, 3-2 ಸೆಟ್‌ಗಳಿಂದ ಗೆದ್ದರು. ಆ ಮೂಲಕ ಚೊಚ್ಚಲ ವಿಂಬಲ್ಡನ್ ಗೆದ್ದರೆ, ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿದರು.
ಮೊದಲ ಸೆಟ್‌ನಲ್ಲಿ 1-6 ಸೆಟ್‌ಗಳ ಹಿನ್ನಡೆ ಅನುಭವಿಸಿದ ಸ್ಪೇನ್ ಆಟಗಾರ ಅಲ್ಕರಾಜ್ ಎರಡನೇ ಸೆಟ್‌ನಲ್ಲಿ 7-6 ಸಮಬಲದ ಹೋರಾಟ ನೀಡಿದರು. ಬಳಿಕ ಮೂರನೇ ಸೆಟ್‌ನಲ್ಲಿ 6-1 ಸೆಟ್‌ಗಳಿಂದ ತಿರುಗೇಟು ನೀಡಿ ಮುನ್ನಡೆ ಪಡೆದುಕೊಂಡರು. ನಾಲ್ಕು ಸೆಟ್‌ನಲ್ಲಿ 3-6 ಹಾಗೂ ಅಂತಿಮ ಸೆಟ್‌ನಲ್ಲಿ 6-4ರ ಮುನ್ನಡೆ ಪಡೆದು ಜಯಭೇರಿ ಬಾರಿಸಿದರು. ಸೆರ್ಬಿಯಾದ ಟೆನಿಸ್ ತಾರೆಯನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟರು.