ಯುಎಸ್ ಓಪನ್ ಸೆಮಿಫೈನಲ್ ಲಗ್ಗೆ ಇಟ್ಟ ರೋಹನ್ ಬೋಪಣ್ಣ-ಎಬ್ಡೆನ್ ಜೋಡಿ
Dec 22, 2023 06:08 PM IST
ರೋಹನ್ ಬೋಪಣ್ಣ, ಮ್ಯಾಥ್ಯೂ ಎಬ್ಡೆನ್
- US Open 2023: ಸೆಮಿಫೈನಲ್ ಪಂದ್ಯದಲ್ಲಿ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿಯು ಫ್ರೆಂಚ್ ಜೋಡಿಯಾದ ಪಿಯರೆ-ಹ್ಯೂಸ್ ಹರ್ಬರ್ಟ್ ಮತ್ತು ನಿಕೋಲಸ್ ಮಹುತ್ ಅವರನ್ನು ಎದುರಿಸಲಿದ್ದಾರೆ.
ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ (Rohan Bopanna and Matthew Ebden) ಜೋಡಿಯು ಯುಎಸ್ ಓಪನ್ (US Open 2023) ಪುರುಷರ ಡಬಲ್ಸ್ನಲ್ಲಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಅಮೆರಿಕದ ನಥಾನಿಯಲ್ ಲ್ಯಾಮನ್ಸ್ ಮತ್ತು ಜಾಕ್ಸನ್ ವಿಥ್ರೊ ಜೋಡಿಯನ್ನು ಸೋಲಿಸಿದ ಈ ಜೋಡಿ, ಈ ವರ್ಷದ ಗ್ರ್ಯಾಂಡ್ ಸ್ಲಾಮ್ಗಳಲ್ಲಿ ಎರಡನೇ ಬಾರಿ ಸೆಮೀಸ್ ಹಂತ ಪ್ರವೇಶಿಸಿದ ಸಾಧನೆ ಮಾಡಿದರು.
ವಿಶ್ವದ ಆರನೇ ಶ್ರೇಯಾಂಕದ ಇಂಡೋ-ಆಸ್ಟ್ರೇಲಿಯನ್ ಜೋಡಿಯು, ಯುಎಸ್ ಓಪನ್ ರೋಚಕ ಕ್ವಾರ್ಟರ್ಫೈನಲ್ ಕದನದಲ್ಲಿ ಆತಿಥೇಯ ಅಮೆರಿಕದ ಜೋಡಿಯನ್ನು 7-6 (10) 6-1ರ ನೇರ ಸೆಟ್ಗಳಿಂದ ಸೋಲಿಸಿದರು.
ಬೋಪಣ್ಣ ಮತ್ತು ಎಬ್ಡೆನ್, ಇತ್ತೀಚೆಗೆ ಮುಗಿದ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ತಲುಪಿದ್ದರು. ಸೆಮಿಕದನದಲ್ಲಿ ಅವರು ವೆಸ್ಲಿ ಕೂಲ್ಹೋಫ್ ಮತ್ತು ನೀಲ್ ಸ್ಕುಪ್ಸ್ಕಿ ಜೋಡಿ ವಿರುದ್ಧ ಸೋತಿದ್ದರು. 43ರ ಹರೆಯದ ಕನ್ನಡಿಗ ಇದೀಗ ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಗ್ರ್ಯಾಂಡ್ ಸ್ಲಾಮ್ನಲ್ಲಿ ಪುರುಷರ ಡಬಲ್ಸ್ ವಿಭಾಗದ ಫೈನಲ್ನಲ್ಲಿ ಸ್ಥಾನ ಪಡೆಯುವ ಅವಕಾಶ ಪಡೆದಿದ್ದಾರೆ. 2010ರಲ್ಲಿ ಬೋಪಣ್ಣ ತಮ್ಮ ಮೊದಲ ಫೈನಲ್ನಲ್ಲಿ ಸ್ಪರ್ಧಿಸಿದ್ದರು. ಅದು ಕೂಡಾ ಯುಎಸ್ ಓಪನ್ನಲ್ಲಿಯೇ ಎನ್ನುವುದು ವಿಶೇಷ.
ಆರನೇ ಶ್ರೇಯಾಂಕ ಜೋಡಿ ಇದೀಗ ಸೆಮಿ ಫೈನಲ್ ಪಂದ್ಯದಲ್ಲಿ ಫ್ರೆಂಚ್ ಜೋಡಿಯಾದ ಪಿಯರೆ-ಹ್ಯೂಸ್ ಹರ್ಬರ್ಟ್ ಮತ್ತು ನಿಕೋಲಸ್ ಮಹುತ್ ಅವರನ್ನು ಎದುರಿಸಲಿದ್ದಾರೆ. ಬೋಪಣ್ಣ ಮಿಶ್ರ ಡಬಲ್ಸ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಇಂಡೋನೇಷ್ಯಾದ ಜೊತೆಗಾರ್ತಿ ಅಲ್ದಿಲಾ ಸುಟ್ಜಿಯಾಡಿ ಅವರೊಂದಿಗೆ ಎರಡನೇ ಸುತ್ತಿನ ಸೋಲು ಕಂಡ ಬೋಪಣ್ಣ, ಮಿಶ್ರ ಡಬಲ್ಸ್ನಲ್ಲಿ ಅವಕಾಶ ಕಳೆದುಕೊಂಡಿದ್ದಾರೆ.
ಅತ್ತ ಸ್ಟಾರ್ ಟೆನ್ನಿಸ್ ಆಟಗಾರ ನೊವಾಕ್ ಜೋಕೊವಿಕ್ ಕೂಡಾ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.