logo
ಕನ್ನಡ ಸುದ್ದಿ  /  ಕ್ರೀಡೆ  /  ಆಗ ದಿನಕ್ಕೆ 2-3 ಪೈನ್‌ ಕಿಲ್ಲರ್‌ ತಿನ್ನುತ್ತಿದ್ದೆ; ಯುಎಸ್ ಓಪನ್ ಫೈನಲ್ ಹಾದಿ ಕುರಿತು ಬೋಪಣ್ಣ ಮಾತು

ಆಗ ದಿನಕ್ಕೆ 2-3 ಪೈನ್‌ ಕಿಲ್ಲರ್‌ ತಿನ್ನುತ್ತಿದ್ದೆ; ಯುಎಸ್ ಓಪನ್ ಫೈನಲ್ ಹಾದಿ ಕುರಿತು ಬೋಪಣ್ಣ ಮಾತು

Jayaraj HT Kannada

Sep 08, 2023 06:18 PM IST

google News

ರೋಹನ್ ಬೋಪಣ್ಣ

    • Rohan Bopanna US Open 2023: ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿ ಯುಎಸ್​​ ಓಪನ್​​ ಫೈನಲ್ ಪ್ರವೇಶಿಸಿದ್ದಾರೆ. ವರ್ಷಗಳ ಹಿಂದೆ ನಿವೃತ್ತಿಯ ಯೋಚನೆಯಲ್ಲಿದ್ದ ಬೋಪಣ್ಣ, ಇದೀಗ ತಮ್ಮ ಟೆನ್ನಿಸ್‌ ಜರ್ನಿಯ ಕುರಿತು ಮಾತನಾಡಿದ್ದಾರೆ.
ರೋಹನ್ ಬೋಪಣ್ಣ
ರೋಹನ್ ಬೋಪಣ್ಣ (USA Today Sports)

ಯುಎಸ್‌ ಓಪನ್‌ (US Open) ಟೆನಿಸ್‌ ಟೂರ್ನಿಯಲ್ಲಿ ಭಾರತದ ರೋಹನ್ ಬೋಪಣ್ಣ (Rohan Bopanna) ಪುರುಷರ ಡಬಲ್ಸ್‌ನಲ್ಲಿ ಫೈನಲ್‌ ತಲುಪಿದ್ದಾರೆ. ತಮ್ಮ ಜೊತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ (Matthew Ebden) ಅವರೊಂದಿಂಗೆ ಯುಎಸ್ ಓಪನ್ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿರುವ ಕನ್ನಡಿಗ ಬೋಪಣ್ಣ, ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ

ಅಮೆರಿಕದ ಲೂಯಿಸ್ ಆರ್ಮ್‌ಸ್ಟ್ರಾಂಗ್ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಬೋಪಣ್ಣ ಮತ್ತು ಎಬ್ಡೆನ್ ಜೋಡಿಯು 7-6 (7-3), 6-2 ಸೆಟ್‌ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿದರು. ಪಿಯರೆ-ಹ್ಯೂಸ್ ಹರ್ಬರ್ಟ್ ಮತ್ತು ನಿಕೋಲಸ್ ಮಹುತ್ ಜೋಡಿಯನ್ನು ಸೋಲಿಸಿದ ಅವರು, ಫೈನಲ್‌ ಪಂದ್ಯದಲ್ಲಿ ರಾಜೀವ್ ರಾಮ್ ಮತ್ತು ಜೋ ಸಾಲಿಸ್ಬರಿ ವಿರುದ್ಧ ಸೆಣಸಲಿದ್ದಾರೆ

“ದೇಹ ಈಗ ಆಟಕ್ಕೆ ಸ್ಪಂದಿಸುತ್ತಿಲ್ಲ. ನನ್ನ ಎರಡೂ ಮೊಣಕಾಲುಗಳಲ್ಲಿ ಕಾರ್ಟಿಲೆಜ್(ಕೀಲುಗಳು ಮತ್ತು ಮೂಳೆಗಳನ್ನು ರಕ್ಷಿಸುವ ಅಂಗಾಂಶ) ಇಲ್ಲ. 2019ರಲ್ಲಿ ನಾನು ದಿನಕ್ಕೆ ಎರಡು ಅಥವಾ ಮೂರು ನೋವು ನಿವಾರಕ (painkillers) ಮಾತ್ರೆಗಳನ್ನು ಸೇವಿಸುತ್ತಿದ್ದೆ. 2020ರಲ್ಲಿ ನಾನು ಅಯ್ಯಂಗಾರ್ ಯೋಗ ಅಭ್ಯಾಸ ಮಾಡಲು ಆರಂಭಿಸಿದೆ. ಆ ಬಳಿಕ ನಿಜಕ್ಕೂ ಒಂದು ದೊಡ್ಡ ವ್ಯತ್ಯಾಸವನ್ನು ಕಂಡುಕೊಂಡೆ. ಅಂದು ದಿನಕ್ಕೆ ಎರಡು ಅಥವಾ ಮೂರು ಪೇನ್‌ ಕಿಲ್ಲರ್‌ ತಿನ್ನುತ್ತಿದ್ದ ನಾನು ಈಗ ಔಷಧ ಇಲ್ಲದೆ ಆಡುತ್ತಿದ್ದೇನೆ. ಈಗೀಗ ದಿನಕ್ಕೆ ಎರಡು ಪಂದ್ಯಗಳನ್ನು ಆಡುವುದರಿಂದ ಮಾತ್ರ ನಾನು ಕೆಲವೊಮ್ಮೆ ಉರಿಯೂತ ನಿವಾರಕವನ್ನು ತೆಗೆದುಕೊಳ್ಳುತ್ತೇನೆ ಎಂದು ನಾನು ಭಾವಿಸುತ್ತೇನೆ. ಅಂಥಾ ಸಮಯದಲ್ಲಿ ನನ್ನ ದೇಹ ನನ್ನನ್ನು ಎಚ್ಚರಿಸುತ್ತದೆ. ‘ಹಲೋ, ದಯವಿಟ್ಟು ಆಟ ಕಡಿಮೆ ಮಾಡು, ನಿನ್ನ ಕಾಲುಗಳಲ್ಲಿ ಕಾರ್ಟಿಲೆಜ್ ಇಲ್ಲ, ಎಂದು ದೇಹ ಹೇಳುತ್ತದೆ,” ಎಂದು ಬೋಪಣ್ಣ ಸುದ್ದಿಸಂಸ್ಥೆ (ATPTour.com) ಜೊತೆಗೆ ಹೇಳಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಬೋಪಣ್ಣ ಅಯ್ಯಂಗಾರ್ ಯೋಗ ವನ್ನು ಅಭ್ಯಾಸ ಮಾಡಿದ್ದರು. ಆ ಆಸಕ್ತಿಯನ್ನು ಬೆಳೆಸಿಕೊಂಡು, ವಾರಕ್ಕೆ ನಾಲ್ಕು ಬಾರಿ 90 ನಿಮಿಷಗಳ ಕಾಲ ಅಭ್ಯಾಸ ಮಾಡುತ್ತಿದ್ದರು. “ಯೋಗಾಭ್ಯಾಸ ನಿಜವಾಗಿಯೂ ನನ್ನಲ್ಲಿ ಬದಲಾವಣೆ ಮಾಡಿದೆ. ಅಭ್ಯಾಸದ ಬಳಿಕ ನಾನು ಆಟವಾಡಲು ಪ್ರಾರಂಭಿಸಿದಾಗ ನಾನು ನೋವಿನಿಂದ ಮುಕ್ತನಾಗಿದ್ದೆ” ಎಂದು ಬೋಪಣ್ಣ ವಿವರಿಸಿದ್ದಾರೆ.

ಬೋಪಣ್ಣ ತನ್ನ ವೃತ್ತಿಜೀವನದಲ್ಲಿ ಮಿಶ್ರ ಡಬಲ್ಸ್​​ನಲ್ಲಿ ಏಕೈಕ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು 2017ರಲ್ಲಿ ನಡೆದ ಫ್ರೆಂಚ್ ಓಪನ್‌ನಲ್ಲಿ ಗೆದ್ದಿದ್ದರು. ಕೆನಡಾದ ಗೇಬ್ರಿಯೆಲಾ ದಬ್ರೊವ್ಸ್ಕಿ ಅವರ ಜೊತೆಗಾರರಾಗಿದ್ದರು. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್​​ನಲ್ಲಿ ಮಿಶ್ರ ಡಬಲ್ಸ್ ಫೈನಲ್‌ಗೆ ತಲುಪಿದ್ದರು. ಆದರೆ, ಸಹ ಆಟಗಾರ್ತಿ ಸಾನಿಯಾ ಮಿರ್ಜಾ ಅವರೊಂದಿಗೆ ರನ್ನರ್​ ಅಪ್ ಸ್ಥಾನ ಪಡೆದರು. ಆ ಟೂರ್ನಿಯ ನಂತರ ಸಾನಿಯಾ ನಿವೃತ್ತರಾದರು. ರೋಹಣ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿಯು ಫೈನಲ್​ನಲ್ಲಿ ಅಮೆರಿಕದ ರಾಜೀವ್ ರಾಮ್ ಮತ್ತು ಬ್ರಿಟಿಷ್ ಆಟಗಾರ ಜೋ ಸಾಲಿಸ್ಬರಿ ಜೋಡಿಯನ್ನು ಎದುರಿಸಲಿದೆ. ಇಂದು ರಾತ್ರಿ (ಸೆಪ್ಟೆಂಬರ್ 8) 9.45ಕ್ಕೆ ಈ ಪಂದ್ಯ ನಡೆಯಲಿದೆ.

ತಮ್ಮ ಪೀಳಿಗೆಯ ಬಹುತೇಕ ಆಟಗಾರರು ನಿವೃತ್ತರಾಗಿದ್ದರೂ, ಬೋಪಣ್ಣ ಮಾತ್ರ 43 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನದ ಅತಿದೊಡ್ಡ ಪ್ರಶಸ್ತಿಗಾಗಿ ಹೋರಾಡಲು ಸಿದ್ಧರಾಗಿದ್ದಾರೆ. ಇದು ಅವರು ಬದ್ಧತೆಯ ಪ್ರತೀಕ. 2021ರಲ್ಲಿ ನಿವೃತ್ತಿ ಬಗೆಗೆ ಯೋಚಿಸಿದ್ದ ಅವರು, ಮತ್ತೆ ಮೈದಾನಕ್ಕಿಳಿಯುವ ಸಂಕಲ್ಪ ಮಾಡಿದ್ದರು. ಇದೀಗ ಯುಎಸ್‌ ಓಪನ್‌ ಯಶಸ್ಸಿನ ಬಳಿಕ‌ ಬೋಪಣ್ಣ ಮುಂದೆ ನಿವೃತ್ತಿಯ ನಿರ್ಧಾರಕ್ಕೆ ಬಂದರೂ ಅಚ್ಚರಿ ಇಲ್ಲ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ