logo
ಕನ್ನಡ ಸುದ್ದಿ  /  ಕ್ರೀಡೆ  /  Umesh Yadav Record: ನಿನ್ನೆ ಬ್ಯಾಟಿಂಗ್‌ನಲ್ಲಿ, ಇಂದು ಬೌಲಿಂಗ್‌ನಲ್ಲಿ; ತವರಿನಲ್ಲಿ ವಿಶೇಷ ಸಾಧನೆ ಮಾಡಿದ ವಿದರ್ಭ ಎಕ್ಸ್‌ಪ್ರೆಸ್

Umesh Yadav record: ನಿನ್ನೆ ಬ್ಯಾಟಿಂಗ್‌ನಲ್ಲಿ, ಇಂದು ಬೌಲಿಂಗ್‌ನಲ್ಲಿ; ತವರಿನಲ್ಲಿ ವಿಶೇಷ ಸಾಧನೆ ಮಾಡಿದ ವಿದರ್ಭ ಎಕ್ಸ್‌ಪ್ರೆಸ್

HT Kannada Desk HT Kannada

Mar 02, 2023 04:28 PM IST

google News

ಉಮೇಶ್‌ ಯಾದವ್

    • ಉಮೇಶ್ 72ನೇ ಓವರ್‌ನಲ್ಲಿ 21 ರನ್ ಗಳಿಸಿ ಆಡುತ್ತಿದ್ದ ಕ್ಯಾಮರೂನ್ ಗ್ರೀನ್ ಅವರನ್ನು ಲೆಗ್ ಬಿಫೋರ್-ವಿಕೆಟ್‌ಗೆ ಬಲೆಗೆ ಬೀಳಿಸಿದರು. ಆ ಬಳಿಕ ಆಸೀಸ್‌ ವೇಗಿ ಮಿಚೆಲ್ ಸ್ಟಾರ್ಕ್ ಅವರ ವಿಕೆಟ್‌ ಹಾರಿಸುವ ಮೂಲ ಎರಡನೇ ವಿಕೆಟ್‌ ಪಡೆದರು. ಅದರ ಬೆನ್ನಲ್ಲೇ ಟಾಡ್ ಮರ್ಫಿ ಅವರನ್ನು ಕೂಡಾ ಕ್ಲೀನ್‌ ಬೌಲ್ಡ್‌ ಮಾಡಿದರು.
ಉಮೇಶ್‌ ಯಾದವ್
ಉಮೇಶ್‌ ಯಾದವ್ (ANI)

ಇಂದೋರ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ನ ಮೊದಲ ದಿನದಂದು, ವೇಗಿ ಉಮೇಶ್‌ ಯಾದವ್‌ ದಾಖಲೆಯೊಂದನ್ನು ನಿರ್ಮಿಸಿದ್ದರು. ಸಿಕ್ಸರ್‌ ಸಿಡಿಸುವಲ್ಲಿ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದ ಉಮೇಶ್‌, ಇಂದು ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ಕಾಂಗರೂಗಳ ವಿರುದ್ಧದ ಮೂರನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 9ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಉಮೇಶ್ ಯಾದವ್, ಭರ್ಜರಿ 2 ಸಿಕ್ಸರ್‌ ಹಾಗೂ 1 ಫೋರ್‌ ಸಹಿತ 17 ರನ್​ ಸಿಡಿಸಿದ್ದರು. ಆ ಎರಡು ಸಿಕ್ಸರ್‌ನೊಂದಿಗೆ ಅವರು ಟೆಸ್ಟ್​ ಕ್ರಿಕೆಟ್‌ನಲ್ಲಿ ಒಟ್ಟು 24 ಸಿಕ್ಸರ್‌​ಗಳನ್ನು ಪೂರೈಸಿದ್ದಾರೆ. ಆ ಮೂಲಕ ಅವರು ಕಿಂಗ್‌ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದರು. ಅಲ್ಲದೆ ರವಿ ಶಾಸ್ತ್ರಿಯನ್ನು ಅವರನ್ನು ಆ ಪಟ್ಟಿಯಲ್ಲಿ ಹಿಂದಿಕ್ಕಿದ್ದರು.

ನಿನ್ನೆ ಬ್ಯಾಟಿಂಗ್‌ನಲ್ಲಿ ದಾಖಲೆ ನಿರ್ಮಿಸಿದ್ದ ವಿದರ್ಭ ಎಕ್ಸ್‌ಪ್ರೆಸ್‌, ಇಂದು ಬೌಲಿಂಗ್‌ನಲ್ಲಿ ದಾಖಲೆ ಮಾಡಿದ್ದಾರೆ. ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್‌ನ ಎರಡನೇ ದಿನದಂದು ಉಮೇಶ್ ಯಾದವ್, ಈ ದಾಖಲೆ ಬರೆದಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್‌ನಲ್ಲಿ ಮೊಹಮ್ಮದ್ ಶಮಿ ಬದಲಿಗೆ ಕಣಕ್ಕಿಳಿದ ಉಮೇಶ್, ಐದು ಓವರ್‌ಗಳಲ್ಲಿ 12 ರನ್‌ ಬಿಟ್ಟುಕೊಟ್ಟು ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ದೊಡ್ಡ ಮೊತ್ತ ಗಳಿಸುವ ಆಸ್ಟ್ರೇಲಿಯಾ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. ಕಾಂಗರೂ ಬಳಗದ ಪ್ರಮುಖ ಮೂರು ವಿಕೆಟ್‌ ಕಿತ್ತ ಉಮೇಶ್‌, 197 ರನ್‌ಗಳಿಗೆ ಕಾಂಗರೂ ಇನ್ನಿಂಗ್ಸ್‌ಗೆ ಬ್ರೇಕ್‌ ಹಾಕಿದರು. ಅಲ್ಲದೆ ಆಸೀಸ್‌ನ ಮೊದಲ ಇನ್ನಿಂಗ್ಸ್ ಮುನ್ನಡೆಯನ್ನು 88ಕ್ಕೆ ನಿರ್ಬಂಧಿಸಿದರು.

ಉಮೇಶ್ ಯಾದವ್ ಮತ್ತು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜೊತೆಗೂಡಿ, ಇಂದು ಆಸ್ಟ್ರೇಲಿಯನ್ ಬ್ಯಾಟಿಂಗ್‌ ಲೈನಪ್‌ಗೆ ಶಾಕ್‌ ಕೊಟ್ಟರು. 2 ನೇ ದಿನದ ಮೊದಲ ಸೆಷನ್‌ನಲ್ಲಿ ಒಂದು ಹಂತದಲ್ಲಿ 186 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಆಸೀಸ್‌, ಆ ಬಳಿಕ 197 ರನ್‌ ಗಳಿಸುವಷ್ಟರಲ್ಲಿ ಆಲೌಟ್‌ ಆಯ್ತು.

ಉಮೇಶ್ 72ನೇ ಓವರ್‌ನಲ್ಲಿ 21 ರನ್ ಗಳಿಸಿ ಆಡುತ್ತಿದ್ದ ಕ್ಯಾಮರೂನ್ ಗ್ರೀನ್ ಅವರನ್ನು ಲೆಗ್ ಬಿಫೋರ್-ವಿಕೆಟ್‌ಗೆ ಬಲೆಗೆ ಬೀಳಿಸಿದರು. ಆ ಬಳಿಕ ಆಸೀಸ್‌ ವೇಗಿ ಮಿಚೆಲ್ ಸ್ಟಾರ್ಕ್ ಅವರ ವಿಕೆಟ್‌ ಹಾರಿಸುವ ಮೂಲ ಎರಡನೇ ವಿಕೆಟ್‌ ಪಡೆದರು. ಅದರ ಬೆನ್ನಲ್ಲೇ ಟಾಡ್ ಮರ್ಫಿ ಅವರನ್ನು ಕೂಡಾ ಕ್ಲೀನ್‌ ಬೌಲ್ಡ್‌ ಮಾಡಿದರು.

ಸ್ಟಾರ್ಕ್ ವಿಕೆಟ್‌ ಪಡೆಯುವುದರೊಂದಿಗೆ, ಉಮೇಶ್ ಭಾರತದಲ್ಲಿ ತಮ್ಮ 100ನೇ ಟೆಸ್ಟ್ ವಿಕೆಟ್ ಪಡೆದರು. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮೈಲಿಗಲ್ಲು ಸಾಧಿಸಿದ ದೇಶದ ಐದನೇ ವೇಗದ ಬೌಲರ್ ಎನಿಸಿಕೊಂಡರು. ಭಾರತದ ಮಾಜಿ ನಾಯಕ ಕಪಿಲ್ ದೇವ್ ಭಾರತದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಪಿಲ್ 219 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ರೆ, ನಂತರದ ಸ್ಥಾನದಲ್ಲಿ ಜಾವಗಲ್ ಶ್ರೀನಾಥ್ (108), ಜಹೀರ್ ಖಾನ್ (104) ಮತ್ತು ಇಶಾಂತ್ ಶರ್ಮಾ (104) ಇದ್ದಾರೆ.

ಭಾರತೀಯ ಮೈದಾನಗಳು ಸ್ಪಿನ್ ಬೌಲರ್‌ಗಳಿಗೆ ಹೆಚ್ಚಿನ ಮಟ್ಟದಲ್ಲಿ ನೆರವಾಗುತ್ತವೆ. ಹೀಗಾಗಿ ಇಲ್ಲಿ ಮೇಲುಗೈ ಸಾಧಿಸುವವರು ಸ್ಪಿನ್ನರ್‌ಗಳು ಮಾತ್ರ ಎಂದೇ ಹೇಳಲಾಗುತ್ತದೆ. ಹೀಗಾಗಿ ವೇಗದ ಬೌಲರ್‌ಗಳು ಅಂತಹ ಮೇಲ್ಮೈಗಳಲ್ಲಿ 100ಕ್ಕಿಂತ ಹೆಚ್ಚು ಟೆಸ್ಟ್ ವಿಕೆಟ್‌ಗಳ್ನು ಪಡೆಯುವುದು ದೊಡ್ಡ ಸಾಧನೆಯಾಗಿದೆ.

ಉಮೇಶ್ ಈಗ ಭಾರತದ ಪರ 107 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 29.74 ಸರಾಸರಿಯಲ್ಲಿ 237 ವಿಕೆಟ್‌ಗಳನ್ನು ಪಡೆದಿದ್ದಾರೆ. 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 88 ರನ್‌ ಬಿಟ್ಟುಕೊಟ್ಟು 6 ವಿಕೆಟ್‌ ಪಡೆದರುವುದು ಅವರ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನವಾಗಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ