ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್; ನೀರಜ್ ಚೋಪ್ರಾ ಜಾವೆಲಿನ್ ಫೈನಲ್ ಲೈವ್ ಸ್ಟ್ರೀಮಿಂಗ್ ವಿವರ ಹೀಗಿದೆ
Aug 27, 2023 02:46 PM IST
ನೀರಜ್ ಚೋಪ್ರಾ
- World Athletics Championship 2023: ನೀರಜ್ ಚೋಪ್ರಾ ಮಾತ್ರವಲ್ಲದೆ ಭಾರತದ ಡಿಪಿ ಮನು ಮತ್ತು ಕಿಶೋರ್ ಜೆನಾ ಕೂಡಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (World Athletics Championship) ಭಾರತದ ಅಥ್ಲೀಟ್‌ಗಳು ಭರವಸೆ ಮೂಡಿಸಿದ್ದಾರೆ. ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ (Neeraj Chopra), ಚಿನ್ನಕ್ಕೆ ಮುತ್ತಿಡುವ ಕಾತರದಲ್ಲಿದ್ದಾರೆ. ಪುರುಷರ ಜಾವೆಲಿನ್ ಥ್ರೋನಲ್ಲಿ ಅಂತಿಮ ಸುತ್ತಿಗೆ ಪ್ರವೇಶಿಸಿರುವ ನೀರಜ್, ತಮ್ಮ ವೃತ್ತಿ ಜೀವನದ ಮೊದಲ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಬಂಗಾರದ ನಿರೀಕ್ಷೆಯಲ್ಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಇನ್ನೊಂದು ಹೆಜ್ಜೆಯಷ್ಟೇ ಬಾಕಿ ಉಳಿದಿದೆ.
ಅರ್ಹತಾ ಸುತ್ತಿನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ 88.77 ಮೀಟರ್ ದೂರಕ್ಕೆ ಜಾವೆಲಿನ್ ಎಸೆದ ನೀರಜ್, ನೇರವಾಗಿ ಅಂತಿಮ ಸುತ್ತಿಗೆ ಅರ್ಹತೆ ಪಡೆದರು. ಇದೇ ವೇಳೆ ಪ್ಯಾರಿಸ್ ಒಲಿಂಪಿಕ್ಸ್‌ಗೂ ಅರ್ಹತೆ ಗಿಟ್ಟಿಸಿಕೊಂಡರು. ಇಂದು (ಭಾನುವಾರ, ಆಗಸ್ಟ್ 28) ಭಾರತದ ಜಾವೆಲಿನ್ ತಾರೆಯ ಫೈನಲ್ಸ್ ನಡೆಯುತ್ತಿದ್ದು, ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಸ್ವರ್ಣ ಗೆದ್ದರುವ ಅಥ್ಲೀಟ್, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮೊದಲ ಚಿನ್ನವನ್ನು ತಮ್ಮ ಬತ್ತಳಿಕೆಗೆ ಸೇರಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.
ಫೈನಲ್‌ನಲ್ಲಿ ಭಾರತದ ಮೂವರು
ನೀರಜ್ ಮಾತ್ರವಲ್ಲದೆ ಭಾರತದ ಇನ್ನಿಬ್ಬರು ಕಣದಲ್ಲಿದ್ದಾರೆ. ಅವರೇ ಡಿಪಿ ಮನು (81.31 ಮೀ) ಮತ್ತು ಕಿಶೋರ್ ಜೆನಾ (80.55 ಮೀ). ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ವೈಯಕ್ತಿಕ ಸ್ಪರ್ಧೆಯ ಫೈನಲ್‌ಗೆ ಮೂವರು ಭಾರತೀಯರು ಅರ್ಹತೆ ಪಡೆದಿರುವುದು ಇದೇ ಮೊದಲು.
ಪಾಕಿಸ್ತಾನದ ಎದುರಾಳಿ
ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಮತ್ತು ಜರ್ಮನಿಯ ಜೂಲಿಯನ್ ವೆಬರ್ ಅವರು ಅಂತಿಮ ಸುತ್ತಿನಲ್ಲಿ ನೀರಜ್ ಅವರ ಪ್ರಮುಖ ಸ್ಪರ್ಧಿಗಳು. ಇದೇ ವೇಳೆ ಪಾಕಿಸ್ತಾನದ ಅರ್ಷದ್ ನದೀಮ್ ಕೂಡಾ ಚಿನ್ನಕ್ಕಾಗಿ ಚೋಪ್ರಾ ಅವರೊಂದಿಗಿನ ಪೈಪೋಟಿಗಿಳಿಯಲಿದ್ದಾರೆ. ಈ ಹಿಂದೆ 90 ಮೀಟರ್ ಗಡಿ ದಾಟಿರುವ ನದೀಮ್, 86.79 ಮೀಟರ್ ಎಸೆದು ನೀರಜ್ ನಂತರ ಎರಡನೇ ಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. 26 ವರ್ಷದ ಪಾಕಿಸ್ತಾನಿ ಅಥ್ಲೀಟ್, ಇದೇ ವರ್ಷದ ಜೂನ್ ತಿಂಗಳಲ್ಲಿ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದಾದ ಬಳಿಕ ಯಾವುದೇ ಉನ್ನತ ಸ್ಪರ್ಧೆಯಲ್ಲಿ ಭಾಗವಹಿಸದೆ ನೇರವಾಗಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಈವೆಂಟ್‌ಗಳು ಯಾವ ಸಮಯಕ್ಕೆ ಪ್ರಾರಂಭವಾಗುತ್ತವೆ?
ಪುರುಷರ ಜಾವೆಲಿನ್ ಥ್ರೋ ಫೈನಲ್ ಆಗಸ್ಟ್ 27ರಂದು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11:45ಕ್ಕೆ ನಡೆಯಲಿದೆ. ಇದರಲ್ಲಿ ನೀರಜ್ ಚೋಪ್ರಾ, ಡಿಪಿ ಮನು, ಕಿಶೋರ್ ಜೆನಾ ಭಾಗವಹಿಸಲಿದ್ದಾರೆ.
ಸ್ಟೀಪಲ್‌ಚೇಸ್ ಫೈನಲ್ ಆಗಸ್ಟ್ 28ರಂದು ಮಧ್ಯರಾತ್ರಿ 12:35ಕ್ಕೆ ಪ್ರಾರಂಭವಾಗುತ್ತದೆ. ಆ ಬಳಿಕ ಪುರುಷರ ರಿಲೇ ಫೈನಲ್ 1:07ಕ್ಕೆ ನಡೆಯಲಿದೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 9ನೇ ದಿನದ ಈವೆಂಟ್ ವೀಕ್ಷಿಸುವುದು ಹೇಗೆ?
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 9ನೇ ದಿನದ ಈವೆಂಟ್‌ಗಳನ್ನು ಸ್ಪೋರ್ಟ್ಸ್ 18ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದೇ ವೇಳೆ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.