Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ಮಾತ್ರವಲ್ಲ, ಈ ವಸ್ತುಗಳನ್ನು ಕೂಡಾ ಖರೀದಿಸಿ ತರಬಹುದು
Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಅಥವಾ ಬೆಳ್ಳಿಯನ್ನು ಮನೆಗೆ ತಂದರೆ ಶುಭ ಎಂಬ ನಂಬಿಕೆ ಇದೆ. ಆದರೆ ಅದನ್ನು ಖರೀದಿಸಲು ಶಕ್ತಿ ಇಲ್ಲದವರು ಬೇರೆ ವಸ್ತುಗಳನ್ನು ಕೂಡಾ ಮನೆಗೆ ತರಬಹುದು. ಜೊತೆಗೆ ಆ ದಿನ ದಾನ ಧರ್ಮ ಮಾಡುವುದರಿಂದ ಕೂಡಾ ಬಹಳ ಪುಣ್ಯ ಪ್ರಾಪ್ತಿಯಾಗುತ್ತದೆ.
ಅಕ್ಷಯ ತೃತೀಯವು ಪ್ರತಿ ಹಿಂದೂಗಳಿಗೆ ಬಹಳ ಪ್ರಮುಖವಾದುದು. ಆ ದಿನ ಬಸವ ಜಯಂತಿ ಕೂಡಾ ಆಚರಿಸಲಾಗುತ್ತದೆ. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಿದರೆ ಮನೆಗೆ ಶುಭ. ಆ ದಿನ ಚಿನ್ನವನ್ನು ಖರೀದಿಸಿದರೆ ಮನೆಯಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಚಿನ್ನ ಖರೀದಿಸಲಾಗದವರು ಆ ದಿನ ಬೆಳ್ಳಿಯನ್ನೂ ಖರೀದಿಸಬಹುದು. ಅಥವಾ ಹೂಡಿಕೆ ಮಾಡಬಹುದು.
ಶ್ರೀಮಂತರು ಚಿನ್ನ ಅಥವಾ ಬೆಳ್ಳಿ ಖರೀದಿಸುತ್ತಾರೆ. ಬಡವರಿಗೆ ಚಿನ್ನ ಖರೀದಿಸಬೇಕೆಂದರೂ ಸಾಧ್ಯವಾಗದು. ಆದರೆ ಅಕ್ಷಯ ತೃತೀಯದಂದು ನೀವು ಮನೆಗೆ ಚಿನ್ನ ಅಥವಾ ಬೆಳ್ಳಿಯ ವಸ್ತುಗಳನ್ನೇ ಖರೀದಿಸಬೇಕೆಂಬ ನಿಯಮವಿಲ್ಲ. ಅಕ್ಷಯ ತೃತೀಯದಂದು ನೀವು ಈ ವಸ್ತುಗಳನ್ನು ಕೂಡಾ ಮನೆಗೆ ತರಬಹುದು.
ಚಿನ್ನ, ಬೆಳ್ಳಿ ದಾನ ಮಾಡಿದರೆ ಶುಭ
ಮೊದಲೇ ಹೇಳಿದಂತೆ ಅಕ್ಷಯ ತೃತೀಯದಂದು ಚಿನ್ನ ಅಥವಾ ಬೆಳ್ಳಿಯನ್ನು ಮನೆಗೆ ತಂದರೆ ಶುಭ. ಆದರೆ ನೀವು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಚಿನ್ನವನ್ನು ಖರೀದಿಸಿ ಅದನ್ನು ಖರೀದಿಸಲು ಸಾಧ್ಯವಾಗದವರಿಗೆ ದಾನ ಮಾಡಬಹುದು.
ಹೂಡಿಕೆ ಮಾಡುವುದು
ಚಿನ್ನ, ಬೆಳ್ಳಿ ಖರೀದಿಸಲು ಇಷ್ಟವಿಲ್ಲದೆ ಇರುವವರು ರಿಯಲ್ ಎಸ್ಟೇಟ್ ಅಥವಾ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಬಹುದು. ಅಕ್ಷಯ ತೃತೀಯ ಬಹಳ ಮಂಗಳವಾದದ್ದು. ಆದ್ದರಿಂದ ಈ ದಿನ ನಾವು ಯಾವುದರ ಮೇಲೆ ಹೂಡಿಕೆ ಮಾಡಿದರೂ ಭವಿಷ್ಯದಲ್ಲಿ ಉತ್ತಮ ಲಾಭ ತರುತ್ತದೆ ಎಂಬ ನಂಬಿಕೆ ಇದೆ.
ಷೇರುಗಳಲ್ಲಿ ಹೂಡಿಕೆ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಇಂದು ಷೇರುಗಳನ್ನು ಖರೀದಿಸಿದರೆ, ಭವಿಷ್ಯದಲ್ಲಿ ಅವು ಗಮನಾರ್ಹವಾಗಿ ಹೆಚ್ಚಾಗುತ್ತವೆ ಎಂದು ನಂಬುತ್ತಾರೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಭವಿಷ್ಯದಲ್ಲಿ ಲಾಭವನ್ನು ತರುತ್ತದೆ.
ಜ್ಞಾನದ ವಸ್ತುಗಳು
ಅಕ್ಷಯ ತೃತೀಯದಂದು ಚಿನ್ನ, ಬೆಳ್ಳಿ ಮಾತ್ರವಲ್ಲದೆ ನಿಮ್ಮ ಜ್ಞಾನವನ್ನು ವೃದ್ಧಿಸುವ ಪುಸ್ತಕಗಳು, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಖರೀದಿಸಲು ಉತ್ತಮ ದಿನವೆಂದು ಪರಿಗಣಿಸಲಾಗಿದೆ.
ವಾಹನಗಳನ್ನು ಖರೀದಿಸಬಹುದು
ಅಕ್ಷಯ ತೃತೀಯದಂದು ನೀವು ವಾಹನವನ್ನು ಕೂಡಾ ಖರೀದಿ ಮಾಡಬಹುದು. ನೀವು ಮೊದಲೇ ವಾಹನವನ್ನು ಬುಕ್ ಮಾಡಿ, ಅಕ್ಷಯ ತೃತೀಯದಂದು ಮನೆಗೆ ತಂದರೆ ಶುಭ. ಈ ದಿನ ತಿಥಿ, ನಕ್ಷತ್ರ, ವರ್ಜ್ಯಂ, ದುರ್ಮುಹೂರ್ತ, ರಾಹುಕಾಲ, ಯಮಗಂಡ ಕಾಲ ಯಾವುದೂ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ. ನಿಮ್ಮ ನಕ್ಷತ್ರದ ಪ್ರಕಾರ ಶುಭ ದಿನವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವ ಅಗತ್ಯವಿಲ್ಲ. ಕೃಷಿಗೆ ಬಳಸುವ ವಿಶೇಷವಾಗಿ ಟ್ರಾಕ್ಟರ್ ಮತ್ತು ಇತರ ಉಪಕರಣಗಳನ್ನು ಖರೀದಿಸಲು ಇದಕ್ಕಿಂತ ಉತ್ತಮ ಸಮಯವಿಲ್ಲ.
ಹೊಸ ಬಟ್ಟೆಗಳು
ಸಾಮಾನ್ಯವಾಗಿ ಹಬ್ಬದ ದಿನದಂದು ಹೊಸ ಬಟ್ಟೆಗಳನ್ನು ಖರೀದಿಸಲಾಗುತ್ತದೆ. ಈ ದಿನ ಕೇವಲ ಹೊಸ ಬಟ್ಟೆ ಖರೀದಿಸಿ ತರುವುದು ಮಾತ್ರವಲ್ಲ, ಹೊಸ ಬಟ್ಟೆಗಳನ್ನು ಖರೀದಿಸಿ ಅದನ್ನು ದಾನವನ್ನಾಗಿ ಕೂಡಾ ನೀಡಬಹುದು.
ದಾನ ಮಾಡುವುದು ಎಲ್ಲಕ್ಕಿಂತ ಶುಭ
ಪ್ರಮುಖ ವಿಷಯವೆಂದರೆ, ಅಕ್ಷಯ ತೃತೀಯ ದಿನದಂದು ನೀವು ಅಗತ್ಯ ವಸ್ತುಗಳನ್ನು ಮನೆಗೆ ತರುವುದಕ್ಕಿಂತ, ಬಡವರಿಗೆ ಬೇಕಾದ ವಸ್ತುಗಳನ್ನು ದಾನ ಮಾಡಿದರೆ ಅದಕ್ಕಿಂತ ಪುಣ್ಯ ಮತ್ತೊಂದಿಲ್ಲ. ಬಟ್ಟೆ, ಹೊದ್ದುಕೊಳ್ಳಲು ಬೆಡ್‌ಶೀಟ್, ಚಪ್ಪಲಿ, ಛತ್ರಿ, ಹಾಲು, ಊಟ ಸೇರಿದಂತೆ ಆಹಾರ ಧಾನ್ಯಗಳನ್ನು ದಾನ ಮಾಡಿದರೆ ಅದಕ್ಕಿಂತ ಶ್ರೇಷ್ಠವಾದುದು ಮತ್ತೊಂದಿಲ್ಲ.
ಬೆಳ್ಳಿ ಪಾತ್ರೆಗಳು
ಚಿನ್ನದೊಂದಿಗೆ ಬೆಳ್ಳಿಯ ವಸ್ತುಗಳನ್ನು ಖರೀದಿಸುವುದು ಸಹ ಒಳ್ಳೆಯದು. ನೀವು ಬೆಳ್ಳಿಯ ಪಾತ್ರೆಗಳು ಮತ್ತು ಬೆಳ್ಳಿಯ ಲ್ಯಾಂಪ್‌ಶೇಡ್‌ಗಳನ್ನು ಖರೀದಿಸಬಹುದು ಮತ್ತು ಅವುಗಳನ್ನು ನಿಮ್ಮ ಆಪ್ತರಿಗೆ ಉಡುಗೊರೆಯಾಗಿ ನೀಡಬಹುದು. ಕೆಲವರು ಬೆಳ್ಳಿ ಹಸುವನ್ನು ತಂದು ಮನೆಯಲ್ಲಿ ಪೂಜಾ ಮಂದಿರದಲ್ಲಿಟ್ಟು ಪೂಜೆ ಮಾಡುತ್ತಾರೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.