Dhanishta Nakshatra: ಸವಾಲೆನಿಸುವ ಕೆಲಸಗಳೇ ಇಷ್ಟ, ದುಡುಕಿ ಮಾತನಾಡುವ ಸ್ವಭಾವ; ಧನಿಷ್ಠ ನಕ್ಷತ್ರದವರ ಗುಣ ಲಕ್ಷಣ ಇಂತಿದೆ
ಧನಿಷ್ಠ ನಕ್ಷತ್ರದವರು ತಾವು ಕಷ್ಟದಲ್ಲಿದ್ದರೂ ಅವಶ್ಯಕತೆ ಇದ್ದವರಿಗೆ ಸಹಾಯ ಮಾಡುತ್ತಾರೆ. ಸಂಗೀತ ಮತ್ತು ಹಾಡುಗಾರಿಕೆ ಎಂದರೆ ಪಂಚಪ್ರಾಣ. ಸಮಯದ ಮೌಲ್ಯ ಅರಿತಿರುವುದರಿಂದ ಯಾವುದಾದರೂ ಒಂದು ಕೆಲಸ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ.
ಧನಿಷ್ಠ ನಕ್ಷತ್ರದ ದೇವತೆ ವಸು. ಕುಜ, ಈ ನಕ್ಷತ್ರದ ಅಧಿಪತಿ. ಆದ್ದರಿಂದ ದಶಾಕಾಲವು 7 ವರ್ಷ ಆಗುತ್ತದೆ. ಈ ನಕ್ಷತ್ರದ ಮೊದಲ ಎರಡು ಪಾದಗಳು ಮಕರದಲ್ಲಿಯೂ ಉಳಿದ ಎರಡು ಪಾದಗಳು ಕುಂಭದಲ್ಲಿಯೂ ಬರುತ್ತವೆ. ಜ್ಯೋತಿಷ್ಯದಲ್ಲಿ ವಿದ್ಯೆ ಮತ್ತು ಬುದ್ಧಿಯನ್ನು ಸೂಚಿಸುವ ಗ್ರಹಗಳು ಬುಧ ಹಾಗೂ ಗುರು. ಧನಿಷ್ಠ ನಕ್ಷತ್ರದಲ್ಲಿ ಬುಧನ ಜನನವಾಗಿದೆ. ಸಾಮಾನ್ಯವಾಗಿ ಬುಧನು ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತಾನೆ. ಈ ಕಾರಣದಿಂದಾಗಿ ಈ ನಕ್ಷತ್ರದಲ್ಲಿ ಜನಿಸಿದವರಿಗೂ ಸಹ ವಿಶೇಷ ಬುದ್ಧಿಶಕ್ತಿ ಇರುತ್ತದೆ.
ದುಡುಕಿ ಮಾತನಾಡುವ ಸ್ವಭಾವ
ಮಕರ ರಾಶಿಯಲ್ಲಿ ಜನಿಸಿದವರಿಗೆ ತಾಂತ್ರಿಕ ಪರಿಣಿತಿ ಉತ್ತಮವಾಗಿರುತ್ತದೆ. ಯೋಚನಾ ಶಕ್ತಿ ವಿಶೇಷವಾಗಿರುತ್ತದೆ. ಯಾವುದೇ ಕೆಲಸ ಕಾರ್ಯಗಳಾದರೂ ವಿಶೇಷ ಆಸಕ್ತಿಯಿಂದ ಪೂರೈಸುತ್ತಾರೆ. ಇವರಿಗೆ ಸವಾಲು ಎನಿಸುವ ಕೆಲಸ ಕಾರ್ಯಗಳೇ ಇಷ್ಟವೆನಿಸುತ್ತದೆ. ಸಾಹಸ ಮತ್ತು ಅಪಾಯದ ಕೆಲಸ ಕಾರ್ಯಗಳು ಮನಸ್ಸನ್ನು ಸೆಳೆಯುತ್ತದೆ. ಇವರ ಒಂದೇ ಒಂದು ನಿರ್ಧಾರ ಜೀವನದ ಹಾದಿಯನ್ನು ಬದಲಿಸುತ್ತದೆ. ದುಡುಕಿ ಮಾತನಾಡುವ ಕಾರಣ ಆತ್ಮೀಯರ ವಿರೋಧ ಎದುರಿಸಬೇಕಾಗುತ್ತದೆ.
ಇವರು ಸಂಬಂಧಗಳನ್ನು ನಂಬುವುದಿಲ್ಲ. ಅದರಲ್ಲೂ ದೂರದ ಸಂಬಂಧಿಗಳಿಂದ ಸಾಧ್ಯವಾದಷ್ಟು ದೂರ ಇರಲು ಬಯಸಬಹುದು. ಜೀವನ ನಿರ್ವಹಣೆಗೆ ಯಾವುದೇ ಕೆಲಸ ಮಾಡಲು ಹಿಂಜರಿಯುವುದಿಲ್ಲ. ಇವರಿಗೆ ದೇವರ ಬಗ್ಗೆ ಭಕ್ತಿ ಕಡಿಮೆ ಆದರೆ ಭಯ ಹೆಚ್ಚಾಗಿರುತ್ತದೆ. ಚಿಕ್ಕಪುಟ್ಟ ಮೋಸ ಕೂಡಾ ಮಾಡಲಾರರು. ಬಿಡುವಾದ ಸಮಯದಲ್ಲಿ ಕಥೆ ಬರೆಯುವುದು, ಕವನ ರಚಿಸುವುದು, ನಾಟಕ ಆಡುವುದು ಇವರ ಹವ್ಯಾಸ. ಒಂದೇ ರೀತಿಯ ವೃತ್ತಿಯನ್ನು ಮಾಡದೆ ವೇಳೆ ಕಳಿಯಲೆಂದು ಸಣ್ಣದಾದ ವ್ಯಾಪಾರವನ್ನು ಮಾಡುವರು. ಕುಟುಂಬದವರು, ಸಹೋದ್ಯೋಗಿಗಳು ಎಲ್ಲರೂ ಇವರನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತಾರೆ.
ಬೇರೆಯವರಿಗೆ ಸಹಾಯ ಮಾಡುವ ಗುಣ
ತಾವು ಕಷ್ಟದಲ್ಲಿದ್ದರೂ ಅವಶ್ಯಕತೆ ಇದ್ದವರಿಗೆ ಸಹಾಯ ಮಾಡುತ್ತಾರೆ. ಸಂಗೀತ ಮತ್ತು ಹಾಡುಗಾರಿಕೆ ಎಂದರೆ ಪಂಚಪ್ರಾಣ. ಸಮಯದ ಮೌಲ್ಯ ಅರಿತಿರುವುದರಿಂದ ಯಾವುದಾದರೂ ಒಂದು ಕೆಲಸ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಒಡವೆ ವಸ್ತುಗಳ ಬಗ್ಗೆ ಹೆಚ್ಚಿನ ಆಸೆ ಇರುತ್ತದೆ. ಕಿರಿ ಸೋದರ ಅಥವಾ ಸೋದರಿಯ ಬಗ್ಗೆ ಹೆಚ್ಚಿನ ಪ್ರೀತಿ ಒಲವು ಇರುತ್ತದೆ. ಸಂಪಾದಿಸಿದ ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ. ಕಷ್ಟಪಟ್ಟು ದುಡಿಯುತ್ತಾರೆ. ದಾಂಪತ್ಯ ಜೀವನದಲ್ಲಿ ಅನಾವಶ್ಯಕ ವಾದ ವಿವಾದ ಇರುವ ಕಾರಣ ಬೇಸರವಿರುತ್ತದೆ. ಇವರಿಗೆ ಕೋಪ ಬಂದಷ್ಟೇ ಬೇಗನೆ ತಣ್ಣಗಾಗುತ್ತದೆ.
ಸಣ್ಣಪುಟ್ಟ ಹೋಟೆಲ್‌ಗಳಿಂದ ಉತ್ತಮ ಆದಾಯ ಗಳಿಸುತ್ತಾರೆ. ಬಳಸಿದ ವಾಹನಗಳನ್ನು ಮಾರಾಟ ಮಾಡುವುದು ಇವರ ಹವ್ಯಾಸವಾಗಿರುತ್ತದೆ. ಕುಟುಂಬದ ಸದಸ್ಯರ ಜೊತೆ ಪಾಲುಗಾರಿಕೆಯ ವ್ಯಾಪಾರ ಹೆಚ್ಚಿನ ಲಾಭ ನೀಡುತ್ತದೆ. ಕುಟುಂಬದ ಒಳಗೂ ಹೊರಗಿನ ಸಮಾಜದಲ್ಲಿಯೂ ಗೌರವ ಸ್ಥಾನಮಾನ ದೊರೆಯುತ್ತದೆ. ರಾಜಕೀಯದಲ್ಲಿ ಆಸಕ್ತಿ ಇಲ್ಲದೆ ಹೋದರೂ ಜನಸೇವೆಯಲ್ಲಿ ಸದಾ ಮುಂದಾಳತ್ವ ವಹಿಸುತ್ತಾರೆ. ವಂಶದ ಆಸ್ತಿ ಬೇರೆಯವರ ಪಾಲಾಗುವ ಸಾಧ್ಯತೆ ಇದೆ. ಸ್ವಂತ ಮನೆ ಕಟ್ಟಿಸುವ ಆಸೆ ಇದ್ದರೂ ಆಸಕ್ತಿ ವಹಿಸುವುದಿಲ್ಲ. ಮಕ್ಕಳ ಮೇಲೆ ವಿಶೇಷ ವ್ಯಾಮೋಹ ಇರುತ್ತದೆ. ಶಿಕ್ಷಕರಾಗಿ ಸೇವೆ ಸಲ್ಲಿಸಿದಲ್ಲಿ ಹೆಚ್ಚಿನ ಗೌರವಕ್ಕೆ ಪಾತ್ರರಾಗುತ್ತಾರೆ.
ಶೀತದ ತೊಂದರೆಯಿಂದ ಬಳಲುತ್ತಾರೆ
ಸಾರಿಗೆ ವ್ಯವಸ್ಥೆ ಕಲ್ಪಿಸುವ ಸ್ವಂತ ಸಂಸ್ಥೆ ಆರಂಭಿಸಿದಲ್ಲಿ ಆದಾಯಕ್ಕೆ ಕೊರತೆ ಕಂಡುಬರದು. ಆತ್ಮೀಯರೊಂದಿಗೆ ಅನಾವಶ್ಯಕ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಶೀತದ ತೊಂದರೆ ಬಹಳ ಕಾಡುತ್ತದೆ. ಬೇರೆಯವರಿಗೆ ಸಾಲ ನೀಡುವುದು ಅಥವಾ ಬೇರೆಯವರಿಂದ ಸಾಲ ಪಡೆಯುವುದು ಇವರಿಗೆ ಇಷ್ಟವಾಗದ ವಿಚಾರ. ಹಳೆಯ ಮನೆಯನ್ನು ನವೀಕರಿಸುವಲ್ಲಿ ನಿರತರಾಗುತ್ತಾರೆ. ಪಾರುಗಾರಿಕೆ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಉದ್ಯೋಗಕ್ಕಾಗಿ ಅಥವಾ ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ.