ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕ ವಾಪಸ್‌ ನೀಡಿದ ಶಿಕ್ಷಣ ಸಂಸ್ಥೆಗಳು; ಸರಕಾರ ನಿಗದಿಪಡಿಸಿದ ಫೀಸ್‌ನಲ್ಲೇ ವಿದ್ಯಾರ್ಥಿಗಳ ದಾಖಲಾತಿ
ಕನ್ನಡ ಸುದ್ದಿ  /  ಕರ್ನಾಟಕ  /  ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕ ವಾಪಸ್‌ ನೀಡಿದ ಶಿಕ್ಷಣ ಸಂಸ್ಥೆಗಳು; ಸರಕಾರ ನಿಗದಿಪಡಿಸಿದ ಫೀಸ್‌ನಲ್ಲೇ ವಿದ್ಯಾರ್ಥಿಗಳ ದಾಖಲಾತಿ

ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕ ವಾಪಸ್‌ ನೀಡಿದ ಶಿಕ್ಷಣ ಸಂಸ್ಥೆಗಳು; ಸರಕಾರ ನಿಗದಿಪಡಿಸಿದ ಫೀಸ್‌ನಲ್ಲೇ ವಿದ್ಯಾರ್ಥಿಗಳ ದಾಖಲಾತಿ

ಶುಲ್ಕ ನಿಯಂತ್ರಣ ಸಮಿತಿಯು (ಎಫ್‌ಆರ್‌ಸಿ) ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಬಳಿಕ ವಿವಿಧ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಪಡೆದಿರುವ ಶುಲ್ಕವನ್ನು ವಾಪಸ್‌ ಮಾಡಲು ಆರಂಭಿಸಿವೆ.

ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕ ವಾಪಸ್‌ ನೀಡಿದ ಶಿಕ್ಷಣ ಸಂಸ್ಥೆಗಳು
ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕ ವಾಪಸ್‌ ನೀಡಿದ ಶಿಕ್ಷಣ ಸಂಸ್ಥೆಗಳು

ಬೆಂಗಳೂರು: ತಮ್ಮ ಕಾಲೇಜುಗಳಿಗೆ ಸೇರುವ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಪಡೆದಿರುವ ಶಿಕ್ಷಣ ಸಂಸ್ಥೆಗಳು ಇದೀಗ ಹೆಚ್ಚುವರಿ ಶುಲ್ಕವನ್ನು ವಿದ್ಯಾರ್ಥಿಗಳಿಗೆ ವಾಪಸ್‌ ನೀಡಲು ಆರಂಭಿಸಿವೆ. ಸರಕಾರ ನಿಗದಿಪಡಿಸಿದ ಶುಲ್ಕದಲ್ಲಿಯೇ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿವೆ. ಶುಲ್ಕ ನಿಯಂತ್ರಣ ಸಮಿತಿಯು (ಎಫ್‌ಆರ್‌ಸಿ) ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಬಳಿಕ ವಿವಿಧ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಪಡೆದಿರುವ ಶುಲ್ಕವನ್ನು ವಾಪಸ್‌ ಮಾಡಲು ಆರಂಭಿಸಿವೆ.

ವಿವಿಧ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ದಾಖಲೆ ಪಡೆದ 25 ವಿದ್ಯಾರ್ಥಿಗಳು ಶುಲ್ಕ ನಿಯಂತ್ರಣ ಸಮಿತಿಗೆ ದೂರು ಸಲ್ಲಿಸಿದ್ದರು. ಸರಕಾರ ನಿಗದಿಪಡಿಸಿದ ಶುಲ್ಕವನ್ನೇ ವಿಧಿಸಭೇಕೆಂದು ಸಮಿತಿಯು ಶಿಕ್ಷಣ ಸಮಿತಿಗಳಿಗೆ ತಿಳಿಸಿತ್ತು. ಹೆಚ್ಚುವರಿ ಶುಲ್ಕ ಪಡೆದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಇದೀಗ ಡಾಕ್ಟರ್‌ ಅಂಬೇಡ್ಕರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯು ವಿದ್ಯಾರ್ಥಿಯಿಂದ ಕಾಮೆಡ್‌ ಕೆ ಸೀಟ್‌ಗಾಗಿ ಹೆಚ್ಚುವರಿ ಪಡೆದ 2.12 ಲಕ್ಷ ರೂಪಾಯಿಯನ್ನು ವಾಪಸ್‌ ನೀಡಿದೆ. ಆರಂಭದಲ್ಲಿ ಈ ವಿದ್ಯಾರ್ಥಿಗೆ ಶುಲ್ಕ ಹಿಂತುರುಗಿಸಲು ಶಿಕ್ಷಣ ಸಂಸ್ಥೆ ನಿರಾಕರಿಸಿತ್ತು. ಶುಲ್ಕ ನಿಯಂತ್ರಣ ಸಂಸ್ಥೆಯ ಮಧ್ಯಸ್ಥಿಕೆ ಬಳಿಕ ಶುಲ್ಕ ಹಿಂತುರುಗಿಸಿದೆ ಎಂದು ಎಫ್‌ಆರ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ರೀತಿ ಟಿ ಜಾನ್‌ ಕಾಲೇಜ್‌ ಆಫ್‌ ಫಾರ್ಮಸಿಯು ವಿದ್ಯಾರ್ಥಿಯೊಬ್ಬನಿಂದ 2022-23ನೇ ಶೈಕ್ಷಣಿಕ ವರ್ಷದಲ್ಲಿ ಬಿಫಾರ್ಮಾ ಹೆಚ್ಚುವರಿ ತರಬೇತಿ ಹೆಸರಲ್ಲಿ 50 ಸಾವಿರ ರೂಪಾಯಿ ಪಡೆದಿತ್ತು. ಶುಲ್ಕ ನಿಯಂತ್ರಣ ಸಮಿತಿ ಮಧ್ಯ ಪ್ರವೇಶದ ಬಳಿಕ ಈ ಶಿಕ್ಷಣ ಸಂಸ್ಥೆಯು ಈ ಶುಲ್ಕ ವಾಪಸ್‌ ನೀಡಿದೆ. ಇದೇ ರೀತಿ ಇನ್ನೂ ಇಬ್ಬರು ವಿದ್ಯಾರ್ಥಿಗಳಿಗೆ ರಿಫಂಡ್‌ ಮಾಡಲಾಗಿದೆ. ಇನ್ನುಳಿದ ಶಿಕ್ಷಣ ಸಂಸ್ಥೆಗಳು ಶುಲ್ಕ ವಾಪಸ್‌ ನೀಡುವ ಪ್ರಕ್ರಿಯೆಯಲ್ಲಿವೆ ಎಂದು ಸಮಿತಿ ತಿಳಿಸಿದೆ.

ಜಸ್ಟೀಸ್‌ ಬಿ ಶ್ರೀನಿವಾಸ ಗೌಡ ಮುಖ್ಯಸ್ಥರಾಗುವ ಎಫ್‌ಆರ್‌ಸಿಗೆ 25 ವಿದ್ಯಾರ್ಥಿಗಳು ಹೆಚ್ಚುವರಿ ಶುಲ್ಕ ಪಡೆದಿರುವ ಕುರಿತು ದೂರು ದಾಖಲಿಸಿದ್ದರು. ಎಂಬಿಎ, ಎಂಸಿಎ, ನರ್ಸಿಂಗ್‌ನಂತಹ ವೃತ್ತಿಪರ ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕ ಪಡೆದಿರುವ ಕುರಿತು ತನಿಖೆ ನಡೆಸಲಾಯಿತು. 55 ಸಾವಿರ ರೂಪಾಯಿಯಿಂದ 4 ಲಕ್ಷ ರೂಪಾಯಿವರೆಗೆ ವಿವಿಧ ವಿದ್ಯಾರ್ಥಿಗಳಿಂದ ಶುಲ್ಕ ಪಡೆದಿರುವ ಅಂಶ ಬೆಳಕಿಗೆ ಬಂದಿತ್ತು. ದೂರು ನೀಡಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಹೆಚ್ಚುವರಿ ಶುಲ್ಕವಿಲ್ಲದೆ ನಿಗದಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ನೀಡುವ ಭರವಸೆಯನ್ನೂ ಸಮಿತಿ ನೀಡಿತ್ತು.

"ಪ್ರೆಸಿಡೆನ್ಸಿ ಯೂನಿವರ್ಸಿಟಿ, ಏಮ್ಸ್‌ ಐಬಿಎಸ್‌ ಸ್ಕೂಲ್‌, ಆಚಾರ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌, ಆಕ್ಸ್‌ಫರ್ಡ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, ಬೃಂದಾವನ್‌ ಕಾಲೇಜ್‌ ಆಫ್‌ ಅಲಿಯೆನ್ಸ್‌ ಯೂನಿವರ್ಸಿಟಿ, ಐಎಫ್‌ಐಎಂ ಕಾಲೇಜ್‌, ಕ್ರಿಸ್ಟ್‌ ಅಕಾಡೆಮಿ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸಡ್‌ ಸ್ಟಡೀಸ್‌, ದಕ್ಷಾ ಫಸ್ಟ್‌ ಗ್ರೇಡ್‌ ಕಾಲೇಜ್‌, ಡಾನ್‌ ಬಾಸ್ಕೋ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಕಾಲೇಜುಗಳು ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಪಡೆಯಲು ಪ್ರಯತ್ನಿಸಿದ್ದವು. ಈ ಎಲ್ಲಾ ಶಿಕ್ಷಣ ಸಂಸ್ಥೆಗಳು ತಮ್ಮ ಹೆಚ್ಚುವರಿ ಶುಲ್ಕ ಬೇಡಿಕೆಯನ್ನು ವಾಪಸ್‌ ತೆಗೆದುಕೊಂಡಿವೆ" ಎಂದು ನ್ಯಾಯಮೂರ್ತಿ ಬಿ ಶ್ರೀನಿವಾಸ ಗೌಡ ತಿಳಿಸಿದ್ದಾರೆ.

Whats_app_banner