ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Hanuman Jayanti 2024: ಈ ವರ್ಷ ಹನುಮಾನ್‌ ಜಯಂತಿ ಆಚರಣೆ ಯಾವಾಗ; ವಾಯುಪುತ್ರನನ್ನು ಆರಾಧಿಸುವುದು ಹೇಗೆ?

Hanuman Jayanti 2024: ಈ ವರ್ಷ ಹನುಮಾನ್‌ ಜಯಂತಿ ಆಚರಣೆ ಯಾವಾಗ; ವಾಯುಪುತ್ರನನ್ನು ಆರಾಧಿಸುವುದು ಹೇಗೆ?

Hanuman Jayanti 2024: ಈ ಬಾರಿ ಏಪ್ರಿಲ್‌ 23 ರಂದು ಹನುಮಾನ್‌ ಜಯಂತಿ ಆಚರಿಸಲಾಗುತ್ತಿದೆ. ಅಂದು ಮಂಗಳವಾದ್ದರಿಂದ ಭಕ್ತರು ಈ ಭಾರಿ ಇನ್ನಷ್ಟು ಅದ್ಧೂರಿಯಾಗಿ ಹನುಮಾನ್‌ ಜಯಂತಿ ಆಚರಣೆಗೆ ಸನ್ನದ್ಧರಾಗಿದ್ದಾರೆ. ಆ ದಿನ ವಾಯುಪುತ್ರನನ್ನು ಹೇಗೆ ಪೂಜಿಸಬೇಕು? ಹೇಗೆ ಆರಾಧಿಸಬೇಕು ಎಂಬುದರ ವಿವರಣೆ ಇಲ್ಲಿದೆ.

2024 ಹನುಮಾನ್‌ ಜಯಂತಿ ದಿನಾಂಕ, ಸಮಯ
2024 ಹನುಮಾನ್‌ ಜಯಂತಿ ದಿನಾಂಕ, ಸಮಯ (PC: Unsplash)

ಹನುಮಾನ್ ಜಯಂತಿ 2024: ರಾಮನ ಗುಡಿ ಇಲ್ಲದ ಊರಿರಬಹುದು, ಆದರೆ ರಾಮಭಂಟ ಹನುಮನ ಊರು ಇಲ್ಲದ ಊರೇ ಇಲ್ಲ ಎನ್ನಬಹುದು. ರಾಮನನ್ನು ಭಕ್ತರು ಎಷ್ಟು ಆರಾಧಿಸುತ್ತಾರೋ ಹನುಮಂತನನ್ನು ಕೂಡಾ ಅಷ್ಟೇ ಆರಾಧಿಸುತ್ತಾರೆ. ಪ್ರತಿ ಮಂಗಳವಾರ ಹಾಗೂ ಬಹಳಷ್ಟು ಕಡೆ ಶನಿವಾರ ಹನುಮನನ್ನು ಆರಾಧಿಸುತ್ತಾರೆ. ಪ್ರತಿವರ್ಷ ಭಕ್ತರು ಹನುಮ ಜಯಂತಿಯನ್ನು ಆಚರಿಸುತ್ತಾರೆ.

ಈ ಬಾರಿ ಹನುಮ ಜಯಂತಿ ಆಚರಣೆ ಯಾವಾಗ?

ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯಂದು ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ, ಹನುಮ ಜಯಂತಿ ಏಪ್ರಿಲ್ 23, ಮಂಗಳವಾರ ಬರುತ್ತದೆ. ಹನುಮಂತನಿಗೆ ಇಷ್ಟವಾದ ದಿನ ಮಂಗಳವಾರ. ಆದ್ದರಿಂದ ಮಂಗಳವಾರ ಅಥವಾ ಶನಿವಾರ ಹನುಮ ಜಯಂತಿ ಬಂದರೆ ಅದರ ಮಹತ್ವ ಇನ್ನಷ್ಟು ಹೆಚ್ಚುತ್ತದೆ. ಹನುಮ ಜಯಂತಿಯಂದು ದೇಶಾದ್ಯಂತ ಆಂಜನೇಯ ಸ್ವಾಮಿ ದೇವಸ್ಥಾನಗಳನ್ನು ಕೇಸರಿ ಧ್ವಜದಿಂದ ಅಲಂಕರಿಸಲಾಗುತ್ತದೆ. ಆ ದಿನ ಭಕ್ತರು ಹನುಮಂತನು ಆಶೀರ್ವಾದಕ್ಕಾಗಿ ಸುಂದರಕಾಂಡವನ್ನು ಪಠಿಸುತ್ತಾರೆ. ರಾಮ ನಾಮವನ್ನು ಜಪಿಸಲಾಗುತ್ತಿದೆ. ದಾನ ಮಾಡಿ, ಉಪವಾಸ ಮಾಡಿ ಸುಂದರಕಾಂಡ ಪಠಿಸುತ್ತಾರೆ.

ಪಂಚಾಂಗದ ಪ್ರಕಾರ ಚೈತ್ರ ಪೌರ್ಣಮಿಯು ಏಪ್ರಿಲ್ 23 ರಂದು ಮುಂಜಾನೆ 3.25 ಕ್ಕೆ ಪ್ರಾರಂಭವಾಗಿ 24 ರಂದು ಬೆಳಗ್ಗೆ 5.18 ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದ ಏಪ್ರಿಲ್‌ 23ರಂದು ಹನುಮ ಜಯಂತಿ ಆಚರಿಸಲಾಗುವುದು. ಈ ಸಮಯದಲ್ಲಿ, ಚಂದ್ರನು ಕನ್ಯಾರಾಶಿಯಲ್ಲಿ ಮತ್ತು ಸೂರ್ಯನು ಮೇಷ ರಾಶಿಯಲ್ಲಿ ಸಾಗುತ್ತಾನೆ. ಹನುಮಂತನ ಕೃಪೆಯಿಂದ ಭಕ್ತರು ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತನಾಗುತ್ತಾರೆ. ಹನುಮನು , ಅಂಜನಿ ತಾಯಿಯ ಗರ್ಭದಿಂದ ಹುಟ್ಟಿದ್ದರಿಂದ ಆಂಜನೇಯ ಎಂದು ಕರೆಯುತ್ತಾರೆ.

ಎಲ್ಲರಿಗೂ ಕರ್ಮಫಲಗಳನ್ನು ನೀಡುವ ಶನಿಯು ಹನುಮಂತನಿಗೆ ಮಾತ್ರ ಯಾವುದೇ ತೊಂದರೆ ಮಾಡಲಿಲ್ಲ. ಆ ಕಾರಣದಿಂದಲೇ ಶನಿ ದೋಷ ಇರುವವರು ಹನುಮಂತನ ಆಶೀರ್ವಾದ ಪಡೆಯಲು ಹನುಮಾನ್ ಚಾಲೀಸವನ್ನು ಪಠಿಸುತ್ತಾರೆ. ಇದನ್ನು ಪಠಿಸುವುದರಿಂದ ಮನಸ್ಸಿನಲ್ಲಿರುವ ಎಲ್ಲಾ ಭಯಗಳು ದೂರವಾಗುತ್ತವೆ. ನೀವು ದುಷ್ಟಶಕ್ತಿಗಳಿಂದ ಪ್ರಭಾವಿತರಾಗುವುದಿಲ್ಲ. ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಬರುವುದಿಲ್ಲ. ಹಾಗೆಯೇ ಹನುಮಂತನ ಅನುಗ್ರಹಕ್ಕಾಗಿ ಸುಂದರಕಾಂಡವನ್ನು ಪಠಿಸಬೇಕು. ಆಂಜನೇಯ ಸ್ವಾಮಿಯ ಆಶೀರ್ವಾದಕ್ಕಾಗಿ ಶ್ರೀರಾಮನ ನಾಮಸ್ಮರಣೆ ಮಾಡುವುದು ಕೂಡಾ ಒಳ್ಳೆಯದು.

ಹನುಮ ಜಯಂತಿ ದಿನ ಭಕ್ತರು ಹೇಗೆ ಪೂಜಿಸಬೇಕು?

ಹನುಮ ಜಯಂತಿಯ ದಿನ ಸೂರ್ಯೋದಯಕ್ಕೆ ಮುನ್ನವೇ ಎದ್ದು ಸ್ನಾನ ಮಾಡಿ. ಅಂದು ಉಪವಾಸ ಮಾಡಬೇಕು. ಆ ದಿನ ಹಳದಿ ಅಥವಾ ಕೆಂಪು ಬಣ್ಣವನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹನುಮ ಜಯಂತಿಯ ದಿನ ಆಂಜನೇಯನ ಮೂರ್ತಿಗೆ ವೀಳ್ಯದೆಲೆಯನ್ನು ಅರ್ಪಿಸಬೇಕು. ಹಾಗೆಯೇ ವಿಗ್ರಹವನ್ನು ಸಿಂಧೂರದಿಂದ ಅಲಂಕರಿಸಬೇಕು. ಹನುಮಂತನಿಗೆ ಇಷ್ಟವಾದ ಬೆಲ್ಲ ಮತ್ತು ಬೇಳೆಯನ್ನು ನೈವೇದ್ಯವಾಗಿ ಅರ್ಪಿಸಬೇಕು. ಹನುಮಾನ್ ಚಾಲೀಸಾ ಪಠಿಸಬೇಕು. ಬಡವರಿಗೆ ಅನ್ನ, ವಸ್ತ್ರ, ಧನ ದಾನ ಮಾಡುವುದು ಒಳ್ಳೆಯದು. ಅಲ್ಲದೆ ಹನುಮಂತನ ಜಯಂತಿಯ ದಿನದಂದು ಗುಲಾಬಿ ಮಾಲೆ ಹಾಕುವುದರಿಂದ ಅವನ ಆಶೀರ್ವಾದ ದೊರೆಯುತ್ತದೆ. ಉದ್ಯೋಗ ಅಥವಾ ವ್ಯವಹಾರದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.

ವ್ಯಾಪಾರವನ್ನು ಸುಧಾರಿಸಲು ಮತ್ತು ನಷ್ಟವನ್ನು ತಪ್ಪಿಸಲು ಹನುಮ ಜಯಂತಿಯ ದಿನದಂದು ಕೇಸರಿ ಬಟ್ಟೆಯನ್ನು ಅರ್ಪಿಸಬೇಕು. ಅಲ್ಲದೆ ಆಂಜನೇಯಸ್ವಾಮಿ ದೇವಸ್ಥಾನವನ್ನು ಸ್ವಾಮಿಗೆ ಪ್ರಿಯವಾದ ಕೇಸರಿ ಬಣ್ಣದ ಬಾವುಟಗಳಿಂದ ಅಲಂಕರಿಸುವವರಿಗೆ ಕೂಡಾ ಹನುಮನ ಆಶೀರ್ವಾದ ಲಭಿಸುತ್ತದೆ. ಹಣಕಾಸಿನ ಸಮಸ್ಯೆಯಿಂದ ಹೊರ ಬರಲು ಸ್ವಸ್ತಿಕ್‌ ಚಿಹ್ನೆ ಬರೆದು ಹನುಮಂತನ ಮುಂದಿಟ್ಟು ಪೂಜಿಸಬೇಕು. ನಂತರ ಆ ಕಾಗದವನ್ನು ಮನೆಯಲ್ಲಿ ಒಂದೆಡೆ ಸುರಕ್ಷಿತವಾಗಿಟ್ಟರೆ ಹನುಮನ ಆಶೀರ್ವಾದದಿಂದ ಸಮಸ್ಯೆ ದೂರಾಗುತ್ತದೆ.