Saraswati Temple: ಕರ್ನಾಟಕದ ಶಾರದಾ ಪೀಠವೂ ಸೇರಿದಂತೆ ಭಾರತದಲ್ಲಿ ಸರಸ್ವತಿಗೆ ಮುಡುಪಾಗಿರುವ ಖ್ಯಾತ ದೇವಾಲಯಗಳಿವು-indian temples famous saraswati temples in india including karnataka sri sringeri sharada peetham rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Saraswati Temple: ಕರ್ನಾಟಕದ ಶಾರದಾ ಪೀಠವೂ ಸೇರಿದಂತೆ ಭಾರತದಲ್ಲಿ ಸರಸ್ವತಿಗೆ ಮುಡುಪಾಗಿರುವ ಖ್ಯಾತ ದೇವಾಲಯಗಳಿವು

Saraswati Temple: ಕರ್ನಾಟಕದ ಶಾರದಾ ಪೀಠವೂ ಸೇರಿದಂತೆ ಭಾರತದಲ್ಲಿ ಸರಸ್ವತಿಗೆ ಮುಡುಪಾಗಿರುವ ಖ್ಯಾತ ದೇವಾಲಯಗಳಿವು

Saraswati Temples in India: ಭಾರತದಲ್ಲಿ ಕರ್ನಾಟಕದ ಚಿಕ್ಕಮಗಳೂರಿನ ಶೃಂಗೇರಿ ಶಾರದಾ ಪೀಠ ಸೇರಿದಂತೆ 6 ದೇವಾಲಯಗಳು ಸರಸ್ವತಿಗೆ ಮುಡುಪಾಗಿವೆ. ಈ ದೇವಾಲಯಗಳು ತಮಿಳುನಾಡು, ರಾಜಸ್ಥಾನ, ಕೇರಳ, ಉತ್ತರಾಖಂಡದಲ್ಲಿವೆ. ಪ್ರತಿದಿನವೂ ವಿದ್ಯಾರ್ಥಿಗಳು, ಭಕ್ತರು ಈ ದೇವಾಲಯಗಳಿಗೆ ತೆರಳಿ ಶಾರದೆಯನ್ನು ವಿದ್ಯೆಗಾಗಿ ಪ್ರಾರ್ಥಿಸುತ್ತಾರೆ.

ಭಾರತದಲ್ಲಿರುವ ಪ್ರಮುಖ ಸರಸ್ವತಿ ದೇವಾಲಯಗಳು
ಭಾರತದಲ್ಲಿರುವ ಪ್ರಮುಖ ಸರಸ್ವತಿ ದೇವಾಲಯಗಳು

Saraswati Temples: ವಿದ್ಯೆಯ ಅಧಿದೇವತೆ ಸರಸ್ವತಿ. ಮಕ್ಕಳನ್ನು ಮೊದಲ ಬಾರಿಗೆ ಶಾಲೆಗೆ ಸೇರಿಸುವಾಗ ಪೋಷಕರು ಶಾಸ್ತ್ರೋಕ್ತವಾಗಿ ಅಕ್ಷರಾಭ್ಯಾಸ ಮಾಡಿಸಿ ಶಾರದೆಯ ಆಶೀರ್ವಾದ ಪಡೆಯುತ್ತಾರೆ. ಹಾಗೇ ಪ್ರತಿ ವರ್ಷ ಪರೀಕ್ಷೆ ಆರಂಭಕ್ಕೂ ಮುನ್ನ ತಾಯಿ ಸರಸ್ವತಿಗೆ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ವರ್ಷ ಫೆಬ್ರವರಿಯಲ್ಲಿ ವಸಂತ ಪಂಚಮಿ ಹಾಗೂ ದಸರಾ ಸಮಯದಲ್ಲಿ ಕೂಡಾ ಸರಸ್ವತಿ ಪೂಜೆ ಮಾಡಲಾಗುತ್ತದೆ.

ಭಾರತದಲ್ಲಿ ಸರಸ್ವತಿಗೆಂದೇ ಪ್ರತ್ಯೇಕ ದೇವಾಲಯಗಳಿವೆ. ಭಕ್ತರು ಪ್ರತಿದಿನ ಈ ದೇವಾಲಯಗಳಿಗೆ ಭೇಟಿ ನೀಡಿ ಶಾರದೆಯನ್ನು ಪೂಜಿಸುತ್ತಾರೆ. ವಿದ್ಯೆ ನೀಡುವಂತೆ ಬೇಡುತ್ತಾರೆ. ವಿಶೇಷ ಪೂಜೆ ಸಲ್ಲಿಸುತ್ತಾರೆ. ಹರಕೆ ಹೊರುತ್ತಾರೆ. ಭಾರತದಲ್ಲಿ 6 ಸರಸ್ವತಿ ದೇವಾಲಯಗಳು ಬಹಳ ಖ್ಯಾತಿ ಪಡೆದಿವೆ.

ಶಾರದಾ ಪೀಠ, ರಾಜಸ್ಥಾನ

ಪಿಲಾನಿಯಲ್ಲಿರುವ ಈ ದೇವಸ್ಥಾನ 20ನೇ ಶತಮಾನಕ್ಕೆ ಸೇರಿದೆ. ಜಿ.ಡಿ. ಬಿರ್ಲಾ ಕಟ್ಟಿಸಿದ ಈ ದೇವಾಲಯವು ಬಿರ್ಲಾ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ವಿದ್ಯಾ ವಿಹಾರ್‌ ಕ್ಯಾಂಪಸ್‌ನ ಹೃದಯಭಾಗದಲ್ಲಿದೆ. 1959 ರಲ್ಲಿ ನಿರ್ಮಿಸಲಾದ ವೈಭವಯುತವಾದ ಬಿಳಿ ಅಮೃತಶಿಲೆಯ ದೇವಾಲಯವು ನೋಡುಗರ ಕಣ್ಮನ ಸೆಳೆಯುತ್ತದೆ. ಇಂಡೋ-ಆರ್ಯನ್ ಶೈಲಿಯಲ್ಲಿ ಇದನ್ನು ಕಟ್ಟಲಾಗಿದೆ. ಈ ದೇವಾಲಯವು 70 ಕಂಬಗಳ ಮೇಲೆ ನಿಂತಿದೆ ಮತ್ತು ಗರ್ಭ ಗೃಹ, ಪ್ರದಕ್ಷಿಣಾ ಪಥ, ಅಂತರಾಳ, ಮಂಟಪ, ಮತ್ತು ಅರ್ಧ ಮಂಟಪದಂತಹ ವಿಭಾಗಗಳನ್ನು ಒಳಗೊಂಡಿದೆ. ಸುಮಾರು 25,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಈ ರಚನೆಯು 7 ಅಡಿ ಎತ್ತರದ ನೆಲಮಾಳಿಗೆಯ ಮೇಲೆ ನಿಂತಿದೆ ಮತ್ತು ರಾಜಸ್ಥಾನದ ಮಕ್ರಾನಾ ಮಾರ್ಬಲ್ ಅನ್ನು ಒಳಗೊಂಡಿದೆ. ಕ್ಯಾಂಪಸ್‌ನ ವಿದ್ಯಾರ್ಥಿಗಳು ಇಲ್ಲಿಗೆ ಪ್ರತಿದಿನ ಬರುತ್ತಾರೆ. ಜೊತೆಗೆ ಹೊರಗಿನಿಂದ ಕೂಡಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ದಕ್ಷಿಣ ಮೂಕಾಂಬಿಕಾ ದೇವಸ್ಥಾನ, ಕೇರಳ

ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಉತ್ತರ ಪರವೂರಿನಲ್ಲಿರುವ ದಕ್ಷಿಣ ಮೂಕಾಂಬಿಕಾ ದೇವಸ್ಥಾನವು ಗಣಪತಿ, ವಿಷ್ಣು, ಸುಬ್ರಹ್ಮಣ್ಯ, ಯಕ್ಷಿ, ಹನುಮಾನ್ ಮತ್ತು ವೀರಭದ್ರನಂತಹ ಉಪ ದೇವತೆಗಳನ್ನು ಒಳಗೊಂಡಿರುವ ಸರಸ್ವತಿ ದೇವಾಲಯವಾಗಿದೆ. ಕಮಲದ ಕೊಳದಿಂದ ಸುತ್ತುವರಿದ ಗರ್ಭಗುಡಿಯು ಯಕ್ಷಿಗೆ ಸಮರ್ಪಿತವಾದ ದೇವಾಲಯವನ್ನು ಹೊಂದಿದೆ. ದಂತಕಥೆಗಳ ಪ್ರಕಾರ, ಪರವೂರಿನ ದೊರೆ ಥಂಪೂರನ್‌, ಮೂಕಾಂಬಿಕಾ ದೇವಿಯ ಭಕ್ತನಾಗಿದ್ದು ಕನಸಿನಲ್ಲಿ ಬಂದು ಹೇಳಿದ ನಂತರ ಈ ದೇವಸ್ಥಾನ ಕಟ್ಟಿಸಿದನು ಎಂಬ ನಂಬಿಕೆ ಇದೆ. ನವರಾತ್ರಿಯಲ್ಲಿ ಇಲ್ಲಿ ಅದ್ಧೂರಿಯಾಗಿ ಪೂಜೆ ನೆರವೇರುತ್ತದೆ.

ಸಾವಿತ್ರಿ ದೇವಸ್ಥಾನ , ರಾಜಸ್ಥಾನ

ಪುಷ್ಕರ್‌ ಜಿಲ್ಲೆಯ ರತ್ನಗಿರಿ ಬೆಟ್ಟದ ಮೇಲಿರುವ ಸರಸ್ವತಿ ದೇವಸ್ಥಾನವನ್ನು ಸಾವಿತ್ರಿ ದೇವಸ್ಥಾನ ಎಂದೂ ಕರೆಯುತ್ತಾರೆ. ಅಜ್ಮೀರ್‌ನ ಪುಷ್ಕರ್‌ನಲ್ಲಿರುವ ಈ ಬೆಟ್ಟದ ಮೇಲಿನ ದೇವಾಲಯವು ಸುಮಾರು 750 ಅಡಿ ಎತ್ತರದಲ್ಲಿದೆ. ಇಲ್ಲಿಗೆ ಬರುವ ಭಕ್ತರು 970 ಮೆಟ್ಟಿಲುಗಳನ್ನು ಏರುವ ಮೂಲಕ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ಬರುತ್ತಾರೆ. ಸಾವಿತ್ರಿ ದೇವಾಲಯವು ಒಂದು ಪ್ರಮುಖ ಯಾತ್ರಾ ಸ್ಥಳವಾಗಿದೆ ಮತ್ತು ಭಾರತದ ಮಹತ್ವದ ದೇವಾಲಯಗಳಲ್ಲಿ ಒಂದಾಗಿದೆ. ಇದು ಬ್ರಹ್ಮದೇವನ ಪತ್ನಿಯರಾದ ಸಾವಿತ್ರಿ (ಸರಸ್ವತಿಯ ಮತ್ತೊಂದು ರೂಪ) ಮತ್ತು ಗಾಯತ್ರಿ ಇಬ್ಬರ ವಿಗ್ರಹಗಳನ್ನು ಹೊಂದಿದೆ.

ಸರಸ್ವತಿ ಮಾತೆ ದೇವಸ್ಥಾನ, ಉತ್ತರಾಖಂಡ

ಉತ್ತರಾಖಂಡದ ಬದರಿನಾಥ್‌ನಿಂದ 3 ಕಿಮೀ ದೂರದಲ್ಲಿರುವ ಚಮೋಲಿ ಜಿಲ್ಲೆಯ ಮನ ಗ್ರಾಮದ ಬಳಿ ನೆಲೆಸಿರುವ ಮಾತಾ ಸರಸ್ವತಿ ದೇವಸ್ಥಾನವು ವೇದಗಳು ಮತ್ತು ಧರ್ಮಗ್ರಂಥಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ, ಇದನ್ನು ಸರಸ್ವತಿ ದೇವಿಯ ಜನ್ಮಸ್ಥಳವೆಂದು ನಂಬಲಾಗಿದೆ. ಇಲ್ಲಿ ಹರಿಯುವ ನದಿಯು ಸರಸ್ವತಿಯ ದೈವಿಕ ಮೂಲವನ್ನು ಸಂಕೇತಿಸುತ್ತದೆ. ಮಹಾಭಾರತದ ಕಾಲದಲ್ಲಿ ಪಾಂಡವರು ಸ್ವರ್ಗವನ್ನು ತಲುಪಲು ಈ ಗ್ರಾಮದ ಮೂಲಕ ಹಾದುಹೋದರು ಎಂಬ ಪೌರಾಣಿಕ ನಂಬಿಕೆ ಇದೆ. ಅಷ್ಟೇ ಅಲ್ಲ, ಇದೇ ಸ್ಥಳದಲ್ಲಿ ಕುಳಿತು ವೇದವ್ಯಾಸರು ಮಹಾಭಾರತವನ್ನು ಗಣೇಶನಿಗೆ ವಿವರಿಸಿದರು ಎಂದು ನಂಬಲಾಗಿದೆ.

ಶ್ರೀ ಶಾರದಾಂಬಾ ದೇವಸ್ಥಾನ, ಕರ್ನಾಟಕ

ಭಾರತದಲ್ಲಿರುವ ಸರಸ್ವತಿ ದೇವಸ್ಥಾನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶಾರದಾ ಪೀಠ ಕೂಡಾ ಒಂದು. ತುಂಗಾ ನದಿಯ ತೀರದಲ್ಲಿರುವ ಈ ದೇವಸ್ಥಾನವು 8 ನೇ ಶತಮಾನದಲ್ಲಿ ಶ್ರೀ ಆದಿ ಶಂಕರಾಚಾರ್ಯರಿಂದ ಸ್ಥಾಪಿತವಾದ ದೇವಸ್ಥಾನ. ಸಂಸ್ಕೃತದಲ್ಲಿ ಶೃಂಗ ಗಿರಿ ಎಂದೂ ಕರೆಯುತ್ತಾರೆ. ಆರಂಭದಲ್ಲಿ ದೇವಸ್ಥಾನದಲ್ಲಿ ಸರಸ್ವತಿಯ ಶ್ರೀಗಂಧದ ಮರದ ಪ್ರತಿಮೆಯನ್ನು ಇರಿಸಲಾಗಿತ್ತು.14 ನೇ ಶತಮಾನದಲ್ಲಿ ವಿಜಯನಗರದ ಅರಸರು ಮತ್ತು ಶ್ರೀ ವಿದ್ಯಾರಣ್ಯರು ಇದನ್ನು ಬದಲಿಸಿ ಚಿನ್ನದ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಭಕ್ತರು ದೇವಿ ಸನ್ನಿಧಿಗೆ ಬಂದು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಾರೆ.

ಕೂತನೂರ್ ಮಹಾ ಸರಸ್ವತಿ ದೇವಸ್ಥಾನ, ತಮಿಳುನಾಡು

ವಿದ್ಯೆಯ ದೇವತೆಯಾದ ಸರಸ್ವತಿಗೆ ಸಮರ್ಪಿತವಾದ ಕೂತನೂರ್ ದೇವಾಲಯ ತಮಿಳುನಾಡಿನ ತಿರುವರೂರ್‌ ಜಿಲ್ಲೆಯಲ್ಲಿದೆ. ಇದಕ್ಕೂ ಮುನ್ನ ಅಂಬಲ್ಪುರಿ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮವಿದೆ ಮತ್ತು ಇದನ್ನು ದಕ್ಷಿಣ ತಿರುವೇಣಿ ಸಂಗಮಂ ಎಂದು ಕರೆಯಲಾಗುತ್ತದೆ. ಈ ಗ್ರಾಮವನ್ನು 2ನೇ ರಾಜ ರಾಜ ಚೋಳ ತನ್ನ ಕಾವ್ಯಾತ್ಮಕ ಶ್ರೇಷ್ಠತೆಗಾಗಿ ತಮಿಳು ಕವಿ ಒಟ್ಟಕ್‌ಕೂಟನ್‌ಗೆ ಉಡುಗೊರೆಯಾಗಿ ನೀಡಿದ್ದರಿಂದ ಕೂತನೂರ್ ಎಂಬ ಹೆಸರು ಬಂತೆಂದು ನಂಬಲಾಗಿದೆ. ಈ ದೇವಾಲಯವು ತಮಿಳುನಾಡಿನಲ್ಲಿ ಸರಸ್ವತಿಗೆ ಅರ್ಪಿತವಾದ ಏಕೈಕ ದೇವಾಲಯ ಎಂದು ಜನಪ್ರಿಯತೆ ಪಡೆದಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.