ಆಷಾಢ ಶುಕ್ರವಾರ ಸಂಭ್ರಮ; ಚಾಮುಂಡೇಶ್ವರಿ ಭಕ್ತರಿಗೆ ಪ್ರಸಾದ ಹಂಚಲು 25,000 ಮೈಸೂರ್‌ ಪಾಕ್‌ ಸಿಹಿ ತಯಾರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆಷಾಢ ಶುಕ್ರವಾರ ಸಂಭ್ರಮ; ಚಾಮುಂಡೇಶ್ವರಿ ಭಕ್ತರಿಗೆ ಪ್ರಸಾದ ಹಂಚಲು 25,000 ಮೈಸೂರ್‌ ಪಾಕ್‌ ಸಿಹಿ ತಯಾರಿ

ಆಷಾಢ ಶುಕ್ರವಾರ ಸಂಭ್ರಮ; ಚಾಮುಂಡೇಶ್ವರಿ ಭಕ್ತರಿಗೆ ಪ್ರಸಾದ ಹಂಚಲು 25,000 ಮೈಸೂರ್‌ ಪಾಕ್‌ ಸಿಹಿ ತಯಾರಿ

ಜುಲೈ 12 ರಂದು, ಆಷಾಢ ಮಾಸದ ಮೊದಲ ಶುಕ್ರವಾರದ ಅಂಗವಾಗಿ ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ನೀಡಲು ಮೈಸೂರ್‌ ಪಾಕ್‌ ಅನ್ನು ವಿತರಿಸಲು ಸಿದ್ಧತೆ ನಡೆಸಲಾಗಿದೆ. ಅದಕ್ಕಾಗಿ ಸುಮಾರು 50 ನುರಿತ ಬಾಣಸಿಗರಿಂದ ಮೈಸೂರ್‌ ಪಾಕ್‌ ತಯಾರಿಸಲಾಗುತ್ತಿದೆ.

ಆಷಾಢ ಶುಕ್ರವಾರ ಸಂಭ್ರಮ; ಚಾಮುಂಡೇಶ್ವರಿ ಭಕ್ತರಿಗೆ ಪ್ರಸಾದ ಹಂಚಲು 25,000 ಮೈಸೂರ್‌ ಪಾಕ್‌ ಸಿಹಿ ತಯಾರಿ
ಆಷಾಢ ಶುಕ್ರವಾರ ಸಂಭ್ರಮ; ಚಾಮುಂಡೇಶ್ವರಿ ಭಕ್ತರಿಗೆ ಪ್ರಸಾದ ಹಂಚಲು 25,000 ಮೈಸೂರ್‌ ಪಾಕ್‌ ಸಿಹಿ ತಯಾರಿ

ಹಿಂದೂ ಕ್ಯಾಲೆಂಡರ್ ಪ್ರಕಾರ ಆಷಾಢ ಮಾಸ ಪ್ರಾರಂಭವಾಗಿದೆ. ಜುಲೈ 12, ಆಷಾಢ ಮಾಸದ ಮೊದಲ ಶುಕ್ರವಾರವಾಗಿದೆ. ಆಷಾಢವು ತೀರ್ಥಯಾತ್ರೆ, ದೇವರ ದರ್ಶನಕ್ಕೆ ಸಕಾಲ ಎಂದು ಹೇಳಲಾಗುತ್ತದೆ. ಆದ್ದರಿಂದ ಭಕ್ತರು ವ್ರತ, ಉಪವಾಸ ಮಾಡುತ್ತಾರೆ, ವಿವಿಧ ವ್ರತಗಳನ್ನು ಆಚರಿಸುತ್ತಾರೆ. ತೀರ್ಥಕ್ಷೇತ್ರ ದರ್ಶನ ಮಾಡುತ್ತಾರೆ. ಅದರಂತೆ ಕರ್ನಾಟಕದ ನಾಡದೇವತೆಯಾಗಿರುವ ಚಾಮುಂಡೇಶ್ವರಿ ದೇವಿಯ ದರ್ಶನಕ್ಕಾಗಿ ಭಕ್ತರು ಮೈಸೂರಿನ ಚಾಮುಂಡೇಶ್ವರಿ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ.

ಭಕ್ತರಿಗೆ ಮೈಸೂರ್‌ ಪಾಕ್‌ ಹಂಚಿಕೆ

ಅದರಲ್ಲೂ ಆಷಾಢದ ಶುಕ್ರವಾರದಂದು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಭಕ್ತರ ಅನುಕೂಲಕ್ಕಾಗಿ ಮೈಸೂರು ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದೆ. ಜುಲೈ 12, ಆಷಾಢ ಮಾಸದ ಮೊದಲ ಶುಕ್ರವಾರವಾಗಿದ್ದು, ಆ ದಿನ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸಿಹಿ ಹಂಚಲು ಈ ವರ್ಷ ಚಾಮುಂಡೇಶ್ವರಿ ಸೇವಾ ಸಮಿತಿ ನಿರ್ಧರಿಸದೆ. 19ನೇ ವರ್ಷಾಚರಣೆಯ ನಿಮಿತ್ತ ಸುಮಾರು 25,000 ಮೈಸೂರು ಪಾಕ್‌ಗಳನ್ನು ವಿತರಿಸಲು ಸಿದ್ಧತೆ ನಡೆಸಲಾಗಿದೆ. ಹಾಗಾಗಿ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕಾಗಿ ಬರುವ ಭಕ್ತರಿಗಾಗಿ ಮೈಸೂರ್‌ ಪಾಕ್‌ ತಯಾರಿ ಜೋರಾಗಿ ನಡೆಯುತ್ತಿದೆ.

ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿರುವ ಮೈಸೂರ್‌ ಪಾಕ್‌ ಅನ್ನು ಸುಮಾರು 50 ನುರಿತ ಬಾಣಸಿಗರು ತಯಾರಿಸುತ್ತಿದ್ದಾರೆ. ಮೈಸೂರಿನ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳಿಂದ ಮೈಸೂರ್‌ ಪಾಕ್‌ ತಯಾರಿಯಲ್ಲಿ ತೊಡಗಿದ್ದಾರೆ. ಮೈಸೂರ್‌ ಪಾಕ್‌ ಅನ್ನು 200 ಕೆಜಿ ಕಡಲೆ ಹಿಟ್ಟು, 500 ಕೆಜಿ ಸಕ್ಕರೆ, 30 ಕೆಜಿ ಸಂಸ್ಕರಿಸಿದ ಎಣ್ಣೆ, 100 ಕೆಜಿ ತುಪ್ಪ, ಮತ್ತು 3 ಕೆಜಿ ಏಲಕ್ಕಿ ಬಳಸಿ ತಯಾರಿಸಲಾಗುತ್ತಿದೆ. ಈ ಮೈಸೂರ್‌ ಪಾಕನ್ನು ರಟ್ಟಿನ ಪೆಟ್ಟಿಗೆಯಲ್ಲಿ ಪ್ಯಾಕ್‌ ಮಾಡಲಾಗುತ್ತಿದೆ. ಚಾಮುಂಡಿ ದೇವಿಯ ಭಕ್ತರು ಮೈಸೂರ್ ಪಾಕನ್ನು ಪ್ರಸಾದದ ರೂಪದಲ್ಲಿ ಸವಿಯಬಹುದಾಗಿದೆ.

4 ಆಷಾಢ ಶುಕ್ರವಾರ ಆಚರಣೆ

ಈ ವರ್ಷ ಆಷಾಢ ಮಾಸದಲ್ಲಿ ಒಟ್ಟು ನಾಲ್ಕು ಶುಕ್ರವಾರಗಳು ಬಂದಿವೆ. ಅದು ಜುಲೈ 12, ಜುಲೈ 19, ಜುಲೈ 26 ಮತ್ತು ಆಗಸ್ಟ್‌ 2. ತಾಯಿ ಚಾಮುಂಡೇಶ್ವರಿಯ ವರ್ಧಂತಿ ಉತ್ಸವವು ಜುಲೈ 27 ರಂದು ನಡೆಯಲಿದೆ. ವರ್ಧಂತಿಯನ್ನು ಮೈಸೂರಿನ ಮಹಾರಾಜ ಮುಮ್ಮಡಿ ಕೃಷ್ಣದೇವರಾಯ ಒಡೆಯರ್‌ ಅವರು ದೇವಿಯ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ನೀಡಿದ ದಿನದಂದು ಆಚರಿಸಲಾಗುತ್ತದೆ. ಮಹಾರಾಜರು ಆಷಾಢ ಮಾಸದ ರೇವತಿ ನಕ್ಷತ್ರದ ದಿನದಂದು ವಿಗ್ರಹವನ್ನು ಸ್ಥಾಪಿಸಿದರು.

ಕರ್ನಾಟಕದಾದ್ಯಂತ ತಾಯಿ ಚಾಮುಂಡೇಶ್ವರಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಮೈಸೂರು ಮತ್ತು ಬೆಂಗಳೂರು ಭಾಗದ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುವುದು ಹೆಚ್ಚು. ಚಾಮುಂಡೇಶ್ವರಿ ದೇವಿಯ ದರ್ಶನಕ್ಕಾಗಿ ನೆರೆಯ ತಮಿಳುನಾಡು ರಾಜ್ಯದಿಂದಲೂ ಹೆಚ್ಚಿನ ಭಕ್ತಾದಿಗಳು ಬರುತ್ತಾರೆ. ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಖಾಸಗಿ ವಾಹನನ್ನು ನಿರ್ಬಂಧಿಸಲಾಗಿದೆ. ಮೈಸೂರಿನ ಲಲಿತ್‌ ಮಹಲ್‌ ಪ್ಯಾಲೇಸ್‌ ಬಳಿ ಜಿಲ್ಲಾಡಳಿತ 40ಕ್ಕೂ ಹೆಚ್ಚು ಸರ್ಕಾರಿ ಬಸ್‌ ವ್ಯವಸ್ಥೆ ಮಾಡಲಾಗಿದ್ದು ಭಕ್ತರು ಅದೇ ಬಸ್‌ನಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳಿ, ಅಲ್ಲಿಂದ ವಾಪಸ್‌ ಬರಬಹುದಾಗಿದೆ. ಜುಲೈ 12, 19, 26, 27 ಹಾಗೂ ಆಗಸ್ಟ್‌ 2 ರಂದು ಕೆಎಸ್‌ಆರ್‌ಟಿಸಿ ನಗರ ಸಾರಿಗೆಯ ಉಚಿತ ಬಸ್‌ ಸೇವೆಯನ್ನು ವ್ಯವಸ್ಥೆ ಮಾಡಲಾಗಿದೆ.

(ಬರಹ: ಅರ್ಚನಾ ವಿ ಭಟ್‌)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.