ರಾಮಾಯಣದ ಕಥೆಯಲ್ಲಿದೆ ಮಾನವನ ಬದುಕಿನ ಅಮೃತ ಸಾರ; ರಾಮಾವತಾರದ ಆಶಯ ತಿಳಿಯೋಣ ಬನ್ನಿ -ಶ್ರೀರಾಮನವಮಿ ವಿಶೇಷ
ರಾಮಾಯಣದ ಮಹತ್ವ: ಭಾರತದ ಮಹಾಕಾವ್ಯಗಳಲ್ಲಿ ರಾಮಾಯಣಕ್ಕೆ ಮಹತ್ವದ ಸ್ಥಾನವಿದೆ. 7 ಕಾಂಡಗಳಲ್ಲಿ ಹರಡಿಕೊಂಡಿರುವ 24,000 ಶ್ಲೋಕಗಳು ಇರುವ ಈ ಕಾವ್ಯವನ್ನು 'ಇತಿಹಾಸ' ಎಂದೂ ಕರೆಯುತ್ತಾರೆ. ರಾಮಾಯಣದ ಮಹತ್ವ? ರಾಮಾಯಣ ಕೊಡುವ ಸಂದೇಶಗಳ ಕುರಿತ ವಿವರವನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ ಜ್ಯೋತಿಷಿ ಎಚ್.ಸತೀಶ್.
ರಾಮಾಯಣದ ಕಥೆ: ಭಗವದ್ಗೀತೆಯಂತೆಯೇ ಪ್ರತಿಯೊಬ್ಬರೂ ಓದಿ ಅರ್ಥೈಸಿಕೊಂಡು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮತ್ತೊಂದು ಧಾರ್ಮಿಕ ಗ್ರಂಥ ರಾಮಾಯಣ. ಒಂದು ವಿಶೇಷವಾದ ವಿಚಾರವೆಂದರೆ ರಾಮಾಯಣದಲ್ಲಿ ಸ್ನೇಹಿತರು ಬರುತ್ತಾರೆ. ಸ್ನೇಹವೆಂದರೆ ಒಬ್ಬರಿಗಾಗಿ ಒಬ್ಬರು ಜೀವ ಕೊಡುವಂತಹ ವಿಚಾರ. ಇವರ ಮಧ್ಯೆ ಕೇವಲ ಸ್ನೇಹವಲ್ಲದೆ ತ್ಯಾಗದ ಮನೋಭಾವನೆಯು ಬರುತ್ತದೆ. ಈ ತ್ಯಾಗದ ಹಿಂದೆ ಯಾವುದೇ ಸ್ವಾರ್ಥ ಕಂಡು ಬರುವುದಿಲ್ಲ. ರಾಮಾಯಣದ ಮೂಲಕ ವಾಲ್ಮೀಕಿ ಮಹಾಕವಿಯು ಬಿಂಬಿಸುವ ಸ್ನೇಹದ ಪ್ರಸಂಗಗಳು ಪ್ರಪಂಚಕ್ಕೇ ಮಾದರಿಯಾಗುತ್ತದೆ.
ಮಿತ್ರತ್ವದಂತೆ ಶತ್ರುತ್ವವೂ ರಾಮಾಯಣದಲ್ಲಿ ಕಂಡು ಬರುತ್ತದೆ. ಈ ಶತ್ರುತ್ವವು ಕೇವಲ ತಮ್ಮ ಅಸ್ತಿತ್ವಕ್ಕಾಗಿ ಮಾಡುವ ಹೋರಾಟವಾಗುತ್ತದೆ. ಇದರಲ್ಲಿ ವೈಯಕ್ತಿಕ ದ್ವೇಷ ಕಂಡುಬರುವುದಿಲ್ಲ. ಉದಾಹರಣೆಗೆ ರಾಮ-ರಾವಣರ ನಡುವಿನ ಯುದ್ಧದ ಮಹೂರ್ತವನ್ನು ಗೊತ್ತುಪಡಿಸಲು ಲಕ್ಷ್ಮಣನು ರಾವಣನ ಬಳಿ ಬರುತ್ತಾನೆ. ಈ ಸಂದರ್ಭದಲ್ಲಿಯೂ ರಾವಣನು ಸ್ವಾರ್ಥ ತೋರಿಸುವುದಿಲ್ಲ. ತನ್ನ ಕರ್ತವ್ಯ ನಿಷ್ಠೆಯನ್ನು ತೋರಿಸುತ್ತಾ ಮಹಾನುಭಾವನಂತೆ ಮೆರೆಯುತ್ತಾನೆ. ರಾಮಾಯಣವು ನಿಜವಾಗಿಯೂ ನಡೆದಿರುವ ಕಥೆ ಎಂದು ತಿಳಿಯಲು ನಮಗೆ ಸಾಕಷ್ಟು ಪುರಾವೆಗಳು ದೊರೆತಿವೆ. ಈಗಲೂ ಸಂಶೋಧಕರು ಇದರ ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರಿಂದ ಬರುವ ಫಲಿತಾಂಶವನ್ನು ಒಪ್ಪುವ ದೊಡ್ಡ ಮನಸ್ಸು ನಮಗಿರಬೇಕು.
ಕುಟುಂಬ ಹೇಗಿರಬೇಕು ಎಂದು ತಿಳಿಸುವ ರಾಮಾಯಣ
ಭಾರತೀಯ ಸಂಸ್ಕೃತಿಯಲ್ಲಿ ಕೂಡು ಕುಟುಂಬಕ್ಕೆ ವಿಶೇಷ ಸ್ಥಾನಮಾನವಿದೆ. ಇದರ ಯಜಮಾನ ಆ ಕುಟುಂಬದ ಹಿರಿಯ. ಇಂತಹ ಶ್ರೇಷ್ಠವಾದಂತಹ ರೀತಿನೀತಿ ಬಂದಿದ್ದೆ ರಾಮಾಯಣದಿಂದ. ರಾಮಾಯಣದ ಕುಟುಂಬದಲ್ಲಿ ಮಹಾರಾಜನೇ ಯಜಮಾನ ಆಗಿರುತ್ತಾನೆ. ತಂದೆ ತಾಯಿ ಮಕ್ಕಳು ಮತ್ತು ಮಕ್ಕಳ ನಡುವಿನ ಸಂಬಂಧವು ಹಾಲು-ಜೇನಿನಂತೆ ಇರಬೇಕು. ಇದರ ಅನುಭವ ರಾಮಾಯಣದ ಗ್ರಂಥದಿಂದ ನಮಗೆ ಸಿಗುತ್ತದೆ. ಬೇರೆಯವರ ಕೆಟ್ಟ ಬುದ್ಧಿವಾದಕ್ಕೆ ಮಣಿದು ತಪ್ಪು ನಿರ್ಧಾರಗಳನ್ನು ಕುಟುಂಬದಲ್ಲಿ ತೆಗೆದುಕೊಳ್ಳುವುದು ಸಹಜ. ಇಂತಹ ಪ್ರಸಂಗವು ಸಹ ರಾಮಾಯಣದಲ್ಲಿ ಬರುತ್ತದೆ. ಆದರೆ ತಂದೆಯ ಮಾತನ್ನು ಉಳಿಸಲು ರಾಮನು ಸೀತೆಯೊಂದಿಗೆ ವನವಾಸಕ್ಕೆ ತೆರಳುತ್ತಾನೆ.
ಗುರುವಿಲ್ಲದೆ ಯಾರ ಜೀವನವೂ ಪರಿಪೂರ್ಣವಾಗುವುದಿಲ್ಲ. ಹಾಗೆಯೇ ಗುರುವಿನ ಮಾತನ್ನು ಮೀರಿದ ಶಿಷ್ಯರೂ ಪರಿಪೂರ್ಣರಾಗುವುದಿಲ್ಲ. ಹಿಂದಿನ ಕಾಲವಾಗಬಹುದು, ಪ್ರಸಕ್ತ ಸನ್ನಿವೇಶವಿರಬಹುದು ಅಥವಾ ಬರುವ ದಿನಗಳಿರಬಹುದು; ಹೆತ್ತವರು ಮಕ್ಕಳನ್ನು ಗುರುಗಳ ಮೇಲಿನ ನಂಬಿಕೆಯಿಂದ ವಿದ್ಯಾಭ್ಯಾಸಕ್ಕೆ ಕಳಿಸುತ್ತಾರೆ. ಗುರುಗಳು ತಮ್ಮ ಪಾಂಡಿತ್ಯದಿಂದ ಶಿಷ್ಯರ ಜೀವನವನ್ನು ರೂಪಿಸುತ್ತಾರೆ. ಇಂತಹ ಪ್ರಸಂಗವನ್ನು ಇಂದಿಗೂ ಉದಾಹರಣೆಯಾಗಿ ಶ್ರೀರಾಮಚಂದ್ರ ಸ್ವಾಮಿ ಮತ್ತು ಲವಕುಶದ ವಿದ್ಯಾಭ್ಯಾಸದ ರೀತಿ ನೀತಿ ಮತ್ತು ಗುರುಗಳಿಗೆ ಅವರು ನೀಡಿದ ಗೌರವವನ್ನು ವಿಚಾರ ಮಾಡಬಹುದು.
ಅಧೀನರು, ಪ್ರಾಣಿ-ಪಕ್ಷಿಗಳನ್ನು ಗೌರವದಿಂದ ಕಾಣಬೇಕೆನ್ನುವ ರಾಮಾಯಣ
ರಾಮಾಯಣದಲ್ಲಿ ನಾವು ಭೃತ್ಯು ಮತ್ತು ಸ್ವಾಮಿ (ಸೇವಕ ಮತ್ತು ಮಾಲೀಕ) ಸಂಬಂಧಗಳ ಬಗ್ಗೆಯೂ ಪರಿಶೀಲಿಸಬಹುದು. ಆಂಜನೇಯನು ಶ್ರೀರಾಮನಲ್ಲಿ ಅಪಾರ ಭಕ್ತಿಯನ್ನು ತೋರುತ್ತಾನೆ. ಆದರೆ ಶ್ರೀರಾಮಚಂದ್ರನು ಆಂಜನೇಯನನ್ನು ಆಪ್ತ ಸ್ನೇಹಿತನಂತೆ ಸ್ವೀಕರಿಸುತ್ತಾನೆ. ಸೇವಕರನ್ನು ಪ್ರೀತಿಯಿಂದ ಕಾಣಬೇಕು, ಅವರ ಸಾಮರ್ಥ್ಯಕ್ಕೆ ಇನ್ನಷ್ಟು ಬಲತುಂಬಿ ಗೌರವಿಸಿದರೆ ಅವರಿಂದ ಮಹತ್ತರ ಕಾರ್ಯಗಳು ನಡೆಯುತ್ತವೆ ಎನ್ನುವುದಕ್ಕೂ ರಾಮಾಯಣದ ಪ್ರಸಂಗವನ್ನು ನಾವು ಸಾಕ್ಷಿಯಾಗಿ ಗಮನಿಸಬಹುದು. ಶ್ರೀರಾಮನು ವಾನರರು (ಕಪಿಗಳು), ಕರಡಿ (ಜಾಂಬವಂತ), ಅಳಿಲು, ಪಕ್ಷಿಗಳನ್ನೂ (ಸಂಪಾತಿ) ಗೌರವ ಮತ್ತು ಪ್ರೀತಿಯಿಂದ ಗೆಳೆಯರಂತೆಯೇ ಕಂಡ. ಪ್ರಾಣಿವರ್ಗವನ್ನು ಮನುಷ್ಯರು ಕಡೆಗಣ್ಣಿನಿಂದ ನೋಡಬಾರದು ಎನ್ನುವುದಕ್ಕೂ ರಾಮಾಯಣವು ಸಾಕ್ಷಿಯಾಗಿದೆ. ಈ ರೀತಿಯಲ್ಲಿ ಆರಂಭದಿಂದ ಅಂತ್ಯದವರೆಗೂ ರಾಮಾಯಣವು ನಮಗೆ ಜೀವನದಲ್ಲಿ ಹೇಗೆ ಬಾಳಬೇಕೆಂಬುದನ್ನು ಕಲಿಸುತ್ತದೆ.
ರಾಮಾಯಣದಲ್ಲಿ ಎಷ್ಟು ಕಾಂಡಗಳಿವೆ? ಅವು ಯಾವುವು?
ರಾಮಾಯಣದಲ್ಲಿ ಬರುವ ಏಳು (7) ಎಂಬ ಸಂಖ್ಯೆಯ ವೈಶಿಷ್ಟ್ಯವನ್ನು ಒಮ್ಮೆ ಪರಿಶೀಲಿಸೋಣ. ಕಾಮನಬಿಲ್ಲಿನಲ್ಲಿರುವ ಬಣ್ಣಗಳು ಏಳು, ನಾವು ಪೂಜೆ ಮಾಡುವ ಸಪ್ತರ್ಷಿಗಳು ಏಳು, ಇದೇ ರೀತಿ ರಾಮಾಯಣ ಗ್ರಂಥದ ಸಂಪೂರ್ಣ ವಿಚಾರವನ್ನು ಅರ್ಥಮಾಡಿಕೊಳ್ಳಲು ಅದನ್ನು ಏಳು ಭಾಗಗಳಾಗಿ ವಿಂಗಡಿಸಿದ್ದಾರೆ. ಇದನ್ನು ಕಾಂಡ ಎಂಬ ಪದದಿಂದ ತಿಳಿಸಿದ್ದಾರೆ.
ರಾಮಾಯಣದಲ್ಲಿ ಒಟ್ಟು 7 ಕಾಂಡಗಳಿವೆ.
1) ಬಾಲಕಾಂಡ
2) ಅಯೋಧ್ಯಾಕಾಂಡ
3) ಅರಣ್ಯಕಾಂಡ
4) ಕಿಷ್ಕಿಂಧಕಾಂಡ
5) ಸುಂದರಕಾಂಡ
6) ಯುದ್ದಕಾಂಡ
7) ಉತ್ತರಕಾಂಡ
ಈ ಪೈಕಿ ಸುಂದರಕಾಂಡ ದವರೆಗಿನ ಕಥೆಯನ್ನು ವಾಲ್ಮೀಕಿ ಮಹರ್ಷಿ ಬರೆದರು. ನಂತರದ ಯುದ್ಧಕಾಂಡ ಮತ್ತು ಉತ್ತರಕಾಂಡಗಳನ್ನು ಬೇರೆಯವರು ಬರೆದಿರಬಹುದು ಎಂದು ಕೆಲ ವಿದ್ವಾಂಸರು ವಾದಿಸುತ್ತಾರೆ. ಹೀಗಾಗಿಯೇ ಇವೆರೆಡೂ ಭಾಗಗಳನ್ನು "ಪ್ರಕ್ಷಿಪ್ತ" ಎಂದು ಹೇಳಲಾಗುತ್ತದೆ. ಈ ಕಾಂಡಗಳ ಹೆಸರುಗಳೇ ಸೂಚಿಸುವಂತೆ ರಾಮಾಯಣದ ವಿಚಾರವನ್ನು ಹಲವು ಹಂತಗಳಲ್ಲಿ ನಾವು ಅರಿಯಬಹುದು. ಉದಾಹರಣೆಗೆ ಬಾಲಕಾಂಡದಲ್ಲಿ ರಾಮ ಮತ್ತು ಅವನ ಸೋದರರ ಜನನ. ಬಾಲ್ಯದಲ್ಲಿ ಮಾಡಿದ ಅನೇಕ ಕೆಲಸಗಳನ್ನು ತಿಳಿಯಬಹುದು. ಇದೇ ರೀತಿ ಉಳಿದ ಕಾಂಡಗಳಲ್ಲಿಯೂ ಹಲವು ಪ್ರಸಂಗಗಳು ಬರುತ್ತವೆ.
ರಾಮಾಯಣದ ಕಥೆ ಹೇಗೆ ಶುರುವಾಗುತ್ತೆ?
ರಾಮಾಯಣದ ಕಥೆ ಆರಂಭವಾಗುವುದೇ ನಾರದರು ಮತ್ತು ವಾಲ್ಮೀಕಿ ಮಹರ್ಷಿಗಳ ನಡುವಿನ ಸಂವಾದದಿಂದ. ತ್ರಿಲೋಕ ಸಂಚಾರಿಗಳಾದ ಮತ್ತು ಮಹಾಜ್ಞಾನಿಗಳಾದ ನಾರದರು ವಾಲ್ಮೀಕಿ ಋಷಿಗಳ ಆಶ್ರಮಕ್ಕೆ ಬರುತ್ತಾರೆ. ವಾಲ್ಮೀಕಿ ಮಹರ್ಷಿಗಳ ಸತ್ಕಾರವನ್ನು ಸ್ವೀಕರಿಸಿದ ನಾರದರನ್ನು ವಾಲ್ಮೀಕಿ ಮುನಿಗಳು ತನಗೆ ಓರ್ವ ವ್ಯಕ್ತಿಯ ಕಥೆಯನ್ನು ಹೇಳಬೇಕು ಎಂದು ಕೇಳುತ್ತಾರೆ. ಆದರೆ ಆ ವ್ಯಕ್ತಿಯು ಎಲ್ಲಾ ರೀತಿಯ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡಿರಬೇಕೆಂಬ ಷರತ್ತನ್ನು ವಿಧಿಸುತ್ತಾರೆ. ಮಹಾಜ್ಞಾನಿಗಳಾದ ನಾರದರು ಈ ಮಾತನ್ನು ಕೇಳಿ ಕ್ಷಣಕಾಲ ಯೋಚಿಸುವಂತಾಗುತ್ತದೆ. ಆನಂತರ ಎಲ್ಲ ರೀತಿಯ ಒಳ್ಳೆಯ ಗುಣಗಳನ್ನು ಹೊಂದಿರುವ ವ್ಯಕ್ತಿ ಎಂದರೆ ಶ್ರೀರಾಮ ಮಾತ್ರ ಎಂಬ ತೀರ್ಮಾನಕ್ಕೆ ಬಂದು ಶ್ರೀರಾಮನ ಕಥೆಯನ್ನು ಹೇಳಲು ಆರಂಭಿಸುತ್ತಾರೆ.
ಸಂಕ್ಷಿಪ್ತವಾಗಿ ಇಡೀ ರಾಮಾಯಣದ ಕಥೆಯನ್ನು ನಾರದರು ವಾಲ್ಮೀಕಿಗೆ ಹೇಳುತ್ತಾರೆ. ಆನಂತರ ಸ್ವಯಂ ಬ್ರಹ್ಮದೇವನೇ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಬರುತ್ತಾನೆ. ಮುನಿಗಳಿಂದ ಆತಿಥ್ಯವನ್ನು ಸ್ವೀಕರಿಸಿ ಬ್ರಹ್ಮದೇವನು ಸಂತುಷ್ಟನಾಗುತ್ತಾನೆ. ನಾರದ ಮಹರ್ಷಿಗಳು ಸಂಕ್ಷಿಪ್ತವಾಗಿ ತಿಳಿಸಿದ ಶ್ರೀರಾಮನ ಕಥೆಯನ್ನು ನೀನು ವಿಸ್ತರಿಸಿ ಬರೆಯಬೇಕೆಂದು ಬ್ರಹ್ಮದೇವನು ವಾಲ್ಮೀಕಿಗಳನ್ನು ವಿನಂತಿಸಿಕೊಳ್ಳುತ್ತಾನೆ. ಶ್ರೀ ರಾಮನ ಚರಿತೆಯು ನಿಮ್ಮ ಕಣ್ಣೆದುರೇ ನಡೆದಂತೆ ಗೋಚರಿಸುತ್ತದೆ. ನಾರದರು ತಿಳಿಸದ ಕೆಲ ವಿಚಾರಗಳು ನಿಮಗೆ ತಿಳಿಯುತ್ತದೆ. ಇದೊಂದು ಮಹಾಕಾವ್ಯವಾಗಿ ಸೂರ್ಯ ಚಂದ್ರ ಇರುವವರೆಗೂ ಜನರು ಇದನ್ನು ಓದುತ್ತಾರೆ ಎಂದು ಬ್ರಹ್ಮ ಆಶೀರ್ವದಿಸುತ್ತಾನೆ. ಆ ಪ್ರೇರಣೆಯಿಂದ ವಾಲ್ಮೀಕಿ ಮುನಿಗಳು 24,000 ಶ್ಲೋಕಗಳ ರಾಮಾಯಣ ಗ್ರಂಥವನ್ನು ಬರೆಯುತ್ತಾರೆ.
ರಾಮಾಯಣದ ಪ್ರತಿ ಕಾಂಡದ ಮಹತ್ವವನ್ನು ಇದೇ ಸರಣಿಯ ಮುಂದಿನ ಕಂತುಗಳಲ್ಲಿ ನೋಡೋಣ. ಶ್ರೀ ರಾಮಾರ್ಪಣಮಸ್ತು.
ಬರಹ: ಎಚ್. ಸತೀಶ್