Deepavali 2023: ದೀಪಾವಳಿಯ ಕೊನೆಯ ದಿನವೇ ಯಮದ್ವಿತೀಯ; ಸಹೋದರ ಸಹೋದರಿಯರ ಬಾಂಧವ್ಯ ಸಾರುವ ಈ ಆಚರಣೆಯ ಧಾರ್ಮಿಕ ಹಿನ್ನೆಲೆಯಿದು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Deepavali 2023: ದೀಪಾವಳಿಯ ಕೊನೆಯ ದಿನವೇ ಯಮದ್ವಿತೀಯ; ಸಹೋದರ ಸಹೋದರಿಯರ ಬಾಂಧವ್ಯ ಸಾರುವ ಈ ಆಚರಣೆಯ ಧಾರ್ಮಿಕ ಹಿನ್ನೆಲೆಯಿದು

Deepavali 2023: ದೀಪಾವಳಿಯ ಕೊನೆಯ ದಿನವೇ ಯಮದ್ವಿತೀಯ; ಸಹೋದರ ಸಹೋದರಿಯರ ಬಾಂಧವ್ಯ ಸಾರುವ ಈ ಆಚರಣೆಯ ಧಾರ್ಮಿಕ ಹಿನ್ನೆಲೆಯಿದು

ದೀಪಾವಳಿ ಹಬ್ಬದ 5ನೇ ದಿನ ಅಂದರೆ ಕೊನೆಯ ದಿನ ಯಮದ್ವಿತೀಯ ಆಚರಣೆ ಇರುತ್ತದೆ. ಉತ್ತರ ಭಾರತದಲ್ಲಿ ಇದನ್ನು ಭಾಯಿ ದೂಜ್‌ ಎಂದೂ ಕರೆಯುತ್ತಾರೆ. ಈ ಆಚರಣೆಗೂ ಯಮರಾಜನಿಗೂ ಸಂಬಂಧವಿದೆ. ಹಾಗಾದರೆ ಈ ದಿನದ ಆಚರಣೆಯ ಮಹತ್ವವೇನು ತಿಳಿಯಿರಿ.

ದೀಪಾವಳಿಯ ಕೊನೆಯ ದಿನವೇ ಯಮದ್ವಿತೀಯ, ಈ ಹಬ್ಬದ ಧಾರ್ಮಿಕ ಹಿನ್ನೆಲೆ ಇಲ್ಲಿದೆ
ದೀಪಾವಳಿಯ ಕೊನೆಯ ದಿನವೇ ಯಮದ್ವಿತೀಯ, ಈ ಹಬ್ಬದ ಧಾರ್ಮಿಕ ಹಿನ್ನೆಲೆ ಇಲ್ಲಿದೆ

ಜಾತಿ, ಧರ್ಮ, ಲಿಂಗಬೇಧವಿಲ್ಲದೆ ಸಹೋದರ ಮತ್ತು ಸಹೋದರಿಯರ ನಡುವೆ ಪ್ರೀತಿ ವಿಶ್ವಾಸ ಅನುಕಂಪ ಬೆಳೆಯಲು ಹಲವು ಹಬ್ಬಗಳಿವೆ. ಅದರಲ್ಲಿ ಕಾರ್ತಿಕ ಮಾಸದ ಶುಕ್ಲಪಕ್ಷದ ಬಿದಿಗೆಯ ದಿನ ಬರುವ ಹಬ್ಬಕ್ಕೆ ವಿಶೇಷವಾದ ಪ್ರಾಮುಖ್ಯತೆ ಇದೆ. ಇದನ್ನು ಯಮದ್ವಿತೀಯ ಎಂದು ಕರೆಯುತ್ತೇವೆ. ಹೆಸರೇ ಸೂಚಿಸುವಂತೆ ಈ ದಿನ ಯಮಧರ್ಮನಿಗೆ ಸಂಬಂಧಿಸಿದೆ.

ಇಂದು ಆಕ್ಕ ತಂಗಿಯರು ಸಹೋದರರನ್ನು ತಮ್ಮ ಮನೆಗೆ ಆಹ್ವಾನಿಸಿ ಹಬ್ಬದ ಅಡುಗೆ ಮಾಡಿ ಊಟ ಬಡಿಸಬೇಕು. ಇದರ ಬಗ್ಗೆ ಒಂದು ಪೌರಾಣಿಕ ಕತೆ ಇದೆ.

ಆಯುಷ್ಯಕ್ಕೆ ಸಂಬಂಧಿಸಿದ ದೇವತೆ ಯಮರಾಜ. ಯಮಧರ್ಮರಾಜನಿಗೆ ಒಬ್ಬ ತಂಗಿ ಇರುತ್ತಾಳೆ. ಆಕೆಯ ಹೆಸರು ಯಮುನೆ. ಆಕೆಯ ವಿವಾಹವಾಗುತ್ತದೆ. ಆದರೆ ಆಕೆಯ ವಿವಾಹವಾದ ನಂತರ ಹಲವು ಬಾರಿ ಯಮಧರ್ಮರಾಜನನ್ನು ತನ್ನ ಮನೆಗೆ ಅಹ್ವಾನಿಸಿದರೂ ಯಮರಾಜನು ತಂಗಿಯ ಮನೆಗೆ ಹೋಗಿರುವುದಿಲ್ಲ. ಇದರಿಂದ ಆಕೆಗೆ ಬೇಸರ ಉಂಟಾಗುತ್ತದೆ. ಆದರೆ ಒಮ್ಮೆ ಕಾರ್ತಿಕ ಮಾಸದ ಶುಕ್ಲಪಕ್ಷದ ಬಿದಿಗೆಯ ದಿನ ಯಮನು ತನ್ನ ತಂಗಿ ಯಮುನೆಯ ಮನೆಗೆ ಹೋಗುತ್ತಾನೆ. ದ್ವಿತೀಯ ಎಂದರೆ ಬಿದಿಗೆ ತಿಥಿ ಎಂದು ಅರ್ಥ. ಅಕಸ್ಮಿಕವಾಗಿ ಬಂದ ಸಹೋದರನನ್ನು ಕಂಡು ಯಮುನೆಗೆ ಸಂತಸವಾಗುತ್ತದೆ.

ಹಬ್ಬದ ಭೋಜನದ ಜೊತೆಯಲ್ಲಿ ಅಕ್ಕಿ ರೊಟ್ಟಿಯನ್ನು ಅಣ್ಣನಾದ ಯಮರಾಜನಿಗೆ ಉಣ ಬಡಿಸುತ್ತಾಳೆ. ತಂಗಿಯ ಆತಿಥ್ಯದಿಂದ ಸಂತುಷ್ಠನಾದ ಯಮರಾಜನು ತಂಗಿ ಯಮುನಳನ್ನು ಕುರಿತು ಯಾವುದಾದರೂ ವರವನ್ನು ಕೇಳಲು ಹೇಳುತ್ತಾನೆ. ತನ್ನ ಸ್ವಾರ್ಥವನ್ನು ಮರೆತು ಯಮುನೆಯು ಯಮನನ್ನು ಕುರಿತು, ತನಗೆ ಅತ್ಯಂತ ಸಂತೋಷವನ್ನು ನೀಡಿದ ಈ ದಿನವು ಯಮದ್ವಿತೀಯ ಎಂದು ಹೆಸರು ಪಡೆಯಬೇಕು. ಈ ದಿನ ಸಹೋದರಿಯರ ಮನೆಯಲ್ಲಿ ಭೋಜನ ಮಾಡುವ ಯಾವುದೇ ಸಹೋದರರಿಗೆ ದೀರ್ಘಾಯುಷ್ಯ ಕರುಣಿಸಬೇಕು ಎಂದು ಕೇಳಿಕೊಂಡಳು. ಇದರಿಂದ ಸಂತೋಷಗೊಂಡ ಯಮರಾಜನು ಯಾರು ಕಾರ್ತಿಕ ಮಾಸದಲ್ಲಿ ಸಹೋದರಿಯರ ಕೈಯಿಂದ ಆಕೆಯ ಮನೆಯಲ್ಲಿ ಭೋಜನವನ್ನು ಸೇವಿಸುವರೋ ಅವರು ಅಪಮೃತ್ಯುವಿನಿಂದ ಪಾರಾಗಲಿ ಎಂದು ವರವನ್ನು ದಯ ಪಾಲಿಸುತ್ತಾನೆ.

ಸೂರ್ಯನ ಮಗನಾದ ಯುಮನು ತನ್ನ ಸಹೋದರಿಯ ಕೃಪೆಗೆ ಪಾತ್ರರಾದವರಿಗೆ ಮಾಡಿದ ಪಾಪಕರ್ಮಗಳಿಂದ ದೂರವಾಗಿ ದೀರ್ಘಾಯುಷ್ಯ ಲಭಿಸುವುದು ಎಂಬ ವರವನ್ನೂ ನೀಡುತ್ತಾನೆ. ಆದ್ದರಿಂದ ಈ ದಿನದಂದು ಯಮುನಾ ನದಿಯಲ್ಲಿ ಸ್ನಾನ ಮಾಡುವ ಸ್ತ್ರೀ ಪುರುಷರು ಅಪಮೃತ್ಯುವಿನಿಂದ ಪಾರಾಗಿ ದೀರ್ಘಾಯುಷ್ಯ ಪಡೆಯವರರೆಂದು ಪುರಾಣ ಪುಣ್ಯ ಗ್ರಂಥಗಳಲ್ಲಿ ಹೇಳಲಾಗಿದೆ.

ಈ ದಿನದಂದು ಸಹೋದರಿಯ ಮನೆಯಲ್ಲಿ ಭೋಜನವನ್ನು ಸ್ವೀಕರಿಸಿದಲ್ಲಿ ಆಕೆಯ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ಸಹೋದರನದ್ದಾಗುತ್ತದೆ. ಈ ಆಚರಣೆಯಿಂದ ಸಹೋದರರ ಆರೋಗ್ಯ ಮತ್ತು ದೀರ್ಘಾಯುಷ್ಯ ಉಂಟಾಗುತ್ತದೆ. ಉತ್ತರ ಭಾರತದಲ್ಲಿ "ಭಯ್‌ ದೂಜ್‌" ಎಂಬ ಹೆಸರಿನಿಂದ ಈ ಹಬ್ಬವು ಜನಪ್ರಿಯತೆ ಪಡೆದಿದೆ. ಸಹೋದರರಿಗೆ ಬಟ್ಟೆ ಮತ್ತು ಆಭರಣಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಸಹೋದರರು ಸಹ ಸಹೋದರಿ ಮತ್ತು ಸಹೋದರಿಯ ಪತಿಗೆ ಹೊಸ ಬಟ್ಟೆ ಮತ್ತು ಆಭರಣಗಳನ್ನು ನೀಡಿ ಮನಸಾರ ಹರಸುತ್ತಾರೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.