ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲು ಕಾರಣಗಳೇನು; ರಾಮನಿಗೆ ಈ ಗೌರವ ಯಾಕೆ? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲು ಕಾರಣಗಳೇನು; ರಾಮನಿಗೆ ಈ ಗೌರವ ಯಾಕೆ? ಇಲ್ಲಿದೆ ಮಾಹಿತಿ

ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲು ಕಾರಣಗಳೇನು; ರಾಮನಿಗೆ ಈ ಗೌರವ ಯಾಕೆ? ಇಲ್ಲಿದೆ ಮಾಹಿತಿ

Maryada Purushottama: ಹಿಂದೂಗಳ ಪುರಾಣದಲ್ಲಿ ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲಾಗುತ್ತದೆ. ರಾಮಾಯಣದ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಏಕೆ ಕರೆಯಲಾಗುತ್ತದೆ? ಯಾವ ಗುಣಗಳು ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮನನ್ನಾಗಿಸಿತು? ಇಲ್ಲಿದೆ ಓದಿ.

ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲು ಕಾರಣಗಳಿವು
ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲು ಕಾರಣಗಳಿವು

ಹಿಂದೂಗಳು ಆರಾಧಿಸುವ ದೇವರುಗಳಲ್ಲಿ ಶ್ರೀರಾಮನು ಒಬ್ಬನು. ವಿಷ್ಣುವಿನ ದಶಾವತಾರಗಳಲ್ಲಿ ಏಳನೇ ಅವತಾರವೇ ಶ್ರೀರಾಮನ ಅವತಾರ. ಭಾರತೀಯರ ತನುಮನಗಳಲ್ಲಿ ಪ್ರಭು ಶ್ರೀರಾಮನಗೆ ಉನ್ನತ ಸ್ಥಾನವಿದೆ. ರಾಮನನ್ನು ‍‍ಶ್ರೀರಾಮಚಂದ್ರ, ರಾಘವ, ದಶರಥ ನಂದನ, ರಘು ಕುಲತಿಲಕ ಎಂದೆಲ್ಲಾ ಕರೆಯುತ್ತಾರೆ. ನಮ್ಮ ಪುರಾಣಗಳಲ್ಲಿ ಶ್ರೀರಾಮನನ್ನು ಮಾತ್ರ ಮರ್ಯಾದಾ ಪುರುಷೋತ್ತಮ ಎಂದು ಕರೆಯಲಾಗುತ್ತದೆ. ಅಂದರೆ ಗೌರವಾನ್ವಿತ ಪುರಷರಲ್ಲೇ ಅಗ್ರಗಣ್ಯ ಎಂದು ಹೇಳಲಾಗುತ್ತದೆ. ಈ ಬಿರುದು ಶ್ರೀರಾಮನ ಘನತೆ, ನಡವಳಿಕೆ, ಸದ್ಗುಗುಣದ ಪ್ರತಿಬಿಂಬ. ರಾಮಾಯಣ ಓದಿದ ಎಲ್ಲರಿಗೂ ರಾಮನ ಈ ಗುಣಗಳ ಪರಿಚಯವಿರುತ್ತದೆ. ಪ್ರತಿಯೊಂದು ಜೀವಿಯಲ್ಲೂ ಉತ್ತಮವಾದದ್ದನ್ನೇ ನೋಡಿದ ಶ್ರೀರಾಮಚಂದ್ರನನ್ನು ಮರ್ಯಾದಾ ಪುರುಷೋತ್ತಮನಾಗಿ ಪೂಜಿಸಲಾಗುತ್ತದೆ. ಶ್ರೀ ರಾಮನ ಜೀವನವು ಸತ್ಯ, ಕರ್ತವ್ಯ, ಮತ್ತು ಸದ್ಗುಣಗಳಿಗೆ ಸಾಕ್ಷಿಯಾಗಿದೆ. ಹಾಗಾದರೆ ರಾಮನನ್ನು ಮರ್ಯಾದಾ ಪುರುಪೋತ್ತಮ ಎಂದು ಕರೆಯಲು ಕಾರಣಗಳೇನು? ರಾಮಾಯಣದ ಯಾವ ಸನ್ನಿವೇಶಗಳು ಅವನನ್ನು ಆ ರೀತಿ ಕರೆಯುವಂತೆ ಮಾಡಿತು? ನೋಡೋಣ ಬನ್ನಿ.

ಮರ್ಯಾದಾ ಪುರುಷೋತ್ತಮ ಎಂದರೇನು?

ಮರ್ಯಾದಾ ಪುರುಷೋತ್ತಮ; ಇದು ಎರಡು ಪದಗಳನ್ನೊಳಗೊಂಡಿರುವ ಒಂದು ಶಬ್ದ. ಮರ್ಯಾದಾ ಇದು ಸಂಸ್ಕೃತದ ಪದವಾಗಿದೆ. ಇದರ ಅರ್ಥ ಘನತೆ ಎಂದಾಗಿದೆ. ಮನುಷ್ಯ ಎಂತಹುದೇ ಕಠಿಣ ಸಂದರ್ಭಗಳಲ್ಲೂ ನೈತಿಕ ಮೌಲ್ಯಗಳಿಗೆ ಬದ್ಧರಾಗಿರುವುದನ್ನು ಸೂಚಿಸುತ್ತದೆ. ಪುರುಷೋತ್ತಮ ಎಂಬ ಶಬ್ದವು ಎರಡು ಪದಗಳ ಸಂಯೋಜನೆಯಾಗಿದೆ. ಇದರಲ್ಲಿ ಮೊದಲನೆಯದು ಪುರುಷ ಮತ್ತು ಎರಡನೆಯದು ಉತ್ತಮ. ಅಂದರೆ ಸದ್ಗುಣಗಳ ವಿಷಯದಲ್ಲಿ ಪುರುಷರಲ್ಲೇ ಉತ್ತಮ ಎಂಬುದಾಗಿದೆ.

ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮನನ್ನಾಗಿಸಿದ ಗುಣಗಳು

ಪಿತೃವಾಕ್ಯ ಪರಿಪಾಲಕ

ರಾಮನ ತಂದೆಯಾದ ರಾಜ ದಶರಥನು ರಾಣಿ ಕೈಕೇಯಿಗೆ ನೀಡಿದ ವಚನದ ಪಾಲನೆ ಮಾಡುವ ಸುಲವಾಗಿ 14 ವರ್ಷಗಳ ವನವಾಸವನ್ನು ಒಪ್ಪಿಕೊಂಡನು. ಆ ಮೂಲಕ ಕುಟುಂಬ ಮತ್ತು ಕರ್ತವ್ಯದ ಕಡೆಗೆ ತನಿಗಿರುವ ಬದ್ಧತೆಯನ್ನು ತೋರಿಸಿದನು.

ಸಹೋದರನ ಮೇಲಿರುವ ಪ್ರೀತಿ

ದಶರಥನ ನಂತರ ಸಿಂಹಾಸನದ ಉತ್ತರಾಧಿಕಾರಿಯಾಗಿದ್ದರೂ ಸಹ ರಾಮನು ತನ್ನ ಸಹೋದರ ಭರತನಿಗೆ ರಾಜ್ಯಭಾರ ಮಾಡಲು ಹೇಳಿದನು. ಇದರೊಂದಿಗೆ ಕುಟುಂಬದ ಜನರ ನಡುವೆ ಇರಬೇಕಾದ ನಿಸ್ವಾರ್ಥತೆ ಮತ್ತು ಪ್ರೀತಿಯನ್ನು ತೋರಿಸಿಕೊಟ್ಟನು.

ಪತಿಯ ಕರ್ತವ್ಯ

ರಾಮನು ತನ್ನ ಪತ್ನಿ ಸೀತಾದೇವಿಯನ್ನು ರಾವಣನಿಂದ ರಕ್ಷಿಸಿದನು. ಸೀತಾ ಮಾತೆಯ ಗೌರವವನ್ನು ಎತ್ತಿ ಹಿಡಿಯಲು ತಾನೇ ಸ್ವತಃ ಅವಳನ್ನು ಹುಡುಕಿ ಹೊರಟನು. ರಾವಣನೊಂದಿಗೆ ಯುದ್ಧ ಮಾಡಿ ಸೀತೆಯನ್ನು ಕರೆತಂದನು. ಪತ್ನಿಗೆ ಪತಿಯು ನೀಡಬೇಕಾದ ಗೌರವ ಮತ್ತು ರಕ್ಷಣೆಯನ್ನು ಇದು ಸೂಚಿಸುತ್ತದೆ.

ರಾಮ ರಾಜ್ಯ ಸ್ಥಾಪಿಸಿದನು

ರಾಮನು ತನ್ನ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಂಡನು. ಅವರಿಗೆ ಸಿಗಬೇಕಾದ ಸಂತೋಷ ಮತ್ತು ಸುರಕ್ಷತೆಯನ್ನು ನೀಡಿದನು. ವೈಯಕ್ತಿಕ ಸಂತೋಷಕ್ಕಿಂತ ಪ್ರಜೆಗಳ ಕಲ್ಯಾಣವೇ ದೊಡ್ಡದು ಎಂದು ತೋರಿಸಿದನು. ಒಬ್ಬ ಆದರ್ಶ ರಾಜನು ಹೇಗಿರಬೇಕೆಂದು ತೋರಿಸಿಕೊಟ್ಟನು.

ಸ್ನೇಹಿತನಿಗಿರಬೇಕಾದ ನಿಷ್ಠೆ

ಶ್ರೀರಾಮನು ಸ್ನೇಹಕ್ಕೆ ಎಷ್ಟು ಮಹತ್ವ ನೀಡಿದ್ದಾನೆ ಎಂಬುದು ಅವನು ಸುಗ್ರೀವ ಮತ್ತು ಹನುಮಂತರೊಂದಿಗೆ ಇರುವ ಒಡನಾಟದಿಂದ ತಿಳಿದು ಬರುತ್ತದೆ. ಪರಸ್ಪರ ಗೌರವ ಮತ್ತು ಸಮಾನತೆಯೇ ಸ್ನೇಹದ ಆಧಾರ ಎಂದು ತನ್ನ ನಡವಳಿಕೆಯಿಂದ ಜಗತ್ತಿಗೆ ಸಾರಿದನು.

ಧರ್ಮ ಪರಿಪಾಲಕ

ರಾವಣನನ್ನು ಸಂಹರಿಸಿದ ರಾಮನು, ಆ ಮೂಲಕ ದುಷ್ಟ ಶಕ್ತಿಯನ್ನು ನಾಶ ಮಾಡಿ, ಸತ್ಯ, ಧರ್ಮವನ್ನು ಕಾಪಾಡಿದನು. ನೈತಿಕ ಮತ್ತು ಆಧ್ಯಾತ್ಮಿಕ ಸಿದ್ಧಾಂತವನ್ನು ಎತ್ತಿ ಹಿಡಿದನು.

ಈ ಎಲ್ಲಾ ಕಾರಣಗಳಿಂದ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲಾಗುತ್ತದೆ. ಅವನಲ್ಲಿರುವ ಪ್ರೀತಿ, ದಯೆ, ಕರುಣೆ, ಸಮಾನತೆಯಂಥ ಸನ್ನಡತೆಗಳು ಇಂದಿಗೂ, ಎಂದೆಂದಿಗೂ ಆದರ್ಶವಾಗಿದೆ.

(ಅರ್ಚನಾ ವಿ ಭಟ್)‌

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.