ಬಾಲರಾಮನ ಪ್ರಾಣಪ್ರತಿಷ್ಠೆಗೆ ಜ 22 ಏಕೆ ಶ್ರೇಷ್ಠ? ಅಯೋಧ್ಯೆ ಅತಿ ದೊಡ್ಡ ಶಕ್ತಿ ಕೇಂದ್ರವಾಗಲಿದೆ; ಪ್ರಾಣಪ್ರತಿಷ್ಠಾಪನಾ ಮುಹೂರ್ತದ ವಿಶ್ಲೇಷಣೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬಾಲರಾಮನ ಪ್ರಾಣಪ್ರತಿಷ್ಠೆಗೆ ಜ 22 ಏಕೆ ಶ್ರೇಷ್ಠ? ಅಯೋಧ್ಯೆ ಅತಿ ದೊಡ್ಡ ಶಕ್ತಿ ಕೇಂದ್ರವಾಗಲಿದೆ; ಪ್ರಾಣಪ್ರತಿಷ್ಠಾಪನಾ ಮುಹೂರ್ತದ ವಿಶ್ಲೇಷಣೆ

ಬಾಲರಾಮನ ಪ್ರಾಣಪ್ರತಿಷ್ಠೆಗೆ ಜ 22 ಏಕೆ ಶ್ರೇಷ್ಠ? ಅಯೋಧ್ಯೆ ಅತಿ ದೊಡ್ಡ ಶಕ್ತಿ ಕೇಂದ್ರವಾಗಲಿದೆ; ಪ್ರಾಣಪ್ರತಿಷ್ಠಾಪನಾ ಮುಹೂರ್ತದ ವಿಶ್ಲೇಷಣೆ

Ayodhya Ram Mandir: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಜ 22 ನೇ ದಿನಾಂಕವನ್ನೇ ಏಕೆ ಆರಿಸಿಕೊಳ್ಳಲಾಯಿತು ಎಂಬ ಕುತೂಹಲ ನಿಮಗೂ ಇರಬಹುದು. ಜ್ಯೋತಿಷ್ಯದ ಪ್ರಕಾರ ಈ ದಿನಕ್ಕೆ ಇರುವ ಮಹತ್ವವನ್ನು ವಿವರಿಸಿದ್ದಾರೆ ಜ್ಯೋತಿಷಿ ಎಚ್‌ ಸತೀಶ್‌.

ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಜ್ಜಾಗಿರುವ ಅಯೋಧ್ಯೆ ರಾಮಮಂದಿರ
ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಜ್ಜಾಗಿರುವ ಅಯೋಧ್ಯೆ ರಾಮಮಂದಿರ

ಭಾರತದಾದ್ಯಂತ ಜನರು ರಾಮಮಂದಿರ ಉದ್ಘಾಟನೆಯ ಕ್ಷಣಕ್ಕೆ ಎದುರು ನೋಡುತ್ತಿದ್ದಾರೆ. ಅಯೋಧ್ಯೆ ಮಾತ್ರವಲ್ಲದೆ, ದೇಶದಾದ್ಯಂತ ಇರುವ ದೇಗುಲಗಳಲ್ಲಿ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಮಮಂದಿರವು ಜ 22ರಂದು ಲೋಕಾರ್ಪಣೆಗೊಳ್ಳುತ್ತಿದೆ. ಈ ಹೊತ್ತಿನಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಗೆ ಜ 22 ನೇ ತಾರೀಖನ್ನು ಏಕೆ ಆರಿಸಿಕೊಳ್ಳಲಾಯಿತು ಎಂಬ ಪ್ರಶ್ನೆಯು ಸಹಜ. ಇದಕ್ಕೆ ಉತ್ತರ ಇಲ್ಲಿದೆ. ಜೊತೆಗೆ ಅಯೋಧ್ಯೆ ಶ್ರೀರಾಮ ಮಂದಿರ ಮಹತ್ವ ಹಾಗೂ ಮಹಿಮೆಯ ಕುರಿತೂ ಈ ಲೇಖನದಲ್ಲಿ ವಿವರಿಸಲಾಗಿದೆ.

ಬಾಲರಾಮನ ಪ್ರತಿಷ್ಠಾಪನೆಯು 2024ರ ಪುಷ್ಯಮಾಸದ ಶುಕ್ಲಪಕ್ಷದ ದ್ವಾದಶಿಯ ದಿನದಂದು ನಡೆಯಲಿದೆ. ಮುಖ್ಯವಾಗಿ ಮೃಗಶಿರ ನಕ್ಷತ್ರದ ಎರಡನೆ ಪಾದವಿದೆ. ಅದರ ಕುಂಡಲಿಯನ್ನು ಇಲ್ಲಿ ನೀಡಲಾಗಿದೆ.

ಕುಂಡಲಿ
ಕುಂಡಲಿ

ಯಾವುದೇ ಕೆಲಸ ಕಾರ್ಯಗಳಾದರೂ ಲಗ್ನವು ಅತಿ ಮುಖ್ಯವಾಗುತ್ತದೆ. ಅಯೋಧ್ಯೆಯಲ್ಲಿನ ಶ್ರೀರಾಮಚಂದ್ರ ಸ್ವಾಮಿಯ ಪ್ರತಿಷ್ಠಾಪನೆಯು ದೈವಬಲ, ತಾರಾಬಲ, ಗುರುಬಲ, ದಿನಬಲಗಳನ್ನು ಹೊಂದಿವೆ. ಇಲ್ಲಿ ಲಗ್ನ ಕುಂಡಲಿ ಮತ್ತು ನವಾಂಶ ಕುಂಡಲಿಗಳನ್ನು ನೀಡಲಾಗಿದೆ. ಈ ದೇವಾಲಯವು ಕೇವಲ ಭಾರತ ಮಾತ್ರವಲ್ಲ ಇಡೀ ಪ್ರಪಂಚದ ಕೇಂದ್ರಬಿಂದು ಆಗಲಿದೆ. ರಾಮಾಯಣವನ್ನು ತಿಳಿದವರಿಂದ ಹಿಡಿದು ತಿಳಿಯದವರು ಸಹ ಈ ದೇವಾಲಯಕ್ಕೆ ಆಗಮಿಸುತ್ತಾರೆ. ಮುಖ್ಯವಾಗಿ ಮುಂದಿನ ದಿನಗಳಲ್ಲಿ ಮಹಿಳೆಯರ ದೊಡ್ಡ ಆಸೆಯೇ ಅಯೋಧ್ಯೆಗೆ ಭೇಟಿ ನೀಡಬೇಕೆಂಬ ವಿಚಾರ ಎಂದು ಕಂಡು ಬರುತ್ತದೆ.

ಮೃಗಶಿರ ನಕ್ಷತ್ರವು ದೇವತಾ ಪ್ರತಿಷ್ಠಾಪನೆಗೆ ಶ್ರೇಷ್ಠವಾದ ನಕ್ಷತ್ರವಾಗಿದೆ. ಸೋಮವಾರದಂದು ಪ್ರತಿಷ್ಠಾಪನಾ ಕಾರ್ಯ ನಡೆವ ಕಾರಣ ಆ ದೇವಾಲಯಕ್ಕೆ ಹೆಚ್ಚಿನ ಜನಪ್ರಿಯತೆ, ನಂಬಿಕೆ ದೊರೆತು ಸಾವಿರಾರು ವರ್ಷಗಳ ಕಾಲ ಉಳಿಯುತ್ತದೆ. ಆದರೆ ದೇವಾಲಯಕ್ಕೆ ಸಂಬಂಧಿಸಿದಂತೆ ವಾದ ವಿವಾದಗಳು ಮುಂದುವರಿಯುವ ಸಾಧ್ಯತೆ ಇದೆ. ಮುಖ್ಯವಾಗಿ ಶುಕ್ಲಪಕ್ಷವು ದೇವತಾ ಪ್ರತಿಷ್ಠಾಪನಾ ಕಾರ್ಯಕ್ಕೆ ಉತ್ತಮವಾಗಿರುತ್ತದೆ. ಆದರೆ ಕೆಲವು ಧಾರ್ಮಿಕ ಗ್ರಂಥಗಳ ಪ್ರಕಾರ ದ್ವಾದಶಿ ತಿಥಿ ದೇವತಾ ಪ್ರತಿಷ್ಠಾಪನಾ ಕಾರ್ಯಕ್ಕೆ ಉಪಯುಕ್ತವಲ್ಲ. ದಿನದ ಯೋಗವು ಬ್ರಹ್ಮ ಯೋಗವಾಗಿದೆ. ಮೇಷ ಲಗ್ನವು ದೇವರ ಪ್ರತಿಷ್ಠಾಪನೆಗೆ ಅತಿ ಶ್ರೇಷ್ಠ ಎಂದು ಹೇಳಲಾಗಿದೆ. ಗೋಚಾರದಲ್ಲಿ ಸೂರ್ಯನಿರುವ ನಕ್ಷತ್ರದಿಂದ ದಿನ ನಕ್ಷತ್ರವು 12ನೆಯ ನಕ್ಷತ್ರವಾಗುತ್ತದೆ. ಇದರಿಂದ ನಿರೀಕ್ಷೆಗೂ ಮೀರಿದ ಶಕ್ತಿಯು ಈ ಸ್ಥಳಕ್ಕೆ ದೊರೆಯುತ್ತದೆ.

ನವಮ ಭಾವದ ಅಧಿಪತಿಯಾದ ಗುರುವು ಲಗ್ನ ಕುಂಡಲಿಯಲ್ಲಿ ಲಗ್ನದಲ್ಲಿ ನೆಲೆಸಿದ್ದಾನೆ. ನವಾಂಶ ಕುಂಡಲಿಯಲ್ಲಿ ದಶಮಭಾವದಲ್ಲಿ ಉಚ್ಚ ಸ್ಥಿತಿಯಲ್ಲಿ ನೆಲೆಸಿದ್ದಾನೆ. ಈ ಕಾರಣದಿಂದ ಈ ಸ್ಥಳಕ್ಕೆ ಗುರುಬಲ ದೊರೆತು ಪೂಜಾ ಕಾರ್ಯಕ್ರಮಗಳು ಸದಾಕಾಲ ಸುಗಮವಾಗಿ ನಡೆಯಲಿವೆ. ಹಲವು ಪವಾಡಗಳಿಗೆ ಮುಂದಿನ ದಿನಗಳಲ್ಲಿ ಅಯೋಧ್ಯೆಯು ಸಾಕ್ಷಿಯಾಗಲಿದೆ. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ತಮ್ಮದೇ ಆದ ಗುರಿ ಇರುತ್ತದೆ. ಹಾಗೆಯೇ ಎಲ್ಲರಲ್ಲಿಯೂ ಸ್ವಾರ್ಥದ ಭಾವನೆ ಇರುತ್ತದೆ. ಆದರೆ ಸ್ಥಾನ ಬಲದಿಂದ ಇಲ್ಲಿಗೆ ಆಗಮಿಸುವ ಎಲ್ಲರಿಗೂ ತಾವೆಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ. ಇದರಿಂದ ಈ ದೇವಾಲಯವು ಹಿಂದೂಗಳ ಒಗ್ಗಟ್ಟಿನ ಸಂಕೇತವಾಗಲಿದೆ.

ಬರುವ ದಿನಗಳಲ್ಲಿ ಈ ಪ್ರದೇಶದ ಆಸುಪಾಸು ದುರ್ಗಾದೇವಿಯೊಂದರ ದೇವಾಲಯ ಆರಂಭವಾಗುವ ಸೂಚನೆಗಳಿವೆ. ಪಂಚಮಾಧಿಪತಿ ಆದ ರವಿಯು ದಶಮಭಾವದಲ್ಲಿ ನೆಲೆಸಿದ್ದಾನೆ. ಈ ಕಾರಣದಿಂದಾಗಿ ದಿನೇ ದಿನೇ ಅಯೋಧ್ಯೆಗೆ ಬರುವ ಜನರ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಸರ್ಕಾರವು ಈ ದೇವಾಲಯಕ್ಕಾಗಿ ಪ್ರತ್ಯೇಕವಾದ ಕಾನೂನನ್ನು ರೂಪಿಸಬೇಕಾಗುತ್ತದೆ. ಶನಿಗ್ರಹವು ಅಧಿಪತಿಯಾಗುತ್ತಾನೆ. ಶನಿಯು ಕುಂಡಲಿಯ ಪ್ರಕಾರ ಲಾಭ ಸ್ಥಾನದಲ್ಲಿ ನೆನೆಸಿದ್ದಾನೆ. ಇದರಿಂದಾಗಿ ಆದಾಯದ ವಿಚಾರದಲ್ಲಿಯೂ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತದೆ. ಮಾತ್ರವಲ್ಲದೆ ಅನೇಕ ಜನೋಪಕಾರಿ ಕೆಲಸ ಕಾರ್ಯಗಳು ಈ ತಳದಲ್ಲಿ ನಡೆಯಲಿದೆ.

(ಬರಹ: ಎಚ್‌.ಸತೀಶ್)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.