ಪ್ರಥಮಪೂಜಿತ ಗಣೇಶ, ಐಶ್ವರ್ಯ ದೇವತೆ ಲಕ್ಷ್ಮೀದೇವಿಗೆ ಪ್ರಿಯವಾದ ಹೂವುಗಳಿವು, ಗಣಪತಿ ಪೂಜೆಗೆ ಇದು ನಿಷಿದ್ಧ-rituals worship lord ganapati and laxmi with these favorite flowers and get their blessings easily arc ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪ್ರಥಮಪೂಜಿತ ಗಣೇಶ, ಐಶ್ವರ್ಯ ದೇವತೆ ಲಕ್ಷ್ಮೀದೇವಿಗೆ ಪ್ರಿಯವಾದ ಹೂವುಗಳಿವು, ಗಣಪತಿ ಪೂಜೆಗೆ ಇದು ನಿಷಿದ್ಧ

ಪ್ರಥಮಪೂಜಿತ ಗಣೇಶ, ಐಶ್ವರ್ಯ ದೇವತೆ ಲಕ್ಷ್ಮೀದೇವಿಗೆ ಪ್ರಿಯವಾದ ಹೂವುಗಳಿವು, ಗಣಪತಿ ಪೂಜೆಗೆ ಇದು ನಿಷಿದ್ಧ

ಯಾವುದೇ ಪೂಜೆ, ಹೊಸ ಕಾರ್ಯಗಳನ್ನು ಮಾಡುವ ಮೊದಲು ಗಣಪತಿ ದೇವರನ್ನು ಪೂಜಿಸಲಾಗುತ್ತದೆ. ಗಣಾಧಿಪತಿಯಾದ ವಿನಾಯಕ ಮತ್ತು ಲಕ್ಷ್ಮೀ ದೇವಿಯ ಪೂಜೆಗೆ ಕೆಲವು ಹೂವುಗಳು ಉತ್ತಮ ಮತ್ತು ಕೆಲವು ನಿಷಿದ್ಧ ಎಂದು ಹೇಳಲಾಗುತ್ತದೆ. ಹಾಗಾದರೆ ಗಣೇಶ ಮತ್ತು ಲಕ್ಷ್ಮೀ ದೇವಿಗೆ ಪ್ರಿಯವಾದ ಹೂವುಗಳು ಯಾವುವು ಇಲ್ಲಿದೆ ಓದಿ.

ಗಣೇಶ ಮತ್ತು ಲಕ್ಷ್ಮೀ ದೇವಿಗೆ ಈ ಪುಷ್ಪಗಳನ್ನು ಅರ್ಪಿಸಿ
ಗಣೇಶ ಮತ್ತು ಲಕ್ಷ್ಮೀ ದೇವಿಗೆ ಈ ಪುಷ್ಪಗಳನ್ನು ಅರ್ಪಿಸಿ

ದೇವರ ಪೂಜೆಯಲ್ಲಿ ಹೂವುಗಳಿಗೆ ಅಗ್ರ ಸ್ಥಾನವಿದೆ. ದೇವರನ್ನು ಅಲಂಕರಿಸಲು ಪುಷ್ಪಗಳನ್ನು ಬಳಸಲಾಗುತ್ತದೆ. ಮನೆ ಮತ್ತು ದೇವಸ್ಥಾನಗಳಲ್ಲಿ ವಿವಿಧ ಜಾತಿಯ ಬಣ್ಣ ಬಣ್ಣದ ಹೂವುಗಳನ್ನು ದೇವರಿಗೆ ಭಕ್ತಿಯಿಂದ ಅರ್ಪಿಸಲಾಗುತ್ತದೆ. ಒಂದೊಂದು ದೇವರಿಗೆ ಒಂದೊಂದು ಜಾತಿಯ ಹೂವುಗಳು ಪ್ರಿಯವಾಗಿದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಈಶ್ವರನಿಗೆ ಪತ್ರೆ, ಕೃಷ್ಣನಿಗೆ ತುಳಸಿ, ಗಣಪತಿಗೆ ಗರಿಕೆ ಹೀಗೆ ಕೆಲವು ದೇವರುಗಳಿಗೆ ವಿಶೇಷ ಪುಷ್ಪಗಳನ್ನು ಅರ್ಪಿಸಿ ಪೂಜಿಸಲಾಗುತ್ತದೆ. ಎಲ್ಲಾ ಪೂಜೆಗಳಲ್ಲೂ ಗಣಪತಿಗೆ ಮೊದಲು ಪೂಜೆ ಸಲ್ಲಿಸುತ್ತದೆ. ಯಾವುದೇ ರೀತಿಯ ವಿಘ್ನಗಳಿಲ್ಲದೆ ಕಾರ್ಯ ಸಾಗಲೆಂದು ಪೂಜೆ ಮಾಡಲಾಗುತ್ತದೆ. ಪ್ರಥಮಪೂಜ್ಯ ಗಣೇಶನಿಗೆ ಐಶ್ವರ್ಯ ದೇವತೆ ಲಕ್ಷ್ಮಿಗೆ ಕೆಲವು ಹೂವುಗಳೆಂದರೆ ಬಲು ಪ್ರೀತಿ ಎಂದು ಹೇಳುತ್ತಾರೆ. ಹಾಗಾದರೆ ಗಣೇಶ ಮತ್ತು ಲಕ್ಷ್ಮೀ ದೇವಿಗೆ ಪ್ರಿಯವಾದ ಹೂವುಗಳು ಯಾವುವು ಎಂದು ತಿಳಿಯೋಣ.

ಗಣಪತಿಗೆ ಪ್ರಿಯವಾದ ಹೂವುಗಳು ಯಾವುವು?

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭಾ
ನಿರ್ವಿಘ್ನಂ ಕುರುಮೇದೇವ ಸರ್ವಕಾರ್ಯೇಷು ಸರ್ವದಾ ||

ಯಾವುದೇ ಪೂಜೆಗೆ ಮೊದಲು ಗಣಪತಿಯನ್ನು ಪೂಜಿಸಲಾಗುತ್ತದೆ. ಅದಕ್ಕಾಗಿಯೇ ಗಣೇಶನನ್ನು ಪ್ರಥಮ ಪೂಜ್ಯ ಎಂದು ಕರೆಯುತ್ತಾರೆ. ಎಲ್ಲಾ ಪೂಜೆಗಳು ಸಾಂಗವಾಗಿ ನೆರವೇರಲು ವಿಘ್ನಹರ್ತನನ್ನು ಪೂಜಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ರೂಢಿಯಾಗಿದೆ. ಕಮಲವು ಗಣಪತಿಗೆ ಅತ್ಯಂತ ಪ್ರಿಯವಾದ ಹೂವು. ಬಿಳಿ ಕಮಲದ ಹೂವುಗಳಿಂದ ಗಣಪತಿಯನ್ನು ಪೂಜಿಸಿದರೆ ಎಲ್ಲಾ ಕಾರ್ಯಗಳು ನಿರ್ವಿಘ್ನದಿಂದ ಸಾಗುತ್ತದೆ ಮತ್ತು ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಎಕ್ಕೆ ಹೂವು, ಸೇವಂತಿಗೆ, ಶಂಖಪುಷ್ಪ, ಬಿಳಿ, ಕೆಂಪು ಹಳದಿ ಕಣಗಿಲ ಹೂವು, ದುಂಡು ಮಲ್ಲಿಗೆ ಹೂವುಗಳಿಂದಲೂ ಗಣೇಶನನ್ನು ಪೂಜಿಸಬಹುದಾಗಿದೆ. ಶಿವನಿಗೆ ಪ್ರಿಯವಾದ ಎಲ್ಲಾ ಹೂವುಗಳಿಂದ ಗಣಪತಿಯನ್ನೂ ಪೂಜಿಸಬಹುದು. ಏಕೆಂದರೆ ಗಣಪತಿಯು ಶಿವಗಣಗಳಲ್ಲಿ ಒಬ್ಬನಾಗಿರುವುದರಿಂದ ಈ ರೀತಿ ಹೇಳಲಾಗುತ್ತದೆ. ಗಜಮುಖನನ್ನು ಎಲ್ಲಾ ಹೂವುಗಳಿಂದಲೂ ಪೂಜಿಸಬಹುದು ಎಂದು ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ಹೇಳುತ್ತಾರೆ.

ಗಣಪತಿ ದೇವರು ಕಮಲ, ತಾವರೆ ಹೂವುಗಳನ್ನು ಧರಿಸಿರುವುದನ್ನು ಪುರಾಣಗಳು ಉಲ್ಲೇಖಿಸುತ್ತವೆ. ಮುದ್ಗಲ ಪುರಾಣದ ಪ್ರಕಾರ ಕಮಲ, ನೈದಿಲೆ, ಬಿಳಿ ಮತ್ತು ಕೆಂಪು ಬಣ್ಣದ ಹೂವುಗಳು ಗಣಪತಿಗೆ ಪ್ರಿಯವಾಗುತ್ತವೆ ಎಂದು ವಿವರಿಸಲಾಗಿದೆ. ವಿನಾಯಕನಿಗೆ ಪ್ರಿಯವಾದ ಇನ್ನೊಂದು ಹೂವೆಂದರೆ ಕಣಗಿಲ ಹೂವು. ಕಣಗಿಲ ಮರವು ವಿನಾಯಕನ ದೇವಸ್ಥಾನದಲ್ಲಿದ್ದರೆ ಆ ಮರಕ್ಕೆ ನಮಸ್ಕರಿಸುವುದು ಅತ್ಯಂತ ಶ್ರೇಯಸ್ಕರ ಎಂದು ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳಿದ್ದಾರೆ.

ಗಣಪತಿ ಪೂಜೆಗೆ ಯಾವುದು ನಿಷಿದ್ಧ?

ಗಣಪತಿ ಪೂಜೆಯಲ್ಲಿ ತುಳಸಿ ಎಲೆ ನಿಷಿದ್ಧವಾಗಿರುವುದರಿಂದ ಪುಷ್ಪ ಪೂಜೆಗಿಂತ ಗರಿಕೆಯಿಂದ ಪೂಜಸಿದರೆ ಗಣೇಶನ ಕರುಣೆಗೆ ‍ಪಾತ್ರರಾಗಬಹುದು ಎಂದು ಚಿಲಕರ್ಮತಿಗಳು ತಿಳಿಸಿದ್ದಾರೆ.

ಲಕ್ಷ್ಮೀ ದೇವಿಗೆ ಪ್ರಿಯವಾದ ಹೂಗಳು

ಲಕ್ಷ್ಮೀ ಕ್ಷೀರ ಸಮುದ್ರರಾಜ ತನಯಂ ಶ್ರೀರಂಗ ಧಾಮೇಶ್ವರೀಂ
ದಾಸಿಭೂತ ಸಮಸ್ತ ದೇವ ವನಿತಾಂ ಲೋಕೈಕ ದೀಪಾಂಕುರಮ್ ||

ಶ್ರೀ ಮನ್ಮಂದ ಕಟಾಕ್ಷ ಲಬ್ಧ ವಿಭವ ಗೃಹ್ಮೇಂದ್ರ ಗಂಗಾಧರಂತ್ವಾಂ 
ತ್ರೈಲೋಕ್ಯ ಕುಟುಂಬಿನಿಂ ಸರಸಿಜಾಂ ವಂದೇಮುಕುಂದ ಪ್ರಿಯಾಂ||

ವಿಷ್ಣುವನ್ನು ಪೂಜಿಸುವ ಎಲ್ಲಾ ಹೂವುಗಳು ಲಕ್ಷ್ಮೀ ದೇವಿಯನ್ನು ಪೂಜಿಸಲು ಅರ್ಹವೆಂದು ಶಾಸ್ತ್ರಗಳು ಹೇಳುತ್ತವೆ. ಖ್ಯಾತ ಜ್ಯೋತಿಷಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರ ಪ್ರಕಾರ ಕಮಲದ ಹೂವುಗಳಿಂದ ಶ್ರೀಲಕ್ಷ್ಮೀಯನ್ನು ಪೂಜಿಸುವುದು ಅತ್ಯಂತ ಮಂಗಳಕರವಾಗಿದೆ.

ಕೇಸರಿಪುಷ್ಪ, ಕಮಲ, ಕೆಂಪು ನೈದಿಲೆ, ದಾಸವಾಳ, ಗುಲಾಬಿ, ವಿಷ್ಣುಕಾಂತಿ, ಶಂಖಪುಷ್ಪ, ಸಂಪಿಗೆ, ಎಕ್ಕೆ ಹೂವು, ಧವನ, ತೇರು ಹೂವು (ಪ ಹೂವು), ಪಾರಿಜಾತ, ಮಲ್ಲಿಗೆ, ಸಣ್ಣ ಮಲ್ಲಿಗೆ ಹೂವುಗಳು ಲಕ್ಷ್ಮೀ ದೇವಿಗೆ ಪ್ರಿಯವಾದ ಹೂವುಗಳಾಗಿವೆ. ಪರಿಮಳ ಭರಿತ ಹೂವುಗಳಿಂದ ಲಕ್ಷ್ಮೀ ದೇವಿ‌ಯನ್ನು  ಅಲಂಕರಿಸುವುದು ಮತ್ತು ಪೂಜೆ ಮಾಡುವುದು ದೇವಿಗೆ ಇಷ್ಟವಾಗುತ್ತದೆ ಎಂದು ಚಿಲಕಮರ್ತಿಯವರು ತಿಳಿಸಿದ್ದಾರೆ. 

ಲಕ್ಷ್ಮೀ ದೇವಿಗೆ ಹೂವಿನ ಪೂಜೆಯ ಸಮಯದಲ್ಲಿ, ಹೂವುಗಳನ್ನು ಅತ್ಯಂತ ಭಕ್ತಿಯಿಂದ ಅವಳ ಪಾದಗಳಿಗೆ ಇಡಲಾಗುತ್ತದೆ.ಹಾಗೆ ಮಾಡುವುದರಿಂದ ದೇವಿ ಒಲಿಯುತ್ತಾಳೆ. ಲಕ್ಷ್ಮೀ ದೇವಿಯನ್ನು ತಿಳಿ ಕೆಂಪು ಬಣ್ಣದ ಹೂವುಗಳಿಂದ ಪೂಜಿಸುವುದರಿಂದ, ಆರೋಗ್ಯ ಮತ್ತು ಸಂಪತ್ತು ಹೆಚ್ಚಾಗುತ್ತದೆ.

ಶುಕ್ರವಾರದಂದು ಲಕ್ಷ್ಮೀದೇವಿಯನ್ನು ಅವಳ ಪ್ರಿಯವಾದ ಹೂವುಗಳಿಂದ ಪೂಜಿಸುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಮಂಗಳವಾರದಂದು ಪೂಜಿಸುವುದರಿಂದ ದಾರಿದ್ರ್ಯ ನಾಶವಾಗುತ್ತದೆ ಎಂದು ಖ್ಯಾತ ಜ್ಯೋತಿಷಿ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ತಿಳಿಸಿದ್ದಾರೆ. 

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ. (ಫೋನ್‌ ನಂ. 94949 81000)
ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ. (ಫೋನ್‌ ನಂ. 94949 81000)
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.