Santan Saptami 2024: ಈ ಬಾರಿ ಸಂತಾನ ಸಪ್ತಮಿ ಉಪವಾಸ ವ್ರತಾಚರಣೆ ಯಾವಾಗ; ಮಂಗಳಕರ ಸಮಯ, ಪೂಜಾ ವಿಧಾನ
ಭಾದ್ರಪದ ಸಪ್ತಮಿ ತಿಥಿಯು ಸೆಪ್ಟೆಂಬರ್ 9ರಂದು ರಾತ್ರಿ ಆರಂಭವಾಗಿ 10ರಂದು ರಾತ್ರಿ ಶುಭಮುಹೂರ್ತ ಕೊನೆಗೊಳ್ಳುತ್ತದೆ. ಹಿಂದೂ ಪಂಚಾಂಗದ ಆಧಾರದ ಮೇಲೆ ಸಂತಾನ ಸಪ್ತಮಿಯನ್ನು ಸೆಪ್ಟೆಂಬರ್ 10ರ ಮಂಗಳವಾರ ಆಚರಿಸಲಾಗುತ್ತದೆ.
ಹಿಂದೂ ಧರ್ಮದಲ್ಲಿ ಸಂತಾನ ಸಪ್ತಮಿ ಉಪವಾಸಕ್ಕೆ (Santana Saptami 2024) ಮಹತ್ವವಿದೆ. ಈ ದಿನದಂದು ವಿವಾಹಿತ ಮಹಿಳೆಯರು ತಮ್ಮ ಮಕ್ಕಳ ಆರೋಗ್ಯ ಹಾಗೂ ಯೋಗಕ್ಷೇಮಕ್ಕಾಗಿ ಉಪವಾಸ ವ್ರತ ಕೈಗೊಳ್ಳುತ್ತಾರೆ. ಇದೇ ವೇಳೆ ಈ ದಿನ ಶಿವ ಹಾಗೂ ಪಾರ್ವತಿಯನ್ನು ಪೂಜಿಸಲಾಗುತ್ತದೆ. ಸಂತಾನ ಸಪ್ತಮಿಯ ಉಪವಾಸ ವ್ರತವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಆಚರಿಸಲಾಗುತ್ತದೆ. ವಿವಾಹಿತ ಮಹಿಳೆಯರಿಗೆ ಈ ದಿನ ವಿಶೇಷವಾಗಿದ್ದು, ಈ ಬಾರಿ ಸಂತಾನ ಸಪ್ತಮಿಯನ್ನು ಸೆಪ್ಟೆಂಬರ್ 10ರಂದು ಆಚರಿಸಲಾಗುತ್ತದೆ. 2024ರಲ್ಲಿ ಈ ಉಪವಾಸ ವೃತದ ಶುಭ ಮುಹೂರ್ತ ಕುರಿತ ಮಾಹಿತಿ ಇಲ್ಲಿದೆ.
ಹಿಂದೂ ಪಂಚಾಂಗದ ಪ್ರಕಾರ, ಭಾದ್ರಪದ ಸಪ್ತಮಿ ತಿಥಿಯು ಸೆಪ್ಟೆಂಬರ್ 9ರಂದು ರಾತ್ರಿ 9.53ಕ್ಕೆ ಪ್ರಾರಂಭವಾಗುತ್ತದೆ. ಇದೇ ವೇಳೆ ಸೆಪ್ಟೆಂಬರ್ 10ರಂದು ರಾತ್ರಿ 11:11ಕ್ಕೆ ಶುಭಮುಹೂರ್ತ ಕೊನೆಗೊಳ್ಳುತ್ತದೆ. ಹೀಗಾಗಿ ಪಂಚಾಂಗದ ಆಧಾರದ ಮೇಲೆ ಸಂತಾನ ಸಪ್ತಮಿಯನ್ನು 2024ರ ಸೆಪ್ಟೆಂಬರ್ 10ರ ಮಂಗಳವಾರ ಆಚರಿಸಲಾಗುತ್ತದೆ. ಹೀಗಾಗಿ ಉಪವಾಸ ವೃತ ಬಯಸುವವರು ಸೆಪ್ಟೆಂಬರ್ 10ರಂದು ಮಾತ್ರ ಉಪವಾಸ ವ್ರತವನ್ನು ಆಚರಿಸಬೇಕು.
ಸಂತಾನ ಸಪ್ತಮಿ ಪೂಜಾ ವಿಧಾನ
- ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಶಿವ ಮತ್ತು ಪಾರ್ವತಿ ದೇವಿಯ ವಿಗ್ರಹ ಅಥವಾ ಫೋಟೋ ಮುಂದೆ ಉಪವಾಸ ಆರಂಭಿಸಿ ಪೂಜಾ ಪ್ರತಿಜ್ಞೆ ಮಾಡಬೇಕು.
- ಬಲಿಪೀಠದ ಮೇಲೆ ಕೆಂಪು ಬಟ್ಟೆಯನ್ನು ಹರಡಿ ಮತ್ತು ಅದರ ಮೇಲೆ ಶಿವ ಪಾರ್ವತಿಯ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು.
- ಕಲಶದಲ್ಲಿ ನೀರು ತುಂಬಿಸಿ ಅದರ ಮೇಲೆ ತೆಂಗಿನಕಾಯಿ ಮತ್ತು ಅದರ ಸುತ್ತಲೂ ಮಾವಿನ ಎಲೆಗಳನ್ನು ಇಡಬೇಕು.
- ವಿಗ್ರಹಕ್ಕೆ ಹೂವು ಹಾಕಿ, ಅಕ್ಕಿ, ವೀಳ್ಯದೆಲೆ, ವೀಳ್ಯದೆಲೆ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ಅರ್ಪಿಸಬೇಕು. ತುಪ್ಪದ ದೀಪವನ್ನು ಬೆಳಗಬೇಕು.
- ಶಿವ ಮತ್ತು ತಾಯಿ ಪಾರ್ವತಿಗೆ ವಸ್ತ್ರಗಳನ್ನು ಅರ್ಪಿಸುವ ಕ್ರಮವಿದೆ.
- ಉಪವಾಸ ವ್ರತ ಮಾಡುವವರು ಸಂತಾನ ಸಪ್ತಮಿ ವ್ರತ ಕಥಾವನ್ನು ಪಠಿಸಿ ನಂತರ ಆರತಿಯೊಂದಿಗೆ ಪೂಜೆಯನ್ನು ಪೂರ್ಣಗೊಳಿಸಬೇಕು.
- ಪೂಜೆಯ ಸಮಯದಲ್ಲಿ ಮಾಡಿದ ತಪ್ಪುಗಳಿಗೆ ಕ್ಷಮೆ ಕೇಳುವ ಕ್ರಮವಿದೆ. ಇದೇ ವೇಳೆ ಹಿರಿಯರ ಆಶೀರ್ವಾದ ಪಡೆದು ಶುಭಫಲಗಳನ್ನು ಪಡೆಯಬಹುದು.
- ಮರುದಿನ ಪ್ರಸಾದ ಸೇವಿಸುವ ಮೂಲಕ ಉಪವಾಸ ವ್ರತ ಬಿಡಬೇಕು.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.