ಕರಾವಳಿ ಉತ್ಸವ 2024: ಪ್ರಮುಖ ಆಕರ್ಷಣೆ ಹೆಲಿಕಾಪ್ಟರ್ ತಿರುಗಾಟಕ್ಕೆ ಆರಂಭದಲ್ಲೇ ತೊಡಕು, ಎಟಿಸಿ ಕ್ಲಿಯರೆನ್ಸ್ ಸಮಸ್ಯೆ, ಏನಿದು ಸಂಕಷ್ಟ
ಕನ್ನಡ ಸುದ್ದಿ  /  ಕರ್ನಾಟಕ  /  ಕರಾವಳಿ ಉತ್ಸವ 2024: ಪ್ರಮುಖ ಆಕರ್ಷಣೆ ಹೆಲಿಕಾಪ್ಟರ್ ತಿರುಗಾಟಕ್ಕೆ ಆರಂಭದಲ್ಲೇ ತೊಡಕು, ಎಟಿಸಿ ಕ್ಲಿಯರೆನ್ಸ್ ಸಮಸ್ಯೆ, ಏನಿದು ಸಂಕಷ್ಟ

ಕರಾವಳಿ ಉತ್ಸವ 2024: ಪ್ರಮುಖ ಆಕರ್ಷಣೆ ಹೆಲಿಕಾಪ್ಟರ್ ತಿರುಗಾಟಕ್ಕೆ ಆರಂಭದಲ್ಲೇ ತೊಡಕು, ಎಟಿಸಿ ಕ್ಲಿಯರೆನ್ಸ್ ಸಮಸ್ಯೆ, ಏನಿದು ಸಂಕಷ್ಟ

Karavali Utsava 2024: ದಕ್ಷಿಣ ಕನ್ನಡ ಜಿಲ್ಲಾಡಳಿತ ಆಯೋಜಿಸಿರುವ ಕರಾವಳಿ ಉತ್ಸವ 2024ರ ಪ್ರಮುಖ ಆಕರ್ಷಣೆ ಹೆಲಿಕಾಪ್ಟರ್ ಹಾರಾಟ. ಆದರೆ, ಎಟಿಸಿ ಕ್ಲಿಯರೆನ್ಸ್ ಸಮಸ್ಯೆ ಕಾರಣ ಹೆಲಿಕಾಪ್ಟರ್ ತಿರುಗಾಟಕ್ಕೆ ಆರಂಭದಲ್ಲೇ ತೊಡಕು ಎದುರಾಗಿದೆ. ಏನಿದು ಸಂಕಷ್ಟ ಇಲ್ಲಿದೆ ಆ ವಿವರ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಕರಾವಳಿ ಉತ್ಸವ 2024: ಎಟಿಸಿ ಕ್ಲಿಯರೆನ್ಸ್ ಸಮಸ್ಯೆ ಕಾರಣ ಉತ್ಸವದ ಪ್ರಮುಖ ಆಕರ್ಷಣೆ ಹೆಲಿಕಾಪ್ಟರ್ ತಿರುಗಾಟಕ್ಕೆ ಆರಂಭದಲ್ಲೇ ತೊಡಕು ಉಂಟಾಗಿದೆ. (ಸಾಂಕೇತಿಕ ಚಿತ್ರ)
ಕರಾವಳಿ ಉತ್ಸವ 2024: ಎಟಿಸಿ ಕ್ಲಿಯರೆನ್ಸ್ ಸಮಸ್ಯೆ ಕಾರಣ ಉತ್ಸವದ ಪ್ರಮುಖ ಆಕರ್ಷಣೆ ಹೆಲಿಕಾಪ್ಟರ್ ತಿರುಗಾಟಕ್ಕೆ ಆರಂಭದಲ್ಲೇ ತೊಡಕು ಉಂಟಾಗಿದೆ. (ಸಾಂಕೇತಿಕ ಚಿತ್ರ)

Karavali Utsava 2024: ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಮಂಗಳೂರು ಮಹಾನಗರಪಾಲಿಕೆ ಸಹಕಾರದೊಂದಿಗೆ ಕರಾವಳಿ ಉತ್ಸವಕ್ಕೆ ಶನಿವಾರ ಸಂಜೆ ಚಾಲನೆ ದೊರಕಲಿದೆ. ಆದರೆ ಇದಕ್ಕೊಂದು ಮೆರುಗು ನೀಡಬೇಕು ಎನ್ನುವ ಉದ್ದೇಶದಿಂದ ಆರಂಭಿಸಲಾದ ಹೆಲಿಕಾಪ್ಟರ್ ಮೂಲಕ ನಗರ ಪ್ರದಕ್ಷಿಣೆಗೆ ಆರಂಭದಲ್ಲೇ ತೊಡಕು ಎದುರಾಗಿದೆ..

ಇದನ್ನು ಮತ್ತಷ್ಟು ಆಕರ್ಷಣೀಯಗೊಳಿಸಲು, ಸಾರ್ವಜನಿಕರನ್ನು ಸೆಳೆಯುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತದ ಪ್ರಮುಖ ಆಕರ್ಷಣೆಯಾಗಿ ಹೆಲಿಕಾಪ್ಟರ್ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರ ಪ್ರಾಯೋಗಿಕ ಹಾರಾಟ ಶುಕ್ರವಾರ ಪತ್ರಕರ್ತರಿಗಾಗಿ ಸಂಜೆ ವೇಳೆ ನಡೆಯಿತು. ಶನಿವಾರ ಬೆಳಗ್ಗೆ ಇದರ ಉದ್ಘಾಟನೆಯೂ ನಡೆಯಿತು. ಆದರೆ ಪ್ರತಿಯೊಂದು ಹಾರಾಟಕ್ಕೂ ಎಟಿಸಿ (Air Traffic Control) ಕ್ಲಿಯರೆನ್ಸ್ ದೊರಕಬೇಕು. ಮೇರಿಹಿಲ್ ನಲ್ಲಿ ಹೆಲಿಕಾಪ್ಟರ್ ಹಾರಾಟ ಉದ್ಘಾಟನೆಯ ಬಳಿಕ ಮತ್ತೊಂದು ಉಡ್ಡಯನ ಸಾಧ್ಯವೇ ಎಂಬ ಪ್ರಶ್ನೆ ಈಗ ಎದುರಾಗಿದೆ. ಶನಿವಾರ ಬೆಳಗ್ಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಮತ್ತು ಮಹಾಲಿಂಗ ನಾಯ್ಕ ಅಮೈ ಉದ್ಘಾಟನಾ ಉಡ್ಡಯನ ಮಾಡಿದರು.

ಏನಿದು ಹೆಲಿಕಾಪ್ಟರ್ ‘ಸವಾರಿ’?

ಹೆಲಿಕಾಪ್ಟರ್ ನಲ್ಲಿ ಸುತ್ತಾಟ ನಡೆಸಲು ಮಂಗಳೂರಿನ ವಿಮಾನ ನಿಲ್ದಾಣ ರಸ್ತೆಯ ಮೇರಿಹಿಲ್ ನ ಹೆಲಿಪ್ಯಾಡ್ ಗೆ ಬರಬೇಕು. ಒಂದು ಹೆಲಿಕಾಪ್ಟರ್ ನಲ್ಲಿ ಸಾರ್ವಜನಿಕರು ಒಟ್ಟು ಆರು ಮಂದಿ ನಗರ ದರ್ಶನ ಮತ್ತು ಕಡಲಕಿನಾರೆಯ ಸೌಂದರ್ಯವನ್ನು ಆಕಾಶಮಾರ್ಗದಲ್ಲಿ ಸವಿಯಲು ಅವಕಾಶವಿದೆ ಎಂದು ಕರಾವಳಿ ಉತ್ಸವ ಸಮಿತಿ ಹೇಳಿತ್ತು.

ಬೆಂಗಳೂರಿನ ತುಂಬಿ ಏವಿಯೇಶನ್ ಎಂಬ ಖಾಸಗಿ ಸಂಸ್ಥೆಯ ಹೆಲಿಕಾಪ್ಟರ್ ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್ ಗೆ ಈ ಸಂಬಂಧ ಶುಕ್ರವಾರ ಮಧ್ಯಾಹ್ನ ಬಂದಿಳಿದಿತ್ತು. ಶುಕ್ರವಾರ ಸಂಜೆ ವೇಳೆ ಪ್ರಾಯೋಗಿಕವಾಗಿ ಎರಡು ಸುತ್ತು ನಗರಪ್ರದಕ್ಷಿಣೆ ಹಾಕಿ, ಪತ್ರಕರ್ತರಿಗೆ ಆಕಾಶದಿಂದ ನಗರ ನೋಡುವ ಅವಕಾಶವನ್ನೇನೋ ಕಲ್ಪಿಸಿತು. ಸಾರ್ವಜನಿಕರಿಗೆ ಡಿ.21ರಂದು ಅಂದರೆ ಶನಿವಾರ ಆರಂಭಗೊಂಡು, ಡಿ.29ರವರೆಗೆ ಅಂದರೆ ಒಂಭತ್ತು ದಿನಗಳ ಕಾಲ ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿತ್ತು. ಆರು ಮಂದಿಗೆ ಸಂಚರಿಸಲು ಅವಕಾಶ, ಪ್ರತಿದಿನ ಬೆಳಗ್ಗೆ 9ರಿಂದ 1 ಗಂಟೆವರೆಗೆ ಹಾಗೂ ಮಧ್ಯಾಹ್ನ 2ರಿಂದ 5 ಗಂಟೆವರೆಗೆ ಹೆಲಿಕಾಪ್ಟರ್ ನಲ್ಲಿ ತಿರುಗಾಡಬಹುದು. ಒಂದು ಪ್ರಯಾಣದಲ್ಲಿ ಒಟ್ಟು ಏಳು ನಿಮಿಷಗಳ ತಿರುಗಾಟವಿರುತ್ತದೆ. ಇದಕ್ಕೆ 4,500 ಸಾವಿರ ರೂ ಒಬ್ಬರಿಗೆ ಪ್ರವೇಶ ದರವಿರುತ್ತದೆ ಎಂಬ ಮಾಹಿತಿಯನ್ನು ಸಾರ್ವಜನಿಕ ಮಾಹಿತಿ ಇಲಾಖೆ ಮೂಲಕ ನೀಡಲಾಗಿತ್ತು.

ಸಮಸ್ಯೆ ಏನು?

ಮೇರಿಹಿಲ್ ಹೆಲಿಪ್ಯಾಡ್ ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೆಚ್ಚು ದೂರವಿಲ್ಲ. ಹೀಗಾಗಿ ಇಲ್ಲಿಂದ ಹೆಲಿಕಾಪ್ಟರ್ ಹೊರಡುವ ಮೊದಲು ಏರ್ ಟ್ರಾಫಿಕ್ ಕಂಟ್ರೋಲ್ ನ ಅನುಮತಿಯನ್ನು ಪಡೆಯಬೇಕಾಗುತ್ತದೆ. ಆಗಸದಲ್ಲಿ ವಿಮಾನ ಗಳು ಹಾರಾಡುವಾಗ ಹೆಲಿಕಾಪ್ಟರ್ ಅದರೊಟ್ಟಿಗೆ ಹಾರಲು ಸಾಧ್ಯವಿಲ್ಲ. ಹೀಗಾಗಿ ಎಟಿಸಿ ಕ್ಲಿಯರೆನ್ಸ್ ದೊರಕಿದ ಬಳಿಕವಷ್ಟೇ ಹಾರಾಟ ಮಾಡಬೇಕು. ಶುಕ್ರವಾರ ಸಂಜೆ ಪತ್ರಕರ್ತರಿಗೆ ಉಚಿತ ಹಾರಾಟ ವ್ಯವಸ್ಥೆಯನ್ನು ಕಲ್ಪಿಸಿದ ಸಂದರ್ಭವೂ ಸಮಯಕ್ಕೆ ಸರಿಯಾಗಿ ಹಾರಾಟವಾಗಲಿಲ್ಲ. ಕ್ಲಿಯರೆನ್ಸ್ ದೊರಕಿದ ಬಳಿಕವಷ್ಟೇ ಹಾರಾಟ ನಡೆಯಿತು. ಸುಮಾರು ಐದರಿಂದ ಏಳು ನಿಮಿಷಗಳ ಹಾರಾಟಕ್ಕೆ ಕ್ಲಿಯರೆನ್ಸ್ ಬೇಕಾಗುತ್ತದೆ. ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ದಿನವಿಡೀ ವಿಮಾನಗಳ ಹಾರಾಟವಿರುತ್ತದೆ. ಒಂದೊಮ್ಮೆ ಮೇರಿಹಿಲ್ ನಿಂದ ಹೆಲಿಕಾಪ್ಟರ್ ಹಾರುವುದಾದರೂ ಈ ವಿಮಾನಗಳ ಹಾರಾಟದ ಸಮಯದ ಮಧ್ಯೆ ಅವಕಾಶ ಕಲ್ಪಿಸಿಕೊಳ್ಳಬೇಕು. ಹೀಗಾಗಿ ಹೆಲಿಕಾಪ್ಟರ್ ಸವಾರಿ ಅಷ್ಟೊಂದು ಸಲೀಸಾಗಿ ಆರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ಬೇರೆ ಜಾಗದ ಹುಡುಕಾಟ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಲು ಸಹಾಯಕ ಕಮೀಷನರ್ ಅವರಿಗೆ ಕರೆ ಮಾಡಿದ್ದು ಕರೆ ಸ್ವೀಕರಿಸಿಲ್ಲ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Whats_app_banner