ಭಗವದ್ಗೀತೆ: ಭಗವಂತನ ಮಾರ್ಗದಲ್ಲಿ ಸಾಗುವವನು ಎಲ್ಲ ಜೀವಿಗಳಿಗೂ ಪ್ರಿಯವಾಗುತ್ತಾನೆ; ಗೀತೆಯ ಅರ್ಥ ಹೀಗಿದೆ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಭಗವಂತನ ಮಾರ್ಗದಲ್ಲಿ ಸಾಗುವವನು ಎಲ್ಲ ಜೀವಿಗಳಿಗೂ ಪ್ರಿಯವಾಗುತ್ತಾನೆ ಎಂಬುದರ ಅರ್ಥ ತಿಳಿಯಿರಿ.
ಯೋಗಯುಕ್ತೋ ವಿಶುದ್ಧಾತ್ಮಾ ವಿಜಿತಾತ್ಮಾ ಜಿತೇನ್ದ್ರಿಯಃ |
ಸರ್ವಭೂತಾತ್ಮಭೂತಾತ್ಮ ಕುರ್ವನ್ನಪಿ ನ ಲಿಪ್ಯತೇ ||7||
ಯಾರು ಭಕ್ತಿಯಿಂದ ಕರ್ಮವನ್ನು ಮಾಡುವನೋ, ಶುದ್ಧಆತ್ಮನೋ ಮತ್ತು ಮನಸ್ಸನ್ನೂ ಇಂದ್ರಿಯಗಳನ್ನೂ ನಿಯಂತ್ರಿಸುವನೋ ಅವನು ಎಲ್ಲರಿಗೂ ಪ್ರಿಯನಾದವನು ಮತ್ತು ಅವನಿಗೆ ಎಲ್ಲರೂ ಪ್ರಿಯರಾದವರು. ಅವನು ಕರ್ಮವನ್ನು ಮಾಡುತ್ತಿದ್ದರೂ ಅವುಗಳಲ್ಲಿ ಸಿಲುಕಿಕೊಳ್ಳುವುದಿಲ್ಲ.
ಕೃಷ್ಣಪ್ರಜ್ಞೆಯಿಂದ ಮುಕ್ತಿಮಾರ್ಗದಲ್ಲಿರುವವನು ಎಲ್ಲ ಜೀವಿಗಳಿಗೂ ಪ್ರಿಯನಾದವನು ಮತ್ತು ಎಲ್ಲ ಜೀವಿಗಳೂ ಅವನಿಗೆ ಪ್ರಿಯರು. ಇದಕ್ಕೆ ಅವನ ಕೃಷ್ಣಪ್ರಜ್ಞೆಯೇ ಕಾರಣ. ಮರದ ಎಲೆಗಳೂ ಮತ್ತು ಕೊಂಬೆಗಳೂ ಹೇಗೆ ಮರದಿಂದ ಬೇರೆಯಲ್ಲವೋ ಹಾಗೆ ಕೃಷ್ಣಪ್ರಜ್ಞೆಯಲ್ಲಿರುವವನಿಗೆ ಯಾವಜೀವಿಯೂ ಕೃಷ್ಣನಿಂದ ಬೇರೆಯಲ್ಲ. ಮರದ ಬೇರಿಗೆ ನೀರನ್ನೆರೆದರೆ ಎಲ್ಲ ಎಲೆಗಳಿಗೂ ಕೊಂಬೆಗಳಿಗೂ ನೀರು ದೊರೆಯುತ್ತದೆ ಅಥವಾ ಹೊಟ್ಟೆಗೆ ಆಹಾರವನ್ನು ನೀಡಿದರೆ ಚೈತನ್ಯವು ತಂತಾನೇ ದೇಹಕ್ಕೆಲ್ಲ ಲಭ್ಯವಾಗುತ್ತದೆ ಎಂದು ಅವನಿಗೆ ಚೆನ್ನಾಗಿ ಗೊತ್ತು.
ಕೃಷ್ಣಪ್ರಜ್ಞೆಯಲ್ಲಿ ಕೆಲಸಮಾಡುವವನು ಎಲ್ಲರಿಗೂ ಸೇವಕನಾದದ್ದರಿಂದ ಎಲ್ಲರಿಗೂ ಅವನಲ್ಲಿ ಬಹುಪ್ರೀತಿ. ಪ್ರತಿಯೊಬ್ಬರಿಗೂ ಅವನ ಕೆಲಸದಲ್ಲಿ ತೃಪ್ತಿಯಾಗುವುದರಿಂದ ಅವನ ಪ್ರಜ್ಞೆಯು ಪರಿಶುದ್ಧವಾಗಿರುತ್ತದೆ. ಅವನ ಪ್ರಜ್ಞೆಯು ಪರಿಶುದ್ಧವಾದದ್ದರಿಂದ, ಹಿಡಿತದಲ್ಲಿರುವುದರಿಂದ ಅವನ ಇಂದ್ರಿಯಗಳೂ ಹಿಡಿತದಲ್ಲಿರುತ್ತವೆ. ಅವನ ಮನಸ್ಸು ಯಾವಾಗಲೂ ಕೃಷ್ಣನಲ್ಲಿ ನೆಲೆಸಿರುವುದರಿಂದ ಅವನು ಕೃಷ್ಣನನ್ನು ಬಿಟ್ಟು ಬೇರೆ ವಿಷಯಗಳಲ್ಲಿ ತೊಡಗುವ ಸಾಧ್ಯತೆಯೇ ಇಲ್ಲ. ಕೃಷ್ಣನನ್ನು ಕುರಿತ ವಿಷಯಗಳನ್ನು ಬಿಟ್ಟು ಬೇರೇನನ್ನು ಕೇಳಲೂ ಅವನು ಇಷ್ಟಪಡುವುದಿಲ್ಲ. ಕೃಷ್ಣನ ಪ್ರಾಸದವನ್ನು ಬಿಟ್ಟು ಬೇರೇನನ್ನೂ ತಿನ್ನಲು ಇಷ್ಟಪಡುವುದಿಲ್ಲ. ಕೃಷ್ಣನಿಗೆ ಸಂಬಂಧವಿಲ್ಲದಿರುವ ಯಾವ ಸ್ಥಳಕ್ಕೂ ಅವನು ಹೋಗಲು ಇಷ್ಟಪಡುವುದಿಲ್ಲ. ಆದುದರಿಂದ ಅವನ ಇಂದ್ರಿಯಗಳು ಹತೋಟಿಯಲ್ಲಿರುತ್ತವೆ.
ಇಂದ್ರಿಯಗಳನ್ನು ನಿಯಂತ್ರಿಸುವವನು ಯಾರನ್ನೂ ನೋಯಿಸಲು ಸಾಧ್ಯವಿಲ್ಲ. ಹಾಗಾದರೆ ಅರ್ಜುನನು (ಯುದ್ಧದಲ್ಲಿ) ಇತರರನ್ನು ಏಕೆ ನೋಯಿಸಿದ, ಅವನು ಕೃಷ್ಣಪ್ರಜ್ಞೆಯಲ್ಲಿ ಇರಲಿಲ್ಲವೇ? ಎಂದು ಕೇಳಬಹುದು. ಅರ್ಜುನನು ಮೇಲ್ನೋಟಕ್ಕೆ ಮಾತ್ರ ಇತರರನ್ನು ನೋಯಿಸಿದಂತೆ ಕಾಣುತ್ತಾನೆ. ಏಕೆಂದರೆ (ಆಗಲೇ ಎರಡನೆಯ ಅಧ್ಯಾಯದಲ್ಲಿ ಹೇಳಿರುವಂತೆ) ರಣರಂಗದಲ್ಲಿ ನೆರೆದಿದ್ದವರೆಲ್ಲರೂ ಪ್ರತ್ಯೇಕ ವ್ಯಕ್ತಿಗಳಾಗಿ ಬದುಕಿಯೇ ಇರುತ್ತಾರೆ. ಏಕೆಂದರೆ ಆತ್ಮವನ್ನು ನಾಶಮಾಡುವುದು ಸಾಧ್ಯವಿಲ್ಲ. ಆದುದರಿಂದ ಆತ್ಮದ ದೃಷ್ಟಿಯಿಂದ ಕುರುಕ್ಷೇತ್ರದ ರಣಭೂಮಿಯಲ್ಲಿ ಯಾರೂ ಸಾಯಲಿಲ್ಲ. ಸ್ವತಃ ಅಲ್ಲಿದ್ದ ಕೃಷ್ಣನ ಆಜ್ಞೆಯಂತೆ ಅವರ ಉಡುವುಗಳು ಮಾತ್ರ ಬದಲಾದವು. ಆದುದರಿಂದ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಹೋರಾಡಿದಾಗ ಅರ್ಜುನನು ನಿಜವಾಗಿಯೂ ಹೋರಾಡುತ್ತಿರಲಿಲ್ಲ. ಆತನು ಸಂಪೂರ್ಣ ಕೃಷ್ಣಪ್ರಜ್ಞೆಯಲ್ಲಿ ಇರುತ್ತ ಕೃಷ್ಣನ ಆಜ್ಞೆಯನ್ನು ನಿರ್ವಹಿಸುತ್ತಿದ್ದ ಮಾತ್ರ. ಇಂತಹ ಮನುಷ್ಯನು ಕರ್ಮದ ಪ್ರತಿಕ್ರಿಯೆಗಳಲ್ಲಿ ಸಿಕ್ಕಿಕೊಳ್ಳುವುದೇ ಇಲ್ಲ.