ಬ್ರಾಹ್ಮೀ ಮುಹೂರ್ತ ಯಾವಾಗ ಆರಂಭವಾಗತ್ತೆ; ಈ ಸಮಯದಲ್ಲೇ ನಾವು ಎಚ್ಚರಗೊಳ್ಳಬೇಕು ಎಂದು ಹಿರಿಯರು ಹೇಳೋದ್ಯಾಕೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬ್ರಾಹ್ಮೀ ಮುಹೂರ್ತ ಯಾವಾಗ ಆರಂಭವಾಗತ್ತೆ; ಈ ಸಮಯದಲ್ಲೇ ನಾವು ಎಚ್ಚರಗೊಳ್ಳಬೇಕು ಎಂದು ಹಿರಿಯರು ಹೇಳೋದ್ಯಾಕೆ?

ಬ್ರಾಹ್ಮೀ ಮುಹೂರ್ತ ಯಾವಾಗ ಆರಂಭವಾಗತ್ತೆ; ಈ ಸಮಯದಲ್ಲೇ ನಾವು ಎಚ್ಚರಗೊಳ್ಳಬೇಕು ಎಂದು ಹಿರಿಯರು ಹೇಳೋದ್ಯಾಕೆ?

Brahmee Muhurtham: ಬ್ರಾಹ್ಮೀ ಮುಹೂರ್ತಕ್ಕೆ ಹಿಂದೂ ಧರ್ಮದಲ್ಲಿ ತುಂಬಾನೇ ಮಹತ್ವವಿದೆ. ಈ ಮುಹೂರ್ತದಲ್ಲಿ ಮುಕ್ಕೋಟಿ ದೇವರ ಆಶೀರ್ವಾದ ಅಡಗಿರುತ್ತದೆ ಎಂಬ ನಂಬಿಕೆ ಕೂಡ ಇದೆ. ಹಾಗಾದರೆ ಪ್ರತಿನಿತ್ಯ ಬ್ರಾಹ್ಮೀ ಮುಹೂರ್ತ ಯಾವಾಗ ಆರಂಭಗೊಳ್ಳುತ್ತದೆ..? ಈ ಮುಹೂರ್ತಕ್ಕೆ ಯಾಕಿಷ್ಟು ಪ್ರಾಮುಖ್ಯತೆ ದೊರಕಿದೆ..? ಇಲ್ಲಿದೆ ಮಾಹಿತಿ

ಬ್ರಾಹ್ಮೀ ಮುಹೂರ್ತದ ಸಮಯ ಯಾವುದು? (ಪ್ರಾತಿನಿಧಿಕ ಚಿತ್ರ)
ಬ್ರಾಹ್ಮೀ ಮುಹೂರ್ತದ ಸಮಯ ಯಾವುದು? (ಪ್ರಾತಿನಿಧಿಕ ಚಿತ್ರ)

ಬ್ರಾಹ್ಮೀ ಮುಹೂರ್ತ ಎನ್ನುವುದು ಅತ್ಯಂತ ಶುಭವಾದ ಮುಹೂರ್ತ ಎಂದು ಹೇಳಲಾಗುತ್ತದೆ. ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದು ಆರೋಗ್ಯದ ದೃಷ್ಟಿಯಿಂದ ಹಾಗೂ ಧಾರ್ಮಿಕ ದೃಷ್ಟಿಯಿಂದ ಕೂಡ ಒಳ್ಳೆಯದು. ಈಗ ಬ್ರಾಹ್ಮೀ ಮುಹೂರ್ತ ಯಾವ ಸಮಯದಲ್ಲಿ ಇರುತ್ತದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಸೂರ್ಯೋದಯಕ್ಕೂ ಮುಂಚಿನ 88 ನಿಮಿಷಗಳನ್ನು ನಾವು ಬ್ರಾಹ್ಮೀ ಮುಹೂರ್ತ ಎಂದು ಕರೆಯಬಹುದು. ಅಂದರೆ ಸೂರ್ಯೋದಯಕ್ಕೂ 1 ಗಂಟೆ 22 ನಿಮಿಷದಲ್ಲಿ ಬ್ರಾಹ್ಮೀ ಮುಹೂರ್ತ ಸಂಭವಿಸುತ್ತದೆ. ಇದನ್ನು ಪ್ರಾತಃ ಕಾಲ ಎಂದೂ ಸಹ ಕರೆಯಲಾಗುತ್ತದೆ.

ಅರುಣ ಸೂರ್ಯ ನಾರಾಯಣನ ಸಾರಥಿ. ಹೀಗಾಗಿ ಸೂರ್ಯನ ಉದಯವನ್ನು ಅರುಣೋದಯ ಎಂದು ಕರೆಯಲಾಗುತ್ತದೆ. ಇದಾದ ಬಳಿಕ ಸೂರ್ಯದೇವನು ಬಂಗಾರದ ಬೆಳಕಿನಲ್ಲಿ ಕಂಗೊಳಿಸುತ್ತಾನೆ. ಹಿಂದೂ ಪಂಚಾಂಗಗಳಲ್ಲಿ ನಾವು ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯವನ್ನು ತಿಳಿದುಕೊಳ್ಳಬಹುದು. ಇದರ ಆಧಾರದ ಮೇಲೆ ಪ್ರತಿದಿನ ಬ್ರಾಹ್ಮೀ ಮುಹೂರ್ತ ಯಾವುದು ಎಂಬುದನ್ನು ಲೆಕ್ಕಾಚಾರ ಹಾಕಿಕೊಳ್ಳಬಹುದಾಗಿದೆ.

ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದರಿಂದ ಯಾವೆಲ್ಲ ಪ್ರಯೋಜನಗಳಿವೆ :

ಮದುವೆ ಸಮಾರಂಭ ಸೇರಿದಂತೆ ಬಹುತೇಕ ಎಲ್ಲಾ ಶುಭ ಕಾರ್ಯಗಳಿಗೆ ಬ್ರಾಹ್ಮೀ ಮುಹೂರ್ತವನ್ನು ಸೂಕ್ತ ಸಮಯ ಎಂದು ಹೇಳಲಾಗುತ್ತದೆ. ಇಡೀ ಜಗತ್ತಿಗೆ ಬೆಳಕು ನೀಡುವವನು ಸೂರ್ಯ ದೇವ. ಈ ಬೆಳಕು ನೀಡುವ ಸೂರ್ಯ ಉದಯಿಸುವ 88 ನಿಮಿಷಗಳ ಮೊದಲು ಪ್ರಭಾತ ಕಾಲದಲ್ಲಿ ಸಂಪೂರ್ಣ ಪ್ರಕೃತಿಯು ಭಗವದ್​ ಶಕ್ತಿಯಿಂದ ಆವರಿಸಿಕೊಂಡಿರುತ್ತದೆ. ಇದನ್ನೇ ಬ್ರಾಹ್ಮೀ ಮುಹೂರ್ತವೆಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಸರಸ್ವತಿ ದೇವಿಯ ಆಶೀರ್ವಾದ ಹೆಚ್ಚಿರುತ್ತದೆ ಎಂದೂ ಸಹ ಹೇಳಲಾಗುತ್ತದೆ.

ಈ ಬ್ರಾಹ್ಮೀ ಮುಹೂರ್ತವು ಮನಸ್ಸಿನಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಹೋಗಲಾಡಿಸಲು ಹಾಗೂ ಮನಸ್ಸಿನಲ್ಲಿ ದೈವಿಕ ಭಾವನೆಗಳನ್ನು ತುಂಬಿಕೊಳ್ಳಲು ದೇವರು ನೀಡುವ ಅದ್ಭುತ ಸಮಯವಾಗಿರುತ್ತದೆ. ಇಂಥಹ ಮಂಗಳಕರ ಮುಹೂರ್ತವನ್ನು ಪ್ರಭಾತಕಾಲ ಎಂದು ಕರೆಯುತ್ತಾರೆ.

ಈ ಬ್ರಾಹ್ಮೀ ಮುಹೂರ್ತದಲ್ಲಿ ನೀವು ಶಿವನನ್ನು ಆರಾಧಿಸಿದರೆ ನಿಮಗೆ ಜೀವನದಲ್ಲಿ ಅನೇಕ ಅದ್ಭುತಗಳು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಭಗವಾನ್​ ಶಿವನನ್ನು ಪೂಜಿಸುವ ಮೂಲಕ ಸಾಕ್ಷಾತ್​ ಬ್ರಹ್ಮನೇ ಸಾಕಷ್ಟು ವರಗಳನ್ನು ಪಡೆದುಕೊಂಡಿದ್ದ ಎಂದು ಪುರಾಣ ಹೇಳುತ್ತದೆ. ಹೀಗಾಗಿಯೇ ಈ ಸಮಯವನ್ನು ಬ್ರಹ್ಮ ಮುಹೂರ್ತವೆಂದು ಕರೆಯಲಾಗುತ್ತದೆ ಎಂಬ ಪ್ರತೀತಿ ಇದೆ.

ಹೀಗಾಗಿ ನಾವು ಕೂಡ ಈ ಸಮಯದಲ್ಲಿ ಎದ್ದು ಸ್ನಾನ ಮಾಡಿ ನಾವು ಇಷ್ಟಪಡುವ ಕೆಲಸಗಳನ್ನು ಇದೇ ಸಮಯದಲ್ಲಿ ಮಾಡಿದರೆ ಖಂಡಿತವಾಗಿ ನಮಗೆ ಆ ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಸ್ನಾನ ಮಾಡಲು ಸಾಧ್ಯವಾಗಿಲ್ಲವೆಂದಾದರೆ ಕನಿಷ್ಟ ಹಲ್ಲುಜ್ಜಿ, ಕೈ ಕಾಲು ಮುಖ ತೊಳೆದು ಬಳಿಕ ನಿಮ್ಮ ಕೆಲಸಗಳನ್ನು ಆರಂಭಿಸಬಹುದಾಗಿದೆ.

ಬ್ರಾಹ್ಮಿ ಮುಹೂರ್ತವು ಸೂರ್ಯೋದಯಕ್ಕೆ 88 ನಿಮಿಷಗಳ ಮೊದಲು ಪ್ರಾರಂಭವಾಗುತ್ತದೆ ಎಂದು ನಾವು ತಿಳಿದುಕೊಂಡಿದ್ದೇವೆ. ಇದನ್ನು ಅತ್ಯಂತ ಪವಿತ್ರವಾದ ಮುಹೂರ್ತವೆಂದು ಪರಿಗಣಿಸಲಾಗಿದೆ. ಈ ಬ್ರಹ್ಮ ಮುಹೂರ್ತದಲ್ಲಿ ಮದುವೆ, ಗೃಹಪ್ರವೇಶ ಮುಂತಾದ ಶುಭ ಕಾರ್ಯಗಳು ನಡೆದರೆ ಆ ಮನೆಯ ಶುಭಕಾರ್ಯ ಮುಂದುವರಿಯುತ್ತದೆ ಎಂದು ಹೇಳಲಾಗುತ್ತದೆ.

ಬ್ರಹ್ಮ ಮುಹೂರ್ತದ ಸಮಯದಲ್ಲಿ ಯಾವುದೇ ನಕ್ಷತ್ರ ಮತ್ತು ಯೋಗ ದೋಷಗಳಿಲ್ಲ ಎಂದು ಹೇಳಲಾಗುತ್ತದೆ ಮತ್ತು ಸಮಯವು ಯಾವಾಗಲೂ ಶುಭ ಕಾರ್ಯಗಳಿಗೆ ಮುಹೂರ್ತವಾಗಿರುತ್ತದೆ. ಬ್ರಹ್ಮ ಮುಹೂರ್ತದ ಈ ಶುಭ ಸಮಯದಲ್ಲಿ ಮನೆಯ ಪೂಜಾ ಕೋಣೆಯಲ್ಲಿ ದೀಪ ಹಚ್ಚಿ ಪೂಜಿಸಿದರೆ ಸಕಲ ಸುಖ-ಸಂತೋಷಗಳು ಸಿಗುತ್ತವೆ ಎಂಬ ನಂಬಿಕೆ ಇದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.