Lingashtakam: ಜೀವನದ ಎಲ್ಲ ದುಃಖ ದೂರವಾಗಿ ಮೋಕ್ಷ ಪ್ರಾಪ್ತಿಗೆ ನಿತ್ಯ ಲಿಂಗಾಷ್ಟಕ ಸ್ತೋತ್ರ ಪಠಿಸಿ
ಶಿವನನ್ನು ಪಂಚಾಕ್ಷರ ಸ್ತೋತ್ರ, ಅಷ್ಟಕ ಶ್ಲೋಕಗಳಿಂದ ಪೂಜಿಸಿಲಾಗುತ್ತದೆ. ಶಿವನ ಪೂಜೆಯಿಂದ ಪಾಪಗಳೆಲ್ಲವೂ ದೂರವಾಗುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಲಿಂಗಾಷ್ಟಕವನ್ನು ನಿತ್ಯ ಪಠಿಸುವುದರಿಂದ ಜೀವನದ ಎಲ್ಲ ದುಃಖಗಳಿಂದ ಮುಕ್ತಿ ಸಿಗುತ್ತದೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ಶಿವನು ಸೃಷ್ಟಿಕರ್ತ ಜೊತೆಗೆ ಲಯಕಾರಕನೂ ಹೌದು ಎಂದು ಹೇಳುತ್ತಾರೆ. ಶಿವನ ಕೈಯಲ್ಲಿರುವ ತ್ರಿಶೂಲವು ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಮೂರು ಶಕ್ತಿಗಳ ನಿಯಂತ್ರಣವನ್ನು ಪ್ರತಿನಿಧಿಸುತ್ತದೆ. ಸೋಮವಾರ ಶಿವನಿಗೆ ಸಮರ್ಪಿತವಾದ ದಿನ. ಅದಕ್ಕಾಗಿಯೇ ಆ ದಿನದಂದು ಶಿವನನ್ನು ಪೂಜಿಸುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಮತ್ತು ಮೋಕ್ಷ ದೊರಕುತ್ತದೆ ಎಂಬ ನಂಬಿಕೆಯಿದೆ. ಶಿವನನ್ನು ರುದ್ರ ಎಂದೂ ಕರೆಯುತ್ತಾರೆ. ಅವನ ರೌದ್ರರೂಪದಿಂದ ಆ ಹೆಸರು ಬಂದಿದೆ. ಶಿವನನ್ನು ಲಿಂಗ ಸ್ವರೂಪಿಯಾಗಿಯೇ ಪೂಜಿಸುವುದು ಹೆಚ್ಚು. ಶಿವನು ಅಭಿಷೇಕ ಪ್ರಿಯ. ಹಾಗಾಗಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ, ಬಿಲ್ವಪತ್ರೆ ಅರ್ಪಿಸಲಾಗುತ್ತದೆ. ಶಿವನನ್ನು ಧ್ಯಾನಿಸಲು ಹಲವಾರು ಮಂತ್ರಗಳಿವೆ. ಅವುಗಳಲ್ಲಿ ಲಿಂಗಾಷ್ಟಕ ಸ್ತೋತ್ರವೂ ಒಂದು. ಈ ಸ್ತೋತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ. ಮೋಕ್ಷ ಪ್ರಾಪ್ತಿಯಾಗುತ್ತದೆ.
ಲಿಂಗಾಷ್ಟಕ ಸ್ತೋತ್ರಂ
ಜಗದ್ಗುರು ಶಂಕರಾಚಾರ್ಯರಿಂದ ರಚಿಸಲ್ಪಟ್ಟ ಲಿಂಗಾಷ್ಟಕ ಸ್ತೋತ್ರವು ಶಿವನ ಗುಣ ಮತ್ತು ರೂಪಗಳನ್ನು ಹೇಳುವ ಅದ್ಭುತ ಶ್ಲೋಕವಾಗಿದೆ. ಶಿವನನ್ನು ಎಂಟು ಶ್ಲೋಕಗಳಲ್ಲಿ ವರ್ಣಿಸಲಾಗಿದೆ. ಹಾಗಾಗಿ ಇದನ್ನು ಅಷ್ಟಕ ಎಂದು ಕರೆಯುತ್ತಾರೆ. ಶಿವನ ಮೇಲಿನ ಅಚಲವಾದ ಭಕ್ತಿಯನ್ನು ವ್ಯಕ್ತಪಡಿಸಲು ಶಿವ ಭಕ್ತರು ಈ ಸ್ತೋತ್ರವನ್ನು ಪಠಿಸುತ್ತಾರೆ. ಇದನ್ನು ನಿಯಮಿತವಾಗಿ ಪಠಿಸುವುದರಿಂದ ಗತ ಜೀವನದಲ್ಲಿ ಮಾಡಿರುವ ಪಾಪಗಳೆಲ್ಲವೂ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.
ಲಿಂಗಾಷ್ಟಕ ಸ್ತೋತ್ರದ ಮೊದಲನೇ ಶ್ಲೋಕವು ಹೀಗಿದೆ
ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ
ನಿರ್ಮಲ ಭಾಷಿತ ಶೋಭಿತ ಲಿಂಗಂ
ಜನ್ಮಜ ದುಃಖ ವಿನಾಶಕ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಂ ||
ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ
ಇದು ಲಿಂಗಾಷ್ಟಕಂ ಸ್ತೋತ್ರದ ಮೊದಲ ಸಾಲು. ಇದು ಶಿವಲಿಂಗದ ಮಹತ್ವವನ್ನು ತಿಳಿಸುತ್ತದೆ. ಬ್ರಹ್ಮ ಮತ್ತು ವಿಷ್ಣು ಶಿವಲಿಂಗಕ್ಕೆ ಹೇಗೆ ಗೌರವ ಕೊಡುತ್ತಾರೆ ಎಂಬುದನ್ನು ಹೇಳಿದೆ. ಈ ಶ್ಲೋಕದ ಈ ಸಾಲು ವಿಶ್ವದಲ್ಲಿ ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಮಹತ್ವವನ್ನು ಹೇಳುತ್ತದೆ.
ನಿರ್ಮಲ ಭಾಷಿತ ಶೋಭಿತ ಲಿಂಗಂ
ಶ್ಲೋಕದ ಎರಡನೇ ಸಾಲು ಶಿವಲಿಂಗದ ಶುದ್ಧತೆ ಮತ್ತು ಪವಿತ್ರತೆಯನ್ನು ಹೇಳುತ್ತದೆ. ನಿರ್ಮಲ ಭಾಷಿತ ಎಂಬ ಪಂಕ್ತಿಯು ವೈದಿಕ ಸ್ತೋತ್ರಗಳಿಂದ ಬಂದಿದೆ. ಲಿಂಗವು ಶಕ್ತಿಯಿಂದ ತುಂಬಿದೆ ಎಂದು ಸೂಚಿಸುತ್ತದೆ. ನಿಜವಾದ ಭಕ್ತಿಯಿಂದ ಪೂಜಿಸಿದರೆ ಶಿವನು ಕರುಣಾಮಯಿ ಎಂದು ಹೇಳಲಾಗುತ್ತದೆ. ಈ ಪಂಕ್ತಿಯು ಪ್ರಾಮಾಣಿಕವಾಗಿ ಮತ್ತು ಪೂರ್ಣ ಮನಸ್ಸಿನಿಂದ ಆರಾಧನೆ ಮಾಡುವುದನ್ನು ಸೂಚಿಸುತ್ತದೆ.
ಜನ್ಮಜ ದುಃಖ ವಿನಾಶಕ ಲಿಂಗಂ
ಇದು ಲಿಂಗಾಷ್ಟಕ ಸ್ತೋತ್ರದ ಮೂರನೇ ಸಾಲು. ಜನ್ಮಜ ದುಃಖ ವಿನಾಶಕ ಲಿಂಗ ಅಂದರೆ ಹಿಂದಿನ ಜೀವನದ ದುಃಖಗಳು ಮತ್ತು ಪಾಪಗಳು ಹೇಗೆ ನಾಶವಾಗುತ್ತವೆ ಎಂಬುದನ್ನು ಹೇಳುತ್ತದೆ. ಜನನ ಮತ್ತು ಮರಣದ ಚಕ್ರಗಳಿಂದ ಆತ್ಮದ ವಿಮೋಚನೆಯು ಶಿವನಿಂದ ಮಾತ್ರ ಸಾಧ್ಯ. ಶಿವಲಿಂಗವನ್ನು ಪೂಜಿಸುವುದರಿಂದ ಭಕ್ತರು ತಮ್ಮ ದುಃಖ ಮತ್ತು ಸಂಕಟಗಳಿಂದ ಮುಕ್ತರಾಗಿ ಮೋಕ್ಷದ ಕಡೆಗೆ ಸಾಗುತ್ತಾರೆ ಎಂದು ಹೇಳಲಾಗಿದೆ.
ತತ್ ಪ್ರಣಮಾಮಿ ಸದಾ ಶಿವ ಲಿಂಗಂ
ಇದು ಲಿಂಗಾಷ್ಟಕ ಶ್ಲೋಕದ ಮೊದಲನೇ ಅಷ್ಟಕದ ಕೊನೆಯ ಸಾಲು. ಅಂಥ ಭವ್ಯವಾದ ಶಿವಲಿಂಗಕ್ಕೆ ನಾನು ನಮಸ್ಕರಿಸುತ್ತಿದ್ದೇನೆ ಎಂದು ತಿಳಿಸುತ್ತದೆ. ಇದು ಭಕ್ತರು ಶಿವನಿಗೆ ಸಮರ್ಪಿಸಿಕೊಳ್ಳುವುದನ್ನು ಸೂಚಿಸುತ್ತದೆ. ತತ್ ಪ್ರಣಮಾಮಿ ಎಂದು ಹೇಳುವುದು ನಾವು ಶಿವಲಿಂಗಕ್ಕೆ ಭಕ್ತಿಯಿಂದ ಪ್ರಣಾಮ, ಅಂದರೆ ನಮಸ್ಕರಿಸುತ್ತಿದ್ದೇವೆ ಎಂದು ಹೇಳುತ್ತದೆ.
ಈ ಲಿಂಗಾಷ್ಟಕದ ಶ್ಲೋಕಗಳನ್ನು ನಿಯಮಿತವಾಗಿ ಪಠಿಸುವುದರಿಂದ ಮನಸ್ಸಿನಲ್ಲಿ ಯಾವುದೇ ಗೊಂದಲಗಳಿಲ್ಲದೆ ಶಿವನ ಕೃಪೆಯಿಂದ ಶಾಂತಿಯುತ ಜೀವನ ನಡೆಸಲು ಸಹಾಯವಾಗುತ್ತದೆ. ಎಷ್ಟೇ ಕಷ್ಟಗಳು ಬಂದರೂ ಅದು ಶಿವನ ಕೃಪೆಯಿಂದ ದೂರವಾಗುತ್ತದೆ ಎಂಬ ನಂಬಿಕೆ ಇದೆ.
ಇನ್ನಷ್ಟು ರಾಶಿ ಭವಿಷ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ವರದಿ: ಅರ್ಚನಾ ವಿ ಭಟ್
ಇದನ್ನೂ ಓದಿ | ಗುರು ನಕ್ಷತ್ರ ಬದಲಾವಣೆ; ಜುಲೈ 13ರಿಂದ ಈ 5 ರಾಶಿಯವರ ಜೀವನದಲ್ಲಿ ಆಗಲಿದೆ ಮಹತ್ತರ ಬದಲಾವಣೆ
