ನವರಾತ್ರಿ 2024: ಯಾವ ದಿನ ಏನು ವಿಶೇಷ? ಮಹಾನವಮಿ, ವಿಜಯದಶಮಿ ಯಾವತ್ತು, ನವರಾತ್ರಿ ಹಿನ್ನೆಲೆಯೇನು? ಇಲ್ಲಿದೆ ವಿವರ-spiritual news navaratri 2024 when is vijaya dashami when is mahanavami significance of festival rst ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನವರಾತ್ರಿ 2024: ಯಾವ ದಿನ ಏನು ವಿಶೇಷ? ಮಹಾನವಮಿ, ವಿಜಯದಶಮಿ ಯಾವತ್ತು, ನವರಾತ್ರಿ ಹಿನ್ನೆಲೆಯೇನು? ಇಲ್ಲಿದೆ ವಿವರ

ನವರಾತ್ರಿ 2024: ಯಾವ ದಿನ ಏನು ವಿಶೇಷ? ಮಹಾನವಮಿ, ವಿಜಯದಶಮಿ ಯಾವತ್ತು, ನವರಾತ್ರಿ ಹಿನ್ನೆಲೆಯೇನು? ಇಲ್ಲಿದೆ ವಿವರ

Navaratri 2024: ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು ನವರಾತ್ರಿ. ಹೆಸರೇ ಹೇಳುವಂತೆ 9 ತಿಂಗಳ ಕಾಲ ಒಂಭತ್ತು ದೇವಿಯರನ್ನು ಪೂಜಿಸುವ ಈ ಹಬ್ಬ ಬಹಳ ವಿಶೇಷ. ನವರಾತ್ರಿಯ 10ನೇ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಈ ವರ್ಷ ನವರಾತ್ರಿ ಆರಂಭ ಯಾವಾಗ, ಮಹಾನವಮಿ, ವಿಜಯದಶಮಿ ಎಂದು ಎಂಬಿತ್ಯಾದಿ ವಿವರ ಇಲ್ಲಿದೆ.

ನವರಾತ್ರಿ 2024
ನವರಾತ್ರಿ 2024

Navaratri 2024: ನವರಾತ್ರಿ ಭಾರತದಾದ್ಯಂತ ಬಹಳ ಭಕ್ತಿ–ಭಾವ, ಸಡಗರದಿಂದ ಆಚರಿಸುವ ಹಬ್ಬ. ಆಶ್ವಯುಜ ಮಾಸದ ಶುಕ್ಲಪಕ್ಷ ಪಾಡ್ಯದ ದಿನದಿಂದ ನವರಾತ್ರಿ ಆರಂಭವಾಗುತ್ತದೆ. ಈ ಹಬ್ಬದಲ್ಲಿ 9 ದಿನಗಳ ಕಾಲ ದುರ್ಗಾಮಾತೆಯನ್ನು ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಉಪವಾಸ, ವ್ರತಾಚರಣೆಗಳ ಮೂಲಕ ದೇವಿಯನ್ನು ಒಲಿಸಿಕೊಳ್ಳಲಾಗುತ್ತದೆ. ಈ ಸಮಯದಲ್ಲಿ ದೇವಿಯನ್ನು ಆರಾಧಿಸುವುದರಿಂದ ನಮ್ಮೆಲ್ಲಾ ಕಷ್ಟಗಳು ಕಳೆದು ಜೀವನದಲ್ಲಿ ಸುಖ, ಸಮೃದ್ಧಿ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. ಈ ವರ್ಷ ನವರಾತ್ರಿ ಯಾವಾಗ, ಶುಭ ಮುಹೂರ್ತ, ಈ ಹಬ್ಬದ ಆಚರಣೆಯ ಮಹತ್ವ ಸೇರಿದಂತೆ ಇನ್ನಿತರ ವಿವರ ಇಲ್ಲಿದೆ.

ನವರಾತ್ರಿ 2024 ದಿನಾಂಕ, ಸಮಯ

ಹಿಂದೂ ಕ್ಯಾಲೆಂಡರ್ ಪ್ರಕಾರ ಆಶ್ವಯುಜ ಮಾಸ ಶುಕ್ಲಪಕ್ಷದ ಪಾಡ್ಯ ತಿಥಿಯ ಅಕ್ಟೋಬರ್‌ 3 ಗುರುವಾರದಿಂದ ಮಧ್ಯಾಹ್ನ 12.38ರಿಂದ ಆರಂಭವಾಗಲಿದೆ. ಇದು ಅಕ್ಟೋಬರ್‌ 4 ಶುಕ್ರವಾರ ಮಧ್ಯಾಹ್ನ 2.58ಕ್ಕೆ ಮುಕ್ತಾಯಗೊಳ್ಳಲಿದೆ. ನವರಾತ್ರಿ ಘಟಸ್ಥಾಪನೆ ಅಕ್ಟೋಬರ್ 3ರ ಬೆಳಿಗ್ಗೆ 6:15 ರಿಂದ 7:22 ರವರೆಗೆ ಶುಭಮುಹೂರ್ತವಾಗಿದೆ. ಆದರೆ, ಅಭಿಜಿತ್ ಮುಹೂರ್ತವು 11:46 ರಿಂದ 12:33 ರವರೆಗೆ ಇರುತ್ತದೆ.

ನವರಾತ್ರಿಯ ಮಹತ್ವ

ಹಿಂದೂ ಧರ್ಮದಲ್ಲಿ ನವರಾತ್ರಿ ಆಚರಣೆಗೆ ಬಹಳ ಮಹತ್ವವಿದೆ. ಈ 9 ದಿನ ಒಂಬತ್ತು ಬಣ್ಣದ ಬಟ್ಟೆ ಧರಿಸುವ ಮೂಲಕ 9 ದೇವಿಯರನ್ನು ಪೂಜಿಸಲಾಗುತ್ತದೆ. ಆಶ್ವಯುಜ ಮಾಸದಲ್ಲಿ ದುರ್ಗಮಾತೆಯು 9 ದಿನಗಳ ಕಾಲ ಮಹಿಷಾಸುರನೊಡನೆ ಹೋರಾಡಿ, ಹತ್ತನೇ ದಿನ ಅಂದರೆ ವಿಜಯದಶಮಿಯ ದಿನ ದುಷ್ಟ ಮಹಿಷಾಸುರನನ್ನು ಸಂಹಾರ ಮಾಡಿದಳು ಎಂಬ ಪ್ರತೀತಿ ಇದೆ. ನವರಾತ್ರಿಯ ಸಮಯದಲ್ಲಿ ದುರ್ಗಾ ದೇವಿಯು ಯಾವುದೋ ರೂಪದಲ್ಲಿ ಭೂಮಿಯ ಮೇಲೆ ಇರುತ್ತಾಳೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ಒಂಬತ್ತು ದಿನಗಳ ಕಾಲ ದುರ್ಗಾಪೂಜೆ ಮಾಡುವುದಕ್ಕೆ ವಿಶೇಷ ಪ್ರಾಮುಖ್ಯ ನೀಡಲಾಗಿದೆ.

ನವರಾತ್ರಿ ಇತಿಹಾಸ

9 ದಿನಗಳ ಕಾಲ ಮಹಿಷಾಸುರನೊಂದಿಗೆ ಹೋರಾಡಿ, 10ನೇ ದಿನ ಅವನನ್ನು ಕೊಂದು ಮಹಿಷಮರ್ದಿನಿ ಎಂಬ ಹೆಸರು ಪಡೆಯುತ್ತಾಳೆ ದುರ್ಗಾಮಾತೆ. ಹಾಗಾಗಿ ಈ 9 ದಿನಗಳನ್ನು ನವರಾತ್ರಿ ಎಂದೂ ಹಾಗೂ 10ನೇ ದಿನವನ್ನು ವಿಜಯದಶಮಿ ಎಂದೂ ಆಚರಿಸಲಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ. ಇನ್ನೊಂದು ದಂತಕಥೆಯ ಪ್ರಕಾರ ಶ್ರೀರಾಮನು ದುಷ್ಟನಾದ ರಾವಣನಿಂದ ಜಗತ್ತನ್ನ ರಕ್ಷಿಸುತ್ತಾನೆ. ರಾವಣನ ಸಂಹಾರ ಮಾಡುವ ಮೊದಲು ನಾರದರು ಶ್ರೀರಾಮ ಬಳಿ ಒಂಬತ್ತು ದಿನಗಳ ಕಾಲ ವ್ರತ ಮಾಡುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ವ್ರತ ಆಚರಿಸಿದ ನಂತರ ಶ್ರೀರಾಮ ರಾವಣನ ಸಂಹಾರ ಮಾಡುತ್ತಾನೆ. ಇದರಿಂದ ನವರಾತ್ರಿ ಆಚರಿಸಲಾಗುತ್ತದೆ ಎಂಬುದು ಕೂಡ ಪ್ರತೀತಿ.

ಒಂಬತ್ತು ದಿನಗಳ ಕಾಲ ನವದುರ್ಗೆಯರ ಪೂಜೆ

ಅಕ್ಟೋಬರ್ 3, ಗುರುವಾರ: ತಾಯಿ ಶೈಲಪುತ್ರಿಯ ಆರಾಧನೆ

ಅಕ್ಟೋಬರ್ 4, ಶುಕ್ರವಾರ: ತಾಯಿ ಬ್ರಹ್ಮಚಾರಿಣಿ ಪೂಜೆ.

ಅಕ್ಟೋಬರ್ 5, ಶನಿವಾರ: ತಾಯಿ ಚಂದ್ರಘಂಟಾ ಪೂಜೆ

ಅಕ್ಟೋಬರ್ 6, ಭಾನುವಾರ: ತಾಯಿ ಕೂಷ್ಮಾಂಡಾ ಪೂಜೆ

ಅಕ್ಟೋಬರ್ 7, ಸೋಮವಾರ: ತಾಯಿ ಸ್ಕಂದಮಾತೆಯ ಆರಾಧನೆ

ಅಕ್ಟೋಬರ್ 8, ಮಂಗಳವಾರ: ಮಾತೆ ಕಾತ್ಯಾಯನಿ ಪೂಜೆ

ಅಕ್ಟೋಬರ್ 9, ಬುಧವಾರ- ಕಳಾರಾತ್ರಿಯ ಆರಾಧನೆ

ಅಕ್ಟೋಬರ್ 10, ಗುರುವಾರ - ಸಿದ್ಧಿದಾತ್ರಿಯ ಆರಾಧನೆ

ಅಕ್ಟೋಬರ್ 11, ಶುಕ್ರವಾರ- ಮಹಾಗೌರಿಯ ಆರಾಧನೆ

ಅಕ್ಟೋಬರ್ 12, ಶನಿವಾರ - ವಿಜಯದಶಮಿ (ದಸರಾ)

ನವರಾತ್ರಿ ನೈವೇದ್ಯ

ಮೊದಲೇ ಹೇಳಿದಂತೆ ನವರಾತ್ರಿಯಂದು ಒಂಬತ್ತು ದೇವಿಯರನ್ನು ಪೂಜಿಸುವ ಜೊತೆಗೆ ಒಂಬತ್ತು ದಿನವೂ ಬಗೆ ಬಗೆಯ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಮೊದಲ ದಿನ ಶೈಲಪುತ್ರಿಗೆ ಹಸುವಿನ ತುಪ್ಪವನ್ನು ಅರ್ಪಿಸಬೇಕು ಎಂದು ಹೇಳಲಾಗುತ್ತದೆ. ಎರಡನೇ ದಿನ ಬ್ರಹ್ಮಚಾರಿಣಿ ಪೂಜೆ ಬೆಲ್ಲದ ನೈವೇದ್ಯ ಮಾಡಬೇಕು. ಮೂರನೇ ದಿನ ಚಂದ್ರಘಂಟಾ ದೇವಿಗೆ ಹಾಲು ಹಾಗೂ ಹಾಲಿನಿಂದ ಮಾಡಿದ ಸಿಹಿತಿಂಡಿ ನೈವೇದ್ಯ ಮಾಡಬೇಕು. ಕೂಷ್ಮಾಂಡೆಗೆ ಮಾಲ್ಪೋಪಾ ಸಿಹಿತಿನಿಸನ್ನು ಅರ್ಪಿಸಬೇಕು. ಐದನೇ ದಿನ ಸ್ಕಂದ ಮಾತೆಗೆ ಬಾಳೆಹಣ್ಣಿನ ನೈವೇದ್ಯ ಮಾಡಬೇಕು. ಆರನೇ ದಿನ ಕಾತ್ಯಾಯಿನಿಗೆ ವೀಳದ್ಯೆಲೆ ಅರ್ಪಿಸಬೇಕು. ಏಳನೇ ದಿನ ಕಾಳ ರಾತ್ರಿ ದೇವಿಗೆ ಬೆಲ್ಲ ಅಥವಾ ಬೆಲ್ಲದಿಂದ ಮಾಡಿ ಸಿಹಿ ತಿನಿಸು ಅರ್ಪಿಸಬೇಕು. ಎಂಟನೇ ದಿನ ಮಹಾಗೌರಿಗೆ ತೆಂಗಿನಕಾಯಿ ಅರ್ಪಿಸಬೇಕು. ಒಂಬತ್ತನೇ ದಿನ ಸಿದ್ಧಿಧಾತ್ರಿಗೆ ಹೆಸರುಬೇಳೆ ಪಾಯಸ ಅರ್ಪಿಸಬೇಕು ಎಂದು ಶಾಸ್ತ್ರಗಳು ಹೇಳುತ್ತವೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.