ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ತೆಂಗಿನಕಾಯಿ ಬಳಸುವುದೇಕೆ; ದೇವರ ಪೂಜೆಯಲ್ಲಿ ತೆಂಗು ಬಳಕೆಯ ಪ್ರಾಮುಖ್ಯತೆ ಏನು?

ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ತೆಂಗಿನಕಾಯಿ ಬಳಸುವುದೇಕೆ; ದೇವರ ಪೂಜೆಯಲ್ಲಿ ತೆಂಗು ಬಳಕೆಯ ಪ್ರಾಮುಖ್ಯತೆ ಏನು?

ಪೂಜೆ ಸೇರಿದಂತೆ ಶುಭಕಾರ್ಯಗಳಲ್ಲಿ ತೆಂಗಿನಕಾಯಿ ಬಳಕೆಗೂ, ಧಾರ್ಮಿಕ ನಂಬಿಕೆಗಳ ಪ್ರಕಾರ ಮಹತ್ವವಿದೆ. ಅನಾದಿಕಾಲದಿಂದಲೂ ಹಿಂದೂ ಧರ್ಮದಲ್ಲಿ ತೆಂಗನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಇದರ ಹಿಂದಿನ ಪ್ರಾಮುಖ್ಯತೆಯನ್ನು ತಿಳಿಯೋಣ.

ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ತೆಂಗಿನಕಾಯಿ ಬಳಸುವುದೇಕೆ; ತೆಂಗು ಬಳಕೆಯ ಪ್ರಾಮುಖ್ಯತೆ ಏನು?
ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ತೆಂಗಿನಕಾಯಿ ಬಳಸುವುದೇಕೆ; ತೆಂಗು ಬಳಕೆಯ ಪ್ರಾಮುಖ್ಯತೆ ಏನು? (Pixabay, Pexel)

ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಹಲವು ಕ್ರಮಗಳನ್ನು ಅನಾದಿಕಾಲದಿಂದಲೂ ತಪ್ಪದೆ ಪಾಲಿಸಲಾಗುತ್ತದೆ. ಧಾರ್ಮಿಕ ವಿಧಿ-ವಿಧಾನಗಳನ್ನು ಈಗಲೂ ಯಥಾವತ್ತಾಗಿ ಅನುಸರಿಸಲಾಗುತ್ತದೆ. ಸಾಮಾನ್ಯವಾಗಿ ಪೂಜೆ, ಹೋಮ ಹವನ ಮಾಡುವಾಗ ಅಥವಾ ಇತರ ಶುಭ ಕಾರ್ಯಗಳಲ್ಲಿ ಹಿಂದೂ ಧರ್ಮೀಯರು ತೆಂಗಿನಕಾಯಿ ಬಳಸುತ್ತಾರೆ. ಹೆಚ್ಚಿನ ಕಡೆ ಸಾಂಪ್ರದಾಯಿಕವಾಗಿ ತೆಂಗಿನ ಜುಟ್ಟನ್ನು ಕೂಡಾ ಅದರಲ್ಲೇ ಉಳಿಸಲಾಗುತ್ತದೆ. ಪೂಜೆಗೆ ಕಲ್ಪವೃಕ್ಷದ ಫಲವನ್ನು ಬಳಸುವ ಹಿಂದೆ ಹಲವು ಕಾರಣಗಳಿವೆ. ಧಾರ್ಮಿಕವಾಗಿ ತೆಂಗಿನಕಾಯಿಗೆ ಭಾರಿ ಮಹತ್ವವಿದೆ. ಆ ಮಹತ್ವ ಹಾಗೂ ತೆಂಗು ಬಳಸುವ ಪ್ರಾಮುಖ್ಯತೆಯನ್ನು ತಿಳಿಯೋಣ.

ಶುಭಕಾರ್ಯಗಳನ್ನು ಆರಂಭಿಸುವ ಮುನ್ನ ತೆಂಗಿನಕಾಯಿ ಒಡೆಯುವುದನ್ನು ನೋಡಿರುತ್ತೀರಿ. ಇದು ಅತ್ಯಂತ ಮಂಗಳಕರ. ಇಷ್ಟೇ ಅಲ್ಲದೆ ಹಲವು ಶುಭ ಕಾರ್ಯಗಳಲ್ಲಿ ತೆಂಗನ್ನು ಬಳಸುವುದು ಸಾಮಾನ್ಯವಾಗಿದೆ. ಪೂಜೆ ವೇಳೆ ಇದರ ಬಳಕೆಯಿಂದ ವಿವಿಧ ದೋಷಗಳು ದೂರವಾಗುತ್ತವೆ ಎಂದು ಧರ್ಮಗ್ರಂಥಗಳು ಹೇಳುತ್ತವೆ. ಭೂಮಿ ಮೇಲೆ ಸಿಗುವ ಸಕಲ ಫಲಗಳಲ್ಲಿ ತೆಂಗಿನಕಾಯಿ ಅತ್ಯುತ್ತಮ ಎಂದು ಹೇಳಲಾಗುತ್ತದೆ. ಪ್ರಾಚೀನ ಕಾಲದಿಂದಲೂ, ಹಿಂದೂಗಳು ಆಚರಿಸುವ ಎಲ್ಲಾ ಮಂಗಳಕರ ಆಚರಣೆಗಳಲ್ಲಿ ತೆಂಗಿನಕಾಯಿ ಬಳಕೆಯಾಗುತ್ತಿದೆ.

ತೆಂಗಿನಕಾಯಿ ಬಳಸುವುದು ಯಾಕೆ?

ತೆಂಗಿನಕಾಯಿಯನ್ನು ಮಂಗಳಕರ ಸಂಕೇತವಾಗಿ ನೋಡಲಾಗುತ್ತದೆ. ದೇವಾಲಯಗಳಲ್ಲಿ ತೆಂಗಿನಕಾಯಿ ಒಡೆಯುವ ಕ್ರಮವಿದೆ. ಹಿಂದೂ ಧರ್ಮದಲ್ಲಿ ಬಹುತೇಕ ಎಲ್ಲಾ ದೇವರು ಮತ್ತು ದೇವತೆಗಳಿಗೆ ತೆಂಗಿನಕಾಯಿ ಅರ್ಪಿಸಲಾಗುತ್ತದೆ. ಶುಭಕಾರ್ಯ ಆರಂಭಿಸುವ ಮುನ್ನ ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸಲಾಗುತ್ತದೆ. ದೇವರಿಗೆ ತೆಂಗಿನಕಾಯಿ ಅರ್ಪಿಸುವುದರಿಂದ ದುಃಖ ಮತ್ತು ನೋವು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ.

ನಂಬಿಕೆಗಳ ಪ್ರಕಾರ, ತೆಂಗಿನಕಾಯಿಗೆ ಮಹತ್ವ ನೀಡಲು ಇನ್ನೊಂದು ಕಾರಣವಿದೆ. ದೇವರಿಗೆ ಅರ್ಪಿಸುವ ನೈವೇದ್ಯ ಅಥವಾ ಯಾವುದೇ ವಸ್ತುಗಳು ಸ್ವಚ್ಛವಾಗಿರಬೇಕೆಂಬುದು ಧಾರ್ಮಿಕ ನಂಬಿಕೆಗಳ ಪ್ರಕಾರ ಜನರ ಅಭಿಪ್ರಾಯ. ತೆಂಗಿನ ಕಾಯಿ ಹುಟ್ಟುವುದೇ ಒಂದು ಪೂರ್ಣ ತೆಂಗಿನಕಾಯಿಯಿಂದ. ಅಂದರೆ, ಬಳಕೆಯಾಗದ ಕಾಯಿಯಿಂದ ಹೊಸ ಗಿಡ ಹುಟ್ಟುತ್ತದೆ. ಸಾಮಾನ್ಯವಾಗಿ, ಬಾಳೆಹಣ್ಣು ಹೊರತುಪಡಿಸಿ ಇತರ ಫಲಗಳು ಬಳಸಿ ಎಸೆದ ಬೀಜಗಳಿಂದ ಹುಟ್ಟುತ್ತವೆ. ಆದರೆ, ತೆಂಗು ಹೊಸ ಕಾಯಿಯಿಂದ ಹುಟ್ಟುತ್ತದೆ. ಒಮ್ಮೆ ಒಂದು ಕಾಯಿಯನ್ನು ಒಡೆದು ಬಳಸಿದ ಬಳಿಕ ಅದರಿಂದ ಗಿಡ ಹುಟ್ಟುವುದಿಲ್ಲ. ಕದಳಿಫಲ (ಬಾಳೆಹಣ್ಣು) ಕೂಡಾ ಹೊಸ ಬೇರಿನ ಮೂಲಕ ಜನ್ಮಪಡೆಯುತ್ತದೆ. ಹೀಗಾಗಿ ದೇವರಿಗೆ ಪರಿಶುದ್ಧ ಹಣ್ಣುಗಳನ್ನು ಅರ್ಪಿಸಬೇಕೆಂಬ ನಂಬಿಕೆಯೊಂದಿಗೆ ತೆಂಗು ಹಾಗೂ ಕದಳಿಫಲ ಹೆಚ್ಚಾಗಿ ಬಳಸಲಾಗುತ್ತದೆ.

ತೆಂಗಿನಕಾಯಿಯ ಧಾರ್ಮಿಕ ಮಹತ್ವ

ಕಲ್ಪವೃಕ್ಷ ಎಂದೂ ಕರೆಯಲ್ಪಡುವ ತೆಂಗಿನ ಮರದಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಈ ಮೂರು ದೇವರುಗಳು ವಾಸಿಸುತ್ತಾರೆ ಎಂದು ನಂಬಲಾಗಿದೆ. ಶಿವನ ಮೂರು ಕಣ್ಣುಗಳಿಗೂ ತೆಂಗಿನಕಾಯಿಯ ಮೇಲಿನ ಮೂರು ಕಣ್ಣುಗಳಿಗೂ ಹೋಲಿಕೆ ಮಾಡಲಾಗುತ್ತದೆ. ಹೀಗಾಗಿ ತೆಂಗಿನಕಾಯಿಯನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ಮದುವೆಯಂಥಾ ಶುಭಕಾರ್ಯದಲ್ಲಿಯೂ ತೆಂಗಿನಕಾಯಿಯನ್ನು ಕಲಶದ ಮೇಲೆ ಪ್ರತಿಷ್ಠಾಪಿಸಲಾಗುತ್ತದೆ.

ತೆಂಗಿನಕಾಯಿ ಒಡೆಯುವುದರ ಮಹತ್ವ

ಗಣೇಶನಿಗೆ ತೆಂಗಿನಕಾಯಿ ಇಷ್ಟ ಎಂದು ಹೇಳಲಾಗುತ್ತದೆ. ಹೀಗಾಗಿ ಶುಭ ಕಾರ್ಯದಲ್ಲಿ ತೊಡಗುವ ಮುನ್ನ ಗಣೇಶನನ್ನು ಸ್ಮರಿಸಲಾಗುತ್ತದೆ. ಸಕಲ ದೇವರುಗಳಲ್ಲಿ ಗಣೇಶನಿಗೆ ಮೊದಲ ಪೂಜೆ. ಹೀಗಾಗಿ ಗಣೇಶನ ಸ್ಮರಣೆಯೊಂದಿಗೆ ಆತನಿಗೆ ತೆಂಗಿನಕಾಯಿ ಅರ್ಪಿಸಿ ಪೂಜೆಯೊಂದಿಗೆ ಶುಭಕಾರ್ಯ ಆರಂಭ ಮಾಡಲಾಗುತ್ತದೆ. ಯಾವುದೇ ಶುಭ ಕಾರ್ಯ ಆರಂಭಿಸುವ ಮೊದಲು ತೆಂಗಿನಕಾಯಿ ಒಡೆಯುವುದರಿಂದ ಬರುವ ವಿಘ್ನ ನಿವಾರಿಸುವಂತೆ ಗಣೇಶನಲ್ಲಿ ಪ್ರಾರ್ಥಿಸಲಾಗುತ್ತದೆ.

(ಗಮನಿಸಿ: ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.