ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಮಾಯಣ ಸುಂದರಕಾಂಡ: ಸೀತೆಯ ಕಂಡ, ಲಂಕೆಯ ಸುಟ್ಟ, ಚೂಡಾಮಣಿ ತಂದ ಹನುಮಂತ; ರಾಮನಿಗೆ ಬಂತು ಶುಭವಾರ್ತೆ -ಶ್ರೀರಾಮನವಮಿ ವಿಶೇಷ

ರಾಮಾಯಣ ಸುಂದರಕಾಂಡ: ಸೀತೆಯ ಕಂಡ, ಲಂಕೆಯ ಸುಟ್ಟ, ಚೂಡಾಮಣಿ ತಂದ ಹನುಮಂತ; ರಾಮನಿಗೆ ಬಂತು ಶುಭವಾರ್ತೆ -ಶ್ರೀರಾಮನವಮಿ ವಿಶೇಷ

ರಾಮಾಯಣದಲ್ಲಿ ಸುಂದರಕಾಂಡದ ಮಹತ್ವ: ಆಂಜನೇಯನು ಸೀತೆಯನ್ನು ಕಂಡ ಕಥೆಯನ್ನು ಸುಂದರಕಾಂಡ ವಿವರಿಸುತ್ತದೆ. ರಾಮಾಯಣದಲ್ಲಿ ಅತ್ಯಂತ ಮಂಗಳಕರವಾದ ಕಥಾಭಾಗ ಇದು ಎಂದು ಪರಿಗಣಿಸಲಾಗಿದೆ. ಸುಂದರಕಾಂಡ ಪಾರಾಯಣದಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆ ಜನಜನಿತವಾಗಿದೆ. (ಬರಹ: ಎಚ್‌.ಸತೀಶ್, ಜ್ಯೋತಿಷಿ)

ಸುಂದರಕಾಂಡ: ಸೀತೆಯ ಕಂಡ, ಲಂಕೆಯ ಸುಟ್ಟ, ಚೂಡಾಮಣಿ ತಂದ ಹನುಮಂತ; ರಾಮನಿಗೆ ಬಂತು ಶುಭವಾರ್ತೆ
ಸುಂದರಕಾಂಡ: ಸೀತೆಯ ಕಂಡ, ಲಂಕೆಯ ಸುಟ್ಟ, ಚೂಡಾಮಣಿ ತಂದ ಹನುಮಂತ; ರಾಮನಿಗೆ ಬಂತು ಶುಭವಾರ್ತೆ (Image Courtesy: quora.com)

ಸುಂದರಕಾಂಡದ ಕಥೆ: ಹನುಮಂತನ ಮತ್ತೊಂದು ಹೆಸರೇ ಸುಂದರ. ಮಹರ್ಷಿ ವಾಲ್ಮೀಕಿಗೆ ಹನುಮಾನ್ ಪಾತ್ರವೂ ತುಂಬಾ ಆಪ್ತವಾದುದು. ಹೀಗಾಗಿ ಹನುಮಂತನಿಗಾಗಿ, ಅವನ ಕಥೆಗಾಗಿ, ಅವನ ಪರಾಕ್ರಮ ವರ್ಣಿಸಲೆಂದು ಒಂದು ಅಧ್ಯಾಯವನ್ನೇ ಮೀಸಲಿಟ್ಟಿದ್ದಾರೆ. ಸುಂದರಕಾಂಡದಲ್ಲಿ ಸಂಪೂರ್ಣವಾಗಿ ಹನುಮಂತನ ವಿಚಾರಗಳಿವೆ. ಸೀತೆಯನ್ನು ಹುಡುಕಲು ಅವನು ಮಾಡಿದ ಸಾಹಸಗಳು ಇದರಲ್ಲಿ ಅಡಕವಾಗಿವೆ. ಸಮುದ್ರ ಮಾರ್ಗವಾಗಿ ಲಂಕೆಯನ್ನು ತಲುಪಿದ ಹನುಮಂತನು ಅಶೋಕವನದಲ್ಲಿ ಸೀತಾಮಾತೆಯನ್ನು ಕಾಣುತ್ತಾನೆ. ಆನಂತರ ರಾಮನ ಬಳಿ ಮರಳಿ ಬಂದು ಅಶೋಕವನದಲ್ಲಿ ಸೀತೆಯು ಇರುವುದನ್ನು ತಿಳಿಸುತ್ತಾನೆ.

ಸೀತಾಮಾತೆಯನ್ನು ಹುಡುಕುತ್ತಾ ಆಂಜನೇಯನ ದಕ್ಷಿಣ ದಿಕ್ಕಿಗೆ ತೆರಳುವನು. ಗೋದಾವರಿ, ವರದಾ ನದಿಗಳನ್ನು ದಾಟಿ ಕಳಿಂಗ, ವಿದರ್ಭ ಮುಂತಾದ ಪ್ರದೇಶಗಳಲ್ಲಿ ಸೀತಾಮಾತೆಯನ್ನು ಹುಡುಕುತ್ತಾನೆ. ಕಾವೇರಿ ನದಿಯ ಬಳಿ ಇರುವ ಮಲಯ ಪರ್ವತದಲ್ಲಿಯೂ ಸೀತಾದೇವಿಗಾಗಿ ಹುಡುಕಾಡಿದರೂ ಯಾವುದೇ ಪ್ರಯೋಜನ ಆಗುವುದಿಲ್ಲ. ಆ ವೇಳೆಯಲ್ಲಿ ಮಯ ಎಂಬ ರಾಕ್ಷಸಶಿಲ್ಪಿಯು ನಿರ್ಮಿಸಿದ ಋಕ್ಷಬಿಲಾ ಎಂಬ ಗುಹೆಯೂ ಕಂಡು ಬರುತ್ತದೆ.

ಅಲ್ಲಿ ತಪಸ್ಸಿನಲ್ಲಿ ತೊಡಗಿದ್ದ ಸ್ವಯಪ್ರಭೆ ಎಂಬ ತಪಸ್ಪಿಯ ಶುಭ ಹಾರೈಕೆಯೊಂದಿಗೆ ಆಹಾರ ಸೇವಿಸಿದ ನಂತರ ತಮ್ಮ ಅನ್ವೇಷಣಾ ಕಾರ್ಯವನ್ನು ಮುಂದುವರೆಸುತ್ತಾರೆ. ಮಾರ್ಗ ಮಧ್ಯೆ ಜಟಾಯುವಿನ ಅಣ್ಣನಾದ ಸಂಪಾತಿಯ ಭೇಟಿಯಾಗುತ್ತದೆ. ಜಟಾಯುವಿನ ಮರಣವನ್ನು ತಿಳಿದು ವ್ಯಾಕುಲಗೊಂಡ ಸಂಪಾತಿಯು ಸೀತೆಯನ್ನು ಅಪಹರಿಸಿದ ವಿಚಾರ ತಿಳಿದು ಕ್ರೋಧಕ್ಕೆ ಒಳಗಾಗುತ್ತಾನೆ. ರಾವಣ ಎಂಬ ರಾಕ್ಷಸನು ಲಂಕೆಗೆ ರಾಜನಾಗಿದ್ದಾನೆ. ಇದೇ ದಿಕ್ಕಿನಲ್ಲಿ ನೀವು ನಡೆದರೆ ರಾವಣನ ರಾಜ್ಯವನ್ನು ತಲುಪಬಹುದು. ರಾವಣನನ್ನು ಸೋಲಿಸಿ ಅಥವಾ ಅವನ ಹತ್ಯೆ ಮಾಡಿ ಸೀತಾಮಾತೆಯನ್ನು ಬಿಡುಗಡೆಗೊಳಿಸಿ ಎಂದು ತಿಳಿಸುತ್ತಾನೆ.

ತಕ್ಷಣವೇ ಶಾಪಕ್ಕೆ ಒಳಗಾಗಿದ್ದ ರೆಕ್ಕೆಗಳು ಮರಳಿ ಬರುತ್ತವೆ. ಆದರೆ ವಾನರ ಸೈನ್ಯ ಮತ್ತು ರಾವಣನ ರಾಜ್ಯಕ್ಕೆ ದೊಡ್ಡ ಅಂತರ ಇರುತ್ತದೆ. ವಿಶಾಲವಾದ ಸಮುದ್ರವೂ ಇರುತ್ತದೆ. ಆದರೆ ಈ ದೊಡ್ಡ ಸಮುದ್ರವನ್ನು ಹಾರಿ ಮತ್ತೊಂದು ಬದಿಯನ್ನು ಸೇರಲು ಒಬ್ಬ ವೀರನ ಅಗತ್ಯತೆ ಇರುತ್ತದೆ. ಇಂತಹ ಸಾಹಸದ ಕೆಲಸ ಮಾಡುವ ಶಕ್ತಿವಂತ ಯಾರೆಂಬ ವಾದ ವಿವಾದಗಳು ವಾನರ ಸೈನ್ಯದಲ್ಲಿ ನಡೆಯುತ್ತವೆ.

ಲಂಕೆಗೆ ಹಾರಿದ ಹನುಮಂತ

ಜಾಂಬುವಂತನು ಹನುಮಂತನನ್ನು ಲಂಕೆಗೆ ಹಾರಲು ಪ್ರೇರೇಪಿಸುತ್ತಾನೆ. ಚಿಕ್ಕ ವಯಸ್ಸಿನಲ್ಲಿ ಸೂರ್ಯನನ್ನು ಹಣ್ಣು ಎಂದು ಭಾವಿಸಿ ಸೂರ್ಯನನ್ನೇ ತಿನ್ನಲೆಂದು ಹನುಮಂತನು ಸೂರ್ಯನ ಕಡೆ ಹಾರಿರುತ್ತಾನೆ. ಇಂತಹ ಇನ್ನೂ ಅನೇಕ ಪ್ರಸಂಗಗಳ ಕಾರಣ ಹನುಮಂತನೇ ಸೀತೆಯನ್ನು ಹುಡುಕಿ ತರಲು ಸಮರ್ಥ ಎಂದು ಹಿರಿಯ ವಾನರರು ಭಾವಿಸುತ್ತಾರೆ. ಹನುಮಂತನೂ ಸಮುದ್ರವನ್ನು ದಾಟಲು ನಿರ್ಧರಿಸುತ್ತಾನೆ.

ಮೊದಲು ಆಂಜನೇಯನು ತ್ರಿಕೂಟ ಪರ್ವತದ ಬಳಿ ಬರುತ್ತಾನೆ. ಅಲ್ಲಿಂದ ರಾವಣನ ರಾಜ್ಯವಾಗಿದ್ದ ಲಂಕೆಯು ಇವನಿಗೆ ಗೋಚರಿಸುತ್ತದೆ. ಮೂಲತಃ ಕುಬೇರನ ರಾಜ್ಯವಾಗಿದ್ದ ಲಂಕೆಯನ್ನು ರಾವಣನು ಯುದ್ಧ ಮಾಡಿ ಕಸಿದು ಕೊಂಡಿರುತ್ತಾನೆ. ಲಂಕೆಯ ಬಾಗಿಲ ಬಳಿ ಲಂಕೆಯನ್ನು ಕಾಯುತ್ತಿದ್ದ ಲಂಕಾದೇವಿಯನ್ನು ಹತ್ಯೆ ಮಾಡದೆ ಮನ್ನಿಸುತ್ತಾನೆ. ಇದರಿಂದ ಪ್ರಸನ್ನಳಾದ ಲಂಕಾದೇವಿಯು ರಾವಣನಿಗೆ ನರಮಾನವನಿಂದ ಮಾತ್ರ ಸಾವು ಎಂದು ಬ್ರಹ್ಮದೇವನು ತಿಳಿಸಿದ್ದಾನೆ. ಆದ್ದರಿಂದ ಅವನ ವಿರುದ್ಧ ಸುಲಭವಾಗಿ ನೀವು ಗೆಲ್ಲ ಬನ್ನಿರಿ ಎಂದು ತಿಳಿಸುತ್ತಾಳೆ.

ಎಡಗಾಲಿಟ್ಟು ಲಂಕೆ ಪ್ರವೇಶಿಸಿದ ಆಂಜನೇಯ

ಹೆಬ್ಬಾಗಿಲ ಮೂಲಕ ಹನುಮಂತನು ಲಂಕೆಯನ್ನು ಪ್ರವೇಶಿಸದೆ ಗೋಡೆಯನ್ನು ಹಾರಿ ಮೊದಲು ಎಡಗಾಲನ್ನು ಇಟ್ಟು ಪ್ರವೇಶಿಸುತ್ತಾನೆ. ಮನೆಯ ಒಳಭಾಗದಲ್ಲಿ ಸೀತೆಯನ್ನು ಕಾಣುವುದಿಲ್ಲ. ಆನಂತರ ಅಶೋಕವನದಲ್ಲಿ, ಅಶೋಕ ವೃಕ್ಷಗಳ ಕೆಳಗೆ ಸರಳವಾದ ಬಟ್ಟೆಯನ್ನು ಉಟ್ಟಿದ್ದ ಸ್ತ್ರೀಯೊಬ್ಬಳು ರಾಮನಾಮವನ್ನು ಜಪಿಸುವುದನ್ನು ಕಾಣುತ್ತಾನೆ. ತಾನು ನೋಡುತ್ತಿರುವುದು ಸೀತಾಮಾತೆ ಎಂದು ತಿಳಿದ ಆಂಜನೇಯನು ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾನೆ. ಆದರೆ ಹನುಮಂತನನ್ನು ನೋಡಿದ ಸೀತೆಗೆ ಭಯ ಉಂಟಾಗುತ್ತದೆ. ಆದರೆ ಹನುಮಂತನು ತಾನು ಬಂದ ವಿಚಾರವನ್ನು ತಿಳಿಸುತ್ತಾನೆ.

ವಾನರೋsಹಂ ಮಹಾಭಾಗೇ ದೂತೋ ರಾಮಸ್ಯ ಧೀಮತಃ |

ರಾಮನಾಮಾಂಕಿಂತಂ ಚೇದಂ ಪಶ್ಯ ದೇವ್ಯಂಗುಲೀಯಕಮ್ ||

ನಾನು ವಾನರವೀರ, ರಾಮನ ದೂತ. ರಾಮನ ಈ ಉಂಗುರ ನೋಡು ಎಂದು ಆಂಜನೇಯನು ರಾಮನು ಕೊಟ್ಟಿದ್ದ ಮುದ್ರಿಕೆ ಉಂಗುರವನ್ನು ಸೀತೆಗೆ ತೋರಿಸಿ ನಂಬಿಕೆ ಸಂಪಾದಿಸಿಕೊಳ್ಳುತ್ತಾನೆ. ರಾಮ-ಲಕ್ಷ್ಮಣರ ಬಗ್ಗೆ ಹನುಮಂತ ಹಲವು ವಿಚಾರಗಳನ್ನು ಹೇಳುತ್ತಾನೆ. ನಾನು ದೈತ್ಯ ದೇಹವನ್ನು ಹೊಂದಬಲ್ಲೆ. ನೀನು ನನ್ನ ಭುಜದ ಮೇಲೆ ಕುಳಿತರೆ ನಾನು ನಿನ್ನನ್ನು ರಾಮನಿರುವ ಸ್ಥಳಕ್ಕೆ ಕರೆದೊಯ್ಯುವೆ ಎಂದು ಹೇಳುತ್ತಾನೆ. ಆದರೆ ರಾಮನು ಯುದ್ದವನ್ನು ಮಾಡಿ ರಾವಣನನ್ನು ಕೊಂದು ನನ್ನನ್ನು ಕರೆದೊಯ್ಯಬೇಕೆಂಬುದೇ ನನ್ನ ಆಸೆ ಎಂದು ಸೀತೆಯು ಹೇಳುತ್ತಾಳೆ. ಹನುಮಂತನಿಗೆ ತನ್ನನ್ನು ನೋಡಿದ ಗುರುತಿಗಾಗಿ ತನ್ನ ಬಳಿ ಇದ್ದ ಚೂಡಾಮಣಿಯನ್ನು ನೀಡುತ್ತಾಳೆ.

ಲಂಕೆಯ ಸುಟ್ಟು ವಾನರ ವೀರ, ರಾಮನಿಗೆ ಶುಭ ಸುದ್ದಿ ಕೊಟ್ಟ

ಹನುಮಂತನು ಅಶೋಕ ವನವನ್ನು ಧ್ವಂಸಗೊಳಿಸುತ್ತಾನೆ. ಇವನ ಜೊತೆ ಯುದ್ಧ ಮಾಡಿದ ರಾವಣನ ದೊಡ್ಡ ಸೈನ್ಯವು ಸೋಲನ್ನು ಅನುಭವಿಸುತ್ತದೆ. ರಾವಣನು ಹನುಮಂತನ ಬಾಲಕ್ಕೆ ಬಟ್ಟೆಯನ್ನು ಕಟ್ಟಲು ತಿಳಿಸುತ್ತಾನೆ. ಆದರೆ ಹನುಮಂತನ ಬಾಲವು ಬೆಳೆಯುತ್ತಾ ಹೋಗುತ್ತದೆ. ಕೊನೆಗೆ ರಾವಣನಿಗೆ ಬುದ್ಧಿ ಕಲಿಸುವ ಸಲುವಾಗಿ ಅಶೋಕವನವನ್ನು ಮತ್ತು ಲಂಕೆಯ ಹಲವು ಭಾಗಗಳನ್ನು ಬಾಲಕ್ಕೆ ಹಚ್ಚಿದ ಬೆಂಕಿಯಿಂದ ಸುಟ್ಟುಬಿಡುತ್ತಾನೆ.

ನಂತರ ರಾಮ ಲಕ್ಷ್ಮಣರ ಬಳಿಗೆ ಬಂದು ಸೀತಾಮಾತೆಯನ್ನು ನೋಡಿದ ವಿಚಾರ ಮತ್ತು ರಾವಣನ ಶಕ್ತಿಯ ಬಗ್ಗೆಯೂ ತಿಳಿಸುತ್ತಾನೆ. ಒಬ್ಬ ದೂತ ಯಶಸ್ವಿಯಾಗಿ ಹೇಗೆ ಸ್ವಾಮಿಯ ಕೆಲಸ ಸಾಧಿಸಬೇಕು ಎನ್ನುವುದಕ್ಕೆ ಆಂಜನೇಯ ಮಾದರಿಯಾಗಿದ್ದಾನೆ. ಸೀತಾ ವಿಯೋಗದ ಶೋಕದಲ್ಲಿದ್ದ ರಾಮನಿಗೆ ಸೀತೆಯ ಹುಡುಕಾಟದ ಪ್ರಯತ್ನಗಳು ವಿಫಲವಾಗುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಆಂಜನೇಯ ಸೀತೆಯನ್ನು ಕಾಣಬಹುದು ಎಂಬ ಭರವಸೆ ಮೂಡುತ್ತದೆ. ಇದೇ ಕಾರಣಕ್ಕೆ ಉಳಿದ ಯಾವ ವಾನರರಿಗೂ ಕೊಡದ ಮುದ್ರಿಕೆ ಉಂಗುರವನ್ನು ಆಂಜನೇಯನಿಗೆ ಕೊಟ್ಟಿರುತ್ತಾನೆ. ಕೆಲಸ ಸಾಧಿಸುವ ಹನುಮಂತ ಸೀತೆಯನ್ನು ಕಂಡ ಶುಭ ಸುದ್ದಿಯನ್ನು ರಾಮನಿಗೆ ತಿಳಿಸು ಅವನ ಮನಸ್ಸಿಗೆ ಸಂತೋಷ ತರುತ್ತಾನೆ.

ಮೊದಲೇ ಹೇಳಿದಂತೆ ಸುಂದರಕಾಂಡ ಪಾರಾಯಣದಿಂದ ಸಂತಾನಫಲ ಸೇರಿದಂತೆ ಹಲವು ಶುಭಫಲಗಳನ್ನು ಶಾಸ್ತ್ರಕಾರರು ಹೇಳಿದ್ದಾರೆ. ವಾಲ್ಮೀಕಿ ಮಹರ್ಷಿಗಳು ಅತ್ಯಂತ ಆಸ್ಥೆಯಿಂದ ಆಂಜನೇಯನ ಪಾತ್ರವನ್ನು ರೂಪಿಸಿದ್ದಾರೆ. ಪರಿಪೂರ್ಣ ವ್ಯಕ್ತಿತ್ವದ ಪ್ರತೀಕದಂತೆ ಹನುಮಂತೆ ರಾಮಾಯಣದಲ್ಲಿ ಕಂಗೊಳಿಸುತ್ತಾನೆ.

ಬರಹ: ಎಚ್‌.ಸತೀಶ್