ರಾಮಾಯಣ ಅಯೋಧ್ಯಾಕಾಂಡ: ದಶರಥನ ಪಾಲಿಗೆ ಶಾಪವಾಯ್ತು ಕೈಕೇಯಿಗೆ ಕೊಟ್ಟ ವರ, ಪಟ್ಟ ಬಿಟ್ಟು ಕಾಡಿಗೆ ಹೊರಟ ಶ್ರೀರಾಮ -ಶ್ರೀರಾಮನವಮಿ ವಿಶೇಷ
ರಾಮಾಯಣದಲ್ಲಿ ಅಯೋಧ್ಯಾಕಾಂಡದ ಮಹತ್ವ: ಅಯೋಧ್ಯಾಕಾಂಡದಲ್ಲಿ ಶ್ರೀರಾಮ ಪಟ್ಟಾಭಿಷೇಕ ಸಿದ್ಧತೆಯ ವಿವರಗಳಿವೆ. ದಶರಥನು ನೀಡಿದ್ದ ವರಗಳನ್ನು ಬಳಸಿಕೊಳ್ಳುವ ಕೈಕೇಯಿ ರಾಮ,ಸೀತಾ ಮತ್ತು ಲಕ್ಷ್ಮಣರು ವನವಾಸಕ್ಕೆ ತೆರೆಳುವಂತೆ ಮಾಡುತ್ತಾಳೆ. ಇದೇ ಚಿಂತೆಯಲ್ಲಿ ದಶರಥನ ಮರಣವಾಗುತ್ತದೆ. (ಬರಹ: ಎಚ್.ಸತೀಶ್, ಜ್ಯೋತಿಷಿ)
ಅಯೋಧ್ಯಾಕಾಂಡದ ಕಥೆ: ಸೀತೆಯೊಂದಿಗೆ ಶ್ರೀರಾಮನ ವಿವಾಹದ ನಂತರ ಲಕ್ಷ್ಮಣ, ಭರತ, ಶತ್ರುಘ್ನರ ಮದುವೆಗಳೂ ಮಿಥಿಲೆಯಲ್ಲಿ ನಡೆಯುತ್ತವೆ. ವಿವಾಹ ಮಹೋತ್ಸವದ ಸಂಭ್ರಮದ ನಂತರ ಅಯೋಧ್ಯೆಗೆ ಸೋದರರು ಹೊರಡುತ್ತಾರೆ. ಭರತ ಮತ್ತು ಶತ್ರುಘ್ನರು ತಮ್ಮ ಸೋದರಮಾವನ ಕೇಕಯ ದೇಶಕ್ಕೆ ತೆರಳುತ್ತಾರೆ. ರಾಮ ಮತ್ತು ಲಕ್ಷ್ಮಣರು ಅಯೋಧ್ಯೆಗೆ ಹಿಂದಿರುಗಿ ದಶರಥನ ಸೇವೆಯಲ್ಲಿ, ಆಡಳಿತದ ವಿಚಾರಗಳಲ್ಲಿ ತಲ್ಲೀನರಾಗುತ್ತಾರೆ. ದಶರಥನು ಎಲ್ಲ ಮಕ್ಕಳನ್ನು ಒಂದೇ ದೃಷ್ಟಿಯಿಂದ ಪ್ರೀತಿಯಿಂದ ಕಾಣುತ್ತಾನೆ. ಆದರೂ ರಾಮನ ಮೇಲೆ ವಿಶೇಷವಾದಂತಹ ಪ್ರೀತಿ, ವಾತ್ಸಲ್ಯ ಇರುತ್ತದೆ. ಇದಕ್ಕೆಕಾರಣ ರಾಮನಲ್ಲಿರುವ ಶಾಂತಿ, ಸಹನೆಯ ಮನಸ್ಸು. ಪಿತೃವಾಕ್ಯ ಪರಿಪಾಲನೆಯಲ್ಲಿ ರಾಮನು ಸದಾ ಮೊದಲಿಗನಾಗಿರುತ್ತಾನೆ. ಇಷ್ಟಲ್ಲದೆ ರಾಮನು ಅಪಾರ ಪರಾಕ್ರಮಿಯಾಗಿರುತ್ತದೆ.
ರಾಮನು ಪ್ರತಿದಿನ ಶಸ್ತ್ರಾಭ್ಯಾಸವನ್ನು ಮಾಡುತ್ತಿರುತ್ತಾನೆ. ಇದರ ಜೊತೆಯಲ್ಲಿ ನಾಲ್ಕು ವೇದಗಳನ್ನು ವ್ಯಾಸಂಗ ಮಾಡುತ್ತಿರುತ್ತಾನೆ. ಇದರ ಜೊತೆಯಲ್ಲಿ ವೇದಾಂಗಗಳಾದ ಶಿಕ್ಷ, ವ್ಯಾಕರಣ, ಜ್ಯೋತಿಷ್ಯ ಮತ್ತು ಛಂದಸ್ಸುಗಳನ್ನು ಅಧ್ಯಯನ ಮಾಡುತ್ತಾನೆ. ಕುಟುಂಬದ ಹಿರಿಯರೊಂದಿಗೆ ಮತ್ತು ಜ್ಞಾನಿಗಳ ಜೊತೆಯಲ್ಲಿ ತತ್ವಜ್ಞಾನದ ಬಗ್ಗೆ ಚರ್ಚೆ ನಡೆಸುತ್ತಿರುತ್ತಾನೆ. ತನಗಿಂತ ಹಿರಿಯರಿಗೆ ಗೌರವವನ್ನು ನೀಡುವಲ್ಲಿ ಮೊದಲಿಗನಾಗುತ್ತಾನೆ. ಅದ್ಭುತ ಎನಿಸುವಂಥ ಸ್ಮರಣಶಕ್ತಿ ರಾಮನಿಗೆ ಇರುತ್ತದೆ. ಇವೆಲ್ಲದರ ಜೊತೆಯಲ್ಲಿ ರಾಮನು ಸಂಗೀತ, ನಾಟಕ, ಸಾಹಿತ್ಯ, ಕಾವ್ಯಗಳಲ್ಲಿಯೂ ಉನ್ನತ ಮಟ್ಟದ ಜ್ಞಾನವನ್ನು ಸಂಪಾದಿಸುತ್ತಾನೆ.
ಶ್ರೀರಾಮ ಪಟ್ಟಾಭಿಷೇಕಕ್ಕೆ ದಶರಥನ ಸಂಕಲ್ಪ
ದಿನದಿಂದ ದಿನಕ್ಕೆ ದಶರಥ ಮಹಾರಾಜನಿಗೆ ವೃದ್ಧಾಪ್ಯವು ಆವರಿಸಿಕೊಳ್ಳುತ್ತದೆ. ಆಗ ದಶರಥನು ಉತ್ತಮ ಗುಣವುಳ್ಳ ವ್ಯಕ್ತಿಗೆ ರಾಜ್ಯದ ಪಟ್ಟಾಭಿಷೇಕ ಮಾಡಬೇಕೆಂದು ನಿರ್ಧರಿಸುತ್ತಾನೆ. ಸಹಜವಾಗಿಯೇ ರಾಮನನ್ನು ರಾಜನನ್ನಾಗಿ ಮಾಡಬೇಕೆಂದು ಯೋಚಿಸುತ್ತಾನೆ. ಈ ಕುರಿತು ಅಭಿಪ್ರಾಯ ತಿಳಿಯಲು ರಾಜಸಭೆಯನ್ನು ಕರೆಯುತ್ತಾನೆ. ಎಲ್ಲಾ ಬಂಧು ವರ್ಗದವರು, ಅಧಿಕಾರಿಗಳು, ಸಾಮಂತರ ಸಮ್ಮುಖದಲ್ಲಿ ದಶರಥನು ಶ್ರೀರಾಮನಿಗೆ ಪಟ್ಟಾಭಿಷೇಕ ನೆರವೇರಿಸುವ ತೀರ್ಮಾನವನ್ನು ತಿಳಿಸುತ್ತಾನೆ. ಈ ಕಾರ್ಯಕ್ಕೆ ಪ್ರತಿಯೊಬ್ಬರ ಒಪ್ಪಿಗೆಯನ್ನು ಬೇಡುತ್ತಾನೆ.
ರಾಜನ ನಿರ್ಧಾರವನ್ನು ಕೇಳಿ ಸಭೆಗೆ ಆಗಮಿಸಿದ ಎಲ್ಲರೂ ಸಂತೋಷಗೊಳ್ಳುತ್ತಾರೆ. ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ನಂತರ ರಾಜ್ಯವು ಸುಭಿಕ್ಷತೆಯಿಂದ ಕೂಡಿರುತ್ತದೆ ಎಂದು ತಿಳಿಯುತ್ತಾರೆ. ಆನಂತರವೇ ನಿಮಗೆ ವಿಶ್ರಾಂತಿ ಎಂದು ರಾಜನಿಗೆ ತಿಳಿಸುತ್ತಾರೆ. ರಾಮನಷ್ಟು ದಕ್ಷತೆಯಿಂದ ಆಡಳಿತ ಮಾಡಲು ಯಾರಿಗೂ ಸಾಧ್ಯವಾಗದು ಎಂಬುದು ಎಲ್ಲರ ಅಭಿಪ್ರಾಯವಾಗಿರುತ್ತದೆ. ಯಾರಲ್ಲೂ ಬೇಧ ಭಾವ ತೋರದೆ ಪ್ರಜೆಗಳನ್ನು ತನ್ನ ಸ್ವಂತ ಮಕ್ಕಳಂತೆ ಕಾಪಾಡುವ ಮನಸ್ಸು ರಾಮನಿಗೆ ಇದೆ ಎಂದು ತಿಳಿಸುತ್ತಾರೆ. ಈ ಬೆಳವಣಿಗೆಯಿಂದ ಸಂತಸಗೊಂಡ ದಶರಥನು ತನ್ನ ಕುಲ ಪುರೋಹಿತರಾದ ವಶಿಷ್ಟರಿಗೆ ಶ್ರೀರಾಮನ ಪಟ್ಟಾಭಿಷೇಕದ ರೂಪುರೇಷೆಗಳನ್ನು ಸಿದ್ಧಪಡಿಸಲು ವಿನಂತಿಸುತ್ತಾನೆ.
ಹೊರಬಿತ್ತು ಶ್ರೀರಾಮ ಪಟ್ಟಾಭಿಷೇಕದ ನಿರ್ಧಾರ: ಅಯೋಧ್ಯೆಯಲ್ಲಿ ಸಂಭ್ರಮ
ಶ್ರೀರಾಮ ಪಟ್ಟಾಭಿಷೇಕಕ್ಕಾಗಿ ವಶಿಷ್ಠರಿಗೆ ಎಲ್ಲ ರೀತಿಯ ಸಹಾಯ ಸಹಕಾರವನ್ನು ನೀಡಬೇಕು ಎಂದು ದಶರಥನು ತನ್ನ ಅಧಿಕಾರಿಗಳಿಗೆ ಆದೇಶಿಸುತ್ತಾನೆ. ಶ್ರೀರಾಮ ಪಟ್ಟಾಭಿಷೇಕದ ಮಾತನ್ನು ಕೇಳಿದ ಕೌಸಲ್ಯೆಗೂ ಸಹಜವಾಗಿಯೂ ಸಂತೋಷವಾಗುತ್ತದೆ. ಪಟ್ಟಾಭಿಷೇಕಕ್ಕೆ ಒಪ್ಪಲು ಆರಂಭದಲ್ಲಿ ಶ್ರೀರಾಮನಿಗೆ ಹಿಂಜರಿಕೆ ಇರುತ್ತದೆ. ಕ್ರಮೇಣವಾಗಿ ತಂದೆಯ ಆಜ್ಞೆಯನ್ನು ಶಿರಸಾ ಪಾಲಿಸಲು ತೀರ್ಮಾನಿಸುತ್ತಾನೆ. ಈ ವಿಚಾರ ತಿಳಿದ ಸೀತೆಯು ಸಂಭ್ರಮಗೊಳ್ಳುತ್ತಾಳೆ. ಆ ಕ್ಷಣದಿಂದಲೇ ಯಾವುದೇ ತೊಂದರೆಗಳು ಎದುರಾಗದಂತೆ ದೇವರ ಪೂಜೆಯನ್ನು ಆರಂಭಿಸುತ್ತಾಳೆ. ಇಡೀ ರಾಜ್ಯವೇ ತಳಿರು ತೋರಣಗಳಿಂದ ಅಲಂಕೃತಗೊಳ್ಳುತ್ತದೆ.
ಕೈಕೇಯಿಗೆ ಮಂಥರೆಯ ದುರ್ಬೋಧನೆ; ವಿಧಿಯಾಟ ನಡೆದೇ ಹೋಯಿತು
ಎಲ್ಲರೂ ಸಂತಸದಿಂದ ಇರುವ ವೇಳೆ ಕಹಿ ಘಟನೆಯೊಂದು ನಡೆದು ಹೋಗುತ್ತದೆ. ದಶರಥನ ಮೂರನೆಯ ಹೆಂಡತಿಯಾದ ಕೈಕೇಯಿಗೆ ಆಪ್ತ ಸತಿ ಒಬ್ಬಳು ಇರುತ್ತಾಳೆ. ಅವಳ ಹೆಸರೇ ಮಂಥರೆ. ಇವಳು ಕೈಕೇಯಿಯನ್ನು ಚಿಕ್ಕ ವಯಸ್ಸಿನಿಂದಲೂ ಬಲ್ಲವಳಾಗಿರುತ್ತಾಳೆ. ಇವಳೊಬ್ಬಳ ಕೆಟ್ಟ ಬುದ್ಧಿಯು ಇಡೀ ಸಂಭ್ರಮವನ್ನು ಅಂತ್ಯಗೊಳಿಸುತ್ತದೆ. ಅರಮನೆಯ ಸೇವಕನೊಬ್ಬನಿಂದ ಪಟ್ಟಾಭಿಷೇಕದ ವಿಚಾರವನ್ನು ತಿಳಿದು ಆ ವಿಚಾರವನ್ನು ಕೈಕೇಯಿಗೆ ತಿಳಿಸುತ್ತಾಳೆ. ಈ ವಿಚಾರ ತಿಳಿದು ಕೈಕೇಯಿ ಮಂಥರೆಗೆ ಬಹುಮಾನವನ್ನು ನೀಡುತ್ತಾಳೆ. ಸಿಟ್ಟಿನಲ್ಲಿ ಮಂಥರೆಯು ಒಂದು ವೇಳೆ ರಾಮನು ರಾಜನಾದರೆ ಭರತನು ಅವನ ಸೇವಕನಾಗಬೇಕಾಗುತ್ತದೆ. ಆದ್ದರಿಂದ ಭರತನಿಗೆ ಪಟ್ಟಾಭಿಷೇಕವನ್ನು ಮಾಡುವಂತೆ ಯೋಚಿಸು ಎಂದು ಹೇಳಿಕೊಡುತ್ತಾಳೆ.
ಒಮ್ಮೆ ದೇವ-ದಾನವರ ಮಧ್ಯೆ ಉಗ್ರರೂಪದ ಯುದ್ಧ ನಡೆದಿರುತ್ತದೆ. ಆಗ ದಶರಥನು ದೇವತೆಗಳಿಗೆ ಸಹಾಯ ಮಾಡಲು ತೀರ್ಮಾನಿಸುತ್ತಾನೆ. ದಶರಥನ ಜೊತೆಯಲ್ಲಿ ಕೈಕೇಯಿ ಸಹ ಯುದ್ಧ ಮಾಡಲು ತೆರಳುತ್ತಾಳೆ. ರಾಕ್ಷಸರು ಹೂಡುವ ಬಾಣಕ್ಕೆ ದಶರಥನು ಮೂರ್ಛೆ ಹೋಗುತ್ತಾನೆ. ಆಗ ಭಯಪಡದ ಕೈಕೇಯಿ ತನ್ನ ಪತಿಯನ್ನು ಧೈರ್ಯದಿಂದ ಯುದ್ಧಭೂಮಿಯಿಂದ ಹೊರಗೆ ಕರೆದುಕೊಂಡು ಬಂದು ಕಾಪಾಡುತ್ತಾಳೆ. ಎಚ್ಚರಗೊಂಡ ದಶರಥನು ನಡೆದ ವಿದ್ಯಾಮಾನಕ್ಕೆ ಸಂತಸಗೊಂಡು ಅಗತ್ಯವಿದ್ದಾಗ ಎರಡು ವರಗಳನ್ನು ಕೇಳು ಎಂದು ಕೈಕೆಗೆ ತಿಳಿಸುತ್ತಾನೆ. ಇದನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡ ಕೈಕೇಯಿ ದಶರಥನಲ್ಲಿ ಎರಡು ವರಗಳನ್ನು ಬೇಡುತ್ತಾಳೆ. ಭರತನಿಗೆ ಪಟ್ಟಾಭಿಷೇಕ ಮಾಡಬೇಕೆಂಬುದು ಮೊದಲನೆಯ ವರ. ಆಡಂಬರವಿಲ್ಲದೆ ಸಾಮಾನ್ಯ ಮನುಷ್ಯನಂತೆ ಶ್ರೀರಾಮನು ವನವಾಸ ಮಾಡಬೇಕು ಎಂಬುದು ಎರಡನೆಯ ವರ. ಮನಸ್ಸಿಲ್ಲದೆ ಹೋದರು ವಿಧಿಯಾಟಕ್ಕೆ ಸೋತು ದಶರಥನು ಇದಕ್ಕೆ ಒಪ್ಪಿಗೆ ನೀಡುತ್ತಾನೆ.
ಅರಮನೆಯಲ್ಲಿ ನಡೆದ ವಿಚಾರವನ್ನು ತಿಳಿದ ರಾಮನು ವನವಾಸಕ್ಕೆ ತೆರಳಲು ಸಂತೋಷದಿಂದ ಒಪ್ಪಿಕೊಳ್ಳುತ್ತಾನೆ. ಹಾಗೆಯೇ ಭರತನಿಗೆ ಪಟ್ಟಾಭಿಷೇಕ ಮಾಡಲು ತಯಾರಿ ನಡೆಸಲು ಸೂಚಿಸುತ್ತಾನೆ. ಲಕ್ಷ್ಮಣನು ಇದನ್ನು ವಿರೋಧಿಸಿದಾಗ ಚಿಕ್ಕಮ್ಮನನ್ನು ಆಕ್ಷೇಪಿಸುವುದು ತಪ್ಪು. ತಂದೆಯ ಮಾತನ್ನು ಗೌರವಿಸುವುದು ಮುಖ್ಯ ಎಂದು ತಿಳಿಸುತ್ತಾನೆ. ರಾಮನ ಜೊತೆಗೆ ಸೀತೆ ಮತ್ತು ಲಕ್ಷ್ಮಣರು ವನವಾಸಕ್ಕೆ ತೆರಳುತ್ತಾರೆ. ಮುಂದೆ ಭರತನು ಅಯೋಧ್ಯೆಗೆ ಬಂದಾಗ ಎಲ್ಲ ವಿಷಯ ಅರಿವಾಗುತ್ತದೆ. ಭರತನು ರಾಮನನ್ನು ಭೇಟಿಯಾಗಿ ಅಯೋಧ್ಯೆಗೆ ವಾಪಸ್ ಬರುವಂತೆ ಮನವೊಲಿಸಲು ಪ್ರಯತ್ನಿಸುತ್ತಾನೆ. ಸಾಧ್ಯವಾಗದಿದ್ದಾಗ ಪಾದುಕೆಗಳನ್ನು ತಂದು ಅದನ್ನೇ ಸಿಂಹಾಸನದ ಮೇಲಿಟ್ಟು, ತಾನು ಒಬ್ಬ ಅಧಿಕಾರಿಯ ರೀತಿಯಲ್ಲಿ ರಾಜ್ಯವನ್ನು ಆಳಲು ತೀರ್ಮಾನಿಸುತ್ತಾನೆ.
ಹೆತ್ತವರಿಂದ ಮಕ್ಕಳನ್ನು ಅಗಲಿಸಿದರೆ ಅನರ್ಥ
ಭರತನ ಭೇಟಿಯ ನಂತರ ಋಷಿಗಳ ಸಲಹೆಯಂತೆ ರಾಮ, ಸೀತಾ ಲಕ್ಷ್ಮಣರು ಚಿತ್ರಕೂಟದ ಕಡೆ ನಡೆಯುತ್ತಾರೆ. ಶ್ರವಣಕುಮಾರನ ಅಪ್ಪ-ಅಮ್ಮ ದಶರಥನಿಗೆ ಕೊಟ್ಟ ಶಾಪದ ಕಥೆಯೂ ಈ ಸಂದರ್ಭದಲ್ಲಿಯೇ ಬರುತ್ತದೆ. ಮಕ್ಕಳು ದೂರವಿದ್ದಾಗಲೇ ದಶರಥನ ದೇಹತ್ಯಾಗವಾಗುವುದು ಮತ್ತು ಪುತ್ರಶೋಕ ಕೊನೆಯವರೆಗೂ ಕಾಡುತ್ತದೆ ಎನ್ನುವ ಉದಾತ್ತ ವಿಚಾರ ಪ್ರಸ್ತಾಪವಾಗುತ್ತದೆ. ಮೈಮರೆವು, ಅಧಿಕಾರ, ಅಂತಸ್ತು, ಅಹಂಕಾರದಿಂದ ಅಥವಾ ಯಾವುದೇ ಕಾರಣದಿಂದಲಾದರೂ ಸರಿ, ತಂದೆ-ತಾಯಂದಿರಿಂದ ಮಕ್ಕಳನ್ನು ಎಂದಿಗೂ ಅಗಲಿಸಬಾರದು. ಹೀಗೆ ಮಾಡಿದರೆ ಮಕ್ಕಳನ್ನು ನೆನೆದು ಅಪ್ಪ-ಅಮ್ಮ ಅನುಭವಿಸುವ ಮಾನಸಿಕ ಯಾತನೆ, ಅವರ ಬಿಸಿಯುಸಿರು ಎಂಥವರನ್ನೂ ಕಾಡದೆ ಬಿಡುವುದಿಲ್ಲ ಎನ್ನುವ ಎಚ್ಚರಿಕೆಯನ್ನೂ ವಾಲ್ಮೀಕಿ ಈ ಮೂಲಕ ಎಲ್ಲರಿಗೂ ಕೊಡುತ್ತಾರೆ.
ಬರಹ: ಎಚ್. ಸತೀಶ್, ಜ್ಯೋತಿಷಿ, ಮೊಬೈಲ್: 8546865832