ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಮಾಯಣ ಬಾಲಕಾಂಡ: ಭೂಮಿಗೆ ಬಂದ ಭಗವಂತ; ಯಜ್ಞ ರಕ್ಷಿಸಿದ ಸಾಹಸಿ, ಶಿವ ಧನುಸ್ಸು ಎತ್ತಿ ಸೀತಾಪತಿಯಾದ ಪರಾಕ್ರಮಿ ಶ್ರೀರಾಮ -ಶ್ರೀರಾಮನವಮಿ ವಿಶೇಷ

ರಾಮಾಯಣ ಬಾಲಕಾಂಡ: ಭೂಮಿಗೆ ಬಂದ ಭಗವಂತ; ಯಜ್ಞ ರಕ್ಷಿಸಿದ ಸಾಹಸಿ, ಶಿವ ಧನುಸ್ಸು ಎತ್ತಿ ಸೀತಾಪತಿಯಾದ ಪರಾಕ್ರಮಿ ಶ್ರೀರಾಮ -ಶ್ರೀರಾಮನವಮಿ ವಿಶೇಷ

ರಾಮಾಯಣದಲ್ಲಿ ಬಾಲಕಾಂಡದ ಮಹತ್ವ: ಬಾಲಕಾಂಡವು ಶ್ರೀರಾಮನ ಜನನದಿಂದ ಆರಂಭವಾಗುತ್ತದೆ. ರಾಮನ ಬಾಲ್ಯದ ಕಥೆಗಳು ಇದರಲ್ಲಿವೆ. ಋಷಿಗಳ ಯಜ್ಞ ರಕ್ಷಿಸಲು ವಿಶ್ವಾಮಿತ್ರನೊಂದಿಗೆ ಕಾಡಿಗೆ ತೆರಳು ರಾಮಚಂದ್ರ ಸೀತೆಯನ್ನು ವಿವಾಹವಾಗಿ ಅಯೋಧ್ಯೆಗೆ ಹಿಂದಿರುಗುತ್ತಾನೆ. (ಬರಹ: ಎಚ್‌.ಸತೀಶ್, ಜ್ಯೋತಿಷಿ)

ಬಾಲಕಾಂಡ: ಭೂಮಿಗೆ ಬಂದ ಭಗವಂತ; ಯಜ್ಞ ರಕ್ಷಿಸಿದ ಸಾಹಸಿ, ಶಿವ ಧನುಸ್ಸು ಎತ್ತಿ ಸೀತಾಪತಿಯಾದ ಪರಾಕ್ರಮಿ
ಬಾಲಕಾಂಡ: ಭೂಮಿಗೆ ಬಂದ ಭಗವಂತ; ಯಜ್ಞ ರಕ್ಷಿಸಿದ ಸಾಹಸಿ, ಶಿವ ಧನುಸ್ಸು ಎತ್ತಿ ಸೀತಾಪತಿಯಾದ ಪರಾಕ್ರಮಿ

ಬಾಲಕಾಂಡದ ಕಥೆ: ರಾಮಾಯಣದ ಎಂಬ ಮಹಾಕಾವ್ಯಕ್ಕೆ ಬುನಾದಿ ಹಾಕಿಕೊಡುವ ಮೊದಲ ಘಟ್ಟವೇ ಬಾಲಕಾಂಡ. ಇದು ರಾಮಾಯಣದ ಮುಂದಿನ ಹಲವು ಘಟನೆಗಳಿಗೆ ಮುನ್ನುಡಿ ಬರೆಯುತ್ತದೆ. ವಿಶ್ವದಲ್ಲಿ ಮೊದಲು ಜನಿಸಿದ್ದು ಪಿತಾಮಹನಾದ ಬ್ರಹ್ಮದೇವ. ಬ್ರಹ್ಮನ ಮಗನೇ ಮರೀಚಿ. ತದನಂತರ ಮರೀಚಿಯ ಮಗನಾದ ಕಶ್ಯಪನು ದಕ್ಷನ ಮಕ್ಕಳಾದ ಅದಿತಿ ಮತ್ತು ದಿತಿ ಮುಂತಾದವರನ್ನು ವಿವಾಹವಾಗುತ್ತಾನೆ. ಅದಿತಿಯ ಮಕ್ಕಳನ್ನು ಆದಿತ್ಯರು ಎಂದು ಕರೆಯುತ್ತಾರೆ. ಇವರಲ್ಲಿ ಒಬ್ಬನೇ ಸೂರ್ಯದೇವ. ಈ ಪರಂಪರೆಯಲ್ಲಿ ಬರುವವನೇ ಕೋಸಲ ದೇಶದ ರಾಜನಾದ ದಶರಥ ಮಹಾರಾಜ. ಈತನು ಇಕ್ಷ್ವಾಕು ವಂಶಕ್ಕೆ ಸೇರಿದವನಾಗಿರುತ್ತದೆ.

ಕೋಸಲ ದೇಶದ ರಾಜಧಾನಿಯೇ ಅಯೋಧ್ಯೆ. ದಶರಥನ ಬಳಿ ಚತುರಂಗ ಸೇನೆ ಇತ್ತು. ಇವನ ಆಸ್ಥಾನದಲ್ಲಿ ಒಟ್ಟು ಎಂಟು ಜನ ಮಂತ್ರಿಗಳಿರುತ್ತಾರೆ. ಜಗತ್ಪ್ರಸಿದ್ಧ ಪುರೋಹಿತರು ಸಹ ಇರುತ್ತಾರೆ. ಇವರೆಲ್ಲರ ಮಾರ್ಗದರ್ಶನದಲ್ಲಿ ದಶರಥನು ನ್ಯಾಯ, ನೀತಿ, ಧರ್ಮದಿಂದ ರಾಜ್ಯವನ್ನು ಆಳುವುದಲ್ಲದೆ, ಸತ್ಯ ಪರಿಪಾಲಕನಾಗಿರುತ್ತಾನೆ. ದೇವಲೋಕದ ಐರಾವತ ಸಹ ಇವನ ಬಳಿ ಇರುತ್ತದೆ. ಸುಖ, ಸಂತೋಷ ಮತ್ತು ನೆಮ್ಮದಿ ಇವನ ಆಡಳಿತದಲ್ಲಿ ಇರುತ್ತದೆ.

ಪುತ್ರಕಾಮೇಷ್ಟಿ ಯಾಗ: ಭೂಮಿಗೆ ಬಂದ ಭಗವಂತ

ದಶರಥ ಮಹಾರಾಜನಿಗೆ ಮೂವರು ಜನ ಪತ್ನಿಯರಿದ್ದರು. ಕೌಸಲ್ಯಾದೇವಿ ಮೊದಲ ಹೆಂಡತಿ. ಸುಮಿತ್ರಾದೇವಿ ಎರಡನೆಯ ಹೆಂಡತಿ ಮತ್ತು ಕೈಕೇಯಿ ಮೂರನೇ ಪತ್ನಿ. ದಶರಥನು ಸಂತಾನವಿಲ್ಲದೆ ಚಿಂತೆಗೆ ಒಳಗಾಗುತ್ತಾನೆ. ಕೊನೆಗೆ ಹಿರಿಯರ ಸಲಹೆಯಂತೆ ಅಶ್ವಮೇಧ ಯಾಗವನ್ನು ಮಾಡುತ್ತಾನೆ. ಇದರ ನೇತೃತ್ವವನ್ನು ಋಷ್ಯಶೃಂಗನಿಗೆ ವಹಿಸಲಾಗುತ್ತದೆ. ಯಾಗದಿಂದಾಗಿ ಕೇವಲ ಸಂಬಂಧಪಟ್ಟ ವಂಶ ಮಾತ್ರವಲ್ಲದೇ, ಇಡೀ ವಿಶ್ವಕ್ಕೆ ಶುಭಫಲಗಳು ದೊರೆಯುತ್ತವೆ.

ಇವನ ಭಕ್ತಿಗೆ ಮೆಚ್ಚಿದ ದೇವದೂತನು ಪ್ರತ್ಯಕ್ಷನಾಗಿ ಒಂದು ಪಾತ್ರೆಯಲ್ಲಿ ಪಾಯಸವನ್ನು ನೀಡಿ ದಶರಥನ ಪತ್ನಿಯರಿಗೆ ನೀಡಲು ತಿಳಿಸುತ್ತಾನೆ. ಆನಂತರ ಮಹಾರಾಜನ ಆಶೋತ್ತರಗಳು ಈಡೇರುತ್ತವೆ ಎಂದು ತಿಳಿಸುತ್ತಾನೆ. ಪ್ರಸಾದ ರೂಪದ ಪಾಯಸವನ್ನು ಪತ್ನಿಯರು ಸೇವಿಸುತ್ತಾರೆ.

ಇದರ ಫಲವಾಗಿ, ಕೌಸಲ್ಯೆಯು ಚೈತ್ರಮಾಸದ ಶುದ್ದ ನವಮಿಯ ದಿನ ಪುನರ್ವಸು ನಕ್ಷತ್ರದಂದು ಗಂಡು ಮಗುವಿಗೆ ಜನ್ಮಕೊಡುತ್ತಾಳೆ. ಮಾರನೆಯ ದಿನವಾದ ದಶಮಿಯ ದಿನ ಪುಷ್ಯ ನಕ್ಷತ್ರದಂದು ಕೈಕೇಯಿಯು ಗಂಡು ಮಕ್ಕವಿಗೆ ಜನ್ಮನೀಡುತ್ತಾಳೆ. ದಶಮಿಯ ದಿನದಂದೇ ಸುಮಿತ್ರೆಯು ಅವಳಿ ಗಂಡುಮಕ್ಕಳಿಗೆ ಜನ್ಮ ನೀಡುತ್ತಾಳೆ. ಈ ನಾಲ್ಕೂ ಮಕ್ಕಳಿಗೆ ಕ್ರಮವಾಗಿ ರಾಮ, ಭರತ, ಲಕ್ಷ್ಮಣ ಮತ್ತು ಶತ್ರುಘ್ನ ಎಂದು ನಾಮಕರಣ ಮಾಡಲಾಗುತ್ತದೆ. ಅಯೋಧ್ಯೆಯಲ್ಲಿ ಹಬ್ಬದ ಸಂಭ್ರಮ ಇರುತ್ತದೆ. ಈ ಸೋದರರ ನಡುವೆ ಪರಸ್ಪರ ವಿಶ್ವಾಸ ಮತ್ತು ಪ್ರೀತಿ ಬೆಳೆಯುತ್ತದೆ. ಹಿರಿಯಣ್ಣ ರಾಮನ ಮೇಲೆ ಉಳಿದ ಸೋದರರಿಗೆ ವಿಶೇಷವಾದ ಗೌರವ ಇರುತ್ತದೆ. ಯೌವನಸ್ಥರಾದ ಮಕ್ಕಳಿಗೆ ವಿವಾಹ ಮಾಡುವ ಚಿಂತನೆ ದಶರಥನಲ್ಲಿ ಮೂಡುತ್ತದೆ.

ಅರಮನೆಗೆ ವಿಶ್ವಾಮಿತ್ರರ ಆಗಮನ, ಕಾಡಿಗೆ ಹೊರಟ ಶ್ರೀರಾಮ

ಅಯೋಧ್ಯೆ ಹೀಗೆ ಸಂತಸದಲ್ಲಿ ತೇಲುತ್ತಿರುವಾಗಲೇ ಬ್ರಹ್ಮರ್ಷಿ ವಿಶ್ವಾಮಿತ್ರರು ದಶರಥನ ಆಸ್ಥಾನಕ್ಕೆ ಆಗಮಿಸುತ್ತಾರೆ. ಪರಸ್ಪರ ಮಾತುಕತೆಯ ನಂತರ ವಿಶ್ವಾಮಿತ್ರರು ತಾವೊಂದು ಯಜ್ಞವನ್ನು ಆರಂಭಿಸುವುದಾಗಿ, ಪ್ರತಿಬಾರಿಯೂ ಅದಕ್ಕೆ ರಾಕ್ಷಸರಿಂದ ತೊಂದರೆ ಉಂಟಾಗುಗುತ್ತಿದೆ ಎಂದು ತಿಳಿಸುತ್ತಾರೆ. ಯಾಗದ ರಕ್ಷಣೆಗಾಗಿ ರಾಮನನ್ನು ತಮ್ಮ ಜೊತೆಯಲ್ಲಿ ಕಳುಹಿಸುವಂತೆ ಸೂಚಿಸುತ್ತಾರೆ. ಆರಂಭದಲ್ಲಿ ದಶರಥ ಹಿಂಜರಿದರೂ ಕೊನೆಗೆ ಕುಲಪುರೋಹಿತರಾದ ವಶಿಷ್ಠ ಮುನಿಗಳ ಸಲಹೆಯಂತೆ ರಾಮನನ್ನು ಕಳುಹಿಸಲು ಒಪ್ಪುತ್ತಾನೆ. ರಾಮನ ಜೊತೆಯಲ್ಲಿ ಲಕ್ಷ್ಮಣನೂ ತೆರಳುತ್ತಾನೆ. ಶ್ರೀರಾಮ-ಲಕ್ಷ್ಮಣರು ಮೊದಲು ಅರಣ್ಯಕ್ಕೆ ತೆರಳುವುದು ಹೀಗೆ.

ಗಂಗಾನದಿಯ ದಕ್ಷಿಣ ಭಾಗವನ್ನು ದೋಣಿಯ ಮುಖಾಂತರ ತಲುಪುವ ಸೋದರರು ಭಯಂಕರ ಪ್ರಾಣಿಗಳಿದ್ದ ಕಾಡನ್ನು ಪ್ರವೇಶಿಸುತ್ತಾರೆ. ಈ ಕಾಡಿನಲ್ಲಿ ತಾಟಕಿ ಎಂಬ ರಾಕ್ಷಸಿ ಇದ್ದಳು. ಇವಳು ತನ್ನ ಮಕ್ಕಳಾದ ಮಾರೀಚ ಮತ್ತು ಸುಬಾಹುಗಳ ಜೊತೆಗೂಡಿ ಋಷಿಮುನಿಗಳೆಗೆ ಮತ್ತು ಒಳ್ಳೆಯ ಜನರಿಗೆ ತೊಂದರೆ ನೀಡುತ್ತಿರುತ್ತಾರೆ. ವಿಶ್ವಾಮಿತ್ರರ ಆಶೀರ್ವಾದದಿಂದ ರಾಮ-ಲಕ್ಷ್ಮಣರು ಈ ಮೂವರು ಅಸುರರ ಸಂಹಾರ ಮಾಡುತ್ತಾರೆ. ಮಾಯ ಯುದ್ದ ಮಾಡಿದರೂ ಸಾವಿನಿಂದ ಪಾರಾಗಲು ಸಾಧ್ಯವಾಗುವುದಿಲ್ಲ. ರಾಮನು ಬಿಡುವ ಶಬ್ಧವೇದಿ ಬಾಣದಿಂದ ಇವರ ಅಂತ್ಯ ಆಗುತ್ತದೆ. ಯಾವುದೇ ಅಂಜಿಕೆ ಇಲ್ಲದೆ ವಿಶ್ವಾಮಿತ್ರರು ಹೋಮ ಹವನಾದಿಗಳನ್ನು ಆರಂಭಿಸುತ್ತಾರೆ. ಹಗಲು ರಾತ್ರಿ ಎನ್ನದೇ ಒಟ್ಟು ಆರು ದಿನಗಳ ಕಾಲ ನಡೆದ ಈ ಯಜ್ಞವನ್ನು ರಾಮ ಲಕ್ಷಮಣರು ಕಾಪಾಡುತ್ತಾರೆ. ಯಜ್ಞ್ವವೂ ಸಂಪೂರ್ಣಗೊಳ್ಳುತ್ತವೆ.

ಕೌಸಲ್ಯಾ ಸುಪ್ರಜಾ ರಾಮಾ

ವಿಶ್ವಾಮಿತ್ರರಿಗೆ ಶ್ರೀರಾಮನ ಮೇಲೆ ಇದ್ದ ವಾತ್ಸಲ್ಯಕ್ಕೆ ಅಕ್ಷರರೂಪದಂತೆ ಇರುವ ಶ್ಲೋಕ 'ಕೌಸಲ್ಯಾ ಸುಪ್ರಜಾ ರಾಮಾ'. ಇಂದು ತಿರುಪತಿ ವೇಂಕಟೇಶ್ವರ ಸ್ವಾಮಿಯ ಸುಪ್ರಭಾತದ ಮೊದಲ ಶ್ಲೋಕವಾಗಿಯೂ ಇದು ಜನಪ್ರಿಯವಾಗಿದೆ. ಈ ಶ್ಲೋಕವನ್ನು ಮೊದಲ ಬಾರಿಗೆ ಹೇಳಿದವರು ಮಹಾ ತಪಸ್ವಿಗಳಾದ ವಿಶ್ವಾಮಿತ್ರರು. ಸೂರ್ಯೋದಯದ ಸಂದರ್ಭದಲ್ಲಿ ಮಲಗಿದ್ದ ಶ್ರೀರಾಮನ ತುಂಬು ಮೊಗವನ್ನು ನೋಡಿ, ಪ್ರೀತಿ-ಅಭಿಮಾನ ಉಕ್ಕಿದಂತಾದಾಗ ವಿಶ್ವಾಮಿತ್ರರು ಭಾವುಕರಾಗಿ ಹೀಗೆ ಎಬ್ಬಿಸುತ್ತಾರೆ.

"ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸ೦ಧ್ಯಾ ಪ್ರವರ್ತತೇ |

ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ ||"

(ಕೌಸಲ್ಯೆಯ ಸತ್ಪುತ್ರನಾದ ಶ್ರೀರಾಮನೇ, ಪೂರ್ವದಿಕ್ಕಿನಲ್ಲಿ ಪ್ರಾತಃಕಾಲ ಕಾಣುತ್ತಿದೆ, ಏಳು, ಎಲೈ ನರಶ್ರೇಷ್ಠನೆ, ದೇವತಾರಾಧನೆ ಮೊದಲಾದ ಕಾರ್ಯಗಳನ್ನು ಮಾಡು - ರಾಮಾಯಣ ಬಾಲಕಾಂಡ - 1.23.2). ಮುಂದೆ ರಾಮನನ್ನು ಕೌಸಲ್ಯೆಯ ಮಗನೆಂಬ ತಾಯಿಯ ಸಂಬಂಧವನ್ನು ನೆನಪಿಸುವಲ್ಲಿ ವಿಶ್ವಾಮಿತ್ರರ ಮಾತೃಹೃದಯವನ್ನೂ ಸಹೃದಯರು ಗುರುತಿಸುತ್ತಾರೆ.

ಸೀತಾ ಕಲ್ಯಾಣದ ವೈಭೋಗ

ವಿಶ್ವಾಮಿತ್ರರ ನೇತೃತ್ವದಲ್ಲಿ ಕಾಡಿಗೆ ಬಂದ ಕೆಲಸವನ್ನು ಯಶಸ್ವಿಯಾಗಿ ಮುಗಿಸಿದ ರಾಮ-ಲಕ್ಷ್ಣಣರು, ಅವರ ಸಲಹೆಯಂತೆಯೇ ಜನಕರಾಜನ ಆಡಳಿತವಿದ್ದ ಮಿಥಿಲಾ ನಗರಕ್ಕೆ ಹೊರಡಲು ಅನುವಾಗುತ್ತಾರೆ. ಜನಕರಾಜನು ಮಾಡುತ್ತಿದ್ದ ಯಾಗಕ್ಕೆ ವಿಶ್ವಾಮಿತ್ರರನ್ನು ಆಹ್ವಾನಿಸಿರುತ್ತಾನೆ. ಅವನ ಬಳಿ ದೇವತೆಗಳು ಉಡುಗೊರೆಯಾಗಿ ನೀಡಿದ್ದ ಧನಸ್ಸು ಇರುತ್ತದೆ. ಅದನ್ನು ಎದೆಗೆ ಏರಿಸುವ ಸಾಮರ್ಥ್ಯ ಇರುವ ವ್ಯಕ್ತಿ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ ಎಂದೇ ಜನಜನಿತವಾಗಿರುತ್ತದೆ.

ಶ್ರೀರಾಮನು ಧನುರ್ವಿದ್ಯೆಯಲ್ಲಿ ಪಾರಂಗತ. ವಿಶ್ವಾಮಿತ್ರರಿಗೆ ರಾಮನು ಆ ಧನಸ್ಸನ್ನು ಸಿದ್ದಪಡಿಸಿ ಎದೆಗೆ ಏರಿಸಬೇಕೆಂಬ ಮನಸ್ಸಿರುತ್ತದೆ. ಇದಕ್ಕೆ ರಾಮನ ಒಪ್ಪಿಗೆಯೂ ದೊರೆಯುತ್ತದೆ. ಸುದೀರ್ಘ ಪ್ರಯಾಣದಿಂದ ವಿದೇಹ ರಾಜ್ಯದ ರಾಜಧಾನಿ ಮಿಥಿಲೆಗೆ ಬರುತ್ತಾರೆ. ರಾಮನು ಶಿವಧನಸ್ಸನ್ನು ತನ್ನಲ್ಲಿದ್ದ ಶಕ್ತಿಯನ್ನು ಉಪಯೋಗಿಸಿ ಬಗ್ಗಿಸುತ್ತಾನೆ. ಅದಕ್ಕೆ ದಾರ ಕಟ್ಟುವಾಗ ಅದು ಮುರಿದು ತುಂಡಾಗುತ್ತದೆ. ಇದನ್ನು ನೋಡಲು ದೇವಾನುದೇವತೆಗಳೂ ನೆರೆದಿರುತ್ತಾರೆ. ಅನಂತರ ರಾಮಚಂದ್ರನು ಸೀತೆಯನ್ನು ವರಿಸುತ್ತಾನೆ. ಅದೇ ವೇಳೆಯಲ್ಲಿ ರಾಮನ ಇತರ ಸೋದರರಿಗೂ ವಿವಾಹವಾಗುತ್ತದೆ. ಅನಂತರ ಎಲ್ಲರೂ ಅಯೋಧ್ಯೆಗೆ ಮರಳಲು ಅನುವಾಗುತ್ತಾರೆ.

ಆಗ ಅನೇಕ ಅಪಶಕುನಗಳು ಉಂಟಾಗುತ್ತವೆ. ಇದರಿಂದ ಜನಕನಿಗೆ ಚಿಂತೆಯೂ ಆರಂಭವಾಗುತ್ತದೆ. ಮಾರ್ಗಮಧ್ಯೆ ಎದುರಾದ ಪರಶುರಾಮನ ಗರ್ವಭಂಗವಾಗುತ್ತದೆ. ಕೊನೆಗೆ ಸುರಕ್ಷಿತವಾಗಿ ಎಲ್ಲರೂ ಅಯೋಧ್ಯೆಯನ್ನು ತಲುಪುತ್ತಾರೆ. ಭಗೀರಥನು ಗಂಗಾನದಿಯನ್ನು ಭೂಲೋಕಕ್ಕೆ ಕರೆತಂದ ಕತೆಯೂ ರಾಮಾಯಣದ ಬಾಲಕಾಂಡದಲ್ಲಿಯೇ ಬರುತ್ತದೆ. ಇಲ್ಲಿ ಉಲ್ಲೇಖವಾಗುವ ಅಪಶಕುನಗಳು ಅಯೋಧ್ಯಾಕಾಂಡಕ್ಕೆ ಭೂಮಿಕೆ ಒದಗಿಸುತ್ತವೆ.