ಸ್ಮೃತಿ ಮಂಧಾನ ಜೊತೆಗಿನ ಫನ್ಚಾಟ್ನಲ್ಲಿ ಎಲ್ಲಿಸ್ ಪೆರ್ರಿ ಮಸಾಲಾ ಚಾಯ್ ಗೀಳು ಬಹಿರಂಗ; ಚಹಾ ಅಂದರೆ ಇಷ್ಟೊಂದು ಹುಚ್ಚಾ!
Ellyse Perry : ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದ ನಂತರ ಆರ್ಸಿಬಿ ನಾಯಕಿ ಸ್ಮೃತಿ ಮಂಧಾನ ಜೊತೆಗೆ ಚಿಟ್ಚಾಟ್ ನಡೆಸಿದ ಆಸ್ಟ್ರೇಲಿಯಾದ ಆಲ್ರೌಂಡರ್ ಎಲ್ಲಿಸ್ ಪೆರ್ರಿ, ಮಸಾಲಾ ಚಾಯ್ (ಚಹಾ) ದೊಂದಿಗಿನ ತನ್ನ ಗೀಳನ್ನು ಬಹಿರಂಗಪಡಿಸಿದ್ದಾರೆ.
ವುಮೆನ್ಸ್ ಪ್ರೀಮಿಯರ್ ಲೀಗ್ 2024ರ 11ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಆಕ್ರಮಣಕಾರಿ ಆಟವಾಡಿದ ಆರ್ಸಿಬಿ ತಂಡದ ಎಲ್ಲಿಸ್ ಪೆರ್ರಿ ಅವರು ಪಂದ್ಯದ ನಂತರ ಮಾತನಾಡಿ ದಿನಕ್ಕೆ ಎಷ್ಟು ಮಸಾಲಾ ಚಾಯ್ (ಚಹಾ) ಕುಡಿತಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅಬ್ಬಬ್ಬಾ! ಅವರ ಹೇಳಿದ ಮಾತು ಕೇಳಿದರೆ ಎಂತಹವರನ್ನೂ ದಂಗಾಗಿಸುತ್ತದೆ. ಅಬ್ಬರದ ಆಟಕ್ಕೆ ಹೆಸರವಾಗಿಯಾಗಿರುವ ಪೆರ್ರಿ, ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರನೇ ಗೆಲುವು ದಾಖಲಿಸಿದೆ. ಯುಪಿ ವಾರಿಯರ್ಸ್ ವಿರುದ್ಧ 23 ರನ್ಗಳ ಜಯದೊಂದಿಗೆ ತವರಿನ ಅಭಿಮಾನಿಗಳಿಗೆ ವಿದಾಯ ಹೇಳಿದೆ. ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಸ್ಮೃತು ಮಂಧಾನ ಪಡೆ, ಇದೀಗ ಮತ್ತೆ ಲಯಕ್ಕೆ ಮರಳಿದೆ. ಬೆಂಗಳೂರಿನಲ್ಲಿ ಮೊದಲ ಹಂತ ಮುಗಿಸಿದ ರಾಯಲ್ ಚಾಲೆಂಜರ್ಸ್ ಎರಡನೇ ಹಂತದ ಆಟಕ್ಕಾಗಿ ದೆಹಲಿಗೆ ಬಂದಿಳಿದಿದೆ. ಉಳಿದ ಮೂರು ಪಂದ್ಯಗಳಲ್ಲೂ ಜಯದ ನಗೆ ಬೀರುವ ವಿಶ್ವಾಸದಲ್ಲಿದೆ ಆರ್ಸಿಬಿ.
ಪಂದ್ಯದ ನಂತರ ನಾಯಕಿ ಸ್ಮೃತಿ ಮಂಧಾನ ಜೊತೆಗೆ ಚಿಟ್ಚಾಟ್ ನಡೆಸಿದ ಆಸ್ಟ್ರೇಲಿಯಾದ ಆಲ್ರೌಂಡರ್ ಎಲ್ಲಿಸ್ ಪೆರ್ರಿ, ಮಸಾಲಾ ಚಾಯ್ (ಚಹಾ) ದೊಂದಿಗಿನ ತನ್ನ ಗೀಳನ್ನು ಬಹಿರಂಗಪಡಿಸಿದ್ದಾರೆ. ತಾನು ಪ್ರತಿ ಗಂಟೆಗೆ ಒಮ್ಮೆ ಮಸಾಲ ಚಾಯಿ ಕುಡಿಯುವುದಾಗಿ ಹೇಳಿದ್ದಾರೆ. ದಿನದಲ್ಲಿ 12 ಮಸಾಲಾ ಚಾಯ್ ಕುಡಿಯುತ್ತೇನೆ. ನನಗೆ ಮಸಾಲಾ ಚಾಯ್ ಅಂದರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ದಿನಕ್ಕೆ ಹನ್ನೇರಡಾ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕಾರಿನ ಗಾಜು ಪೀಸ್ ಮಾಡಿದ್ದರ ಬಗ್ಗೆ ಸ್ಮೃತಿ ಹೇಳಿದಿಷ್ಟು?
ಇದೇ ವೇಳೆ ತನ್ನ ಸಿಕ್ಸರ್ನಿಂದ ಕಾರಿನ ಕಿಟಿಕಿ ಗಾಜು ಪೀಸ್, ಪೀಸ್ ಮಾಡಿದ್ದರ ಬಗ್ಗೆ ಮಾತನಾಡಿದ್ದಾರೆ. ಫನ್ನಿಯಾಗಿ ಉತ್ತರಿಸಿದ ಪೆರ್ರಿ, ನನ್ನ ಬಳಿ ಯಾವುದೇ ಇನ್ಶೂರೆನ್ಸ್ ಇಲ್ಲ. ಯಾರೂ ನನಗೆ ಶುಲ್ಕ ವಿಧಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ನಕ್ಕರು. ಸ್ಪಿನ್ನರ್ ದೀಪ್ತಿ ಶರ್ಮಾ ಎಸೆದ 19ನೇ ಓವರ್ನ 5ನೇ ಎಸೆತದಲ್ಲಿ ಮಿಡ್-ವಿಕೆಟ್ ಕಡೆಗೆ ಪೆರ್ರಿ ಬಾರಿಸಿದ ಸಿಕ್ಸರ್ ನೇರವಾಗಿ ಕಾರಿನ ಕಿಟಕಿ ಗಾಜಿಗೆ ಬಿತ್ತು. ಚೆಂಡು ಬಿದ್ದ ರಭಸಕ್ಕೆ ಗಾಜು ಪುಡಿ ಪುಡಿಯಾಯಿತು.
ಆರ್ಸಿಬಿ ಅಭಿಮಾನಿಗಳ ಕುರಿತು ಮಾತನಾಡಿದ ಪೆರ್ರಿ, ಅಮೇಜಿಂಗ್ ಫ್ಯಾನ್ಸ್ ಎಂದು ಕೊಂಡಾಡಿದ್ದಾರೆ. ನಾವು ಇಲ್ಲಿ (ಚಿನ್ನಸ್ವಾಮಿ ಮೈದಾನ) ಆಡಿದ ಎಲ್ಲಾ ಪಂದ್ಯಗಳು ಅದ್ಭುತವಾಗಿವೆ. ನನ್ನ ವೃತ್ತಿಜೀವನದಲ್ಲಿ ನಾನಾಡಿದ ಅತ್ಯುತ್ತಮ ವಾತಾವರಣ. ಆ ಬೆಂಬಲವನ್ನು ಹೊಂದಲು ನಾವು ತುಂಬಾ ಅದೃಷ್ಟವಂತರು. ನಾನು ಆಟದ ಮೇಲೆ ಸಾಕಷ್ಟು ಉತ್ತಮ ಹಿಡಿತ ಹೊಂದಿದ್ದೇನೆ ಎಂದು ಭಾವಿಸಿದೆ ಎಂದು ಹೇಳಿದ್ದಾರೆ.
ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ಪೆರ್ರಿ
ಯುಪಿ ವಾರಿಯರ್ಸ್ ಮೇಲೆ ಸವಾರಿ ಮಾಡಿದ ಎಲ್ಲಿಸ್ ಪೆರ್ರಿ, ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿ ಆಕರ್ಷಕ ಅರ್ಧಶತಕ ಬಾರಿಸಿದರು. ಕೇವಲ 37 ಎಸೆತಗಳಲ್ಲಿ ಭರ್ಜರಿ 4 ಸಿಕ್ಸರ್, ಸೊಗಸಾದ 4 ಬೌಂಡರಿಗಳ ಸಹಾಯದಿಂದ 58 ರನ್ ಚಚ್ಚಿದರು. ಸ್ಮೃತಿ ಮಂಧಾನ ಜೊತೆಗೂಡಿ 95 ರನ್ಗಳ ಪಾಲುದಾರಿಕೆ ನೀಡಿದರು. ಅಲ್ಲದೆ ಆರ್ಸಿಬಿ ಬೃಹತ್ ಪೇರಿಸಲು ಸಹ ನೆರವಾದರು.
ಸ್ಮೃತಿ ಮಂಧಾನ ಭರ್ಜರಿ 80 ರನ್
ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಆಕ್ರಮಣಕಾರಿ ಆಟದ ಮೂಲಕ ಬೆಂಗಳೂರು ಅಭಿಮಾನಿಗಳನ್ನು ರಂಜಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ತನ್ನ 2ನೇ ಅರ್ಧಶತಕ ಪೂರೈಸಿದರು. 10 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 80 ರನ್ ಗಳಿಸಿದರು. ಇದು ಅವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಉಭಯ ಆಟಗಾರ್ತಿಯರು ಬೆಂಕಿ-ಬಿರುಗಾಳಿ ಆಟದ ಮೂಲಕ 26000+ ಪ್ರೇಕ್ಷಕರನ್ನು ರಂಜಿಸಿದರು.