ಕನ್ನಡ ಸುದ್ದಿ  /  Entertainment  /  Bollywood News Hindi Actor Salman Khan To Sue Kunal Kamra Over Joke? Here's What You Need To Know Pcp

ಕುನಾಲ್‌ ಕಾಮ್ರಾ ವಿರುದ್ಧ ಸಲ್ಮಾನ್‌ ಖಾನ್‌ ಮಾನನಷ್ಟ ಮೊಕದ್ದಮೆ ಹಾಕ್ತಾರ? ಸ್ಟಾಂಡ್‌ಅಪ್‌ ಕಾಮಿಡಿಯನ್‌ ವಿರುದ್ಧ ಸಲ್ಲು ನಿಲುವು ಪ್ರಕಟ

ಸ್ಟಾಂಡ್‌ಅಪ್‌ ಕಾಮಿಡಿಯನ್‌ ಕುನಾಲ್‌ ಕಾಮ್ರಾ ವಿರುದ್ಧ ಸಲ್ಮಾನ್‌ ಖಾನ್‌ ಮಾನನಷ್ಟ ಮೊಕದ್ದಮೆ ಹಾಕಲಿದ್ದಾರೆ ಎಂದು ಕಳೆದ ಕೆಲವು ದಿನಗಳಿಂದ ಸುದ್ದಿಯಾಗಿತ್ತು. ಆದರೆ, ಇದೀಗ ಬಂದ ಮಾಹಿತಿ ಪ್ರಕಾರ, ಸಲ್ಲು ಯಾವುದೇ ಕೇಸ್‌ ಫೈಲ್‌ ಮಾಡದೆ ಇರಲು ನಿರ್ಧರಿಸಿದ್ದಾರೆ.

ಸಲ್ಮಾನ್‌ ಖಾನ್‌ ಕುರಿತು ಸ್ಟಾಂಡ್‌ಅಪ್‌ ಕಾಮಿಡಿಯನ್‌ ನಿಂದನಾತ್ಮಕ ಹೇಳಿಕೆ ಪ್ರಕರಣ
ಸಲ್ಮಾನ್‌ ಖಾನ್‌ ಕುರಿತು ಸ್ಟಾಂಡ್‌ಅಪ್‌ ಕಾಮಿಡಿಯನ್‌ ನಿಂದನಾತ್ಮಕ ಹೇಳಿಕೆ ಪ್ರಕರಣ

ಬೆಂಗಳೂರು: ಸಲ್ಮಾನ್‌ ಖಾನ್‌ ವ್ಯಕ್ತಿತ್ವದ ಕುರಿತು ಹಾಸ್ಯ ಮಾಡಿರುವ ಸ್ಟಾಂಡ್‌ಅಪ್‌ ಕಾಮಿಡಿಯನ್‌ ಕುನಾಲ್‌ ಕಾಮ್ರಾ ವಿರುದ್ಧ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದಾರೆ ಎಂದು ಇತ್ತೀಚಿನ ಕೆಲವು ವರದಿಗಳು ತಿಳಿಸಿದ್ದವು. ಈ ರೀತಿಯ ವರದಿಗಳು ಬಂದರೂ ಕುನಾಲ್‌ ಅವರು ತನ್ನ ಹೇಳಿಕೆ ಕುರಿತು ಕ್ಷಮಾಪಣೆ ಕೇಳಲು ನಿರಾಕರಿಸಿದ್ದರು. ಇದೀಗ ಝೂಮ್‌ ವರದಿ ಪ್ರಕಾರ ಸಲ್ಮಾನ್‌ ಖಾನ್‌ ಅವರು ಕುನಾಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಯಾವುದೇ ಯೋಜನೆ ಹೊಂದಿಲ್ಲವಂತೆ. ಅದಕ್ಕೆ ಕಾರಣವನ್ನೂ ಅವರ ಆಪ್ತರು ತಿಳಿಸಿದ್ದಾರೆ.

ಸಲ್ಮಾನ್‌ ಖಾನ್‌ ಏಕೆ ದೂರು ನೀಡುತ್ತಿಲ್ಲ?

ಝೂಮ್‌ಗೆ ಸಲ್ಮಾನ್‌ ಖಾನ್‌ ಅವರ ಆಪ್ತರೊಬ್ಬರು ಮಾಹಿತಿ ನೀಡಿದ್ದಾರೆ. ಆ ಮಾಹಿತಿ ಪ್ರಕಾರ ಈ ರೀತಿ ಮಾನನಷ್ಟ ಮೊಕದ್ದಮೆ ಹೂಡುವುದು ವ್ಯರ್ಥ. "ತನ್ನ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ ಎಲ್ಲರ ಕುರಿತು ಸಲ್ಮಾನ್‌ ಖಾನ್‌ ದೂರು ನೀಡುತ್ತ ಕುಳಿತರೆ ಅವರು ಸದಾ ಕೋರ್ಟ್‌ ಒಳಗೆ ಮತ್ತು ಹೊರಗೆ ಹೋಗುತ್ತ ಇರಬೇಕಾಗುತ್ತದೆ. ಕಳೆದ ಹಲವು ವರ್ಷಗಳಿಂದ ತನ್ನ ಬಗ್ಗೆ ಕೆಟ್ಟದ್ದಾಗಿ ಕಾಮೆಂಟ್‌ ಮಾಡುವವರನ್ನು ಕಡೆಗಣಿಸುತ್ತ ಬಂದಿದ್ದಾರೆ. ಇದೇ ರೀತಿ ಕುನಾಲ್‌ ವಿರುದ್ಧವೂ ಯಾವುದೇ ದೂರು ದಾಖಲಿಸುವುದಿಲ್ಲ" ಎಂದು ವರದಿ ತಿಳಿಸಿದೆ. "ಸಲ್ಮಾನ್‌ ಖಾನ್‌ ಅವರ ತಂದೆ ಸಲೀಮ್‌ ಖಾನ್‌ ಅವರು ತನ್ನ ಮಗನಿಗೆ ನಿಂದನೆಗಳನ್ನು ಕಡೆಗಣಿಸಲು ಕಲಿಸಿಕೊಟ್ಟಿದ್ದಾರೆ. ಇತರರ ಗಮನ ಸೆಳೆಯುವ ಉದ್ದೇಶದಿಂದ ಈ ರೀತಿ ಟೀಕೆ, ನಿಂದನೆ ಮಾಡುವುದನ್ನು ಕೆಲವರು ಅಭ್ಯಾಸ ಮಾಡಿಕೊಂಡಿರುತ್ತಾರೆ ಎಂದು ಸಲೀಮ್‌ ಹೇಳಿಕೊಟ್ಟಿದ್ದಾರೆ" ಎಂದು ಸಲ್ಮಾನ್‌ ಖಾನ್‌ ಆಪ್ತರು ಮಾಹಿತಿ ನೀಡಿದ್ದಾರೆ.

ಸಲ್ಮಾನ್‌ ಖಾನ್‌ ಕುರಿತು ಕುನಾಲ್‌ ಟೀಕೆ
ಸಲ್ಮಾನ್‌ ಖಾನ್‌ ಕುರಿತು ಕುನಾಲ್‌ ಟೀಕೆ

ಸಲ್ಮಾನ್‌ ಖಾನ್‌ ಕುರಿತು ಕುನಾಲ್‌ ಹೇಳಿದ್ದೇನು?

ಸಲ್ಮಾನ್‌ ಖಾನ್‌ ಕುರಿತು ತಾನು ನೀಡಿದ ಹೇಳಿಕೆಯ ಕುರಿತು ಕುನಾಲ್‌ ಹೀಗೆಂದು ಬರೆದಿದ್ದಾರೆ. "ನಾನು ಹಾರುವ ಹಕ್ಕಿಯೂ ಅಲ್ಲ, ನಾನು ಮಾಡಿರುವ ತಮಾಷೆಯ ಕುರಿತು ಕ್ಷಮಾಯಾಚನೆ ಮಾಡುವುದಿಲ್ಲ" ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಇತ್ತೀಚೆಗೆ ಸ್ಟಾಂಡ್‌ಅಪ್‌ ಕಾಮಿಡಿಯನ್‌ ಕುನಾಲ್‌ ಅವರು ಸಲ್ಮಾನ್‌ ಖಾನ್‌ನ ವಿವಿಧ ವಿವಾದಗಳ ಕುರಿತು ತಮಾಷೆ ಮಾಡಿದ್ದರು. ಇದೇ ರೀತಿ ಬಿಗ್‌ಬಾಸ್‌, ಬಿಗ್‌ಬಾಸ್‌ ಒಟಿಟಿ ಕುರಿತು ಅಪಹಾಸ್ಯ ಮಾಡಿದ್ದರು. "ಒಂದು ಕಾಲದಲ್ಲಿ ಸಲ್ಮಾನ್‌ ಖಾನ್‌ ಬಗ್ಗೆ ಹಾಸ್ಯನಟರು ಹಾಸ್ಯ ಮಾಡಲು ಭಯಪಡುತ್ತಿದ್ದರು. ಎಲ್ಲರೂ ಸಲ್ಮಾನ್‌ ಖಾನ್‌ ಬಗ್ಗೆ ತಮಾಷೆ ಮಾಡಬೇಡಿ ಎಂದು ಹೇಳುತ್ತಾರೆ. ಅವನು ಒಂದು ಹೆಣ್ಣಿಗೆ ಕಪಾಳಮೋಕ್ಷ ಮಾಡುತ್ತಾನೆ. ನಾವ್ಯಾಕೆ ಆತನ ಬಗ್ಗೆ ತಮಾಷೆ ಮಾಡಬಾರದು" ಎಂದು ಕುನಾಲ್‌ ಹೇಳಿದ್ದರು.

ಅಬ್ದುಲ್‌ ರಶೀದ್‌ ಸಲೀಮ್‌ ಸಲ್ಮಾನ್‌ ಖಾನ್‌ ಅವರು 1975ರ ಡಿಸೆಂಬರ್‌ 27ರಂದು ಜನಿಸಿದರು. ಇವರು ಭಾರತದ ಪ್ರಮುಖ ಚಿತ್ರನಿರ್ಮಾಪಕ, ನಟ, ಕಿರುತೆರೆ ನಿರೂಪಕರಾಗಿ ಜನಪ್ರಿಯತೆ ಪಡೆದಿದ್ದಾರೆ. ಇವರಿಗೆ ಪ್ರೊಡ್ಯುಸರ್‌ ಆಗಿ ಎರಡು ರಾಷ್ಟ್ರೀಯ ಪ್ರಶಸ್ತಿಗಳು, ನಟರಾಗಿ ಒಂದು ಫಿಲ್ಮ್‌ ಫೇರ್‌ ಅವಾರ್ಡ್‌ ದೊರಕಿದೆ. ಭಾರತೀಯ ಚಿತ್ರರಂಗದಲ್ಲಿ ವಾಣಿಜ್ಯೀಕವಾಗಿ ಅತ್ಯಂತ ಯಶಸ್ವಿ ನಟ ಎಂದು ಇವರನ್ನು ಕರೆಯಲಾಗಿದೆ. ಜಗತ್ತಿನ ದುಬಾರಿ ಸೆಲೆಬ್ರೆಟಿಗಳಲ್ಲಿ ಒಬ್ಬರೆಂದು ಇವರನ್ನು ಫೋರ್ಬ್ಸ್‌ ಪಟ್ಟಿ ಮಾಡಿದೆ.