Fighter Record: ನೆಟ್‌ಫ್ಲಿಕ್ಸ್‌ನಲ್ಲಿ ದಾಖಲೆ ಬರೆದ ಫೈಟರ್; ಡಂಕಿ, ಅನಿಮಲ್ ಮೀರಿ ಮುನ್ನಡೆದ ಹೃತಿಕ್ ರೋಷನ್ ಸಿನಿಮಾ
ಗಣರಾಜ್ಯೋತ್ಸವದ ದಿನ ಬಿಡುಗಡೆಯಾಗಿದ್ದ ಫೈಟರ್ ಸಿನಿಮಾ, ಚಿತ್ರಮಂದಿರದಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ, ಇದೇ ಸಿನಿಮಾ ಒಟಿಟಿ ಅಂಗಳದಲ್ಲಿ ಧೂಳೆಬ್ಬಿಸುತ್ತಿದೆ.
Fighter Record: ಜನವರಿ 26ರ ಗಣರಾಜ್ಯೋತ್ಸವದ ಪ್ರಯುಕ್ತ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ನಟನೆಯ ಫೈಟರ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿದ್ದರೂ, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಸಿನಿಮಾ ವಿಫಲವಾಯಿತು. ಆದರೆ ಇದೀಗ ಒಟಿಟಿಯಲ್ಲಿ ಇದೇ ಸಿನಿಮಾ ದೊಡ್ಡ ಮಟ್ಟದ ವೀಕ್ಷಣೆಯತ್ತ ಸಾಗುತ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಅನಿಮಲ್ ಚಿತ್ರದ ದಾಖಲೆಗಳನ್ನು ಫೈಟರ್ ಮುರಿದಿದೆ. ಅದೂ ಕೇವಲ ಹತ್ತೇ ದಿನಗಳಲ್ಲೇ ಎಂಬುದು ವಿಶೇಷ.
ನೆಟ್‌ಫ್ಲಿಕ್ಸ್‌ನಲ್ಲಿ ಫೈಟರ್ ರೆಕಾರ್ಡ್
ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಫೈಟರ್ ಸಿನಿಮಾ, ಮಾರ್ಚ್ 21ರಂದು ನೆಟ್‌ಫ್ಲಿಕ್ಸ್‌ಗೆ ಎಂಟ್ರಿಕೊಟ್ಟಿತ್ತು. ಮೊದಲ ಹತ್ತು ದಿನಗಳಲ್ಲಿ ರಣಬೀರ್ ಕಪೂರ್ ಅವರ ಅನಿಮಲ್ ಮತ್ತು ಶಾರುಖ್ ಖಾನ್ ನಟನೆಯ ಡಂಕಿ ಸಿನಿಮಾ ವೀಕ್ಷಣೆಯ ದಾಖಲೆಗಳನ್ನು ಫೈಟರ್ ಮುರಿದಿದೆ. ಗುರುವಾರ (ಏಪ್ರಿಲ್ 4) ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಇದನ್ನು ಬಹಿರಂಗಪಡಿಸಿದ್ದಾರೆ ಹೃತಿಕ್. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಮೊದಲ ಹತ್ತು ದಿನಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿದೆ ಫೈಟರ್ ಸಿನಿಮಾ.
1 ಕೋಟಿ 24 ಲಕ್ಷ ವೀಕ್ಷಣೆ
ಬಾಲಿವುಡ್ ಬಾಕ್ಸ್ ಆಫೀಸ್ ಈ ಬಗ್ಗೆ X ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದು, "ಫೈಟರ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಾಲಿವುಡ್ ಸಿನಿಮಾಗಳ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಇದು ಅನಿಮಲ್ ಮತ್ತು ಡಂಕಿ ಸಿನಿಮಾಗಳನ್ನೂ ಮೀರಿ ಮುನ್ನಡೆದಿದೆ. ಹೃತಿಕ್ ರೋಷನ್ ಅವರ ಫೈಟರ್ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಮೊದಲ ಹತ್ತು ದಿನಗಳಲ್ಲಿ 12.4 ಮಿಲಿಯನ್ (ಒಂದು ಕೋಟಿ 24 ಲಕ್ಷ) ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಸಂಖ್ಯೆಗಳನ್ನು ಪಡೆದ ಬಾಲಿವುಡ್ ಮೊದಲ ಸಿನಿಮಾ ಎಂದು ಪೋಸ್ಟ್ ಮಾಡಿದೆ.
ಈ ಟ್ವೀಟ್ ಅನ್ನು ಹೃತಿಕ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 1ರಂದು ಚಿತ್ರಮಂದಿರಗಳಲ್ಲಿ ಅನಿಮಲ್ ಚಿತ್ರ ಬಿಡುಗಡೆಯಾಗಿತ್ತು. ಇದು ಸುಮಾರು 55 ದಿನಗಳ ನಂತರ ಜನವರಿ 26 ರಂದು ನೆಟ್‌ಫ್ಲಿಕ್ಸ್‌ಗೆ ಅಪ್ಪಳಿಸಿತು. ಅಲ್ಲಿಯವರೆಗೆ ಈ ಒಟಿಟಿಯಲ್ಲಿ ಧೂಳೆಬ್ಬಿಸುತ್ತಿದ್ದ ಸಲಾರ್ ಸಿನಿಮಾ ದಾಖಲೆಗಳನ್ನು ಮುರಿದಿತ್ತು ಅನಿಮಲ್ ಸಿನಿಮಾ. ಶಾರುಖ್ ಖಾನ್ ಅಭಿನಯದ ಡಂಕಿ ಚಿತ್ರದ ನಂತರವೂ ಅನಿಮಲ್ ಒಟಿಟಿ ವೀಕ್ಷಣೆಯ ಹವಾ ಮುಂದುವರೆದಿತ್ತು. ಈಗ ಆ ಎಲ್ಲವೂ ಫೈಟರ್ ತೆಕ್ಕೆಗೆ ಮರಳಿದೆ.
ಫೈಟರ್ ಬಾಕ್ಸ್ ಆಫೀಸ್
ಫೈಟರ್ ಚಿತ್ರ ಜನವರಿ 25 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಕಳೆದ ವರ್ಷ ಇದೇ ದಿನ ಪಠಾಣ್ ಸಿನಿಮಾ ತೆರೆಗೆ ಬಂದು ದಾಖಲೆಯ ಕಲೆಕ್ಷನ್ ಮಾಡಿದ್ದ ಸಿದ್ಧಾರ್ಥ್ ಆನಂದ್, ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಭಾರತೀಯ ವಾಯುಪಡೆಯ ಅಧಿಕಾರಿಗಳಾಗಿ ಹೃತಿಕ್ ಮತ್ತು ದೀಪಿಕಾ ನಟಿಸಿದ್ದು, ಭಾರೀ ನಿರೀಕ್ಷೆಗಳ ನಡುವೆ ಚಿತ್ರ ಬಿಡುಗಡೆಯಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲು ಸಿನಿಮಾ ಹಿನ್ನೆಡೆ ಅನುಭವಿಸಿತ್ತು.
250 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಫೈಟರ್ ಸಿನಿಮಾ ವಿಶ್ವಾದ್ಯಂತ ಸುಮಾರು 337 ಕೋಟಿ ರೂ ಗಳಿಕೆ ಕಂಡಿತ್ತು. ಥಿಯೇಟರ್‌ಗಳಲ್ಲಿ ಯಶಸ್ವಿಯಾಗದ ಈ ಚಿತ್ರ ಒಟಿಟಿಯಲ್ಲಿ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಪುಲ್ವಾಮಾ ದಾಳಿ ಮತ್ತು ನಂತರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯುಪಡೆ ದಾಳಿಯ ಹಿನ್ನೆಲೆಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಫೈಟರ್ ಚಿತ್ರ ಪ್ರೇಕ್ಷಕರನ್ನು ಮೆಚ್ಚಿಸದಿದ್ದರೂ, ಅದರಲ್ಲಿ ಹೃತಿಕ್ ಮತ್ತು ದೀಪಿಕಾ ಅವರ ಕೆಮಿಸ್ಟ್ರಿ ಎಲ್ಲರನ್ನೂ ಆಕರ್ಷಿಸಿದ್ದು ಮಾತ್ರ ಸುಳ್ಳಲ್ಲ.