Prakash Raj: ‘ನನ್ನನ್ನು ಕೊಳ್ಳುವಷ್ಟು ಆ ಪಕ್ಷ ಸೈದ್ಧಾಂತಿಕವಾಗಿ ಶ್ರೀಮಂತವಾಗಿಲ್ಲ!’ ಬಿಜೆಪಿ ಸೇರ್ಪಡೆ ಬಗ್ಗೆ ಪ್ರಕಾಶ್ ರಾಜ್ ವ್ಯಂಗ್ಯ
ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಇಂದು (ಏ. 4) ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆ ಸುದ್ದಿ ವ್ಯಂಗ್ಯವಾಗಿಯೇ ಗುದ್ದು ನೀಡಿದ್ದಾರೆ ಪ್ರಕಾಶ್ ರಾಜ್.
Prakash Raj on BJP Joining: ಬಿಜೆಪಿಗೂ ಪ್ರಕಾಶ್ ರಾಜ್‌ಗೂ ಬೇರೆ ರೀತಿಯದ್ದೇ ನಂಟು. ಭಾರತೀಯ ಜನತಾ ಪಾರ್ಟಿ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ, ಪ್ರಧಾನಿ ಮೋದಿ ಬಗ್ಗೆ ಅಣಕ ಮಾಡುತ್ತ, ವ್ಯಂಗ್ಯದ ಮೂಲಕವೇ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ದಾಟಿಸುತ್ತಿರುತ್ತಾರೆ ಪ್ರಕಾಶ್ ರಾಜ್. ಈಗ ಇದೇ ನಟನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಗುಲ್ಲೊಂದು ಹರಿದಾಡಿತ್ತು, ಲೋಕಸಭೆ ಚುನಾವಣೆ ಕಾವಿನಲ್ಲಿಯೇ ಪ್ರಕಾಶ್ ರಾಜ್ ಬಿಜೆಪಿ ಸೇರಲಿದ್ದಾರೆ ಎಂದು! ಈಗ ಆ ಬಗ್ಗೆ ನಟನಿಂದ ಸ್ಪಷ್ಟನೆ ಸಿಕ್ಕಿದೆ.
ಬಹುಭಾಷಾ ನಟ ಪ್ರಕಾಶ್ ರಾಜ್, ಬಿಜೆಪಿಯ ಬದ್ಧವೈರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರಧಾನಿ ಮೋದಿ ಬಗ್ಗೆ, ಬಿಜೆಪಿಯ ಬಗ್ಗೆ, ರಾಷ್ಟ್ರ ರಾಜಕಾರಣದ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುತ್ತಲೇ ಬರುತ್ತಿರುತ್ತಾರವರು. ಈಗ ದೇಶದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಈ ಹೊತ್ತಲ್ಲೇ "ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಾಶ್ ರಾಜ್ ಅವರು ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ" ಎಂದು X ಬಳಕೆದಾರರೊಬ್ಬರು ಪೋಸ್ಟ್ ಹಂಚಿಕೊಂಡಿದ್ದರು. ಇದು ಪ್ರಕಾಶ್ ರಾಜ್ ಅವರ ಗಮನಕ್ಕೂ ಬಂದಿತ್ತು.
ನನ್ನನ್ನು ಕೊಳ್ಳುವಷ್ಟು ಅವರು ಶ್ರೀಮಂತರೇ?
ಹಾಗೇ ಗಮನಕ್ಕೆ ಬಂದ ಟ್ವಿಟ್‌ಗೆ ಮರು ಟ್ವಿಟ್ ಮಾಡಿ, ಕೊಂಚ ವ್ಯಂಗ್ಯವಾಗಿಯೇ ಉತ್ತರ ನೀಡಿದ್ದಾರೆ. ‘ಅವರು (ಬಿಜೆಪಿ) ಪ್ರಯತ್ನಿಸಿದ್ದಾರೆ ಅಂತ ನಾನು ಭಾವಿಸಿದ್ದೇನೆ. ನನ್ನನ್ನು ಕೊಳ್ಳುವಷ್ಟು ಅವರು ಸೈದ್ಧಾಂತಿಕವಾಗಿ ಶ್ರೀಮಂತವಾಗಿಲ್ಲ ಎಂಬುದು ಅವರಿಗೂ ಅರ್ಥವಾಗಿರಬೇಕು. ನಿಮಗೆ ಏನು ಅನಿಸುತ್ತೆ ಫ್ರೆಂಡ್ಸ್? ಜಸ್ಟ್ ಆಸ್ಕಿಂಗ್’ ಎಂದು ಟ್ವಿಟ್ ಮಾಡಿದ್ದಾರೆ. ಹೀಗೆ ಟ್ವಿಟ್ ಮಾಡುತ್ತಿದ್ದಂತೆ, ಈ ಪೋಸ್ಟ್‌ಗೆ ಪರ ವಿರೋಧ ಕಾಮೆಂಟ್‌ಗಳು ಸಂದಾಯವಾಗಿವೆ. ಅವು ಈ ಕೆಳಗಿನಂತಿವೆ.
ಕಾಂಗ್ರೆಸ್‌ಗೆ ಸೇರಿ ಎಂದ ಬಳಕೆದಾರ
ನಟನ ಈ ಪ್ರತ್ಯುತ್ತರಕ್ಕೆ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. "ನಿಮಗೆ ಸಿಗುವ ಮತಗಳಿಗಿಂತ ನೋಟಾ ವೋಟುಗಳೇ ಹೆಚ್ಚು ಬರುತ್ತವೆ, ಸಾಕು ಕುಳಿತುಕೊಳ್ಳಿ" ಎಂದು ಕೆಲವರು ಟೀಕಿಸಿದ್ದಾರೆ. ಇನ್ನು ಕೆಲವರು "ಬಿಜೆಪಿಯವರು ಏನು ಬೇಕಾದರೂ ಖರೀದಿಸಬಹುದು. ಆದರೆ, ಸಿದ್ಧಾಂತವನ್ನು ಖರೀದಿಸಲು ಸಾಧ್ಯವಿಲ್ಲ. ಏಕೆಂದರೆ ಅವರು ಸೈದ್ಧಾಂತಿಕವಾಗಿ ದಿವಾಳಿಯಾಗಿದ್ದಾರೆ. ನೀವು ಕಾಂಗ್ರೆಸ್ ಸೇರಲು ಬಯಸಿದರೆ ನಿಮಗೆ ಸ್ವಾಗತ ಸರ್" ಎಂದು ಕಾಮೆಂಟ್ ಮಾಡಿದ್ದಾರೆ. "ವ್ಯಂಗ್ಯ ಅವರಿಗೆ ಸಿನಿಮಾ ಇದ್ದಂತೆ. ಪ್ರಕಾಶ್ ರಾಜ್‌ಗೆ ಇಂದಿನ ದಿನಗಳಲ್ಲಿ ಇವೆರಡೂ ಸಿಗುತ್ತಿಲ್ಲ" ಎಂದಿದ್ದಾರೆ ಕೆಲವರು.
ಮೊದ್ಲು ಕಾಳಾಕಿ, ಆಮೇಲೆ ಪುಕ್ಕ ಕಿತ್ಕೊತಾರೆ..
ಇದಕ್ಕೂ ಮೊದಲು, ಪ್ರಧಾನಿ ಮೋದಿ ಅವರ ಪೋಸ್ಟ್ ಹಂಚಿಕೊಂಡಿದ್ದರು ಪ್ರಕಾಶ್ ರಾಜ್. ನವಿಲಿಗೆ ಕಾಳು ಹಾಕುವ ಭಂಗಿಯಲ್ಲಿನ ಮೋದಿ ಅವರ ಫೋಟೋ ಮತ್ತು ನವಿಲಿನ ಪುಕ್ಕದ ಜತೆ ಕುಳಿತ ಮೋದಿ ಅವರ ಫೋಟೋ ಶೇರ್ ಮಾಡಿ, ಹುಷಾರ್ರಪ್ಪಾ..!!! ಮೊದ್ಲು ಕಾಳಾಕಿ.. ಆಮೇಲೆ ಪುಕ್ಕ ಕಿತ್ಕೊತಾರೆ ಎಂದು ಅದಕ್ಕೆ ಕ್ಯಾಪ್ಷನ್ ನೀಡಿದ್ದರು. ಈ ಪೋಸ್ಟ್‌ಗೂ ಸಾಕಷ್ಟು ಕಾಮೆಂಟ್‌ಗಳ ಮೂಲಕವೇ ಟೀಕಿಸುತ್ತಿದ್ದರು.