ಯಾವ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂಬ ಬಗ್ಗೆ ಮಾಹಿತಿಯನ್ನೇ ನೀಡದ ದರ್ಶನ್‌; ಹೈಕೋರ್ಟ್‌ನಲ್ಲಿ ಪ್ರಾಸಿಕ್ಯೂಷನ್‌ ಆಕ್ಷೇಪ
ಕನ್ನಡ ಸುದ್ದಿ  /  ಮನರಂಜನೆ  /  ಯಾವ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂಬ ಬಗ್ಗೆ ಮಾಹಿತಿಯನ್ನೇ ನೀಡದ ದರ್ಶನ್‌; ಹೈಕೋರ್ಟ್‌ನಲ್ಲಿ ಪ್ರಾಸಿಕ್ಯೂಷನ್‌ ಆಕ್ಷೇಪ

ಯಾವ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂಬ ಬಗ್ಗೆ ಮಾಹಿತಿಯನ್ನೇ ನೀಡದ ದರ್ಶನ್‌; ಹೈಕೋರ್ಟ್‌ನಲ್ಲಿ ಪ್ರಾಸಿಕ್ಯೂಷನ್‌ ಆಕ್ಷೇಪ

Darshan Thoogudeepa: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ದರ್ಶನ್‌ ತೂಗುದೀಪ, ಬೆನ್ನುಹುರಿ ಚಿಕಿತ್ಸೆ ಸಲುವಾಗಿ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದಿದ್ದಾರೆ. ಈ ನಡುವೆ ತಾವು ಯಾವೆಲ್ಲ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂಬ ಬಗ್ಗೆ ಈ ವರೆಗೂ ಹೈಕೋರ್ಟ್‌ಗೆ ಮಾಹಿತಿ ನೀಡಿಲ್ಲ ಎಂದು ಪ್ರಾಸಿಕ್ಯೂಷನ್‌ ಆಕ್ಷೇಪ ವ್ಯಕ್ತಪಡಿಸಿದೆ.

ಚಿಕಿತ್ಸೆ ಬಗ್ಗೆ ಹೈಕೋರ್ಟ್‌ಗೆ ಮಾಹಿತಿ ನೀಡದ ದರ್ಶನ್
ಚಿಕಿತ್ಸೆ ಬಗ್ಗೆ ಹೈಕೋರ್ಟ್‌ಗೆ ಮಾಹಿತಿ ನೀಡದ ದರ್ಶನ್

ಬೆಂಗಳೂರು: ಚಿತ್ರದರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಚಿತ್ರನಟ ದರ್ಶನ್‌ ಅವರಿಗೆ ಬೆನ್ನುಹುರಿ ನೋವಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಎಂಬ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಹೊರ ಬಂದಿರುವ ದರ್ಶನ್‌ ಅವರು ಇದುವರೆಗೂ ಆಸ್ಪತ್ರೆಯಲ್ಲಿ ಯಾವ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂಬ ಮಾಹಿತಿಯನ್ನು ಸಲ್ಲಿಸಿಲ್ಲ ಎಂದು ಪ್ರಾಸಿಕ್ಯೂಷನ್‌ ಹೈಕೋರ್ಟ್‌ನಲ್ಲಿ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಕರಣದ ಆರೋಪಿ ನಂ-1 ಪವಿತ್ರಾ ಗೌಡ, 2ನೇ ಆರೋಪಿ ದರ್ಶನ್, 6ನೇ ಆರೋಪಿ ಜಗದೀಶ್, 7ನೇ ಆರೋಪಿ ಅನುಕುಮಾರ್ ಅಲಿಯಾಸ್ ಅನು, 11ನೇ ಆರೋಪಿ ನಾಗರಾಜ್ ಮತ್ತು 12ನೇ ಆರೋಪಿ ಎಂ.ಲಕ್ಷ್ಮಣ್ ಅವರು ಪ್ರತ್ಯೇಕವಾಗಿ ಸಲ್ಲಿಸಿದ್ದ ನಿಯಮಿತ ರೆಗ್ಯುಲರ್ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು.

ದರ್ಶನ್‌ ಚಿಕಿತ್ಸೆ ಬಗ್ಗೆ ಸಿಗದ ಮಾಹಿತಿ

ವಿಚಾರಣೆ ವೇಳೆ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್, ಪ್ರಕರಣದ ಪ್ರಮುಖ ಹಾಗೂ ಎರಡನೇ ಆರೋಪಿಯಾಗಿರುವ ದರ್ಶನ್ ವೈದ್ಯಕೀಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದಿದ್ದಾರೆ. ನ್ಯಾಯಾಲಯ ಜಾಮೀನು ನೀಡುವಾಗ ಯಾವಾಗ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು, ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ನಂತರದಲ್ಲಿ ಚಿಕಿತ್ಸೆ ಮುಂದುವರೆಸುವ ಅವಶ್ಯಕತೆ ಇದೆಯೇ? ಇದ್ದರೆ ಹೇಗೆ ಎಂಬ ವಿವರಗಳನ್ನು ಬಿಡುಗಡೆಯಾದ ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂಬ ಷರತ್ತು ವಿಧಿಸಿತ್ತು.

ಚಿಕಿತ್ಸೆಯ ದಾಖಲೆ ಸಲ್ಲಿಸುವಂತೆ ಆದೇಶ

ಆದರೆ, ಈ ಷರತ್ತಿಗೆ ಅನುಗುಣವಾಗಿ ದರ್ಶನ್‌ ಇದುವರೆಗೆ ಪ್ರಾಸಿಕ್ಯೂಷನ್‌ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಬದಲಾಗಿ ಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ನೀಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಮತ್ತು ಚಿಕಿತ್ಸೆಯ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂಬ ಷರತ್ತು ಇದೆಯಾದರೂ, ಅರ್ಜಿದಾರರು ಈಗ ನಿಯಮಿತ ಜಾಮೀನು ಅರ್ಜಿ ಸಲ್ಲಿಸಿರುವುದರ ಬಗ್ಗೆ ಚರ್ಚೆ ಅಗತ್ಯವಿದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಕಿ ಇದ್ದ ಮುಂದುವರಿದ ತನಿಖೆಯನ್ನು ಪೂರ್ಣಗೊಳಿಸಲಾಗಿದ್ದು, 1,200ಕ್ಕೂ ಹೆಚ್ಚಿನ ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ನ.22, ಶುಕ್ರವಾರ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಅದನ್ನು ನೋಡಿ ಅರ್ಜಿದಾರರ ಪರ ವಕೀಲರು ತಮ್ಮ ವಾದವನ್ನು ಮುಂದುವರಿಸಬಹುದು ಎಂದು ತಿಳಿಸಿದರು.

ದರ್ಶನ್‌ ಪರ ವಕೀಲರ ವಾದವೇನು?

ಪ್ರಾಸಸಿಕ್ಯೂಷನ್‌ ವಾದಕ್ಕೆ ಪ್ರತಿಯಾಗಿ ದರ್ಶನ್ ಪರ ಹಾಜರಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್, ನ್ಯಾಯಾಲಯ ಈಗಾಗಲೇ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. ಅದನ್ನು ಹಿಂಪಡೆಯುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು. ಇದಕ್ಕೆ ನ್ಯಾಯಪೀಠ, ಒಂದು ವೇಳೆ ಷರತ್ತು ಪಾಲನೆ ಮಾಡಿಲ್ಲ ಎಂದಾದರೆ ಜಾಮೀನು ವಾಪಸು ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿತು. ದರ್ಶನ್ ಪಡೆದಿರುವ ವೈದ್ಯಕೀಯ ಚಿಕಿತ್ಸೆಯ ವರದಿಯನ್ನು ಪ್ರಾಸಿಕ್ಯೂಷನ್‌ಗೆ ನೀಡಬೇಕು ಎಂದು ರಿಜಿಸ್ಟ್ರಿಗೆ ಆದೇಶ ನೀಡಿ ವಿಚಾರಣೆಯನ್ನು ಇದೇ ತಿಂಗಳ 26ಕ್ಕೆ ಮುಂದೂಡಿತು.

ಪವಿತ್ರಾಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್, ದರ್ಶನ್ ಪರ ಎಸ್.ಸುನಿಲ್ ಕುಮಾರ್, ಎಂ.ಲಕ್ಷ್ಮಣ್ ಪರ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ಜಗದೀಶ್ ಮತ್ತು ಅನುಕುಮಾರ್ ಪರ ವಕೀಲ ರಾಜವರ್ಧನ ರೆಡ್ಡಿ ಹಾಜರಿದ್ದರು.

ವರದಿ: ಎಚ್‌ ಮಾರುತಿ

Whats_app_banner